ಬರೆದದ್ದು ನಾಲ್ಕೇ ದಿನ ತಿದ್ದಿದ್ದು ಒಂದು ವರ್ಷ

7

ಬರೆದದ್ದು ನಾಲ್ಕೇ ದಿನ ತಿದ್ದಿದ್ದು ಒಂದು ವರ್ಷ

Published:
Updated:

ರಡು ದಶಕಗಳಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗೌರಿ ಜಯರಾಮ್‌ ಅವರು ಆ ಕ್ಷೇತ್ರದಲ್ಲಿ  ದಕ್ಕಿದ ಅನುಭವವನ್ನೇ ಬಂಡವಾಳವಾಗಿಸಿಕೊಂಡು ‘ವೈಸ್‌ ಎನಫ್‌ ಟು ಬಿ ಫೂಲಿಶ್‌’ ಎಂಬ ಇಂಗ್ಲಿಷ್‌ ಕಾದಂಬರಿ ರಚಿಸಿದ್ದಾರೆ.ಪ್ರವಾಸೋದ್ಯಮ ಕ್ಷೇತ್ರದಲ್ಲಿನ  ಅನುಭವವೇ ಅವರನ್ನು ಅಕ್ಷರಲೋಕಕ್ಕೆ ಆಕರ್ಷಿಸಿತಂತೆ. ಗೌರಿ ಅವರು ಐಐಎಂ ವಿದ್ಯಾರ್ಥಿನಿಯಾಗಿ, ‘ಆಕ್ಟಿವ್‌ ಹಾಲಿಡೇ ಕಂಪೆನಿ’ಯ ಪ್ರಾಂತೀಯ ನಿರ್ದೇಶಕಿಯಾಗಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಮೊದಲ ಕಾದಂಬರಿ ಕುರಿತು ‘ಮೆಟ್ರೊ’ದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

‘ವೈಸ್‌ ಎನಫ್‌ ಟು ಬಿ ಫೂಲಿಶ್‌’ ಇದು ನಿಮ್ಮ ಮೊದಲ ಕಾದಂಬರಿಯಾ? ಕಥೆಯ ಎಳೆ ಏನು?

ಹೌದು. ಇದು ನನ್ನ ಮೊದಲ ಕಾದಂಬರಿ. ‘ವೈಸ್‌ ಎನಫ್‌ ಟು ಬಿ ಫೂಲಿಶ್‌’ ಕಥೆ ನನ್ನದೇ ಜೀವನಕ್ಕೆ ಸಂಬಂಧಿಸಿದ್ದು. ಯುವತಿಯೊಬ್ಬಳು ತನ್ನ ಜೀವನದಲ್ಲಿ ಎದುರಾಗುವ ಎಲ್ಲ ಬಗೆಯ ಸವಾಲುಗಳನ್ನು ಎದುರಿಸುತ್ತಾ ಬಹುಮುಖಿಯಾಗಿ ಬೆಳೆಯುವ ಬಗೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ನನ್ನ ಅನುಭವದ ಜತೆಗೆ ಕಲ್ಪನೆಯೂ ಸೇರಿಕೊಂಡಿರುವುದರಿಂದ ಇದನ್ನು ಕಾಲ್ಪನಿಕ ಆತ್ಮಚರಿತ್ರೆ ಅಂತೆನ್ನಬಹುದು.ತಾರುಣ್ಯ, ಕಾಲೇಜು ಜೀವನ, ವೃತ್ತಿ ಜೀವನದ ಪಲ್ಲಟಗಳು, ಸ್ನೇಹ ಮತ್ತು ಪ್ರೀತಿ ಇವೆಲ್ಲಾ ಸಂಗತಿಗಳು ಪುಸ್ತಕದಲ್ಲಿವೆ ಎಂದು ಈ ಕಾದಂಬರಿ ಓದಿದ ಅನೇಕ ಓದುಗರು ಹೇಳಿದ್ದಾರೆ.ಕಾದಂಬರಿ ರಚನೆಗೆ ಎಷ್ಟು ಸಮಯ ಮೀಸಲಿಟ್ಟಿದ್ದೀರಿ ಮತ್ತು ಸಂಶೋಧನೆ ಏನಾದರೂ ಬೇಕಾಯಿತೇ?

ಕಥೆಯ ಬಹುಭಾಗ ನನ್ನ ಜೀವನಕ್ಕೆ ಸಂಬಂಧಿಸಿದ್ದು. ಹಾಗಾಗಿ, ಕಥೆ ಹೆಣೆಯಲು, ಪಾತ್ರ ಸೃಷ್ಟಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ಹಾಗೆಯೇ ಸಂಶೋಧನೆ ನಡೆಸುವ ಅವಶ್ಯಕತೆ ಬೀಳಲಿಲ್ಲ.ನಿಮ್ಮ ಬರವಣಿಗೆಗೆ ಸ್ಫೂರ್ತಿ ತುಂಬಿದ ಲೇಖಕರು/ವ್ಯಕ್ತಿ ಯಾರು?

ಪುಸ್ತಕಗಳನ್ನು ಓದುವ ಮೋಹ ನನಗೆ ಅಷ್ಟಾಗಿ ಇಲ್ಲ. ಹಾಗಾಗಿ, ಯಾವ ಲೇಖಕನ ಶೈಲಿ, ಆತನ ಪಾತ್ರಸೃಷ್ಟಿಯ ಕೈಚಳಕ ಹೇಗಿರುತ್ತದೆ ಎಂಬ ಅರಿವು ನನಗಿಲ್ಲ. ನನ್ನ ಬರವಣಿಗೆಗೆ ಸ್ಫೂರ್ತಿ ಅಂತಂದರೆ, ಸಾಮಾನ್ಯ ಮನುಷ್ಯ. ತುತ್ತಿನ ಚೀಲ ತುಂಬಿಸಿಕೊಳ್ಳಲು ಹೋರಾಡುವ ಒಬ್ಬ ಸಾಮಾನ್ಯ ಮನುಷ್ಯನ ಸಾಮರ್ಥ್ಯ ಕಂಡು ನಾನು ಅನೇಕ ಬಾರಿ ಚಕಿತಳಾಗಿದ್ದೇನೆ. ಅವನೇ ನನ್ನ ಬರವಣಿಗೆಗೆ ಸ್ಫೂರ್ತಿ.ಅಕ್ಷರ ಕೃಷಿಯಲ್ಲಿನ ನಿಮ್ಮ ಮಹತ್ವಾಕಾಂಕ್ಷೆ?

ನನಗೆ ಬರೆಯಬೇಕು ಅಂತ ಅನಿಸಿದ್ದರಿಂದಲೇ ‘ವೈಸ್‌ ಎನಫ್‌ ಟು ಬಿ ಫೂಲಿಶ್‌’ ಕಾದಂಬರಿ ರಚನೆಯಾಯ್ತು. ನನ್ನ ಬರವಣಿಗೆಯ ಉತ್ಸಾಹಕ್ಕೆ  ಸ್ನೇಹಿತರ ಸ್ಫೂರ್ತಿ ಸಿಗದಿದ್ದರೆ ನನ್ನ ಅಕ್ಷರ ಕೃಷಿಯ ಕನಸು ಮನಸ್ಸಿನಲ್ಲೇ ಹುದುಗಿ ಹೋಗುತ್ತಿತ್ತು. ನನ್ನ ಸ್ವ-ಅನುಭವ ಪುಸ್ತಕ ರೂಪ ಪಡೆದ ನಂತರ ಅನೇಕರಿಂದ ಮೆಚ್ಚುಗೆಯ ಮಾತುಗಳು, ಪ್ರೋತ್ಸಾಹದ ನುಡಿಗಳು  ಬಳುವಳಿಯಾಗಿ ಬಂದವು. ಹಾಗಾಗಿ, ನನ್ನ ಅನೇಕ ಕೆಲಸಗಳ ನಡುವೆಯೇ ಬರವಣಿಗೆಯನ್ನು ಮುಂದುವರಿಸಬೇಕು ಎನ್ನುವುದು ನನ್ನ ಮಹತ್ವಾಕಾಂಕ್ಷೆ.ನಿಮ್ಮ ಕಾದಂಬರಿಯ ಪ್ರಮುಖ ಪಾತ್ರಧಾರಿ ಬಗ್ಗೆ ಹೇಳಿ? ನಿಮ್ಮ ಪ್ರಕಾರ ಆ ಪಾತ್ರ ಹೇಗೆ ವಿಶೇಷವಾದುದು?

ಜೀವನದ ಪ್ರತಿ ಹಂತದಲ್ಲೂ ಹೋರಾಟ ನಡೆಯವ ಮಹಿಳೆಯೇ ನನ್ನ ಕಾದಂಬರಿಯ ಕೇಂದ್ರ ಬಿಂದು. ಇಂದಿನ ಸಾಮಾನ್ಯ ಮಹಿಳೆ ಕೂಡ ತನ್ನ ಜೀವನದಲ್ಲಿ ಎದುರಾಗುವ  ಹೋರಾಟದ ಪ್ರತಿ ಹಂತದಲ್ಲೂ ಸೋಲಲು ಬಯಸುವುದಿಲ್ಲ. ನನ್ನ ಕಾದಂಬರಿಯಲ್ಲೂ ಇದೇ ಇದೆ. ಹೋರಾಟವನ್ನೇ ಧ್ಯೇಯವಾಗಿಸಿಕೊಂಡ ಮಹಿಳೆಯೇ ನನ್ನ ಕಾದಂಬರಿಯ ವಿಶೇಷ ಪಾತ್ರ. ಹಾಗಾಗಿ ನಾನು ಈ ಕಾದಂಬರಿಯನ್ನು ಮಹಿಳಾ ಕೇಂದ್ರಿತ ಎನ್ನಲು ಹೆಚ್ಚು ಇಷ್ಟಪಡುತ್ತೇನೆ.ಕಾದಂಬರಿ ರಚನೆ ಎಷ್ಟು ದಿನ ತೆಗೆದುಕೊಂಡಿರಿ?

ಕಾದಂಬರಿ ಬರೆಯಲು ನಾನು ತೆಗೆದುಕೊಂಡ ಸಮಯ ಕೇವಲ ನಾಲ್ಕು ದಿನ. ಆದರೆ, ಕಾದಂಬರಿಯನ್ನು ಸಂಕಲಿಸಲು, ಪಾತ್ರವರ್ಗವನ್ನು ಪರಿಣಾಮಕಾರಿಯಾಗಿಸಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದೇನೆ. ಕಥೆ ನನ್ನದೇ ಜೀವನಕ್ಕೆ ಸಂಬಂಧಿಸಿದ್ದರಿಂದ ಹೆಚ್ಚು ಶ್ರಮ ಬೇಡಲಿಲ್ಲ. ಒಂದು ಬಾರಿ ಬರೆದರೆ, ತಿದ್ದುವ ಅವಕಾಶವಿಲ್ಲ ಎನ್ನುವಂಥ ಬರಹಗಾರ್ತಿ ನಾನಲ್ಲ.ಸರಣಿ ಕೃತಿಗಳನ್ನು ರಚಿಸುವ ಲೇಖಕರ ಯಶಸ್ಸಿನ ಗುಟ್ಟಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಪ್ರತಿಯೊಬ್ಬ ಲೇಖಕನಿಗೂ ಒಂದು ದೊಡ್ಡ ಅಭಿಮಾನ ವರ್ಗ ಇರುತ್ತದೆ. ಅವರನ್ನೆಲ್ಲಾ ತನ್ನ ಬರವಣಿಗೆ ಮೂಲಕ ಹಿಡಿದಿಟ್ಟುಕೊಳ್ಳುವ ಛಾತಿ ಆತನಿಗೆ ಇರಬೇಕು. ಇದೊಂದು ಅಚ್ಚರಿಯ ಪ್ರಕ್ರಿಯೆ.ನಿಮ್ಮ ನೆಚ್ಚಿನ ಲೇಖಕರು ಯಾರು? ಯಾವ ಪುಸ್ತಕ ಇಷ್ಟ?

ಮೊದಲೇ ಹೇಳಿದಂತೆ ನಾನು ಪುಸ್ತಕ ಮೋಹಿಯಲ್ಲ. ಹೆಚ್ಚು ಓದುವುದೂ ಇಲ್ಲ. ನನ್ನ ವೃತ್ತಿಗೆ ಪೂರಕವೆನಿಸುವ ಪುಸ್ತಕಗಳನ್ನು ಆಗಾಗ ಓದುತ್ತೇನೆ. ಕೆಲವೊಮ್ಮೆ ಫಿಲಾಸಫಿ ಮತ್ತು ಬ್ಯುಸಿನೆಸ್‌ಗೆ ಸಂಬಂಧಿಸಿದ ಪುಸ್ತಕಗಳಿಗೆ ಜೋತು ಬಿದ್ದಿದ್ದಿದೆ. ಪರ್ವತಾರೋಹಿಗಳ ಅನುಭವ ಕಥನ ನನಗೆ ಅಚ್ಚುಮೆಚ್ಚು.ಕನ್ನಡ ಸಾಹಿತ್ಯ ಮತ್ತು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ನಿಮ್ಮ ಅಭಿಪ್ರಾಯ? ಮುಂದಿನ ಯೋಜನೆಗಳೇನು?

ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ನೀರು ಹರಿಯುತ್ತಿದೆ. ಇಲ್ಲಿ ಉದಯೋನ್ಮುಖ ಲೇಖಕರಿಗೆ ಹೆಚ್ಚಿನ ಪ್ರೋತ್ಸಾಹ ಇದೆ. ಓದಿನ ಗೀಳು ಹತ್ತಿಸಿಕೊಂಡ ಸಾಮಾನ್ಯ ಮನುಷ್ಯನೂ ಇಂದು ಸಾಹಿತ್ಯದೊಂದಿಗೆ ತನ್ನನ್ನು ತಾನು ಗುರ್ತಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾನೆ.ನಿಘಂಟು ಇಟ್ಟುಕೊಂಡು ಪುಸ್ತಕ ಓದಬೇಕಾದ ಸಾಹಿತ್ಯಗಳು ದೂರಾಗಿ, ಎಲ್ಲರಿಗೂ ಹತ್ತಿರವಾಗುತ್ತಿರುವ ಸಾಹಿತ್ಯ ರಚನೆಯಾಗುತ್ತಿರುವುದು ನನಗೆ ಖುಷಿ ನೀಡುತ್ತದೆ. ಅಂದಹಾಗೆ, ಮೊದಲ ಕಾದಂಬರಿಗೆ ಸಿಕ್ಕ ಪ್ರತಿಕ್ರಿಯೆ ನನ್ನನ್ನು ಮತ್ತಷ್ಟು ಪುಸ್ತಕಗಳನ್ನು ಬರೆಯುವ ಹುಮ್ಮಸ್ಸು ತುಂಬಿದೆ.

ಸಂದರ್ಶನ: -ಕೆ.ಎಂ.ಸತೀಶ್‌ ಬೆಳ್ಳಕ್ಕಿ. ಚಿತ್ರ: ಚಂದ್ರಹಾಸ ಕೋಟೆಕಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry