ಗುರುವಾರ , ನವೆಂಬರ್ 21, 2019
25 °C

ಬರಿದಾಗದಿರಲಿ ಮಡಿಲು

Published:
Updated:

ವಾರದ ವೈದ್ಯ

-ಗಂಡು ಹಾಗೂ ಹೆಣ್ಣಿನಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳಾವುವು?

ಧೂಮಪಾನ, ಮದ್ಯಪಾನ, ವಯಸ್ಸು (ಮುಖ್ಯವಾಗಿ ಮಹಿಳೆಯ), ಅತಿಯಾದ ತೂಕ ಅಥವಾ ಕಡಿಮೆ ತೂಕ, ಒತ್ತಡ, ಕೆಲವು ಪ್ರಕಾರದ ಔಷಧಿಗಳು, ಹತ್ತಿರದ ಸಂಬಂಧದಲ್ಲಿ ವಿವಾಹವಾಗುವುದು ಇತ್ಯಾದಿ. ಇಬ್ಬರಲ್ಲೂ ಪ್ರತ್ಯೇಕವಾಗಿ ಹೇಳುವುದಾದರೆ;

ಪುರುಷರಲ್ಲಿ- ವಂಶವಾಹಿ ಸಮಸ್ಯೆ, ಸೋಂಕುಗಳು, ಅತಿಯಾದ ಶಾಖ ಉತ್ಪಾದನೆ ಇತ್ಯಾದಿ ಕಾರಣಗಳನ್ನು ಗುರುತಿಸಬಹುದು.

ಮಹಿಳೆಯರಲ್ಲಿ-

* ಕ್ಷಯರೋಗದ ಸೋಂಕಿನಿಂದ ಉಂಟಾಗುವ ಡಿಂಬನಾಳ ಕಟ್ಟುವಿಕೆ (Fallopian tube block)

* ಹಾರ್ಮೋನ್ ಅಸಮತೋಲನದಿಂದ ಬರುವ ಪಿ.ಸಿ.ಒ.ಡಿ, ಎಂಡೊಮೆಟ್ರಿಯೋಸಿಸ್‌ನಂತಹ ಮೊಟ್ಟೆಯ ಗುಣಮಟ್ಟ ಹಾಗೂ ಬೆಳವಣಿಗೆ (ಅಂಡೋತ್ಪತ್ತಿ) ಸಮಸ್ಯೆ

* ಗೆಡ್ಡೆ ಕಟ್ಟುವಿಕೆಯಂತಹ ಗರ್ಭಕೋಶದ ಸಮಸ್ಯೆ

-ವಯಸ್ಸು ಅಧಿಕವಾದಂತೆ ಮಹಿಳೆಯರಲ್ಲಿ ಗರ್ಭಧಾರಣೆಯ ಸಾಮರ್ಥ್ಯ ಕ್ಷೀಣಿಸುತ್ತಾ ಹೋಗಲು ಕಾರಣವೇನು? ಮಹಿಳೆಯರ ವಯೋಮಾನಕ್ಕೂ ಗರ್ಭಧಾರಣೆಗೂ ಸಂಬಂಧವಿದೆಯೇ?

ಮಹಿಳೆಯ ವಯಸ್ಸು ಫಲವತ್ತತೆಯನ್ನು ನಿರ್ಧರಿಸುವ ಪ್ರಮುಖ ಅಂಶವೆಂದೇ ಹೇಳಬಹುದು. ಹೆಣ್ಣು ಹುಟ್ಟುವ ಸಮಯದಲ್ಲೇ ಮೊಟ್ಟೆಗಳು ರಚನೆಯಾಗಿರುತ್ತವೆ. ನಂತರ ಪ್ರತಿ ತಿಂಗಳು ಸುಮಾರು 400 ಮೊಟ್ಟೆಗಳು ವ್ಯರ್ಥವಾಗುತ್ತಾ ಹೋಗುತ್ತವೆ. ಆದ್ದರಿಂದ 30ರಿಂದ 35 ವರ್ಷ ದಾಟುತ್ತಿದ್ದಂತೆ ಮಹಿಳೆಯ ಬಹುತೇಕ ಗುಣಮಟ್ಟದ ಮೊಟ್ಟೆಗಳು ವ್ಯರ್ಥವಾಗುತ್ತವೆ. 35 ವರ್ಷಗಳ ನಂತರವಂತೂ ಗರ್ಭಧಾರಣೆಯ ಸಾಧ್ಯತೆ ತೀರಾ ಕ್ಷೀಣಿಸುತ್ತಾ ಹೋಗುತ್ತದೆ.

-ಆಹಾರ ಮತ್ತು ಜೀವನಶೈಲಿ ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಯಾವ ಆಹಾರ ಒಳ್ಳೆಯದು? ಯಾವುದನ್ನು ನಿಯಂತ್ರಿಸಬೇಕು?

ಸರಿಯಾದ ಆಹಾರ ಕ್ರಮವನ್ನು ಅನುಸರಿಸದೇ ಹೋದರೆ ಅದರಿಂದ ತೂಕ ಹೆಚ್ಚುತ್ತದೆ. ಇದು ಮಹಿಳೆಯರ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ದೈಹಿಕ ಚಟುವಟಿಕೆಯ ಕೊರತೆ ಹಾಗೂ ಒತ್ತಡದ ಕೆಲಸಗಳು ಹಾರ್ಮೋನ್ ಅಸಮತೋಲನದ ಮೇಲೆ ನೇರ ಪರಿಣಾಮ ಬೀರುತ್ತವೆ. ಇದರಿಂದಲೂ ಗರ್ಭಧಾರಣೆಯ ಸಾಧ್ಯತೆ ಕ್ಷೀಣಿಸುತ್ತದೆ.ಕರಿದ ಆಹಾರ, ಅತಿ ಹೆಚ್ಚು ಕ್ಯಾಲೊರಿ ಇರುವ ಆಹಾರವನ್ನು ತಪ್ಪಿಸಬೇಕು. ತಾಜಾ ಹಣ್ಣು, ತರಕಾರಿ, ಜ್ಯೂಸ್ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಆ್ಯಂಟಿ ಆಕ್ಸಿಡೆಂಟ್ ಭರಿತ ಆಹಾರವು ವೀರ್ಯಾಣು ಮತ್ತು ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ.

-ರಕ್ತ ಸಂಬಂಧದಲ್ಲಿ ವಿವಾಹವಾದರೆ ಅದು ಬಂಜೆತನಕ್ಕೆ ಅಥವಾ ಇತರ ಸಮಸ್ಯೆಗೆ ಕಾರಣವಾಗುವುದೇ?

ಹೌದು, ಹತ್ತಿರದ ರಕ್ತ ಸಂಬಂಧದಲ್ಲಿ ವಿವಾಹವಾದರೆ ಬಂಜೆತನ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ದಂಪತಿಗೆ ಅಸ್ವಾಭಾವಿಕ ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚು. ಪೋಷಕರ ನಡುವಿನ ರಕ್ತ ಸಂಬಂಧಕ್ಕೂ ಮಕ್ಕಳ ಜನ್ಮಜಾತ ಹೃದಯ ದೋಷಕ್ಕೂ ಹತ್ತಿರದ ಸಂಬಂಧ ಇರುವುದನ್ನು ಅಧ್ಯಯನಗಳೂ ದೃಢಪಡಿಸಿವೆ. ಅಲ್ಲದೆ, ಕುಟುಂಬದ ಆನುವಂಶೀಯ ತೊಂದರೆಗಳು ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತವೆ.

-ಒಂದೇ ರಕ್ತ ಗುಂಪಿನವರು ವಿವಾಹವಾದರೆ?

ಸಾಮಾನ್ಯವಾಗಿ ಇದರಿಂದ ಅಂತಹ ಸಮಸ್ಯೆಯೇನೂ ಇರುವುದಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಮಹಿಳೆಯರಲ್ಲಿ ನೆಗೆಟಿವ್ ರಕ್ತದ ಗುಂಪು ಸಮಸ್ಯೆಯನ್ನು ಸೃಷ್ಟಿಸಬಹುದು.

-ಕುಟುಂಬದ ಇತಿಹಾಸ ಮತ್ತು ವೈದ್ಯಕೀಯ ಇತಿಹಾಸದ ಪಾತ್ರವೇನು?

ವೈದ್ಯಕೀಯ ಇತಿಹಾಸ: ದಂಪತಿ ಅಪಸ್ಮಾರ, ಅಧಿಕ ರಕ್ತದೊತ್ತಡ, ಥೈರಾಯ್ಡ ಅಥವಾ ಕೆಲವು ಪ್ರಕಾರದ ಕ್ಯಾನ್ಸರ್‌ಗಳಿಗೆ ಔಷಧಿ ಸೇವಿಸುತ್ತಿದ್ದರೆ ಗರ್ಭಧಾರಣೆ ಸಮಸ್ಯೆಯನ್ನು ಎದುರಿಸಬಹುದು.ಕುಟುಂಬದ ಇತಿಹಾಸ: ಜನ್ಮಜಾತ ದೋಷಗಳ ಇತಿಹಾಸ ಹೊಂದಿರುವ ಕುಟುಂಬವೂ ಇದಕ್ಕೆ ಕಾರಣ.

-ಬಂಜೆತನವನ್ನು ಹೇಗೆ ಪರೀಕ್ಷಿಸಲಾಗುತ್ತದೆ?

ಮೊದಲು ಪತಿ- ಪತ್ನಿ ಇಬ್ಬರಿಗೂ ಪರೀಕ್ಷೆ ನಡೆಸಬೇಕಾಗುತ್ತದೆ.

ಪತ್ನಿ: ಋತುಚಕ್ರದ ಅವಧಿಯಲ್ಲಿ ಪೆಲ್ವಿಕ್ ಸ್ಕ್ಯಾನಿಂಗ್ ಎನ್ನುವ ಪರೀಕ್ಷೆಯನ್ನು, ನಂತರ ಹಾರ್ಮೋನ್ ಪರೀಕ್ಷೆ ಹಾಗೂ ಎಚ್‌ಎಸ್‌ಜಿ ಮೂಲಕ ಟ್ಯೂಬ್ ಪರೀಕ್ಷೆ (ಎಕ್ಸ್‌ರೇ ಅಥವಾ ಲೆಪ್ರೊಸ್ಕೋಪಿ) ಮಾಡಬೇಕು.

ಪತಿ: ವೀರ್ಯ ಪರೀಕ್ಷೆ ಮತ್ತು ವಿಶ್ಲೇಷಣೆ, ಹಾರ್ಮೋನ್ ಪರೀಕ್ಷೆ, ಸ್ಕ್ಯಾನಿಂಗ್.

-ಬಂಜೆತನಕ್ಕೆ ಚಿಕಿತ್ಸೆ ಏನು?

ಕೆಲವು ಸರಳ ಚಿಕಿತ್ಸೆಗಳು ಹೀಗಿವೆ:


* ಅಂಡೋತ್ಪತ್ತಿ ಹೆಚ್ಚಿಸುವ ಔಷಧಿಗಳು ಮತ್ತು ಪ್ರಣಯ ಚಟುವಟಿಕೆಯ ಸಮಯ.

* ಐಯುಐ- ಆಂತರಿಕ ಗರ್ಭಾಶಯ ವೀರ್ಯದಾನ (ಪತಿಯ ವೀರ್ಯವನ್ನು ಸಂಸ್ಕರಿಸುವುದು ಮತ್ತು ಉತ್ತಮ ಗುಣಮಟ್ಟದ ವೀರ್ಯಾಣುಗಳನ್ನು ಮಾತ್ರ ಆರಿಸಿಕೊಂಡು ಪತ್ನಿಯ ಗರ್ಭಕೋಶಕ್ಕೆ ವರ್ಗಾಯಿಸುವುದು)

* ಐವಿಎಫ್/ ಐಸಿಎಸ್‌ಐ: ಸಾಮಾನ್ಯವಾಗಿ ಇದನ್ನು `ಟೆಸ್ಟ್ ಟ್ಯೂಬ್ ಬೇಬಿ ಚಿಕಿತ್ಸೆ' ಎಂದು ಕರೆಯಲಾಗುತ್ತದೆ. ಈ ಚಿಕಿತ್ಸೆಯಲ್ಲಿ ಮಹಿಳೆಯಿಂದ ಅಂಡಾಣುವನ್ನು ಹಾಗೂ ಪತಿಯಿಂದ ವೀರ್ಯವನ್ನು ಸಂಗ್ರಹಿಸಲಾಗುತ್ತದೆ. ನಂತರ ಅವನ್ನು ಸೇರಿಸಿ ಭ್ರೂಣವನ್ನು ತಯಾರಿಸಿ, ಪ್ರಯೋಗಾಲಯದಲ್ಲಿ ಅದನ್ನು ಬೆಳೆಸಲಾಗುತ್ತದೆ. 3ರಿಂದ 5 ದಿನಗಳ ನಂತರ ಪತ್ನಿಯ ಗರ್ಭಕೋಶಕ್ಕೆ ಈ ಭ್ರೂಣವನ್ನು ವರ್ಗಾಯಿಸಲಾಗುತ್ತದೆ.

-ಯಾವಾಗ ವೈದ್ಯರನ್ನು ಕಾಣಬೇಕು?

ಯಾವುದೇ ಗರ್ಭನಿರೋಧಕಗಳ ಬಳಕೆ ಇಲ್ಲದೆ ಒಂದು ವರ್ಷ ದಾಂಪತ್ಯ ಜೀವನ ನಡೆಸಿದಾಗಲೂ ಗರ್ಭ ಧರಿಸದೇ ಹೋದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.ಪತ್ನಿಯ ವಯಸ್ಸು 33 ವರ್ಷ ದಾಟಿದ್ದರೆ- ಆರು ತಿಂಗಳ ದಾಂಪತ್ಯದ ನಂತರವೂ ಗರ್ಭ ಧರಿಸದೇ ಇದ್ದರೆ ವೈದ್ಯರ ಬಳಿ ತೆರಳಬೇಕು.ಅದರಲ್ಲೂ, ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು ಅಥವಾ ಬಂಜೆತನದ ಕೌಟುಂಬಿಕ ಇತಿಹಾಸ ಹೊಂದಿರುವವರು ಮೊದಲೇ ವೈದ್ಯರನ್ನು ಸಂಪರ್ಕಿಸಿ ಗರ್ಭಧಾರಣೆಯನ್ನು ಯೋಜಿಸಿಕೊಳ್ಳುವುದು ಒಳ್ಳೆಯದು.

ಪ್ರತಿಕ್ರಿಯಿಸಿ (+)