ಶುಕ್ರವಾರ, ಅಕ್ಟೋಬರ್ 18, 2019
27 °C

ಬರಹ, ಬದುಕು ಒಂದೇ ಆಗಿಲಿ: ನಾಗತಿಹಳ್ಳಿ ರಮೇಶ್

Published:
Updated:

ರಾಮನಗರ: ಬರಹ ಮತ್ತು ಬದುಕು ಒಂದೇ ಆಗಿದ್ದಾಗ ಮಾತ್ರ ಸೃಜನಶೀಲ ಸಾಹಿತ್ಯ ರಚನೆಯಾಗಲು ಸಾಧ್ಯ ಎಂದು ಕಿರುಚಿತ್ರ ನಿರ್ದೇಶಕ ನಾಗತಿಹಳ್ಳಿ ರಮೇಶ್ ಅಭಿಪ್ರಾಯಪಟ್ಟರು.ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕಾ ಸಂಘ ಜಂಟಿಯಾಗಿ ಕೆಂಗಲ್ ಬಳಿಯ ವಂದಾರಗುಪ್ಪೆಯಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆದರೆ, ಇಂದು ಬರಹ ಮತ್ತು ಬದುಕು ಬೇರೆಬೇರೆಯಾಗಿವೆ. ಇದರಿಂದ ಸೃಜನಶೀಲ ಸಾಹಿತ್ಯ ರಚನೆಯಾಗುತ್ತಿಲ್ಲ. ಇಂದಿನ ಮನುಷ್ಯ ಒತ್ತಡದಲ್ಲಿ ಜೀವನ ನಡೆಸುತ್ತಿದ್ದು ಮನುಷ್ಯತ್ವದ ನೆಲೆಗಳನ್ನು ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಜೀವನ ಕ್ರಮಗಳನ್ನು, ವಿಧಾನಗಳನ್ನು ಕೃಷಿಯಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ಕಾವ್ಯ ಕವಿಗಿಂತ ಹೆಚ್ಚು ಜೀವಿಸಬೇಕಾದ ಸಾಮರ್ಥ್ಯ ಹೊಂದಿರಬೇಕು. ನಮ್ಮ ಕಾವ್ಯಕೆ ನಾವೇ ಹೆಚ್ಚು ಶಕ್ತಿ ತುಂಬಬೇಕು. ಕುವೆಂಪು ನಂತರ ಹಲವಾರು ಮಹಾಕಾವ್ಯಗಳು ಬಂದಿದ್ದರೂ ಅವರ ಮಹಾಕಾವ್ಯ ಇಂದಿಗೂ ಪ್ರಸ್ತುತವಾಗಿದೆ. ಇದು ಕವಿಗೂ ಮೀರಿದ ಆಯುಷ್ಯವಾಗಿದೆ ಎಂದು ತಿಳಿಸಿದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ, ಗೌರವ ಕಾರ್ಯದರ್ಶಿ ಪಾದ್ರಳ್ಳಿ ರಾಜು, ಸಾಹಿತಿ ಎಸ್. ರಾಮಲಿಂಗೇಶ್ವರ,  ಕಲಾವಿದ ರಾಘವೇಂದ್ರನಾಯಕ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಕಮ್ಮ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷ ಡಾ.ಬಿ.ಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಎ.ಶಾಂತಕುಮಾರ್ ಪ್ರಾರ್ಥಿಸಿದರು. ಅಧಿಕಾರಿ ಗುಣವಂತ ಸ್ವಾಗತಿಸಿದರು. ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಕವಿಗಳು ಪ್ರಸ್ತುತ ರೈತರ ಸಮಸ್ಯೆಗಳನ್ನು ತಮ್ಮ ಕವನಗಳಲ್ಲಿ ಬಿಂಬಿಸಿ ಕವಿತೆ ವಾಚಿಸಿದರು.

Post Comments (+)