ಬರವಣಿಗೆಗೆ ಸ್ಥಳೀಯರು ಸಿಗಲಿಲ್ಲವೇ?

7

ಬರವಣಿಗೆಗೆ ಸ್ಥಳೀಯರು ಸಿಗಲಿಲ್ಲವೇ?

Published:
Updated:

ಗುಲ್ಬರ್ಗ: ವೀರಪ್ಪ ಮೊಯಿಲಿ ದ್ರೌಪದಿಯ ಬದಲಾಗಿ ಅಬ್ಬಕ್ಕನ ಬಗ್ಗೆ, ರಾಮಾಯಣದ ಬದಲು ಸ್ಥಳೀಯರ ಬಗ್ಗೆ ಮಹಾಕಾವ್ಯ ಬರೆಯಬೇಕಿತ್ತು ಎಂದು ವಿಶ್ರಾಂತ ಕುಲಪತಿ ಎಂ.ಎಂ.ಕಲಬುರ್ಗಿ ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಸಂಘ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಉಪನ್ಯಾಸ ನೀಡಿದರು.

ಕನ್ನಡಿಗರು ಪರಂಪರೆಯನ್ನು ವೈಭವೀಕರಿಸಿ ಮೆರೆಯುತ್ತೇವೆ. ಕನ್ನಡದ ಅಸ್ಮಿತೆಯನ್ನು ಕಾಪಾಡುವುದಿಲ್ಲ. ಸಾಹಿತ್ಯದಲ್ಲಿ ರಾಮ, ಕೃಷ್ಣ, ತೀರ್ಥಂಕರರು, ಅರ್ಜುನ, ದ್ರೌಪದಿಯೇ ಏಕೆ? (ಉತ್ತರ ಭಾರತೀಯರು) ಸ್ಥಳೀಯರು ಯಾರೂ ಇಲ್ಲವೇ? ಎಂದು ಪ್ರಶ್ನಿಸಿದರು.ಎಲ್ಲಿಯವರೆಗೆ ಸಾಹಿತ್ಯದಲ್ಲಿ ಸ್ಥಳೀಯ ವಿಚಾರ ಪ್ರತಿಪಾದನೆ ಮಾಡುವುದಿಲ್ಲವೋ ಅಲ್ಲಿವರೆಗೆ ನಮಗೆ ಯಾರೂ ಬೆಲೆ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಮೂಡುಬಿದಿರೆಯನ್ನು ‘ದಕ್ಷಿಣದ ಕಾಶಿ’ ಎಂದು ಯಾಕೆ ಹೇಳಬೇಕು. ‘ಕರ್ನಾಟಕ’ದ ಮೂಡುಬಿದಿರೆ ಎಂದರೆ ಮಹಿಮೆ ಕಡಿಮೆಯೇ? ಕೃಷ್ಣಾ, ಕಾವೇರಿ ನದಿಗಳು ಗಂಗೆಗಿಂತ ಕಡಿಮೆ ಪಾವಿತ್ರ್ಯವೇ ಎಂದು ಸವಾಲೆಸೆದರು.‘ಕನ್ನಡಿಗರು ಸ್ವಾಭಿಮಾನಿಗಳು’ ಎಂಬ ಸಂಶೋಧಕ ಚಿಂದಾನಂದ ಮೂರ್ತಿ ಅವರ ಹೇಳಿಕೆ ‘ತಪ್ಪು’. ಒಳಗಿರುವ ತಮಿಳು, ತೆಲುಗು, ಮರಾಠಿ, ಉರ್ದು, ಮಲೆಯಾಳ ಎಂಬ ದ್ವೀಪಗಳು ಮತ್ತು ಬಾಹ್ಯ ಒತ್ತಡಗಳ ಮಧ್ಯೆ ನಾವು ನಲುಗಿದ್ದೇವೆ. ದೇವರು, ಧರ್ಮ, ಶಬ್ದ, ಸಂಸ್ಕೃತಿ, ಛಂದಸ್ಸು, ಭಾಷೆ ಎಲ್ಲವೂ ಆಮದುಗೊಂಡಿರುವಾಗ ನಾವು ‘ಸ್ವಾಭಿಮಾನಿ’ಗಳು ಎಂದು ಹೇಳುವುದೇ ಸುಳ್ಳು ಎಂದು ಛೇಡಿಸಿದರು.ಕನ್ನಡ ಸಾಹಿತ್ಯದಲ್ಲಿ ಅರಿವು ವಿಸ್ತಾರಗೊಂಡಿದೆ. ಆದರೆ ಅಸ್ಮಿತೆ ವಿಸ್ಮೃತಗೊಂಡಿದೆ ಎಂದ ಅವರು, 12ನೇ ಶತಮಾನದಲ್ಲಿ ಕನ್ನಡಿಗರ ಮೇಲಿನ ಧಾರ್ಮಿಕ, ಸಾಹಿತ್ಯಿಕ ಮತ್ತು ಭಾಷಿಕ ದಬ್ಬಾಳಿಕೆ ವಿರುದ್ಧ ಚಳವಳಿ ನಡೆಯಿತು. ಸ್ಥಳೀಯರೇ ಕಥಾನಾಯಕಿಯರು ಆದರು. ಕನ್ನಡದಲ್ಲೇ ಮಂತ್ರ-ಸಾಹಿತ್ಯ ಬಂದವು. ಆದರೆ ಅದೂ ಈಗ ಹಳೇ ದಾರಿಗೆ ತೆರಳಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry