ಬರವಣಿಗೆಗೆ ಪೂರಕ ತುಡಿತ

7

ಬರವಣಿಗೆಗೆ ಪೂರಕ ತುಡಿತ

Published:
Updated:
ಬರವಣಿಗೆಗೆ ಪೂರಕ ತುಡಿತ

`ಸಾಹಿತ್ಯವೆಲ್ಲರಿಗೂ ಅಲ್ಲ' ಎಂದ ಕನ್ನಡದ ಅತ್ಯಂತ ಜನಪ್ರಿಯ ಕವಿ ಸರ್ವಜ್ಞ. ಆದರೂ ಅದೇ ಸರ್ವಜ್ಞ `ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ' ಆಗಿ ಇಡೀ ಭಾಷಿಕ ಸಮುದಾಯಕ್ಕೆ ಅತ್ಯಂತ ಹೆಚ್ಚು ನಾಣ್ಣುಡಿಗಳನ್ನೂ ನೀಡಿದ ಜನರ ಕವಿಯೂ ಆದ. ಹೀಗಾಗಿ, ಏಕಾಂತ ಲೋಕಾಂತಗಳು  `ಬರವಣಿಗೆಯ ಬೇಸಾಯ'ದ ಪರಸ್ಪರ ವಿರುದ್ಧವಾದರೂ ಪರಸ್ಪರ ಪೂರಕವಾದ ತುಡಿತಗಳು. ತನ್ನೊಳಗಿನ ಮಾತು ಎಲ್ಲರೊಂದಿಗಿನ ಮಾತಾಗಿ ಎಲ್ಲರೊಳಗೆ ಮಿಡಿದರೆ ತನ್ನದೂ ಆಗಿ ಎಲ್ಲರದೂ ಆಗುತ್ತದೆ.ಇದನ್ನೇ ಆಕ್ತೆವಿಯೋ ಪಾಜ್ ಹೇಳಿದ್ದು - `ಕಾವ್ಯ ಹಬ್ಬವೂ ಹೌದು, ಶೋಕವೂ ಹೌದು'. ಏಕಾಂತದಲ್ಲಿ ಹಡೆದ ಕೂಸು ಬೆಳೆದು ನಿಂತಾಗ ಬಹುಜನರ ಸಾಕ್ಷಿಯಾಗಿ ಮದುವೆ ಮಾಡಿಕೊಡುವ ಹಾಗೆ ಒಂಟಿತನದಲ್ಲಿ ಬರೆದ ಕವಿತೆಯನ್ನು ಮಂದಿಯ ಮುಂದೆ ಓದುವುದು. ಆದ್ದರಿಂದ ನಮಗೆ ಹೇಗೋ ಹಾಗೆಯೇ ಬರವಣಿಗೆಗೂ ಹಬ್ಬ-ಹರಿದಿನ-ಉತ್ಸವ-ಸಮಾರಂಭಗಳು ಬೇಕು. ಬುಡಕಟ್ಟು ಹಾಗೂ ಗ್ರಾಮೀಣ ಬದುಕಿನಲ್ಲಿ ಹಬ್ಬ, ಹರಿದಿನ, ಆಚರಣೆಗಳು, ಕಥನಗಳ, ಕಾವ್ಯದ ಸವಿಯುವಿಕೆಯ ಸಂದರ್ಭಗಳು. ಇರುಳಿಡೀ ಏಕಾಂತದಲ್ಲಿ  ಉನ್ಮನಿಯಲ್ಲಿ  ನದರಿಟ್ಟು ನೋಡಿದ ಯೋಗಿ  ಶಿಶುನಾಳ ಶರೀಫರು ಹುಲಗೂರು ಸಂತೆಯನ್ನೂ ಅನುಭವಿಸಿ ಎರಡರ ಬಗ್ಗೆಯೂ ಹಾಡು ಕಟ್ಟಿದರು.ಹಬ್ಬ ಹರಿದಿನ ಅಥವಾ ಆಚರಣೆಗಳಿಗೆ ಸಮುದಾಯದ ಒಗ್ಗಟ್ಟಿನ ಆವರಣವಿರುತ್ತದೆ. ಸಂತೆಯಲ್ಲಿ ಮಾರಾಟ ತಲೆಯಿಟ್ಟಿದ್ದರೂ ಅದಕ್ಕಿನ್ನೂ  ಸಮುದಾಯದ ವಾತಾವರಣವಿರುತ್ತದೆ. ಅಲ್ಲಿನ ಕೊಡುಕೊಳ್ಳುವಿಕೆ ಮೂಲಭೂತವಾಗಿ ಹಂಚಿಕೊಳ್ಳುವ ಪ್ರಕ್ರಿಯೆ. ಆಧುನಿಕಪೂರ್ವ ಯುಗದಲ್ಲಿ ಆ ಸಂದರ್ಭಗಳು ಕಾವ್ಯ  ಕಲೆಗಳ ಆಸ್ವಾದನೆಗೆ, ಪ್ರಸಾರಕ್ಕೆ ಭಿತ್ತಿಯೊದಗಿಸುತ್ತಿದ್ದವು.ಆದರೆ ಇಂದಿನ ಮಾರುಕಟ್ಟೆ ಒಂದು ಬೃಹತ್ ಯಂತ್ರದ ಸ್ವರೂಪವನ್ನು ತಳೆದು ಹಿಂದಿನ ಹಬ್ಬ ಅಥವಾ ಸಂತೆಗಳಿಗಿದ್ದ ಮಾನವೀಯ, ಸಾಮುದಾಯಿಕ ಆಂತರ್ಯವನ್ನು ಕಳೆದುಕೊಂಡು ಒಬ್ಬರನ್ನೊಬ್ಬರು ಮೂಸಿ ನೋಡಿಹೋಗುವ ಮುಖ - ಚಹರೆಗಳಿರದ `ಸೂಪರ್ ಮಾಲ್'ಗಳನ್ನೇ ಭವಿತವ್ಯದ ಬುನಾದಿಯಾಗಿಸುತ್ತಿವೆ.ಗತದ ಸಾಹಿತ್ಯಕ ಆಚರಣೆಗಳಿಗಿದ್ದ ಚಿಕ್ಕದಾದ, ಚೊಕ್ಕವಾದ, ಹಾರ್ದಿಕ ವಾತಾವರಣಗಳನ್ನು ಎಲ್ಲಿಯವರೆಗೆ  ಉಳಿಸಿಕೊಳ್ಳುತ್ತವೆಯೋ ಅಲ್ಲಿಯವರೆಗೆ ಅದು ಸಾಹಿತ್ಯದ ಆಸ್ವಾದನೆ ಮತ್ತು ಹಂಚಿಕೆಗೆ ಪೋಷಕವಾಗಿರುತ್ತವೆ. ಯಾವಾಗ ಸೂಪರ್ ಮಾರ್ಕೆಟ್ಟಿನ ಬೃಹತ್ ಆಕಾರವನ್ನು ತಳೆಯುತ್ತವೋ ಆಗ ಆಸ್ವಾದನೆಯ ಮಾಧ್ಯಮವಾಗಿರುವ ಪ್ರತಿಭೆಯ ಪುಷ್ಪಗಳನ್ನು ಮಾರಾಟದ ಸರುಕುಗಳನ್ನಾಗಿಸುತ್ತವೆ. ಅಲ್ಲಿ ಸಾಹಿತ್ಯದ ವಿನಿಮಯ ಮಾರ್ಕೆಟ್ಟಿನ ಅಟ್ಟಹಾಸಕ್ಕೊಂದು ನೆಪವಾಗಿಬಿಡುತ್ತದೆ.

ಜೈಪುರದ ಗತವೈಭವಗಳ  ನಿಶಾನೆಯಾಗಿರುವ ಅರಮನೆಯಲ್ಲಿ ಬಹುಮಟ್ಟಿಗೆ ಬಹುರಾಷ್ಟ್ರೀಯ ಕಂಪೆನಿಗಳ ಸ್ವಲ್ಪಮಟ್ಟಿಗೆ ಸರ್ಕಾರೀ ಸಂಸ್ಥೆಗಳ ಔದಾರ್ಯದಲ್ಲಿ  ಸೂಪರ್ ಮಾರ್ಕೆಟ್ಟಿನ ಗುಂಪುಗಳಂತೆ ಚರಿಸುತ್ತಿರುವ ಚಂಚಲ ಪ್ರವಾಸಿಗಳ ಗುರಿಯಿರದ ಕಣ್ಮನಗಳನ್ನು ಥ್ರಿಲ್ ಮಾಡಲು ಸಾಹಿತ್ಯವನ್ನು ಬಳಸಲಾಗುತ್ತಿದೆಯೆಂಬ ಅನುಮಾನ ಅಲ್ಲಿ ಹೋದವರಿಗೆ ಬರದಿದ್ದರೆ ಅಂಥವರನ್ನು ಮಾರ್ಕೆಟ್ ಈಗಾಗಲೇ ನುಂಗಿ ಬಿಟ್ಟಿದೆ ಎಂದು ಅರ್ಥ.ಕರ್ನಾಟಕದಲ್ಲಿ ನಡೆಯಲಿರುವ ಸಾಹಿತ್ಯೋತ್ಸವಗಳು ಜಾತ್ರೆ, ಹಬ್ಬಗಳ ಚಿಕ್ಕ ಹಾಗೂ ಚೊಕ್ಕ ಮಾದರಿಗಳಿಗೆ ವಾಪಸಾದರೆ ಸಾಹಿತ್ಯಕ್ಕೆ ಉಳಿಗಾಲ, ಬೆಂಬಲ. ಬೃಹತ್ ಮಾದರಿಗಳ ಹಾದಿ ಮಾರ್ಕೆಟ್ಟಿನ ಹಾದಿ. ಅಲ್ಲಿ ಕಳೆದುಹೋದವರು ಹಿಂತಿರುಗುವುದಿಲ್ಲ. ಹಿಂತಿರುಗಿದರೆ ತಮ್ಮ ನುಡಿ-ನೆಲೆಗಳನ್ನು ಮರೆತ ಅಪರಿಚಿತರಾಗಿ ಹಿಂತಿರುಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry