ಶನಿವಾರ, ಜೂನ್ 12, 2021
23 °C

ಬರೀ ಹೊರೆಯಲ್ಲ ಭಾವ ಬೇಗುದಿ...!

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಅವಳು ಒಬ್ಬಳೇ. ಆದರೆ ಎರಡಾಗಿ ದುಡಿಯುತ್ತಾಳೆ. ಒಟ್ಟಿಗೇ ಹಲವು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಕಾರ್ಪೋರೇಟ್‌ ಕೆಲಸ ಕಾರ್ಯಗಳಿಂದ ಹಿಡಿದು, ಸಾಮಾಜಿಕ ಚಟುವಟಿಕೆ, ಕೌಟುಂಬಿಕ ಹೊಣೆಗಾರಿಕೆಗಳನ್ನೆಲ್ಲ ಒಟ್ಟಿಗೇ ನಿಭಾಯಿಸುತ್ತಾಳೆ. ಯಾವ ಪಾತ್ರದಲ್ಲೂ ಕುಂದಿರಬಾರದು. ತನ್ನೆಲ್ಲ ಹೊಣೆಗಾರಿಕೆಗಳಿಗೂ ನಿಷ್ಠಳಾಗಿರಬೇಕು ಎಂದು ತನ್ನನ್ನೇ ತಾನು ಮರೆಯುತ್ತ ಮುಂದಡಿ ಇಡುತ್ತಿರುವ ಅವಳು, ತನ್ನರಿವಿಗೇ ಬಾರದಂತೆ ಕುಸಿದು ಹೋಗುತ್ತಿದ್ದಾಳೆ ಎನ್ನುತ್ತದೆ ಸಮೀಕ್ಷೆಯೊಂದು.ಹೌದು, ಭಾರತದ ಪ್ರತಿ ನಾಲ್ಕು ಜನ ದುಡಿಯುವ ಮಹಿಳೆಯರಲ್ಲಿ ಮೂರು ಜನ ದೀರ್ಘಕಾಲದ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಈಡಾಗುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ.ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ತೀವ್ರ ಒತ್ತಡ ಎದುರಿಸುತ್ತಿರುವ ನಗರವಾಸಿ ಮಹಿಳೆಯರು, ಮಾನಸಿಕ ಖಿನ್ನತೆ, ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನು ನೋವು, ಕತ್ತು ನೋವು, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಸೋಚಾಮ್‌ (ಅಸೋ­­ಸಿ­ಯೇಟೆಡ್‌ ಚೇಂಬರ್ ಆಫ್‌ ಕಾಮರ್ಸ್ ಅಂಡ್‌ ಇಂಡಸ್ಟ್ರಿ) ಸಮೀಕ್ಷೆ ವರದಿ ಮಾಡಿದೆ.ವಿಶ್ವ ಮಹಿಳಾ ದಿನದ ಅಂಗವಾಗಿ ಇತ್ತೀಚೆಗೆ 32ರಿಂದ 58 ವರ್ಷದೊಳಗಿನ  2,800 ಮಹಿಳೆಯರನ್ನು ಆಧಾರವಾಗಿಟ್ಟುಕೊಂಡು ನಡೆಸಲಾದ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ.ಬೆಂಗಳೂರು, ಚೆನ್ನೈ, ದೆಹಲಿ, ಜೈಪುರ, ಹೈದರಾಬಾದ, ಮುಂಬೈ, ಪುಣೆ, ಲಕನೌ ಸೇರಿದಂತೆ ಸುಮಾರು 10 ನಗರಗಳ, 11 ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು ಅಧ್ಯಯನದಲ್ಲಿ ಭಾಗವಹಿಸಿದ್ದರು. ಅವರಲ್ಲಿ ಶೇ 42ರಷ್ಟು ಜನ ಎರಡೂ ಪಾತ್ರಗಳನ್ನು ಕುಂದಿಲ್ಲದಂತೆ ನಿರ್ವಹಿಸಲು ಹೋಗಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಜತೆಗೆ ದೈಹಿಕವಾಗಿಯೂ ದುರ್ಬಲರಾಗುತ್ತಿರುವುದು ತಿಳಿದು ಬಂದಿದೆ.ಅವಳ ಕುಶಲೋಪರಿ...

ಪ್ರೀತಿ–ಮಮತೆಯ ಧಾರೆ ಎರೆದು ಮನೆಮಂದಿಯ ಯೋಗಕ್ಷೇಮ ನೋಡಿಕೊಳ್ಳುವ ಅವಳ ಕುಶಲೋಪರಿಯನ್ನೂ ಕೇಳುವವರು ಬೇಕಲ್ಲ? ಒಂದೆಡೆ ಬಿಡುವಿಲ್ಲದ ಕೆಲಸಗಳು, ಇನ್ನೊಂದೆಡೆ ತಾನು ಮತ್ತು ತನ್ನ ಶ್ರಮಕ್ಕೆ ಗೌರವ, ಮನ್ನಣೆ ಇದೆಯೇ ಎಂಬ ಬೇಗುದಿ.ಹಿಂದೆ ಸಾಂಪ್ರದಾಯಿಕ ಕೂಡು ಕುಟುಂಬಗಳಲ್ಲಿ ಹೊರಗಿನ ಕೆಲಸ ಪುರುಷರಿಗೆ, ಮನೆಗೆಲಸ ಮಹಿಳೆಯರಿಗೆ ಎಂದು ಹಂಚಿಕೆಯಾಗಿತ್ತು. ಮನೆಗೆಲಸವನ್ನೂ ಮಹಿಳಾ ಸದಸ್ಯರೆಲ್ಲ ಹಂಚಿಕೊಂಡು ಮಾಡುತ್ತಿದ್ದರು. ಆಗಲೂ ಮನೆಗೆಲಸದ ಹೊರೆ ಹೆಚ್ಚಾದಾಗ ಅದು ಮಾತು–ಜಗಳದ ಮೂಲಕ ಸ್ಫೋಟಗೊಂಡು ಮನಸ್ಸು ಹಗುರಾಗುತ್ತಿತ್ತು.ಕಾಲ ಬದಲಾದಂತೆ ಮಹಿಳೆ ಮನೆ ಹೊರಗೂ ದುಡಿಯುವುದು ಅನಿವಾರ್ಯವಾಯಿತು. ಸೊಸೆಯಾಗಿ, ಪತ್ನಿಯಾಗಿ, ತಾಯಿಯಾಗಿ ತನ್ನ ಸಾಂಪ್ರದಾಯಿಕ ಜವಾಬ್ದಾರಿಗಳೊಂದಿಗೆ ಇನ್ನಷ್ಟು ಹೊಸ ಹೊಣೆಗಾರಿಕೆಗಳೂ ಈಗ ಅವಳ ಹೆಗಲೇರಿವೆ.‘ಮನೆಗೆಲಸ ಮಗನದಲ್ಲ’ ಎನ್ನುವ ಧೋರಣೆ ಅನೇಕ ಭಾರತೀಯ ಕುಟುಂಬಗಳಲ್ಲಿ ಈಗಲೂ ಕೆಲಸ ಮಾಡುತ್ತದೆ. ಮನೆಗೆಲಸವನ್ನೆಲ್ಲ ತಾಯಿಯೊಬ್ಬಳೇ ನಿರ್ವಹಿಸುವುದನ್ನು ನೋಡುತ್ತ ಬೆಳೆದ ಮಕ್ಕಳು, ಮುಂದೆ ಪತ್ನಿಯ ಕೆಲಸದಲ್ಲಿ ಕೈಜೋಡಿಸುವ ಮುಲಾಜಿಗೆ ಬೀಳುವುದೇ ಇಲ್ಲ. ಕೆಲವರು ಹೆಂಡತಿ ಎರಡೂ ಕಡೆ ದುಡಿಯುವುದನ್ನು ನೋಡಿ ಹಲುಬುತ್ತಾರಾದರೂ ಸಹಾಯ ಮಾಡಬೇಕು ಎನ್ನುವ ನಿಲುವಿಗೆ ಬರುವುದಿಲ್ಲ. ಇನ್ನೂ ಕೆಲವರು ಹೆಂಡತಿಗೆ ಸಹಾಯ ಮಾಡಲು ಮನಸ್ಸು ಮಾಡುತ್ತಾರಾದರೆ ಅವರಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮತ್ತೆ ಕೆಲವರು ಎರಡೂ ಕಡೆ ದುಡಿಯುವುದು ಅವಳ ಕರ್ತವ್ಯ ಎನ್ನುವ ಭಾವನೆ ಹೊಂದಿರುತ್ತಾರೆ.ಆದರೆ ಪತಿಯ ಪ್ರೀತಿಯ ಮಾತು, ಸಾಂತ್ವನ, ಬೆಂಬಲ ಅವಳಲ್ಲಿ ಚೈತನ್ಯ ಮೂಡಿಸುವ ಜೊತೆಗೆ ಮಾನಸಿಕ ಹಾಗೂ ಭಾವನಾತ್ಮಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಅವಳ ಒಟ್ಟು ಆರೋಗ್ಯದ ಮೇಲೂ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಮನೋವೈದ್ಯರು.ಗಂಡ ಎಷ್ಟು ಕೆಲಸ ಮಾಡುತ್ತಾನೆ ಎನ್ನುವುದಕ್ಕಿಂತ, ಆತ ತನ್ನನ್ನು ಅರ್ಥ ಮಾಡಿಕೊಂಡು, ತನ್ನ ಕೆಲಸದಲ್ಲಿ ಪಾಲು ಪಡೆಯಲು ಯತ್ನಿಸುತ್ತಿದ್ದಾನೆ ಎಂಬ ಸಂತೃಪ್ತಿಯೇ ಅವಳನ್ನು ಮಾನಸಿಕವಾಗಿ ಸದೃಢಗೊಳಿಸುತ್ತದೆ. ಇನ್ನು ಅವಳ ಕೆಲಸವನ್ನೂ ಅವನು ಹಂಚಿಕೊಂಡಾಗ ಊಟ–ಉಪಚಾರ, ವಿಶ್ರಾಂತಿಗೆ ಸಮಯ ದೊರಕಿ ಆ ಮೂಲಕ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲೂ ಅವಳಿಗೆ ಸಾಧ್ಯವಾಗುತ್ತದೆ. ಪತಿಯ ಬೆಂಬಲವಿಲ್ಲದ ಮಹಿಳೆಯರು ಚಿಕ್ಕ–ಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಬೇಗ ನೆಲಕ್ಕೆ ಬೀಳುತ್ತಾರೆ. ಆದರೆ ಪತಿಯ ಪ್ರೀತಿ–ಸಹಾಯ ಇದ್ದಾಗ ಅವರು ಬೇಗ ಚೇತರಿಸಿಕೊಳ್ಳುತ್ತಾರೆ.ಮನೆಗೆಲಸ: ಗೇಲಿ ಬೇಡ

ಮನೆಗೆಲಸವನ್ನು ತುಚ್ಛವಾಗಿ ಕಾಣುವ ಮನೋಭಾವ ಸರಿಯಲ್ಲ. ಮನೆಯಲ್ಲಿ ಕೆಲಸ ಮಾಡಿ ಬರುವ ಪುರುಷರನ್ನು ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳು ಗೇಲಿ ಮಾಡುವುದುಂಟು. ಈ ಕಾರಣಕ್ಕೇ ಅನೇಕರು ಮನೆಗೆಲಸವನ್ನು ಅವಮಾನ ಎನ್ನುವಂತೆ ಕಾಣುವುದಿದೆ.ಆದರೆ ದುಡಿಯುವ ಪತ್ನಿಗೆ ಅಥವಾ ತಾಯಿಗೆ ಮನೆಯಲ್ಲಿ ಸಹಾಯ ಮಾಡುವುದು ಅವಮಾನವೂ ಅಲ್ಲ, ನಾಚಿಕೆಯ ಸಂಗತಿಯಂತೂ ಮೊದಲೇ ಅಲ್ಲ. ಅವಳೆಷ್ಟು ಪ್ರೀತಿಯಿಂದ ಮನೆಯ ಆರ್ಥಿಕ ಜವಾಬ್ದಾರಿಗಳಲ್ಲಿ ಸಮಪಾಲು ಪಡೆಯುತ್ತಾಳೊ, ಹಾಗೆಯೇ ಪತಿ ಸಹ ಅಷ್ಟೇ ವಿನೋದದಿಂದ ಮನೆಗೆಲಸದಲ್ಲಿ ತೊಡಗಬೇಕು. ಪತಿ–ಪತ್ನಿಯ ನಡುವೆ ಸಾಮರಸ್ಯ ಹೆಚ್ಚಲು, ಸಂಬಂಧದಲ್ಲಿ ವಿನೋದ ಮೂಡಲೂ ಇದು ಸಹಾಯವಾಗುತ್ತದೆ.ಹೂಡಿಕೆಯಾಗಲಿ ಪ್ರೀತಿ...

ಈಚಿನ ದಿನಗಳಲ್ಲಿ ಸಂಬಂಧಗಳು ಶಿಥಿಲಗೊಳ್ಳುತ್ತಿವೆ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಇದೇ ವೇಳೆ ಸಂಬಂಧಗಳು ಈಗಿಲ್ಲಿ ‘ಹೂಡಿಕೆ’ಯ ಸ್ವರೂಪ ಪಡೆದಿರುವುದನ್ನೂ ಅಲ್ಲಗಳೆಯುವಂತಿಲ್ಲ. ಮೊದಲು ನೀವು ಎಷ್ಟು ಪ್ರೀತಿ, ವಿಶ್ವಾಸ, ಗೌರವವನ್ನು ತುಂಬುತ್ತ ಹೋಗುತ್ತಿರೊ ಅದಕ್ಕೆ ಬಡ್ಡಿ, ಬೋನಸ್ ಸೇರಿ ಅದು ನಿಮ್ಮ ಖಾತೆಗೆ ಬಂದು ಬೀಳುತ್ತದೆ.ಇಂತಹ ಉತ್ತಮ ಬಾಂಧವ್ಯ ಬದುಕಿನ ಎಲ್ಲಾ ಆಯಾಮಗಳನ್ನೂ ಚೇತೊಹಾರಿಗೊಳಿಸುತ್ತದೆ. ಮನಸ್ಸು–ದೇಹ ಚೈತನ್ಯ ತುಂಬಿಕೊಂಡು ಬದುಕು –ಭಾವ ಭಾರವಾಗುವುದಿಲ್ಲ, ಬದಲಾಗಿ ಹೆಚ್ಚು ಸುಂದರವಾಗುತ್ತ ಹೋಗುತ್ತದೆ. ಒಬ್ಬರ ಬಗ್ಗೆ ಒಬ್ಬರಿಗೆ ಪ್ರೀತಿ–ವಿಶ್ವಾಸ ಇದ್ದಾಗ ಸಣ್ಣ–ಪುಟ್ಟ ತಪ್ಪುಗಳೂ ಒಪ್ಪಿಗೆಯಾಗುತ್ತವೆ.ಪ್ರೀತಿ ಸಮವಿದ್ದರೆ ಕೆಲಸವೂ ಹಂಚಿಕೆಯಾದೀತು...

ಪುರುಷರು ಮನೆಗೆಲಸ ಮಾಡುವುದಿಲ್ಲ ಎಂಬ ಬಗ್ಗೆ ತೀರಾ ನಿರಾಶಾ ಭಾವನೆ ತಾಳುವ ಅಗತ್ಯವಿಲ್ಲ. ಈಗೀಗ ಗಂಡಸರೂ ದುಡಿಯುವ ಹೆಂಡತಿಯ ಮನೆಗೆಲಸಗಳಿಗೆ ಕೈಜೋಡಿಸುವುದಿದೆ. ಆದರೆ ಅನೇಕ ಕುಟುಂಬಗಳಲ್ಲಿ ಕೆಲವು ಪುರುಷರು ಮಾತ್ರ ಇನ್ನೂ ಸಾಂಪ್ರದಾಯಿಕ ಮನೋಭಾವದಿಂದ ಆಚೆ ಬಂದಿಲ್ಲ. ಅಂಥವರಿಗೆ ಪ್ರೀತಿ ಹಾಗೂ ತಾಳ್ಮೆಯಿಂದ ಹೇಳಬೇಕು. ಪತಿ–ಪತ್ನಿಯ ಸಂಬಂಧದಲ್ಲಿ ಪ್ರೀತಿ ಯಾವ ಬದಲಾವಣೆಯನ್ನೂ  ತರಬಲ್ಲದು.

ಇಬ್ಬರ ನಡುವಿನ ಪ್ರೀತಿ, ಸ್ವಿಕಾರ, ಹೊಂದಾಣಿಕೆ ಮತ್ತು ಮೆಚ್ಚುಗೆ ಎಂಬ ನಾಲ್ಕು ಸ್ತಂಭಗಳು ಸುಖ ಸಂಸಾರದ ಸೂತ್ರಗಳು.ಎಲ್ಲಿ ಒಬ್ಬರ ಬಗ್ಗೆ ಒಬ್ಬರಿಗೆ ಪ್ರೀತಿ, ಸ್ವೀಕೃತಿ, ಹೊಂದಾಣಿಕೆ ಹಾಗೂ ಪರಸ್ಪರರ ಕೆಲಸ, ಜವಾಬ್ದಾರಿಗಳ ಬಗ್ಗೆ ಗೌರವ, ಆದರ ಇರುತ್ತದೆಯೊ ಅಲ್ಲಿ ನಾ ಮೇಲು, ನೀ ಮೇಲು ಎಂಬ ಕದನ ಬರುವುದಿಲ್ಲ. ನಮ್ಮ ದೇಹದಲ್ಲಿ ಎರಡೂ ಕೈಗಳು, ಕಾಲುಗಳು, ಕಣ್ಣುಗಳು ಹೇಗೆ ಸಮಾನವಾಗಿ ಕೆಲಸ ಮಾಡುತ್ತವೆಯೊ ಹಾಗೆ ಒಂದು ಸಂಸಾರದಲ್ಲಿ ಎಲ್ಲಾ ಜವಾಬ್ದಾರಿಗಳನ್ನು ಪತಿ–ಪತ್ನಿ ಇಬ್ಬರೂ ಸಮಾನವಾಗಿ ಹಂಚಿಕೊಂಡು ನಿರ್ವಹಿಸಬೇಕು...

ಶಾಂತಾ ನಾಗರಾಜ್

ಆಪ್ತ ಸಲಹೆಗಾರರು (ಮಾಹಿತಿಗೆ 9886241684)ಸಮಾನತೆಯ ಪರಿಕಲ್ಪನೆ ಬದಲಾಗಬೇಕು

ಮನೆಯೊಡತಿಯ ಸ್ವಾಸ್ಥ್ಯ, ಮನೆಮಂದಿಯ ನೆಮ್ಮದಿಯ ಮೂಲವೂ ಹೌದು. ಅದು ಒಂದು ಕುಟುಂಬ ಹಾಗೂ ಆ ಮೂಲಕ ಒಂದು ಸಮಾಜದ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಮಹಿಳೆ ಹಾಗೂ ಅವಳ ಸಮಸ್ಯೆಗಳು ಕೇವಲ ಅವಳೊಬ್ಬಳದೇ ಅಲ್ಲ, ಅದು ಇಡೀ ವ್ಯವಸ್ಥೆಯನ್ನು ತಲ್ಲಣಗೊಳಿಸುವುದೂ ಇದೆ. ಆದ್ದರಿಂದ ಮನೆ ಹಾಗೂ ಕಚೇರಿಯಲ್ಲಿ ಮಹಿಳೆಯರಿಗೆ ಪೂರಕವಾದ ವಾತಾವರಣ ಹಾಗೂ ಮನೋಸ್ಥಿತಿ ನಿರ್ಮಾಣವಾಗಬೇಕು.ಹೀಗಾಗಲು ಮೊದಲು ಸಮಾನತೆಯ ಪರಿಕಲ್ಪನೆ ಬದಲಾಗಬೇಕು. ಮಹಿಳೆಯರ ಪರವಾಗಿ, ಅವರ ಅನುಕೂಲಕ್ಕಾಗಿ ನೀಡುವ ರಿಯಾಯಿತಿ ಅಸಮಾನತೆಯಾಗುವುದಿಲ್ಲ. ಇಂತಹ ಔದಾರ್ಯಕ್ಕೆ ಸಂವಿಧಾನದ ಶ್ರೀರಕ್ಷೆಯೂ ಇದೆ ಎನ್ನುವುದನ್ನು ನೆನಪಿಡಬೇಕು.

ಡಾ. ಗೀತಾ ಕೃಷ್ಣಮೂರ್ತಿ, ಕಾನೂನು ತಜ್ಞರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.