ಬರಿದಾದ ಭೀಮೆ: ದಿಕ್ಕು ತಪ್ಪಿದ ಕೃಷಿ

7

ಬರಿದಾದ ಭೀಮೆ: ದಿಕ್ಕು ತಪ್ಪಿದ ಕೃಷಿ

Published:
Updated:

ಅಫಜಲಪುರ: ತಾಲ್ಲೂಕಿನ ಜನರ ಜೀವನಾಡಿ ಭೀಮಾನದಿ ಸಂಪೂರ್ಣ ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಜನ-ಜಾನುವಾರು ಪರದಾಡುತ್ತಿದ್ದು, ಇನ್ನೊಂದು ಕಡೆ ಭೀಮಾ ನೀರನ್ನೇ ಅವಲಂಬಿಸಿ ಕೃಷಿ ಮಾಡುವ ಸುಮಾರು 40 ಗ್ರಾಮಗಳಲ್ಲಿ ಬೆಳೆ ಒಣಗಿ ಹೋಗಿದೆ. ಹೀಗಾಗಿ ಕೃಷಿಯು ಸಂಪೂರ್ಣ ದಿಕ್ಕು ತಪ್ಪಿದಂತಾಗಿ ರೈತರು ಮುಂದೆನು ಮಾಡಬೇಕು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ವರ್ಷ 667.2 ಮೀ.ಮೀ. ಸರಾಸರಿ ಮಳೆ ಆಗಬೇಕಿತ್ತು, ಆ ಪೈಕಿ 482.5 ಮೀ.ಮೀ. ಮಳೆ ಆಗಿದೆ. 159.1 ಮೀ.ಮೀ. ಮಳೆ ಕೊರತೆ ಆಗಿದೆ. ಹೀಗಾಗಿ ಭೀಮಾನದಿ ಸೇರಿದಂತೆ ಕೆರೆಗಳು, ತೆರೆದ ಬಾವಿ,ಕೊಳವೆ ಬಾವಿ ಎಲ್ಲವೂ ಬತ್ತಿ ಹೋಗಿವೆ. 2011-12 ನೇ ಸಾಲಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ 6680 ಹೆಕ್ಟರ್‌ನಲ್ಲಿ ಕಬ್ಬು ನಾಟಿ ಮಾಡುವ ಗುರಿ ಹೊಂದಲಾಗಿತ್ತು. ಆದರೆ ರೈತರು 14990 ಹೆಕ್ಟರ್‌ನಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಅಲ್ಲದೆ ಇನ್ನೂ 18 ಸಾವಿರ ಹೆಕ್ಟರ್ ಹಳೆ ಕಬ್ಬು ರೈತರು ಮುಂದುವರೆಸಿಕೊಂಡು ಬಂದಿದ್ದಾರೆ. ಮಳೆ ಕೊರತೆಯಿಂದ ಶೇ 70ರಷ್ಟು ಕಬ್ಬು ಒಣಗಿಹೋಗಿದೆ.

ತಾಲ್ಲೂಕಿನಲ್ಲಿ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಲಾದ ಏಳು ಬ್ಯಾರೇಜ್‌ಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ಸುಮಾರು 40 ಗ್ರಾಮಗಳಲ್ಲಿ ಜನ, ಜಾನುವಾರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ುಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಿಸಬೇಕೆಂದು ಶಾಸಕ ಮಾಲೀಕಯ್ಯ ಗುತ್ತೇದಾರ, ಜಿ.ಪಂ. ಸದಸ್ಯೆ ಶೋಬಾ ಭಾಣಿ ಅವರ ನೇತೃತ್ವದ ಅಫಜಲಪುರ ಮತ್ತು ಜೇವರ್ಗಿ ತಾಲ್ಲೂಕಿನ ರೈತರು ಭೀಮಾನದಿಗೆ ನೀರು ಬಿಡುವಂತೆ ದೇವಲಗಾಣಗಾಪುರ, ಚವಡಾಪುರ, ಅಫಜಲಪುರದಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ,ಧರಣಿ ಸತ್ಯಾಗ್ರಹ,ರಸ್ತೆತಡೆ ಮಾಡಿದ್ದಾರೆ. ಇನ್ನೊಂದು ಕಡೆ  ಮಾಜಿ ಶಾಸಕ ಎಂ.ವೈ. ಪಾಟೀಲ್ ನೀರಾವರಿ ಕಾರ್ಯದರ್ಶಿಗಳ ಮೇಲೆ ನೀರು ಬಿಡುವಂತೆ ಒತ್ತಡ ಹೇರಿದ್ದಾರೆ. ಆದರೂ ಸಹ ಇದುವರೆಗೂ ಮಹಾರಾಷ್ಟ್ರ ಸರ್ಕಾರ ಉಜನಿ ಜಲಾಶಯದಿಂದ ಭೀಮಾನದಿಗೆ ನೀರು ಬಿಡುವ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಲಾಗುತ್ತದೆ

ಈ ಭಾಗದಲ್ಲಿ ಭೀಮಾನದಿ ರೈತರ ಜೀವನಾಡಿಯಾಗಿದೆ. ಸದ್ಯಕ್ಕೆ ಭೀಮಾನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಏಳು ಬ್ಯಾರೇಜ್‌ಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ಸುಮಾರು 40 ಗ್ರಾಮಗಳಲ್ಲಿ ಜನ, ಜಾನುವಾರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಇದೆ ಪರಸ್ಥಿತಿ ಮುಂದುವರೆದರೆ ಜನರು ಕುಡಿಯುವ ನೀರಿಗಾಗಿ ಜನರು ಗೂಳೆ ಹೋಗಬೇಕಾಗುತ್ತದೆ. ಈ ಭಾಗದಲ್ಲಿ ರೈತರು ನಾಟಿ ಮಾಡಿರುವ ಕಬ್ಬು, ಬಾಳೆ ನೀರಿಲ್ಲದೆ ಒಣಗಿ ಹೋಗುತ್ತಿವೆ. ರಾಜ್ಯ ಸರ್ಕಾರ ಎರಡು, ಮೂರು ದಿನಗಳಲ್ಲಿ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಿಸಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದರಿಂದ ರೈತರು ಕೊರೆದಿರುವ ಕೊಳವೆ ಮತ್ತು ತೆರೆದ ಬಾವಿಗಳಲ್ಲಿಯೂ ನೀರು ಇಲ್ಲದಾಗಿದೆ. ಅಫಜಲಪುರ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಸರ್ಕಾರ ಘೋಷಿಸಿ ನಾಲ್ಕು ತಿಂಗಳಾದರು ಇನ್ನುವರೆಗೂ ಬರ ಪರಿಹಾರ ಕಾಮಗಾರಿ ಆರಂಭಿಸಿಲ್ಲ. ಸರ್ಕಾರ ಹಾಗೂ ತಾಲ್ಲೂಕು ಆಡಳಿತ ಬರ ನಿರ್ವಾಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆಗೆ ಹಾಗೂ ಕುಡಿಯುವ ನೀರಿಗಾಗಿ ಅನುದಾನ ನೀಡಲಾಗಿದೆ ಎಂದು ಸರ್ಕಾರವು ಪತ್ರಿಕೆಗಳಲ್ಲಿ ಸುದ್ದಿ ಮಾತ್ರ ಕೊಡುತ್ತಿದೆ. ಆದರೆ ಗ್ರಾಮಗಳಲ್ಲಿ ಬರ ಕಾಮಗಾರಿ ಏಕೆ ಆರಂಭವಾಗಿಲ್ಲ. ಇದು ಕೇವಲ ಪ್ರಚಾರಕ್ಕೆ ನೀಡಿರುವ ಹೇಳಿಕೆಗಳು ಆಗಿರುತ್ತವೆ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಮುಖಂಡ ಅಪ್ಪಾರಾಯ ಹೆಗ್ಗಿ ಹಾಗೂ ತಾಲ್ಲೂಕು ಕರವೇ ಅಧ್ಯಕ್ಷ ಶಿವುಕುಮಾರ ನಾಟಿಕಾರ, ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಆರೋಪಿಸಿದ್ದು. ಸರ್ಕಾರ ಎಚ್ಚೆತ್ತುಕೊಂಡು ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry