ಸೋಮವಾರ, ಮೇ 23, 2022
20 °C

ಬರೆಯುವ ಕೈಗೆ ಬರೆ ಹಾಕದಿರಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಜನಸಂಖ್ಯೆಗೆ ಕಡಿವಾಣ ಹಾಕುವ ಮೂಲಕ ಬಾಲ ಕಾರ್ಮಿಕ ಪದ್ಧತಿ, ನಿರುದ್ಯೋಗ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ  ಎಂ.ಬಿ. ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಗರದ ಗುರುಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ, ಕಂದಾಯ, ಪೊಲೀಸ್, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆ ಮತ್ತು ತಾಲ್ಲೂಕು ಪಂಚಾಯ್ತಿ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚುತ್ತಿರುವ ಜನಸಂಖ್ಯೆಗೆ ಬೇಕಿರುವ ಅಗತ್ಯ ಪೂರೈಸಲು ಒಬ್ಬಿಬ್ಬರು ದುಡಿದರೆ ಸಾಲದು. ಹೀಗಾಗಿ ಶಾಲೆಗೆ ಹೋಗಬೇಕಾದ ಮಕ್ಕಳನ್ನು ದುಡಿಮೆಗೆ ಹಚ್ಚುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಕಿತ್ತುಕೊಂಡಂತೆ ಆಗುತ್ತದೆ. ಪೋಷಕರು ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಲು ಉತ್ತಮ ವಿದ್ಯೆ ಕೊಡಿಸುವ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿಷೇಧಿಸುವ ಕುರಿತು  ಜಾಗೃತಿ ಮೂಡಿಸಬೇಕು.  ಮಕ್ಕಳಿಂದ ದುಡಿಸುವುದು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ, ಕಾರ್ಮಿಕ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಅಥವಾ ಬಿಇಒ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ, ಕಾರ್ಮಿಕ ನಿರೀಕ್ಷಕ ರಾಜಣ್ಣ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಟಿ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜಣ್ಣ ಸ್ವಾಗತಿಸಿದರು. ಕೆ. ರಾಮಚಂದ್ರಪ್ಪ ವಂದಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

ಹೊಳಲ್ಕೆರೆ ವರದಿ

ನಾಗರಿಕ ಸಮಾಜಕ್ಕೆ ಕಳಂಕವಾಗಿರುವ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ನ್ಯಾಯಾಧೀಶ ಟಿ. ಶಿವಣ್ಣ ಕರೆನೀಡಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಬಾಲಕಾರ್ಮಿಕ ವಿರೋಧಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅನಕ್ಷರತೆ, ಬಡತನ, ನಿರುದ್ಯೋಗ, ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮತ್ತಿತರ ಕಾರಣಗಳಿಂದ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಮೆಗೆ ಹಚ್ಚುವುದು ಕಾನೂನಿನ ಪ್ರಕಾರ ಅಪರಾಧ. ಇದಕ್ಕೆ ರೂ. 20 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಇದೆ ಎಂದು ತಿಳಿಸಿದರು.

ಕಾನೂನಿನ ಅರಿವಿಲ್ಲದೆ ಕೆಲವು ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಹೊಟೇಲ್, ಗ್ಯಾರೇಜ್, ಕಾರ್ಖಾನೆಗಳ ಮಾಲೀಕರು ಕಡಿಮೆ ಸಂಬಳ ನೀಡಿ ಮಕ್ಕಳಿಂದ ದುಡಿಸಿಕೊಳ್ಳುತ್ತಾರೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ. ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಥಾ ನಡೆಸಿದರು.

ಬಿಇಒ ಎಸ್.ಆರ್. ಮಂಜುನಾಥ್, ಸಿಪಿಐ ಶ್ರೀಧರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೀರಯ್ಯ, ಶಂಷೀದ್ ಅಲೀಖಾನ್, ಮನೋಹರ ಹಿಡಕಲ್, ವಕೀಲರ ಸಂಘದ ಉಪಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್, ಎಸ್.ಎಂ. ಆನಂದಮೂರ್ತಿ, ರಮೇಶ್ ಇದ್ದರು.

ಶಿಕ್ಷಣ ಹಕ್ಕು: ಸಮರ್ಪಕ ಅನುಷ್ಠಾನಗೊಳಿಸಿ

ಮೊಳಕಾಲ್ಮುರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಸಮುದಾಯದ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕಾರ್ಮಿಕ ನಿರೀಕ್ಷಕಿ ಕೆ.ಜೆ. ಜಯಲಕ್ಷ್ಮೀ ಕರೆ ನೀಡಿದರು.

ಇಲ್ಲಿ ಮಂಗಳವಾರ ತಾಲ್ಲೂಕು ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಸಹನಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸದಿರುವುದು ಸಹ ಕಾನೂನು ಪ್ರಕಾರ ಅಪರಾಧ ಆಗಲಿದೆ. 18 ವರ್ಷ ವಯೋಮಾನ ಒಳಗಿನ ಬಾಲಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧ. ಇದು ಸಾಬೀತಾದಲ್ಲಿ ದಂಡ ಹಾಗೂ ಕಾರಾಗೃಹ ಶಿಕ್ಷೆ ಸಹ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಅವಕಾಶ ನೀಡದೆ ಕಾನೂನು ಪಾಲಿಸಬೇಕು ಎಂದರು.

ಸಿಪಿಐ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಪನಾಯಕ, ವೆಡ್ಸ್ ಸಂಸ್ಥೆ ಕಾರ್ಯದರ್ಶಿ ಗಂಗಾಧರ್, ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ, ಬಿಸಿಯೂಟ ಯೋಜನಾಧಿಕಾರಿ ಎಸ್.ಪಿ. ಶಿವಣ್ಣ, `ಸಹನಾ ಸಂಸ್ಥೆ~ ಕಾರ್ಯದರ್ಶಿ ಉಮೇಶ್ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.