ಬರಿಗಾಲಿನಿಂದ ಬೆಳ್ಳಿಹೆಜ್ಜೆಗೆ...

7
ನಟ ಸುಂದರ್‌ರಾಜ್‌ ಮನದಾಳದ ಮಾತು

ಬರಿಗಾಲಿನಿಂದ ಬೆಳ್ಳಿಹೆಜ್ಜೆಗೆ...

Published:
Updated:

ಬೆಂಗಳೂರು: ‘ಬರಿಗಾಲಲ್ಲಿ ಚಿತ್ರ­ರಂಗಕ್ಕೆ ಬಂದೆ. ಇಂದು ಅದೇ ಚಿತ್ರ­ರಂಗವು ನನ್ನನ್ನು ಬೆಳ್ಳಿಹೆಜ್ಜೆಗೆ ಕರೆ­ತಂದಿದೆ’ ಎಂದು ನಟ ಎಂ.ಕೆ.­ಸುಂದರ್‌ರಾಜ್‌ ಹೇಳಿದರು. ಕರ್ನಾಟಕ ಚಲನಚಿತ್ರ ಅಕಾಡೆ­ಮಿಯು ನಗರದ ಬಾದಾಮಿ ಹೌಸ್‌­ನಲ್ಲಿ ಶನಿವಾರ ಏರ್ಪಡಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ  ಭಾಗವ­ಹಿಸಿ ಅವರು ಮಾತನಾಡಿದರು.‘ನಾನು ಒಂದು ತರಹ ಜೇಡಿ­ಮಣ್ಣಿನಂತೆ ಇದ್ದೆ. ಅದಕ್ಕೆ ಒಂದು ರೂಪು, ಆಕಾರವನ್ನು ನೀಡಿದವರು ಬಿ.ವಿ.ಕಾರಂತರು. ಅವರ ವ್ಯಕ್ತಿತ್ವ ನನ್ನನ್ನು ಬೆಳೆಸಿತು’ ಎಂದರು.‘ಸೊಪ್ಪು ಮಾರುವವನಿಗೆ ಇರುವ ಆತ್ಮಗೌರವ ಕೋಟಿ­­ಗಟ್ಟಲೆ ಹಣ­ಗಳಿಸುವ ಕಲಾವಿದರಿಗೆ ಇಲ್ಲದಂತಾ­ಗಿದೆ. ನನ್ನ ಬದುಕಿನಲ್ಲಿ ಯಾವು­ದನ್ನೂ ಬಯಸಲಿಲ್ಲ. ಅನಿವಾರ್ಯ­ವಾಗಿ  ಬದುಕು ನೀಡಿದ್ದನ್ನು ಒಪ್ಪಿ­ಕೊಳ್ಳ­­ಬೇಕಾಯಿತು. ಸರಿಯಾಗಿ ಓದ­ಲಿಲ್ಲ. ಆದರೆ, ನಾಟಕದ ಅಭಿನ­ಯಕ್ಕೆ ಸೇರಿದ್ದ ಕಾರಣ ಚಿತ್ರರಂಗ­ದಲ್ಲಿ ನೆಲೆ­ಕಂಡುಕೊಳ್ಳಲು ಸಹಾಯ­ವಾಯಿತು’ ಎಂದರು.‘1984ರ ನಂತರ ಚಿತ್ರಗಳು ಕಡಿಮೆ­ಯಾದವು. ಆಗ ಬಿಸ್ಲೇರಿ ವ್ಯಾಪಾರ ಆರಂಭಿಸಿದೆ. ಮೊದಲು ಚೆನ್ನಾ­ಗಿಯೇ ಇತ್ತು. ಆದರೆ, ಮತ್ತೆ ಸಿನಿಮಾದವರ ಸಹ­ವಾಸ­ದಿಂದ ವ್ಯಾಪಾರ ಮುಚ್ಚಬೇಕಾಯಿತು. ನಮ್ಮವರು ಒಳ್ಳೆಯದು ಮಾಡದೆ ಇದ್ದರೂ, ಯಾರಿಗೂ ಸಾಲವನ್ನು ­ನೀಡ­­ಬಾರದೆಂಬ ಒಳ್ಳೆಯ ಪಾಠ ಕಲಿಸಿ­ದರು’ ಎಂದು ಹೇಳಿದರು.ಸುಂದರ್‌ರಾಜ್‌ ಪತ್ನಿ, ನಟಿ ಪ್ರಮೀಳಾ ಜೋಷಾಯ್‌ ಮಾತ­ನಾಡಿ, ‘ನಮ್ಮದು ಸಂಪ್ರದಾಯಸ್ಥ ಕುಟುಂಬ. ಸಿನಿಮಾ ಸೇರುವುದು, ಬಣ್ಣ ಹಚ್ಚುವುದನ್ನು ವಿರೋಧಿಸು­ತ್ತಿದ್ದರು. ಆದರೆ, ನನ್ನದು ಹಠದ ಸ್ವಭಾವ. ಅದೇ ಇಲ್ಲಿಯವರೆಗೂ ನನ್ನ ಕೈ ಹಿಡಿದಿದೆ’ ಎಂದರು.‘ನಾಯಕಿಯಾಗಿ ನಟಿಸಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಕೆಲವು ನಾಯಕರು ನಾನು ನಾಯಕಿ ಎಂದ ಕೂಡಲೇ ಹಿಂದೇಟು ಹಾಕುವುದು, ಅವಳು ಬೇಡ ಬೇರೆ ಯಾರನ್ನಾದರೂ ನಾಯಕಿ ಮಾಡಿ ಎಂದು ಹೇಳು­ತ್ತಿದ್ದುದು ಸ್ವತಃ ನನ್ನ ಕಿವಿಗೆ ಬಿದ್ದಿದೆ. ಇದ­ರಿಂದ, ಬಹಳ ಬೇಸರ­ವಾಗು­ತ್ತಿತ್ತು. ಇದು ಕೂಡ ನಾನು ನಾಯಕಿ ನಟಿಯಾಗದಿರಲು ಒಂದು ಕಾರಣ­ವಾಯಿತು. ಆಗ ಕೆಲವೇ ನಾಯಕ ನಟಿಯರಿದ್ದರು.ಆದರೂ, ಕಲಾ­ವಿದರಲ್ಲಿ ರಾಜಕೀಯವಿತ್ತು. ಹೊಸ ನಾಯ­ಕಿಯರನ್ನು ಬೆಳೆಯದಂತೆ ಮಾಡುವ ಮತ್ಸರದ ಗುಣವೂ ಇತ್ತು. ಇದರಿಂದ, ನಾನು ಬಹಳ ನೋವು ಅನು­ಭವಿಸ­ಬೇಕಾ­ಯಿತು. ಜೀವನ ಹೂವಿನಂತಿರದೆ, ಅದರಲ್ಲಿ ಮುಳ್ಳು­ಗಳು ಇದ್ದವು’ ಎಂದು ಪ್ರಮೀಳಾ ಜೋಷಾಯ್‌ ಅವರು ಕಣ್ಣೀರಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry