ಗುರುವಾರ , ಏಪ್ರಿಲ್ 15, 2021
31 °C

ಬರಿಗೈಲಿ ಮರಳಿದ ಜೇಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಿಗೈಲಿ ಮರಳಿದ ಜೇಟ್ಲಿ

ಬೆಂಗಳೂರು: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ನೇತೃತ್ವ ವಹಿಸಲು ಸಜ್ಜಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ವರಿಷ್ಠರು ನಡೆಸಿದ ಇನ್ನೊಂದು ಪ್ರಯತ್ನವೂ ವಿಫಲವಾಗಿದೆ.ಪಕ್ಷದ ಪ್ರಮುಖರ ಸೂಚನೆಯಂತೆ ಶನಿವಾರ ರಾತ್ರಿ ದಿಢೀರನೆ ನಗರಕ್ಕೆ ಬಂದಿದ್ದ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಜೇಟ್ಲಿ, ರಹಸ್ಯ ಸ್ಥಳದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಯಡಿಯೂರಪ್ಪ ತಮ್ಮ ಬಿಗಿಪಟ್ಟು ಸಡಿಲಿಸಲಿಲ್ಲ. ಸಂಧಾನಕ್ಕೆ ಬಂದಿದ್ದ ಜೇಟ್ಲಿ ಭಾನುವಾರ ಬೆಳಿಗ್ಗೆಯೇ ಬರಿಗೈಯಲ್ಲಿ ನವದೆಹಲಿಗೆ ಹಿಂತಿರುಗಿದರು.ನಗರದ ಹೊರವಲಯದಲ್ಲಿರುವ ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಮನೆಯಲ್ಲಿ ಶನಿವಾರ ತಡರಾತ್ರಿ ನಡೆದ ಮಾತುಕತೆಗೆ ಒಲ್ಲದ ಮನಸ್ಸಿನಿಂದಲೇ ತೆರಳಿದ್ದ ಯಡಿಯೂರಪ್ಪ, `ನಾನು ಬಿಜೆಪಿಯಿಂದ ಬಹುದೂರ ಸಾಗಿ ಬಂದಿದ್ದೇನೆ. ಇನ್ನು ಪಕ್ಷದಲ್ಲಿ ಮುಂದುವರಿಯಲು ಸಾಧ್ಯವೇ ಇಲ್ಲ~ ಎಂದು ಕಡ್ಡಿ ಮುರಿದಂತೆ ಹೇಳಿ ಹೊರನಡೆದರು ಎಂದು ಮೂಲಗಳು ತಿಳಿಸಿವೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ರಾಜ್ಯ ಮುಖಂಡರಿಗೆ ಬೆಂಗಳೂರು ಭೇಟಿ ಬಗ್ಗೆ ಮಾಹಿತಿ ನೀಡದೆ ದಿಢೀರನೆ ಶನಿವಾರ ಸಂಜೆ ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೇಟ್ಲಿ, ಅಲ್ಲಿಂದ ರಹಸ್ಯ ಸ್ಥಳಕ್ಕೆ ತೆರಳಿದ್ದರು. ನಂತರ ಯಡಿಯೂರಪ್ಪ ಅವರ ಆಪ್ತರೊಬ್ಬರನ್ನು ಸಂಪರ್ಕಿಸಿ ಸಂಧಾನಕ್ಕೆ ವೇದಿಕೆ ಸಿದ್ಧಪಡಿಸಿದರು. ಮೊದಲು ಮಾತುಕತೆಗೆ ಒಲವು ತೋರದ ಯಡಿಯೂರಪ್ಪ, ಆಪ್ತರ ಒತ್ತಾಯಕ್ಕೆ ಮಣಿದು ಜೇಟ್ಲಿ ಅವರನ್ನು ಭೇಟಿಯಾದರು ಎನ್ನಲಾಗಿದೆ.ದುಡುಕದಂತೆ ಮನವಿ: ಡಿಸೆಂಬರ್ 9ರಂದು ಬಿಜೆಪಿ ತೊರೆದು ಕೆಜೆಪಿ ಸೇರುವ ನಿರ್ಧಾರ ಪ್ರಕಟಿಸದಂತೆ ಜೇಟ್ಲಿ ಮಾತುಕತೆ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. `ಆತುರದಿಂದ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಬೇಡಿ. ಡಿ.9ರ ಸಮಾವೇಶವನ್ನು ಮುಂದೂಡಿ. ನಿಮ್ಮ ಬಗ್ಗೆ ಪಕ್ಷದ ವರಿಷ್ಠರಿಗೆ ಗೌರವ ಇದೆ. ನಿಮ್ಮ ಬೇಡಿಕೆಗಳ ಕುರಿತು ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಲು ವರಿಷ್ಠರು ಸಿದ್ಧರಿದ್ದಾರೆ. ಸ್ವಲ್ಪ ಕಾಲಾವಕಾಶ ನೀಡಿ~ ಎಂಬುದಾಗಿ ಯಡಿಯೂರಪ್ಪ ಅವರಿಗೆ ಸಲಹೆ ಮಾಡಿದರು ಎಂದು ಉನ್ನತ ಮೂಲಗಳು ಹೇಳಿವೆ

.

`ಹೊಸ ಪಕ್ಷ ಅಸ್ತಿತ್ವಕ್ಕೆ ತರುವ ಪ್ರಯತ್ನ ಕೈಬಿಡಿ. ನಿಮ್ಮ ಹಾಗೂ ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಯೋಚಿಸಿ. ಈಗ ಕೈಗೊಂಡಿರುವ ನಿರ್ಧಾರವನ್ನು ಬದಲಿಸಿ. ಇದರಿಂದ ನಿಮಗೆ ಮತ್ತು ಬಿಜೆಪಿಗೆ ಅನುಕೂಲ ಆಗುತ್ತದೆ. ನಿಮ್ಮನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಎಲ್ಲ ಮುಖಂಡರೂ ಬಯಸಿದ್ದಾರೆ. ಮುಂದೆ ಎಲ್ಲವೂ ಸರಿ ಹೋಗಲಿದೆ~ ಎಂದು ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಲು ಜೇಟ್ಲಿ ಯತ್ನಿಸಿದ್ದಾರೆ.ನಿರ್ಧಾರ ಅಚಲ: ಜೇಟ್ಲಿ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದ ಯಡಿಯೂರಪ್ಪ, ಕೊನೆಯಲ್ಲಿ `ಪಕ್ಷ ತೊರೆಯುವ ನನ್ನ ನಿರ್ಧಾರ ಅಚಲ. ನಿಮ್ಮ ಮೇಲಿನ ಗೌರವದಿಂದಷ್ಟೇ ಈ ಮಾತುಕತೆಗೆ ಬಂದಿದ್ದೇನೆ. ಈಗ ನಾನು ಬಿಜೆಪಿಯಿಂದ ಬಹಳ ದೂರ ಸಾಗಿ ಬಂದಿದ್ದೇನೆ. ಮತ್ತೆ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ಬಿಜೆಪಿ ತೊರೆಯುವ ನನ್ನ ನಿರ್ಧಾರ ಅಚಲ~ ಎಂಬುದಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.`ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ವರಿಷ್ಠರು ನಂತರದಲ್ಲಿ ಮರೆತರು. ರಾಜ್ಯ ಬಿಜೆಪಿಯ ಕೆಲವು ಮುಖಂಡರು ಕೂಡ ನನಗೆ ಅವಮಾನ ಮಾಡುತ್ತಿದ್ದಾರೆ. ನಿರಂತರವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಜೆಪಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಡಿ.9ರಂದು ಹೊಸ ಪಕ್ಷ ಘೋಷಣೆ ನಿರ್ಧಾರ ಕೂಡ ಬದಲಾಗುವುದಿಲ್ಲ~ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.ಬಂದಂತೆ ಮರಳಿದರು: ಶನಿವಾರ ರಾತ್ರಿ ಮಾತುಕತೆ ಮುರಿದುಬಿದ್ದ ಕಾರಣ ಭಾನುವಾರ ಬೆಳಿಗ್ಗೆ ಮತ್ತೊಮ್ಮೆ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಲು ಜೇಟ್ಲಿ ಯತ್ನಿಸಿದರು. ಆದರೆ, ಎರಡನೇ ಬಾರಿ ಸಂಧಾನಕ್ಕೆ ಬರಲು ನಿರಾಕರಿಸಿದ ಯಡಿಯೂರಪ್ಪ ತುಮಕೂರು ಪ್ರವಾಸಕ್ಕೆ ತೆರಳಿದರು. ಮನವೊಲಿಕೆ ಅಸಾಧ್ಯ ಎಂಬುದು ಖಚಿತವಾದ ಬಳಿಕ ಜೇಟ್ಲಿ ಭಾನುವಾರ ಬೆಳಗಿನ 10.30ರ ವಿಮಾನದಲ್ಲಿ ದೆಹಲಿಗೆ ವಾಪಸಾದರು.

ಹೊಸ ಪಕ್ಷ ಸ್ಥಾಪನೆ ಖಚಿತ

ಭಾನುವಾರ ಬೆಳಿಗ್ಗೆ ತುಮಕೂರು ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಕರ್ತರ ಜೊತೆ ಮಾತನಾಡಿದ ಯಡಿಯೂರಪ್ಪ, `ಬಿಜೆಪಿಯಿಂದ ಹೊರಬರುವ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ಪಕ್ಷ ಅಸ್ತಿತ್ವಕ್ಕೆ ತರುವ ಕಾರ್ಯಕ್ರಮವೂ ನಿಗದಿಯಂತೆಯೇ ನಡೆಯಲಿದೆ~ ಎಂದರು.`ಸೇಡಿನಿಂದ ನಾನು ಪಕ್ಷವನ್ನು ಬಿಡುತ್ತಿಲ್ಲ. ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಿ, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವ ಕನಸು ಕಂಡಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ಈಗ ಹೊಸ ಪಕ್ಷದ ಮೂಲಕ ಆ ಕನಸನ್ನು ನನಸು ಮಾಡಲು ಸಾಧ್ಯವಾಗಬಹುದು ಎಂಬ ಯೋಚನೆ ಇದೆ. ಕಲ್ಯಾಣ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿಯಿಂದ ಹೊರಬರುತ್ತಿದ್ದೇನೆ~ ಎಂದು ಹೇಳಿದರು.`ಜೇಟ್ಲಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಅವರು ಸೇರಿದಂತೆ ಯಾರ ಜೊತೆಗೂ ನಾನು ಮಾತುಕತೆ ನಡೆಸುವ ಅಥವಾ ಬಿಜೆಪಿಯಲ್ಲೇ ಉಳಿಯಲು ನಿರ್ಧಾರ ಕೈಗೊಳ್ಳುವ ಪ್ರಶ್ನೆ ಇಲ್ಲ. ನನ್ನ ಜೊತೆ ಯಾರು ಬರುತ್ತಾರೆ, ಬಿಡುತ್ತಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಡಿ.9ರಂದು ಹೊಸ ಪಕ್ಷ ಘೋಷಣೆ ಅಚಲ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.