ಗುರುವಾರ , ಆಗಸ್ಟ್ 22, 2019
25 °C

ಬರಾಡದ ಬೆಳೆಗಾರರ ಬದುಕು

Published:
Updated:

ಮಂಡ್ಯ: ಕೀಟ ಮತ್ತು ರೋಗಗಳು ಹಾಗೂ ಬರಗಾಲದಿಂದ 6,994 ಹೆಕ್ಟೇರ್‌ಗೂ ಅಧಿಕ ತೆಂಗು ಬೆಳೆ ಹಾನಿ ಆಗಿದೆ. ಇದರಿಂದ `ಕಲ್ಪವೃಕ್ಷ'ವನ್ನೇ ನಂಬಿದ್ದ ಬೆಳೆಗಾರರ ಬದುಕು ನೆಲಕಚ್ಚಿದೆ.ಕಳೆದ ಮೂರು ವರ್ಷಗಳಿಂದ ಸಾಕಷ್ಟು ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಹೀಗಾಗಿ, `ಸಿಹಿನೀರು' ಕೊಡುತ್ತಿದ್ದ ಲಕ್ಷಾಂತರ ತೆಂಗಿನ ಮರಗಳು ನೀರಿಲ್ಲದೆ ಬಳಲಿ ಬೆಂಡಾಗಿ ಮುರಿದು ಧರೆಗೆ ಉರುಳಿವೆ.ಅಷ್ಟೇ ಅಲ್ಲದೆ, ಮಣ್ಣಿನ ತೇವಾಂಶ ಗಣನೀಯ ಇಳಿದಿರುವುದರಿಂದ ಕೀಟ ಮತ್ತು ರೋಗಗಳ ಗಂಭೀರ ದಾಳಿಗೆ ತೆಂಗು ಬೆಳೆ ಒಳಗಾಗಿದೆ. ಬಹುಮುಖ್ಯವಾಗಿ ಕಪ್ಪು ತಲೆ ಹುಳುವಿನ ಬಾಧೆಗೆ ತತ್ತರಿಸಿದೆ.ಮಳೆಯಾಶ್ರಿತ ಪ್ರದೇಶ ನಾಗಮಂಗಲದಲ್ಲಿ ಗರಿಷ್ಠ 2,432 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಹಾನಿ ಆಗಿದ್ದರೇ, ಕೃಷ್ಣರಾಜಸಾಗರ ಜಲಾಶಯ ತಟದಲ್ಲಿನ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕನಿಷ್ಠ ಅಂದರೆ, 35 ಹೆಕ್ಟೇರ್ ತೆಂಗು ಬೆಳೆ ಹಾನಿಯಾಗಿದೆ.ಉಳಿದಂತೆ, ಮದ್ದೂರು ತಾಲ್ಲೂಕಿನಲ್ಲಿ 2,149 ಹೆ., ಕೃಷ್ಣರಾಜಪೇಟೆ -800 ಹೆ., ಮಳವಳ್ಳಿ -1,390 ಹೆ., ಮಂಡ್ಯ -150 ಹೆ. ಹಾಗೂ ಪಾಂಡವಪುರದಲ್ಲಿ 38 ಹೆ. ಪ್ರದೇಶದಲ್ಲಿ ತೆಂಗು ಹಾನಿಯಾಗಿದೆ. ಪ್ರತಿ ತೆಂಗಿನ ಮರ ವಾರ್ಷಿಕ ಸುಮಾರು 120 ರಿಂದ 150 ಕಾಯಿಗಳನ್ನು ಕೊಡುತ್ತದೆ. ತೀವ್ರ ಬರಗಾಲದಿಂದ ಲಕ್ಷಾಂತರ ಮರಗಳು ಒಣಗಿದ್ದರೇ, ಸಾವಿರಾರು ಮರಗಳು ಸೊರಗಿ ಇಳುವರಿಯಲ್ಲೂ ಕುಂಠಿತವಾಗಿದೆ.ಜಿಲ್ಲೆಯಲ್ಲಿ ಸುಮಾರು 79,430 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಪೈಕಿ ಸುಮಾರು 43,128 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಇದರಲ್ಲಿ 6,994 ಹೆಕ್ಟೇರ್‌ಗೂ ಅಧಿಕ ತೆಂಗು ಬೆಳೆ ಹಾನಿ ಆಗಿದ್ದು, ಇದರ ಮೌಲ್ಯ ಕೋಟ್ಯಂತರ ರೂಪಾಯಿ ದಾಟಿದೆ.ಈ ನಡುವೆ ಕೇಂದ್ರದ ತೋಟಗಾರಿಕಾ ಮಿಷನ್‌ನ ಡಾ.ಗೋರಖ್ ಸಿಂಗ್ ಹಾಗೂ ಸಿಪಿಸಿಆರ್‌ಐ ವಿಜ್ಞಾನಿ ವಿನಾಯಕ ಭಟ್ ನೇತೃತ್ವದ ಎರಡು ತಂಡಗಳು ಜಿಲ್ಲೆಗೆ ಆಗಮಿಸಿ ಹಾನಿಗೊಳಗಾದ ತೆಂಗು ಬೆಳೆ ಬಗೆಗೆ ಸಮಗ್ರ ಮಾಹಿತಿ ಪಡೆದುಕೊಂಡಿವೆ.`ತೆಂಗಿನ ಮರಗಳಿಗೆ ಕೀಟ ಮತ್ತು ರೋಗಗಳಿಂದ ಆಗಬಹುದಾದ ತೊಂದರೆ, ವಹಿಸಬಹುದಾದ ಮುನ್ನೆಚ್ಚರಿಕೆ ಕುರಿತಂತೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಜೊತೆಗೂಡಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ತಾಲ್ಲೂಕುಗಳಲ್ಲೂ ಬೆಳಗಾರರಿಗೆ ತರಬೇತಿ ನೀಡಿದ್ದವು.ಆದಾಗ್ಯೂ, ಇಷ್ಟೊಂದು ಪ್ರಮಾಣದಲ್ಲಿ ಹಾನಿ ಆಗಿದೆ. ಈ ಎಲ್ಲದರ ಮಾಹಿತಿಯನ್ನು ಕೇಂದ್ರದ ಅಧಿಕಾರಿಗಳಿಗೆ ಒದಗಿಸಿದ್ದೇವೆ' ಎಂದು ತೋಟಗಾರಿಕೆ ಉಪ ನಿರ್ದೇಶಕ ಕೆ.ನರೇಂದ್ರಬಾಬು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.ತೆಂಗು ಮರಗಳಿಗೆ ವಿಮೆ ಮಾಡಿಸುವ ಬಗ್ಗೆ ಬೆಳೆಗಾರರಲ್ಲಿ ಅರಿವು ಮೂಡಿಸುವ ಮೂಲಕ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುವುದು. ವಿಮೆಗೆ ರೈತರು ಇಂತಿಷ್ಟೆಂದು ಹಣ ಪಾವತಿಸಿದರೇ, ಇಲಾಖೆಯೂ ಹಣ ತುಂಬುತ್ತದೆ. ಇದನ್ನು ರೈತರು ಬಳಸಿಕೊಳ್ಳಲು ಮುಂದೆ ಬರಬೇಕು ಎಂದು ಹೇಳಿದರು.ಪರಿಹಾರಕ್ಕೆ ಆಗ್ರಹ: ತೆಂಗು ಬೆಳೆಗಾರರು ಜಿಲ್ಲೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅಲ್ಪ ಪ್ರಮಾಣದ ಪರಿಹಾರ ನೀಡಿದರೆ ಸಾಲದು. ಕೇರಳ ಮಾದರಿಯಲ್ಲಿ ಹೆಚ್ಚು ಪರಿಹಾರ ನೀಡಬೇಕು ಎಂದು ನಾಗಮಂಗಲ ಶಾಸಕ ಎನ್. ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಸರ್ಕಾರದ ಗಮನ ಸೆಳೆದಿದ್ದೇನೆ. ಮಳೆಯಾಶ್ರಿತ ಪ್ರದೇಶವಾಗಿರುವ ನಾಗಮಂಗಲದಲ್ಲಿ ಹೆಚ್ಚು ಹಾನಿಯಾಗಿದೆ. ರೈತರ ಸಂಕಷ್ಟವನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

 

Post Comments (+)