ಭಾನುವಾರ, ಜುಲೈ 25, 2021
22 °C

ಬರಿ ಬೆಳಕಲ್ಲೋ ಅಣ್ಣ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರದ ಪತ್ರಿಕೆಯಲ್ಲಿ ವಿಭಿನ್ನ ರೀತಿಯ ವಸ್ತುವನ್ನು ಹೊಂದಿದೆಯೆನ್ನುವ ವಿಮರ್ಶೆಯನ್ನು ಓದಿ, ಕನ್ನಡ ಚಿತ್ರವೊಂದನ್ನು ನೋಡುವ ಉದ್ದೇಶದಿಂದ ಕಳೆದ ಡಿಸೆಂಬರ್ 14ರ ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಜಯನಗರದ ಮಲ್ಟಿಪ್ಲೆಕ್ಸ್‌ಗೆ ಹೋದೆ. ಕೌಂಟರ್‌ನಲ್ಲಿ ಚಿತ್ರದ ಹೆಸರು ಹೇಳಿ, ಟಿಕೆಟ್ ಕೇಳಿದಾಗ ಆ ಚಿತ್ರ ಅಲ್ಲಿ ನಡೆಯುತ್ತಿಲ್ಲವೆಂದು ಹೇಳಿದರು. ಬಹಳಷ್ಟು ಸಲ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡ್ತಿದ್ದೀವಿ ಅಂತ ತೋರಿಸಿಕೊಳ್ಳಲೆಂದೇ ಜಾಹೀರಾತಿನಲ್ಲಿ ಥಿಯೇಟರ್‌ಗಳ ಹೆಸರು ಹಾಕಿ, ಅಲ್ಲಿ ಚಿತ್ರಗಳು ಬಿಡುಗಡೆಯಾಗದಿರುವ ಸಂಗತಿ ನನಗೆ ಗೊತ್ತೇ ಇತ್ತು.ಹಾಗಾಗಿ ಹತ್ತಿರದಲ್ಲೇ ಇದ್ದ ಜೆ.ಪಿ.ನಗರದ ಸೆಂಟ್ರಲ್‌ಮಾಲ್‌ನ ಐನಾಕ್ಸ್‌ಗೆ ಹೋದೆ. ಅಲ್ಲೂ, ‘ಆ ಚಿತ್ರ ಇಲ್ಲಿಲ್ಲ ಸಾರ್’ ಎಂದು ಕೈ ಆಡಿಸಿದಳು ಗಾಜಿನ ಪರದೆಯೊಳಗಿನ ಹುಡುಗಿ. ‘ಅಲ್ಲಮ್ಮಾ ಪೇಪರ್‌ನಲ್ಲೆಲ್ಲಾ ಹಾಕಿದಾರಲ್ಲಾ’ ಅಂದಾಗ, ‘ಇಲ್ಲಿ ರಿಲೀಸ್ ಆಗಿತ್ತು, ಜನ ಬರಲಿಲ್ಲ ಅದಕ್ಕೆ ತೆಗೆದಿದ್ದಾರೆ’ ಎಂದಳು. ಅದೇ ವಾರ ಬಿಡುಗಡೆಯಾಗಿದ್ದ ಇನ್ನೊಂದು ಕನ್ನಡ ಚಿತ್ರದ ಗತಿಯೂ ಇದೇ ಆಗಿತ್ತು.ಆ ವಾರದ ಷೆಡ್ಯೂಲ್ ಇದ್ದ ಪಾಂಪ್ಲೆಟ್ ಕೈಯಲ್ಲಿಟ್ಟಳು. ಆ ವಾರ ಬಿಡುಗಡೆಯಾಗಿದ್ದ ಎರಡು ಕನ್ನಡ ಸಿನೆಮಾಗಳ ಹೆಸರನ್ನು ಕಪ್ಪು ಪೆನ್ನಿನಲ್ಲಿ ಒಡೆದು ಹಾಕಿ, ಅಲ್ಲಿ ಹಿಂದಿ ಸಿನೆಮಾಗಳ ಹೆಸರು ಬರೆಯಲಾಗಿತ್ತು. ಭಿನ್ನ ರೀತಿಯ ವಸ್ತು ಹೊಂದಿರುವ, ಮೂರು ದಿನಕ್ಕೇ ಥಿಯೇಟರ್‌ಗಳಿಂದ ಪಲಾಯನ ಮಾಡಿದ ಆ ಚಿತ್ರ ನೋಡಲೇಬೇಕೆನ್ನುವ ಹಟ ನನ್ನದು. ತಡ ಮಾಡಿದರೆ ಬೇರೆಡೆಯೂ ನೋಡಲು ಸಾಧ್ಯವಾಗದಿರಬಹುದೆಂದು ಅಲ್ಲಿಂದಲೇ ಗಾಡಿ ಓಡಿಸಿಕೊಂಡು ಕಾಮಾಕ್ಯ ಥಿಯೇಟರ್‌ಗೆ ಹೋದೆ. ಬಾಲ್ಕನಿಯಲ್ಲಿದ್ದ ನಾಲ್ಕು ಜನರೊಂದಿಗೆ ಸೇರಿ ಚಿತ್ರ ನೋಡಿಕೊಂಡು ಮನೆಗೆ ಬಂದೆ. ಇದು 2010ರ ಕೊನೆಯ ಘಟ್ಟದ ಕನ್ನಡ ಚಿತ್ರಗಳ ವಾಸ್ತವತೆ.ನನ್ನ ಗಮನಸೆಳೆದ ಚಿತ್ರಗಳ ಬಗ್ಗೆ ಚರ್ಚಿಸುವುದಕ್ಕೆ ಮೊದಲು- ಈ ವರ್ಷ ಬಹಳಷ್ಟು ಚರ್ಚೆಗೊಳಗಾದ ಹೊಸ ಪೀಳಿಗೆಯ ನಿರ್ದೇಶಕರು ತಾಂತ್ರಿಕತೆಯಲ್ಲಿ ಬಹಳ ಮುಂದುವರಿದಿದ್ದಾರೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವುದಿದೆ.‘ನಾವು ಟೆಕ್ನಿಕಲೀ ತುಂಬ ಅಡ್ವಾನ್ಸ್ ಆಗ್ತಾ ಇದ್ದೀವಿ. ತಮಿಳು ತೆಲುಗಿನವರಿಗೆ ಸರಿ ಸಮಾನರಾಗಿ ಚಿತ್ರಗಳನ್ನು ತಯಾರಿಸುತ್ತಿದ್ದೇವೆ’ ಎಂದು ಭ್ರಮೆ ಹುಟ್ಟಿಸುತ್ತಿರುವ ಹಾಗೂ ಸ್ವತಃ ತಾವೇ ಭ್ರಮೆಯಲ್ಲಿರುವಂಥವರಿಗೆ ಟೆಕ್ನಿಕಲೀ ಅಡ್ವಾನ್ಸ್ ಅಂದರೆ ಏನೆಂಬುದು ನನ್ನ ಪ್ರಶ್ನೆ? ತಾವು ಮಾಡುವ ಕಥೆಗಳಿಗೆ, ನಿರೂಪಣಾ ಶೈಲಿಗೆ ಆ ತಾಂತ್ರಿಕತೆ ಎಷ್ಟರ ಮಟ್ಟಿಗೆ ಸಹಕಾರಿ? ಆ ತಾಂತ್ರಿಕತೆಯಿಂದ ತಮ್ಮ ಚಿತ್ರದ ಉದ್ದೇಶ ಸಾಧನೆಯಾಗಿದೆಯೇ ಎಂಬುದು ಮುಖ್ಯವಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದಿನ ಚಿತ್ರಗಳನ್ನು ಹಾಗೂ ಇಂದಿನ ಚಿತ್ರಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡಿದರೆ, ನಮ್ಮ ಅಡ್ವಾನ್ಸ್‌ಮೆಂಟ್ ಏನೂಂತ ಗೊತ್ತಾಗುತ್ತೆ.ಇಷ್ಟಕ್ಕೂ ಇವತ್ತಿನ ಪರಿಕಲ್ಪನೆಯ ಮುಂದುವರಿದ ತಂತ್ರಜ್ಞಾನ ಎಂದರಾದರೂ ಏನು? ಶೂಟಿಂಗ್‌ನಲ್ಲಿ ಜಿಮ್ಮಿ ಕ್ರೇನ್ ಬಳಸೋದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ನಾನ್‌ಲೀನಿಯರ್ ವಿಧಾನದಲ್ಲಿ ಎಡಿಟಿಂಗ್ ಮಾಡೋದು, ಇಡೀ ಚಿತ್ರವನ್ನ ಡಿಜಿಟಲ್ ಗ್ರೇಡಿಂಗ್ ಮಾಡೋದು, ಬೇರೆಬೇರೆ ಸಮಯದಲ್ಲಿ ಒಂದೊಂದೇ ಟ್ರ್ಯಾಕ್‌ಗಳಲ್ಲಿ ಸಂಗೀತವನ್ನ ರೆಕಾರ್ಡ್ ಮಾಡೋದು ಮತ್ತು ಮುಕ್ಕಾಲು ಭಾಗ ಸಿನೆಮಾಗಳಿಗೆ ಡಿಟಿಎಸ್ ಅಳವಡಿಸೋದು, ಅದನ್ನ ಬಿಟ್ರೆ ಚಿತ್ರೀಕರಣದಲ್ಲಿ ನೆಗೆಟಿವ್ ಬದಲಿಗೆ ಡಿಜಿಟಲ್ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಿಸುವುದು. (ಇದನ್ನು ಇನ್ನೂ ನಮ್ಮಲ್ಲಿ ಹೆಚ್ಚು ಬಳಸುತ್ತಿಲ್ಲ. ಕಾರಣ- ಆ ವಿಧಾನದಲ್ಲಿ ಅಂತಿಮ ಫಲಿತಾಂಶ ನಮ್ಮ ನಿರೀಕ್ಷೆಗೆ ತಕ್ಕದಾಗಿರಬೇಕೆಂದರೆ ತಂತ್ರಜ್ಞರಿಗೆ ಆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ತಿಳಿವಳಿಕೆಯ ಅಗತ್ಯವಿರುವುದು ಮತ್ತು ಇಂದಿನ ಮಟ್ಟಿಗೆ ಅದಿನ್ನೂ ಹೆಚ್ಚು ಜನರ ಕೈಗೆಟುಕುವುದಿಲ್ಲ ಎನ್ನುವ ನಂಬಿಕೆಯಲ್ಲಿರುವುದು). ಇಷ್ಟೇ.ಹೊಸ ತಂತ್ರಜ್ಞಾನ ಮತ್ತು ಹೊಸ ಸಲಕರಣೆಗಳು ಚಲನಚಿತ್ರಗಳ ಸೃಜನಶೀಲ ಸೃಷ್ಟಿಗೆ ಕೇವಲ ಟೂಲ್‌ಗಳು. ಒಬ್ಬ ಬಡಗಿಗೆ ಹಲಗೆ, ಸ್ಕ್ರೂಡ್ರೈವರ್, ಸುತ್ತಿಗೆ, ಗರಗಸ ಹಾಗೂ ಮೊಳೆಗಳಿದ್ದಂತೆ. ತ್ವರಿತವಾಗಿ, ಇನ್ನೂ ಸಮರ್ಥವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಅವುಗಳು ಹೊಸ ಆವಿಷ್ಕಾರಗಳೊಂದಿಗೆ ಬಳಕೆಗೆ ಬಂದಾಗ ನಮ್ಮ (ನಿರ್ದೇಶಕನ) ಕೆಲಸ ಸುಲಭವಾಗುತ್ತದೆ. ಆದರೆ ಅವುಗಳಿಂದಲೇ ನಮ್ಮ ಸೃಜನಶೀಲ ಸೃಷ್ಟಿ ಸಿದ್ಧವಾಗುತ್ತದೆನ್ನುವುದು ಸುಳ್ಳು.ತಾನು ನಿರ್ಮಿಸುವ ಕೃತಿ ಹೇಗೆ ಸುಂದರವಾಗಿರಬೇಕು, ಗಟ್ಟಿಯಾಗಿರಬೇಕು, ಹೇಗಿದ್ರೆ ಅದು ಹೆಚ್ಚು ಜನರನ್ನ ಆಕರ್ಷಿಸಿ ಉತ್ತಮ ಕೃತಿಯಾಗಬಹುದು, ಒಳಗಿನ ಗಟ್ಟಿತನ ಎಷ್ಟಿರಬೇಕು, ಹೊರಗಿನ ಆಕರ್ಷಣೆಗೆ ಬಣ್ಣ-ಅಲಂಕಾರ ಹೇಗಿರಬೇಕು, ಅಷ್ಟನ್ನು ಮಾಡಲು ಪ್ರಸ್ತುತ ಲಭ್ಯವಿರುವ ತಾಂತ್ರಿಕತೆಯನ್ನು ಹೇಗೆ ಬಳಸಬಹುದೆನ್ನುವುದರ ಅರಿವು ಕೂಡ ಮುಖ್ಯ. ಅದಲ್ಲದೇ ನಾವು ವೈಪರ್ ಕ್ಯಾಮೆರಾ ಬಳಸಿದ್ದೇವೆ, ರೆಡ್ ಕ್ಯಾಮೆರಾ ಕನ್ನಡದಲ್ಲಿ ಫಸ್ಟ್ ಟೈಂ ಬಳಸಿದ್ದೇವೆ, ಹಿಂದಿ ಹಿಟ್ ಫಿಲ್ಮ್ ಘಜಿನಿಗೆ ಉಪಯೋಗಿಸಿದ್ದ ಕ್ಯಾಮೆರಾದಲ್ಲಿ ಶೂಟ್ ಮಾಡಿದ್ದೇವೆ ಎಂದೆಲ್ಲಾ ಹೇಳಿಕೊಳ್ಳುವವರನ್ನು ನೋಡಿದಾಗ ಬಾಲಿಶ ಅನ್ನಿಸುತ್ತೆ. ಅವನ್ನೆಲ್ಲ ಬಳಸಿಕೊಂಡು ತಾವೇನು ಮಾಡಿದ್ದೇವೆ? ಅದು ಯಾವ ರೀತಿಯಲ್ಲಿ ತಮ್ಮ ಚಿತ್ರಕ್ಕೆ ಅನುಕೂಲವಾಯಿತು? ಎಂದು ಯಾರೂ ಬಾಯಿಬಿಡುವುದಿಲ್ಲ.

 

ಡಿಜಿಟಲ್ ಕ್ಯಾಮೆರಾ, ಸಿಜಿ, ಗ್ರಾಫಿಕ್ಸ್ ಇದ್ಯಾವುದೂ ಇಲ್ಲದಿದ್ದಾಗ, ಯಾವುದೇ ವಿಶೇಷ ಕ್ಯಾಮೆರಾ ಬಳಸದೇ ಆವರೆಗೂ ಬರೀ ಒಳಾಂಗಣದಲ್ಲಿ ಡಬಲ್ ಆಕ್ಟಿಂಗ್ ಕಾರಣಕ್ಕೆ ಮಾತ್ರ ಬಳಸುತ್ತಿದ್ದ ಮಾಸ್ಕ್ ಶಾಟ್ ವಿಧಾನವನ್ನು ಅರ್ಧ ನಾರ್ಮಲ್ ಸ್ಪೀಡ್ ಉಳಿದರ್ಧ ಹೈ ಸ್ಪೀಡ್‌ನಲ್ಲಿ ಹಾಡನ್ನು ಹೊರಾಂಗಣದಲ್ಲಿ ಚಿತ್ರೀಕರಿಸಿ ಅಭೂತಪೂರ್ವ ಪರಿಣಾಮ ಬೀರಿದ್ದ, ಇಡೀ ದೇಶದ ನಿರ್ದೇಶಕರುಗಳೆಲ್ಲ ಅಚ್ಚರಿ ಪಡುವಂತೆ ಮಾಡಿದ್ದ ಪುಟ್ಟಣ್ಣನವರು ನಿಜವಾದ ತಂತ್ರಜ್ಞ. ತಮ್ಮ ಸೃಜನಶೀಲತೆಯ ಅಭಿವ್ಯಕ್ತಿಗೆ ತಂತ್ರಜ್ಞತೆಯನ್ನು ಬಳಸಿದ ಅಂಥ ಉದಾಹರಣೆ ‘ನಾಗರಹಾವು’ ಚಿತ್ರದ ನಂತರ ಸುಮಾರು 38 ವರ್ಷಗಳಿಂದಲೂ ಇಲ್ಲವೆಂದೇ ಹೇಳಬೇಕು. ನಮ್ಮ ತಾಂತ್ರಿಕತೆ ಏನಿದ್ದರೂ ಇನ್ನೂ ಮದುವೆ ವಿಡಿಯೋದ ಮಟ್ಟದಲ್ಲೇ ಇದೆ; ಬೆರಳೆಣಿಕೆಯ ಉದಾಹರಣೆಗಳನ್ನು ಬಿಟ್ಟರೆ. ಜಿಮ್ಮಿಜಿಬ್ ಕ್ರೇನನ್ನು ‘ಚಂದ್ರ ಚಕೋರಿ’ ಚಿತ್ರದಲ್ಲಿ ಎಸ್.ನಾರಾಯಣ್ ಪರಿಣಾಮಕಾರಿಯಾಗಿ ಬಳಸಿದ್ದರು. ನಂತರ ಯೋಗರಾಜ ಭಟ್ಟರು ಮುಂಗಾರು ಮಳೆ ಚಿತ್ರದಲ್ಲಿ ಜೋಗ ಜಲಪಾತವನ್ನು ಜಿಮ್ಮಿಯಲ್ಲಿ ಚಿತ್ರೀಕರಿಸಿದ್ದು ಒಬ್ಬ ನಿಜವಾದ ತಂತ್ರಜ್ಞನ ಪ್ರತಿಭೆಗೆ ಸಾಕ್ಷಿ ಎನ್ನುವಂತಿತ್ತು. ಆಮೇಲೆ ಇಂದಿನವರೆಗೂ ನಾನಂತೂ ಆ ಥರದ ಕಂಪೊಸಿಷನ್ ನೋಡಲಿಲ್ಲ.2010ರ ಚಿತ್ರಗಳ ವಿಷಯಕ್ಕೆ ಬರೋಣ.

ನಿರೂಪಣೆಯ ವಿಷಯದಲ್ಲಿ ‘ಜಸ್ಟ್ ಮಾತ್‌ಮಾತಲ್ಲಿ’ ಲವಲವಿಕೆಯಿಂದ ಕೂಡಿತ್ತು. ಇತರೆ ಭಾಷೆಯ ಚಿತ್ರಗಳ ಛಾಯೆ ಅದರಲ್ಲಿ ಕಂಡು ಬಂದರೂ ಸಹ ಕನ್ನಡದ ಇತರ ಚಿತ್ರಗಳ ಜೊತೆ ಹೋಲಿಸಿದಾಗ ಆ ಜೀವಂತಿಕೆ ನಮ್ಮನ್ನು ಚಿತ್ರದ ಅಂತರಾಳಕ್ಕೊಯ್ಯುತ್ತದೆ. ರಮ್ಯಾ ಅಷ್ಟು ಚೆನ್ನಾಗಿ ಪಾರ್ಟು ಮಾಡಿದ್ದನ್ನ ನಾನಂತೂ ಈ ಹಿಂದೆ ನೋಡಿರಲಿಲ್ಲ. ರಾಜೇಶ್ ಅರುಣ್‌ಸಾಗರ್ ಹಾಗೂ ಇತರರು ಸಹ. ಸುದೀಪ್ ಸಂಗೀತಗಾರನಾಗಿದ್ದಾಗಿನ ಎಪಿಸೋಡ್ ಅಸಹಜವಾಗಿಲ್ಲದಿದ್ದರೆ ಅದೊಂದು ಪರ್‌ಫೆಕ್ಟ್ ಚಿತ್ರವಾಗುತ್ತಿತ್ತು.ಸಂಗೀತ, ಸಾಹಿತ್ಯ, ಛಾಯಾಗ್ರಹಣ ಎಲ್ಲ ವಿಭಾಗಗಳನ್ನೂ ಸಮರ್ಥವಾಗಿ ಬಳಸಿರುವುದು ಕಾಣುತ್ತದೆ. ಎಲ್ಲೂ ತಾಂತ್ರಿಕತೆ ನಿರೂಪಣೆಯನ್ನು ಓವರ್‌ಟೇಕ್ ಮಾಡಿಲ್ಲ. ಸುದೀಪ್ ನಟನೆಯಲ್ಲಿ ತೋರುವ ತನ್ಮಯತೆಯನ್ನು ನಿರ್ದೇಶನದಲ್ಲೂ ತೋರಿರುವುದು ಗೋಚರಿಸಿತು. ಅಷ್ಟೆಲ್ಲ ಶ್ರಮವಹಿಸಿ ಒಂದು ಚಿತ್ರದಲ್ಲಿ ತಲ್ಲೆನರಾಗುವ, ಹೊಸತನ್ನು ಮಾಡುವ ಪ್ರತಿಭೆ, ಮಾಧ್ಯಮದ ಮೇಲಿನ ಹಿಡಿತವಿರುವ ಸುದೀಪ್ ರೀಮೇಕ್ ಕಥೆಗಳಿಗೆ ಜೋತುಬೀಳುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಆಗುತ್ತಿರುವ ನಷ್ಟವೆಂದು ನನ್ನ ಅನಿಸಿಕೆ. ನಿರೂಪಣೆಯ ಕಾರಣಕ್ಕೇ ಹೆಚ್ಚು ಇಷ್ಟವಾದ ಇನ್ನೆರೆಡು ಚಿತ್ರಗಳು ‘ಪಂಚರಂಗಿ’ ಮತ್ತು ‘ಜಾಕಿ’.ಪಂಚರಂಗಿ ಸಂಪೂರ್ಣವಾಗಿ ನಿರ್ದೇಶಕನ ಚಿತ್ರ. ಕನ್ನಡದ ಈಗಿನ ಮಟ್ಟಿಗೆ ಕಥೆಯೇ ಇಲ್ಲದೇ ಒಂದು ಉತ್ತಮ ಚಿತ್ರ ಮಾಡಿ ಯಶಸ್ವಿಯಾದ ನಿದರ್ಶನ ಇಲ್ಲವೆಂದೇ ಹೇಳಬೇಕು. ಹಳೆಯದಾಗಲೀ, ಉಜ್ಜಿ ಸವೆದುಹೋಗಿರುವಂಥದ್ದಾಗಲೀ ಒಂದು ಕಥೆಯ ಆಧಾರವನ್ನು ಇಟ್ಟುಕೊಂಡೇ ಒಳ್ಳೆಯ ಮತ್ತು ಕೆಟ್ಟ ಚಿತ್ರಗಳು ತಯಾರಾಗುತ್ತಿರುವ ಇಂದು ಕಥೆಯ ಗೊಡವೆಗೇ ಹೋಗದೆ ಕೇವಲ ಸಂಭಾಷಣೆ ಹಾಗೂ ನಿರೂಪಣೆಯ ಸಾಮರ್ಥ್ಯದಿಂದಲೇ ಒಂದು ಒಳ್ಳೆಯ ಯಶಸ್ವಿ ಚಿತ್ರವನ್ನು ಮಾಡಬಹುದೆಂದು ತೋರಿಸಿದ ಉದಾಹರಣೆ ‘ಪಂಚರಂಗಿ’. ಒಂದು ಒಳ್ಳೆ ಯಶಸ್ವಿ ಚಿತ್ರಕ್ಕೆ ಕಥೆಯೊಂದೇ ಕಾರಣವಾಗುವುದಿಲ್ಲವೆಂಬುದನ್ನು ಸಾಬೀತು ಪಡಿಸಿದ್ದಾರೆ ಭಟ್ಟರು. ಗಾಢ ಕಥಾ ಹಂದರವಿದ್ದ ‘ಮಣಿ’ ಚಿತ್ರವನ್ನು ಮಾಡಿ ಸೋತಿದ್ದ ಭಟ್ಟರು ಯಶಸ್ವಿಯಾಗಿದ್ದು ನಿಶ್ಚಿತಾರ್ಥ ಆಗಿರುವ ಹುಡುಗಿಯನ್ನು ಪ್ರೀತಿಸುವ ಹುಡುಗನ ಒನ್‌ಲೈನ್ ಕಥೆಯುಳ್ಳ ‘ಮುಂಗಾರುಮಳೆ’ಯಲ್ಲಿ. ‘ಪಂಚರಂಗಿ’ ಕೂಡ ವರನ ಕಡೆಯವರು ಹೆಣ್ಣು ನೋಡಲು ಬಂದಾಗ ನಡೆಯುವ ಘಟನೆಗಳ ಗೊಂಚಲು.ಗಂಭೀರವಾದ ವಿಚಾರಗಳನ್ನು ಹಗುರ ಮಾತಿನಲ್ಲಿ ಹೇಳುವ ಒಂದು ಉಡಾಫೆಯ ಧಾಟಿಯಲ್ಲಿ ಚಿತ್ರ ಸಾಗುತ್ತದೆ. ಭಾವನೆಗಳ ಅನಾವರಣಕ್ಕೆ ಮುಂಗಾರು ಮಳೆಯಲ್ಲಿ ಮೊಲವನ್ನು ಬಳಸಿಕೊಂಡರೆ ಇಲ್ಲಿ ನಾಟಕದ ಸ್ವಗತದ ಧಾಟಿಗೆ ಮೊರೆಹೋಗಿದ್ದಾರೆ. ಇವೆರಡೂ ಅಲ್ಲದ ನೇರ ಸಂಭಾಷಣೆಗಳಲ್ಲೂ ಹೇಳದೆ ಭಾವನೆಗಳ ಅಭಿವ್ಯಕ್ತಿಯನ್ನು ಸಾಧಿಸುವ ಸಾಧ್ಯತೆಗಳ ಗೊಡವೆಗೆ ಹೋಗಿಲ್ಲ. ಕಥೆಯಿಲ್ಲದಿದ್ದರೂ ತಮ್ಮ ವಿಶಿಷ್ಟ ನಿರೂಪಣೆಯಿಂದ ಎಲ್ಲೂ ಲೇಟೆಸ್ಟ್ ಟೆಕ್ನಾಲಜಿಯ (ಗಾಂಧಿನಗರದ ಭಾಷೆ) ಹೊರೆಯನ್ನು ಪ್ರೇಕ್ಷಕರ ಮೇಲೆ ಹೊರಿಸದೇ ಎರಡು ಗಂಟೆ ಸಿನೆಮಾ ನೋಡುವಂತೆ ಮಾಡಿದ್ದಾರೆ.ಮೂವತ್ತೈದು ವರ್ಷಗಳ ಹಿಂದೆ ಸ್ವಾಭಿಮಾನಿ ಹೆಣ್ಣೊಬ್ಬಳು ತನ್ನ ಬಂಧುವಿನ ಮನೆಯಲ್ಲಿ ತಾನು ತಿಂದ ತಿಂಡಿ ಊಟಕ್ಕೆಲ್ಲ ಲೆಕ್ಕ ಬರೆಯುವ ಅಂಶವನ್ನಷ್ಟೇ ಆಧಾರವಾಗಿಟ್ಟುಕೊಂಡು ಪುಟ್ಟಣ್ಣ ಕಣಗಾಲ್‌ರವರು ‘ಶುಭಮಂಗಳ’ ತಯಾರಿಸಿದ್ದರು. ಗಟ್ಟಿಯಾದ ವಸ್ತುವಿಲ್ಲದೇ, ಕರಾವಳಿ ಹಿನ್ನೆಲೆಯ ಛಾಯಾಗ್ರಹಣ, ಸಂಗೀತ, ನಟನೆ, ನಿರೂಪಣೆಯಿಂದಲೇ 25 ವಾರಗಳು ಓಡಿದ ‘ಶುಭಮಂಗಳ’ ಸಿನೆಮಾಗಳಿಗೆ ನೋಡಿಸಿಕೊಳ್ಳುವ ಗುಣ ಬರುವುದು ನಿರೂಪಣೆಯಿಂದ ಎಂದು ತೋರಿಸಿಕೊಟ್ಟಿತ್ತು.ನಾನು ನೋಡಿ ಇಷ್ಟಪಟ್ಟ ಮತ್ತೊಂದು ಚಿತ್ರ ‘ಜಾಕಿ’. ಇದರ ಕಥೆ ಹೊಸದಲ್ಲ. ಸೂಳೆಗಾರಿಕೆಗೆ ಹುಡುಗಿಯರ ಸಾಗಾಣಿಕೆ ದಂಧೆಯನ್ನು ಹೇಳುವ ಕಲಾತ್ಮಕ ಚಿತ್ರಗಳು, ಕಮರ್ಷಿಯಲ್ ಚಿತ್ರಗಳು, ಕುತೂಹಲಕಾರಿಯಾದ ಡಾಕ್ಯುಮೆಂಟರಿ ಚಿತ್ರಗಳು ಬಹಳಷ್ಟು ಭಾಷೆಗಳಲ್ಲಿ ಬಂದಿವೆ. ಆದರೆ ಸೂರಿಯವರು ಆ ಕಥೆಯನ್ನು ಹೇಳಲು ಕಟ್ಟಿರುವ ದೃಶ್ಯಾವಳಿಗಳು ಹೊಸತಾಗಿವೆ. ಚಿತ್ರವನ್ನು ನೋಡುವ ಯಾರಿಗಾದರೂ ಕಥೆ ಹೊಸದಾಗಿ ತುಂಬಾ ಚೆನ್ನಾಗಿದೆ ಎನ್ನಿಸುವಂತಿದೆ.

 

ಇಲ್ಲಿನ ವಿಶೇಷ ಎಂದರೆ ಇದೇ ಕಥೆಯ ಬೇರೆ ಚಿತ್ರಗಳಲ್ಲಿ, ಕಾಣೆಯಾದ ಹುಡುಗಿ ನಾಯಕನ ತಂಗಿಯೋ, ಮಗಳೋ ಇಲ್ಲ ಲವ್ವರೋ ಆಗಿರುತ್ತಾಳೆ. ಇಲ್ಲಿ ಆಪ್ತರಾದ ಪರಿಚಿತ ಹುಡುಗಿಯರನ್ನು ಹುಡುಕುತ್ತಾ ಹೋಗುತ್ತಾನೆ ನಾಯಕ. ನಂಬರ್ ಒನ್ ಪಟ್ಟದ ತಾರೆಯನ್ನು ಬಳಸಿಕೊಂಡು ಚಿತ್ರ ಮಾಡುವಾಗ ವಹಿಸಬೇಕಾದ ಎಲ್ಲ ಜಾಗರೂಕತೆಯನ್ನೂ ವಹಿಸಿ ಅವರ ಇಮೇಜಿಗೆ ಹೊಂದುವಂತೆ ಹಾಸ್ಯ, ಫೈಟಿಂಗ್, ಹಾಡುಗಳು ಎಷ್ಟೆಷ್ಟು ಬೇಕೋ ಅಷ್ಟಷ್ಟನ್ನೇ ಹದವಾಗಿ ಬೆರೆಸಿದ್ದಾರೆ. ಸ್ಮಶಾನದ ಸಮಾಧಿ ಗುಂಡಿಗಳನ್ನ ಸೆಂಟಿಮೆಂಟ್ ಸೀನ್‌ಗಳಿಗೆ ಬಳಸಿಕೊಂಡಷ್ಟೇ ಸಮರ್ಥವಾಗಿ ಹಾಸ್ಯಕ್ಕೂ ಬಳಸಿಕೊಳ್ಳುತ್ತಾರೆ. ಅದು ಸೂರಿ ಸಾಮರ್ಥ್ಯ. ಇನ್ನು ಸ್ಟಾರ್‌ಗಳ ಚಿತ್ರಕ್ಕೆ ತಕ್ಕಂತೆ ಖರ್ಚು ಮಾಡಿದಾಗ ಇರಬಹುದಾದ ಎಲ್ಲ ಶ್ರೀಮಂತಿಕೆಯೂ ಇಲ್ಲಿದೆ. ಚಿತ್ರಗಳಲ್ಲಿ ಶ್ರೀಮಂತಿಕೆ ವಿಜೃಂಭಿಸುವ ಭರದಲ್ಲಿ ಅದರ ಥಳಥಳಿಸುವ ಮಿಂಚಿನ ಪ್ರಭೆಯಲ್ಲಿ ನಿಜವಾದ ಸೂರಿಯ ಪ್ರತಿಭೆ ಮಂಕಾಗದಿದ್ದರೆ ಸಾಕು. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಇಂದು ಸೂರಿಯಂಥ ಶುದ್ಧ ಪ್ರತಿಭೆಯ ವೆಂಟಿಲೇಟರ್‌ಗಳ ಅವಶ್ಯಕತೆ ಇದೆ.ವಸ್ತುವಿನ ಕಾರಣಕ್ಕೆ ನನಗೆ ಹಿಡಿಸಿದ ಚಿತ್ರಗಳು ‘ತಮಸ್ಸು’ ಮತ್ತು ‘ಮತ್ತೆ ಮುಂಗಾರು’. ‘ತಮಸ್ಸು’ ಚಿತ್ರದ ಕಥೆ ಸ್ವಾತಂತ್ರ್ಯ ಪೂರ್ವದಿಂದಲೂ ಪರಿಚಿತವಾದದ್ದೇ. ದೇಶ ವಿಭಜನೆಯ ಕಾಲಕ್ಕೆ ಉತ್ತುಂಗಕ್ಕೆ ಏರಿದ್ದ ಈ ಸಮಸ್ಯೆ ಇಂದಿನವರೆಗೂ ಪ್ರಸ್ತುತವಿದೆ. ಮಹಾಯುದ್ಧದ ಬಗ್ಗೆಯಾಗಲೀ, ನಾಜೀ ದುಷ್ಕರ್ಮದ ಬಗ್ಗೆಯಾಗಲೀ ಈಗ ಚಿತ್ರ ಮಾಡಬೇಕೆಂದರೆ ಅಂದಿನ ಕಥೆಯನ್ನು ಮರುಸೃಷ್ಟಿಸಿ ಹೇಳಬೇಕು, ಇಲ್ಲವೇ ಅದರ ಪರಿಣಾಮಗಳ ಇಂದಿನ ಚಿತ್ರಣವನ್ನು ಕೊಡಬೇಕು. ಆದರೆ ಹಿಂದೂ ಮುಸ್ಲಿಮ್ ತಿಕ್ಕಾಟದ ಸಮಸ್ಯೆ ಅಂದಿಗಿಂತ ಇಂದು ಹೆಚ್ಚು ವಿಕೃತ ರೂಪದಲ್ಲಿ ಬೆಳೆಯುತ್ತಿದೆ. ಅದನ್ನು ಹೇಳಲು ಶ್ರೀಧರ್ ಬಳಸಿಕೊಂಡಿರುವ- ತಾನು ಕೊಂದ ಯುವಕನ ತಂದೆಯ ಮನೆಯಲ್ಲೇ ಆಶ್ರಯ ಪಡೆಯುವ ನಾಯಕನ- ಕಥೆಯ ಹಂದರ ಸೂಕ್ತವಾಗಿದೆ. ಆ ನಾಯಕನ ಪಾತ್ರಕ್ಕೆ ಶಿವರಾಜ್‌ಕುಮಾರ್ ಜೀವತುಂಬಿದ್ದಾರೆ.ನಾಜರ್ ಮತ್ತು ಮಗಳ ಪಾತ್ರ ಮಾಡಿರುವ ಹರ್ಷಿಕಾ ಪೂಣಚ್ಚ, ಶರತ್ ಲೋಹಿತಾಶ್ವ, ಆಸಿಫ್ ಎಲ್ಲರೂ ಅವರವರ ಪಾತ್ರಗಳನ್ನೇ ಆವಾಹಿಸಿಕೊಂಡಿದ್ದಾರೆ. ಆದರೆ ಅತ್ಯುತ್ತಮ ಚಿತ್ರವಾಗಬಹುದಾಗಿದ್ದ ಗಟ್ಟಿ ವಸ್ತು ಕೂಡ ಅದನ್ನು ನಿರೂಪಿಸಲು ಆಯ್ಕೆ ಮಾಡಿಕೊಂಡಿರುವ ವಿಧಾನದಿಂದ ಸೋತಿದೆ ಎನಿಸಿತು. ಸ್ಟಾರ್ ಶಿವರಾಜ್‌ಕುಮಾರ್ ಇದ್ದಾರೆನ್ನುವ ಕಾರಣಕ್ಕೆ ನಿರೂಪಣೆಯನ್ನು ಅವರ ಇಮೇಜ್‌ಗೆ ಒಗ್ಗಿಸಲು ಹೋಗಿ ಎಡವಿದ್ದು ಕಂಡಿತು. ಮಾನವೀಯತೆ ಮೆರೆಸುವ ಸದುದ್ದೇಶದ ಸಮಾಜಮುಖಿ ಚಿತ್ರವೊಂದು ನಿರೀಕ್ಷಿತ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಲಿಲ್ಲ. ದೃಶ್ಯಗಳಾಗಿ ಅರಳುವ ಸಾಧ್ಯತೆ ಇದ್ದ ಸನ್ನಿವೇಶಗಳು ಮಾತಿನಲ್ಲಿ ಮರೆಯಾಗುತ್ತವೆ. ಅದೊಂದನ್ನು ಹೊರತು ಪಡಿಸಿದರೆ, ಶ್ರೀಧರ್‌ರವರ ಮೊದಲ ಚಿತ್ರ ಎಂದು ಎಲ್ಲೂ ಹೇಳಲಾಗದಷ್ಟು ಉಳಿದ ವಿಭಾಗಗಳಲ್ಲಿ ಪರಿಪೂರ್ಣತೆ ಉಳಿಸಿಕೊಂಡಿದೆ.‘ಮತ್ತೆ ಮುಂಗಾರು’ ವಸ್ತುವಿನ ಆಯ್ಕೆ ದೃಷ್ಟಿಯಿಂದ ಕನ್ನಡಕ್ಕೆ ವಿಭಿನ್ನವಾದ ಕಥೆ. ಒಬ್ಬ ಒಳ್ಳೆಯ ನಿರ್ದೇಶಕನಿಗೆ ವಿಭಿನ್ನವಾದ ಕಥೆ ಯಾವಾಗಲೂ ಚಾಲೆಂಜಿಂಗ್ ಆಗಿರುತ್ತೆ ಅಡ್ವಂಟೇಜೂ ಆಗಿರುತ್ತೆ. ಇಡೀ ಚಿತ್ರಕ್ಕೆ ಬೇಕಾಗುವ ನಿರೂಪಣಾ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಲು ಅನೇಕ ಅವಕಾಶಗಳಿರುತ್ತವೆ, ಜೊತೆಗೆ ಆ ವಸ್ತು ಆತನಕ ಬಂದಿಲ್ಲದೇ ಇರುವುದರಿಂದ ದೃಶ್ಯಗಳನ್ನೆಲ್ಲಾ ವಿಭಿನ್ನ ರೀತಿಯಲ್ಲಿ ಸೃಷ್ಟಿಸುವ ಅವಕಾಶಗಳಿರುತ್ತವೆ. ಪಾತ್ರಗಳ ಪರಿಕಲ್ಪನೆಯಲ್ಲೂ ವಿಶಿಷ್ಟತೆಯನ್ನು ತೋರಬಹುದು. ಭಾರತದ ಮೀನುಗಾರರು ಸಮುದ್ರದಲ್ಲಿ ಸೆರೆ ಸಿಕ್ಕಿ ಹದಿನೈದು ವರ್ಷಗಳ ಮೇಲ್ಪಟ್ಟು ಅಲ್ಲಿನ ಕತ್ತಲು ಕೋಣೆಯ ಸೆರೆಯಲ್ಲಿ ಕೊಳೆತು ಮತ್ತೆ ತಿರುಗಿ ಬರುವ ವಸ್ತುವಿರುವ ಕಥೆಯನ್ನು ನಿರೂಪಿಸಲು, ವಿಷಯದ ಬಗ್ಗೆ ಆಳ ತಿಳಿವಳಿಕೆ ಇರಬೇಕಾಗುತ್ತದೆ.ಒಬ್ಬ ನಿಜವಾದ ಕೈದಿಯ ಘಟನೆಯನ್ನು ಆಧರಿಸಿ ಚಿತ್ರ ಮಾಡಲು ಹೋಗುವಾಗ ಇನ್ನೂ ಎಚ್ಚರಿಕೆ ಅಗತ್ಯ. ಅದಕ್ಕೆ ಮಾಧ್ಯಮದ ಮೇಲಿನ ಪ್ರಭುತ್ವ, ಪರಿಣತಿ ಜೊತೆಗೆ ಪ್ರಬುದ್ಧತೆಯೂ ಬೇಕಾಗುತ್ತದೆ. ಅದೆಲ್ಲದರ ಕೊರತೆಯೂ ಆ ಚಿತ್ರ ನೋಡುವಾಗ ನನಗೆ ಗೋಚರಿಸಿತು. ಅಂಥ ಕಡೆ ಕೈದಿಗಳನ್ನ ಯಾವ ರೀತಿ ಟ್ರೀಟ್ ಮಾಡ್ತಾರೆ, ಹದಿನೈದು ವರ್ಷಗಳ ನಂತರ ಸೆರೆಯಲ್ಲಿದ್ದವರ ಮಾನಸಿಕ ಸ್ಥಿತಿ, ದೈಹಿಕ ಸ್ಥಿತಿ, ನಡವಳಿಕೆ- ಇದಾವುದನ್ನೂ ಅರ್ಥ ಮಾಡಿಕೊಳ್ಳುವ ಗೊಡವೆಗೆ ಹೋಗದೆ ಅದನ್ನೊಂದು ಸಾಧಾರಣ ಪೊಲೀಸ್ ಸ್ಟೇಷನ್ ಕಸ್ಟಡಿ ಎನ್ನುವ ರೀತಿಯಲ್ಲಿ ನಿರೂಪಿಸಿರುವುದು ನಗೆಪಾಟಲಿನಂತಾಗಿದೆ. ಮೀನುಗಾರಿಕಾ ದೋಣಿ ಬಿರುಗಾಳಿಗೆ ಸಿಕ್ಕುವ ದೃಶ್ಯವಂತೂ ಬಾಲಿಶವಾಗಿದೆ. ಮೀನು ಹಿಡಿಯಲು ಹೋಗುವ ದೋಣಿಗಳು ಬಿರುಗಾಳಿ ಇಲ್ಲದೆಯೂ ನೆರೆಯ ದೇಶದ ಸರಹದ್ದಿನೊಳಗೆ ಅರಿವಿಲ್ಲದೇ ಚಲಿಸಬಹುದು. ಬಿರುಗಾಳಿಯನ್ನು ತೋರಿಸಲೇಬೇಕೆಂದಿದ್ದರೆ ಈಗಿನ ತಂತ್ರಜ್ಞಾನದ ನೆರವಿನಿಂದ ಸಮರ್ಪಕವಾಗಿ ಸೃಷ್ಟಿಸಬಹುದು. ತಮಗೇನು ಬೇಕು ಎನ್ನುವುದರ ಬಗ್ಗೆ ನಿರ್ದೇಶಕರಿಗೆ ಸ್ಪಷ್ಟತೆ ಇರಬೇಕು. ಆವಾಗಲೇ ಟೈಟಾನಿಕ್, ಅವತಾರ್, ಎಂದಿರನ್ ಥರದ ಚಿತ್ರಗಳು ಮೂಡಲು ಸಾಧ್ಯ.ಮೇಲಿನೆರಡು ಚಿತ್ರಗಳೂ ವಿಭಿನ್ನ ಕಥೆಯನ್ನು ಹೊಂದಿದ್ದರೂ ಬೇರೆ ಬೇರೆ ಕಾರಣಕ್ಕೆ ಜನರಿಗೆ ಹತ್ತಿರವಾಗಲಿಲ್ಲ. ಕಥೆಯೇ ಇಲ್ಲದಿದ್ದರೂ, ಅಥವಾ ಹಳೆ ವಸ್ತುವೇ ಇದ್ದರೂ ಉತ್ತಮ ನಿರೂಪಣೆಯಿಯಿಂದಾಗಿ ಪಂಚರಂಗಿ ಹಾಗೂ ಜಾಕಿ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು ಎನ್ನುವುದು ಅಧ್ಯಯನಕ್ಕೆ ಒಳ್ಳೆಯ ವಸ್ತು.ಎಲ್ಲ ಕಲಾತ್ಮಕ ಚಿತ್ರಗಳಿಗೆ ವಿಭಿನ್ನ ವಸ್ತುವೇ ಮೂಲಾಧಾರ. ಕಲಾತ್ಮಕ ಚಿತ್ರಗಳ ಬಹುತೇಕ ತಯಾರಕರು ಸರ್ಕಾರದ ಸಬ್ಸಿಡಿ- ಪ್ರಶಸ್ತಿ ಹಣದ ಭರವಸೆಯ ಮೇಲೇ ಚಿತ್ರಗಳನ್ನು ತಯಾರಿಸುವುದರಿಂದ ಅವರ ವಸ್ತುಗಳು ಬಹಳಷ್ಟು ಸಲ ಸರ್ಕಾರದ ಯೋಜನೆಗಳ ವಸ್ತುಗಳನ್ನೇ ಪ್ರಧಾನವಾಗಿ ಹೊಂದಿರುತ್ತವೆ. ಇಲ್ಲದಿದ್ದರೂ ಅವರ ಚಿತ್ರಗಳಲ್ಲಿ ಅಲ್ಲಲ್ಲಿ ಬಲವಂತದಿಂದ ಯೋಜನೆಗಳ ಬಗ್ಗೆ ಭಾಷಣಗಳನ್ನು ತುರುಕುತ್ತಾರೆ. ಇಂಥ ಚಿತ್ರಗಳು ದೃಶ್ಯ ಮಾಧ್ಯಮದ ಗಂಧವೂ ಗೊತ್ತಿರದವರ ಸೃಷ್ಟಿ. ವಿಭಿನ್ನ ಕಥೆಯ ಬೆನ್ನು ಬಿದ್ದು ತಮ್ಮ ಮಿತಿಯಲ್ಲೇ ಅತ್ಯುತ್ತಮವಾದದ್ದನ್ನ ಕೊಡುವ ಪ್ರಯತ್ನಗಳೂ ಇಲ್ಲದಿಲ್ಲ. 2010ರ ಕಲಾತ್ಮಕ ಚಿತ್ರಗಳನ್ನು ಗಮನಿಸಿದಾಗ ಮನಸ್ಸಿನಲ್ಲಿ ನಿಲ್ಲುವುದು ಎರಡೇ ಚಿತ್ರಗಳು. ಒಂದು ಗಿರೀಶರ ‘ಕನಸೆಂಬೋ ಕುದುರೆಯನೇರಿ’ ಇನ್ನೊಂದು ಪಿ.ಶೇಷಾದ್ರಿಯವರ ‘ವಿಮುಕ್ತಿ’.ಮೊದಲಿನಿಂದಲೂ ತಮ್ಮ ನಂಬಿಕೆಗೆ ಅನುಗುಣವಾದ ಚಿತ್ರಗಳನ್ನಷ್ಟೇ ಮಾಡುತ್ತಾ ಬಂದಿರುವ ಗಿರೀಶರ ‘ಕನಸೆಂಬೋ ಕುದುರೆಯನೇರಿ’ ಕಥೆ ಅವರ ಈವರೆಗಿನ ಚಿತ್ರಗಳಲ್ಲೇ ಭಿನ್ನವಾಗಿದ್ದು, ಅದರ ನಿರೂಪಣೆ ಕೂಡ ಬಹು ಆಯಾಮಗಳನ್ನು ಹೊಂದಿದೆ. ಹೆಣದ ಗುಂಡಿ ತೆಗೆಯುವವನ ಕನಸುಗಳು, ಅವುಗಳ ಮೂಲಕ ವರ್ತಮಾನದ ವಾಸ್ತವವನ್ನು ಬಿಚ್ಚಿಡುತ್ತಾ ಹೋಗುವುದು, ಉಪಕತೆಯ ಮೂಲಕ ಮುಖ್ಯಕತೆಯನ್ನು ಹೇಳಿರುವುದು ಈ ಚಿತ್ರದಲ್ಲಿ ನಾನು ಕಂಡ ವಿಶೇಷ. ತಾವು ಹೇಳಬೇಕಿರುವ ವಿಷಯದ ಸ್ಪಷ್ಟತೆ, ಅದನ್ನು ಅಷ್ಟೇ ನಿಖರವಾಗಿ ಚಿತ್ರಗಳಲ್ಲಿ ಒಡಮೂಡಿಸುವುದು ನಮ್ಮಲ್ಲಿ ಕಾಸರವಳ್ಳಿಯವರೊಬ್ಬರೇ.ಶೇಷಾದ್ರಿಯವರ ‘ವಿಮುಕ್ತಿ’ ಮತ್ತೊಂದು ವಿಭಿನ್ನ ಪ್ರಯತ್ನ. ತಾಯಿ ಇಲ್ಲದೇ ಬೆಳೆದ ಮಗಳು ತಂದೆಯ ಮೇಲೆ ಇಟ್ಟುಕೊಂಡಿರುವ ಪೊಸೆಸಿವ್ ಮನೋಭಾವ, ಅದರಿಂದ ತಂದೆಯ ಕಣ್ಮರೆ, ಅವರನ್ನು ಹುಡುಕುತ್ತಾ ಹೋಗುವ ಮಗಳ ಮೂಲಕ ನದೀತೀರದಲ್ಲಿ ದೋಣಿಗಾಗಿ ಕಾಯುವವರಂತೆ ಸಾವನ್ನು ಕಾಯುವವರ ಚಿತ್ರವನ್ನು ನಿರ್ದೇಶಕರು ದರ್ಶನ ಮಾಡಿಸುತ್ತಾರೆ. ಎರಡು ಉತ್ತಮ ಕತೆಗಳನ್ನು ಒಂದೇ ಚಿತ್ರದಲ್ಲಿ ಹೊಸೆದಿರುವುದು ಇದರ ವಿಶೇಷ.    ಚಿತ್ರೋದ್ಯಮದ ಎಲ್ಲರೂ ಈ ಚಿತ್ರಗಳನ್ನು ನೋಡಬೇಕೆನ್ನುವುದು ನನ್ನ ಅಪೇಕ್ಷೆ. ಯಾಕೆಂದರೆ ಇಂಥ ಕಲಾತ್ಮಕ ಚಿತ್ರಗಳ ವಸ್ತುಗಳು ಅದ್ಭುತವಾದ ವ್ಯಾಪಾರಿ ಚಿತ್ರಗಳಿಗೆ ಮೂಲವಾಗುತ್ತವೆ. ಉದಾಹರಣೆಗೆ ತೇನ್‌ಮಾಹಿನ್‌ಕೊಂಬತ್ತು ‘ಮುತ್ತು’ ಆಗಬಹುದಾದರೆ, ಮಣಿಚಿತ್ರತ್ತಾಳ್- ‘ಆಪ್ತಮಿತ್ರ’, ‘ಚಂದ್ರಮುಖಿ’ ಆಗಬಹುದಾದರೆ, ಕನಸೆಂಬೋ ಕುದುರೆ, ವಿಮುಕ್ತಿ ಚಿತ್ರಗಳು ಕೂಡ ದೊಡ್ಡಮಟ್ಟದ ಕಮರ್ಷಿಯಲ್ ಚಿತ್ರಗಳಿಗೆ ಪ್ರೇರಣೆಯಾಗಬಹುದು. ನಾವು ತೂಕಡಿಸುತ್ತಿದ್ದರೆ ವಿಭಿನ್ನ ಕಥೆಗಳಿಗಾಗಿ ಹಪಹಪಿಸುತ್ತಿರುವ ಪಕ್ಕದ ತಮಿಳು ತೆಲುಗರು ಕಾವೇರಿ-ಕೃಷ್ಣೆಯರನ್ನು ಲಪಟಾಯಿಸಿದಂತೆ ಇವನ್ನೂ ಹೊತ್ತೊಯ್ಯುತ್ತಾರೆ. ಆಮೇಲೆ ಮತ್ತೆ ಎಂಜಲನ್ನು ಹಣಕೊಟ್ಟು ತರಲು ನಾವು ಪೈಪೋಟಿ ನಡೆಸಿ ಫ್ಲೈಟ್ ಹತ್ತುತ್ತೇವೆ. ಬೆಳದಿಂಗಳ ಬಾಲೆಯನ್ನು ಕದ್ದೊಯ್ದು ಬೇರೆ ಉಡುಪು ತೊಡಿಸಿ ನಮಗೇ ಮಾರಿದ್ದನ್ನು ನಾವು ಮರೆಯಬಾರದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.