ಬರ್ರಪ್ಪೋ ಬರ್ರಿ!

7

ಬರ್ರಪ್ಪೋ ಬರ್ರಿ!

Published:
Updated:
ಬರ್ರಪ್ಪೋ ಬರ್ರಿ!

ಉದ್ಯಾನ ನಗರಿಯಲ್ಲಿ ಯಾವುದೇ ಕ್ರೀಡೆ ನಡೆದರೂ, ಅದು ಕ್ರೀಡಾ ಪ್ರೇಮಿಗಳ ಸಂತಸಕ್ಕೆ ಕಾರಣವಾಗುತ್ತದೆ. ಆದರಲ್ಲೂ, ಕ್ರಿಕೆಟ್ ನಡೆದರಂತೂ ಕೆಲವರಿಗೆ ನಿತ್ಯದ ಕೆಲಸವನ್ನೆಲ್ಲಾ ಮರೆತು ಬಿಡುವಷ್ಟು ಸಂಭ್ರಮ. ಟ್ರಾಫಿಕ್ ಕಿರಿಕಿರಿಗೆ ಒಂದಿಷ್ಟು ವಿರಾಮ ಹೇಳಿ ಸಂತಸ ಪಡಲು ವೇದಿಕೆ. ಪೊಲೀಸರಿಂದ ಲಾಠಿ ಪೆಟ್ಟು ತಿಂದರೂ ಪರವಾಗಿಲ್ಲ. ಆಟ ನೋಡಬೇಕು. ಆಟಗಾರರನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ತವಕ.ಆದರೆ, ಈಗಿನ ಸ್ಥಿತಿಯೇ ಬೇರೆಯಾಗಿದೆ.  ಕ್ರೀಡಾಂಗಣ ಖಾಲಿ ಖಾಲಿ... ಖುರ್ಚಿ ಎಷ್ಟು ಖಾಲಿಯಿವೆ ಎನ್ನುವ ಲೆಕ್ಕಾಚಾರಕ್ಕಿಂತ ಎಷ್ಟು ಭರ್ತಿಯಾಗಿವೆ ಎನ್ನುವುದನ್ನು ನೋಡುವಂತಾಗಿದೆ. `ಅತಿಯಾದರೆ ಅಮೃತವೂ ವಿಷ~ ಎನ್ನುವ ಹಾಗೆ ಅತಿಯಾದ ಆಟದಿಂದ ಕ್ರಿಕೆಟ್ ಬಗ್ಗೆ ವಾಕರಿಕೆ ಬರುತ್ತಿದೆಯೆನೊ. ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೇ ಇದಕ್ಕೆ ಸಾಕ್ಷಿ.ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೇ ಈ ಪರಿಸ್ಥಿತಿಯಾದರೆ, ಇನ್ನೂ ರಣಜಿಯಂತಹ ಟೂರ್ನಿಗಳಲ್ಲಿ ಪರಿಸ್ಥಿತಿ ಹೇಗಿರಬಹುದು ನೀವೇ ಊಹಿಸಿ. ಒಂದಿಷ್ಟು ಪತ್ರಕರ್ತರು ಹಾಗೂ ಬೆರಳೆಣಿಕೆಯಷ್ಟು ಆಯಾ ಕ್ರಿಕೆಟ್ ಸಂಸ್ಥೆಯ ಸಿಬ್ಬಂದಿ ಹೊರತು ಪಡಿಸಿದರೆ ಯಾರೂ ಇರುವುದಿಲ್ಲ.ಭವಿಷ್ಯದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಟಗಾರ ಶತಕ ಹೊಡೆದರೆ ತನ್ನಷ್ಟಕ್ಕೆ ತಾನೆ ಸಂಭ್ರಮಿಸಬೇಕು. ತಾನೇ ಚಪ್ಪಾಳೆ ತಟ್ಟಿಕೊಂಡು ಸಮಾಧಾನ ಮಾಡಿಕೊಳ್ಳಬೇಕು. ಇದು ರಣಜಿ ಸ್ಥಿತಿ. ಅದೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಾತಾವರಣ ಬದಲಾಗಿರುತ್ತದೆ. ಕ್ರಿಕೆಟ್ ಎಂದ ಮೇಲೆ ಎಲ್ಲವೂ ಒಂದೇ ತಾನೆ. ಆದರೆ, ರಣಜಿ ಎಂದರೆ ಏಕೆ ಈ ಭೇದ?ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ದೋನಿ, ರಾಹುಲ್ ದ್ರಾವಿಡ್ ಅವರಂಥಹ ಖ್ಯಾತನಾಮ ಆಟಗಾರರು ಬಂದು ರಣಜಿಯಲ್ಲಿ ಆಡಿದರೂ, ಪಂದ್ಯ ನೋಡಲು ಯಾರು ಬರುವುದಿಲ್ಲ ಎನ್ನುತ್ತಾರೆ ಈ ಆಟವನ್ನು ಅನೇಕ ವರ್ಷದಿಂದ ನೋಡುತ್ತ ಬಂದ ಅಭಿಮಾನಿಯೊಬ್ಬರು.

 

ಅಂತರರಾಷ್ಟ್ರೀಯ ಪಂದ್ಯಗಳಿಗೆ ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಟಿಕೆಟ್ ಸಿಕ್ಕುವುದಿಲ್ಲ. ಸಿಗುವುದೇನಿದ್ದರೂ ಪೊಲೀಸರು ಏಟು ಮಾತ್ರ. ರಣಜಿ ಆಟಕ್ಕೆ ಈ ಕಾಟವೇ ಇಲ್ಲ. ಟಿಕೆಟ್‌ನ ಅಗತ್ಯವೂ ಇಲ್ಲ. ಕಾಡಿ  ಬೇಡುವುದಂತೂ ಬೇಕಿಲ್ಲ. ಆದರೂ ರಣಜಿ ಎಂದರೆ ಮೂಗು ಮುರಿಯುವುದ್ಯಾಕೆ ಎಂಬುದು ಅರ್ಥವಾಗುತ್ತಿಲ್ಲ.ಇದು ಕೇವಲ ಬೆಂಗಳೂರಿನ ಕತೆಯಲ್ಲ. ರಣಜಿ ಪಂದ್ಯ ಎಲ್ಲಿಯೇ ನಡೆದರೂ ಇದೇ ಸ್ಥಿತಿ. ಆದರೆ, ಫುಟ್‌ಬಾಲ್ ವಿಷಯದಲ್ಲಿ ಹಾಗಲ್ಲ. ರಾಜಧಾನಿಯ ಕ್ರೀಡಾ ಪ್ರೇಮಿಗಳು ಈಗ ಫುಟ್‌ಬಾಲ್ ಕ್ರೀಡೆಯತ್ತ ಒಲವು ತೋರಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐ-ಲೀಗ್ ಫುಟ್‌ಬಾಲ್ ಟೂರ್ನಿಗೆ ಹೆಚ್ಚು ಪ್ರೇಕ್ಷಕರು ಬರುತ್ತಿರುವುದು ಅದನ್ನು ಸಾಬೀತು ಪಡಿಸುತ್ತಿದೆ.ಆದರೆ, ಇದು ಕೋಲ್ಕತ್ತದ ಜನರಿಗೆ ಹೋಲಿಸಿದರೆ ತೀರಾ ಕಡಿಮೆಯಾಯಿತು. ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಇತ್ತೀಚಿಗೆ ನಡೆದ ಇದೇ ಟೂರ್ನಿಯ ಪಂದ್ಯವೊಂದಕ್ಕೆ 85,000ಕ್ಕೂ ಹೆಚ್ಚು ಜನ ಬಂದಿದ್ದು ಗಮನ ಸೆಳೆದಿತ್ತು.ಈಗಾಗಲೇ ಕರ್ನಾಟಕ ರಣಜಿ ತಂಡ ಮೂರು ಪಂದ್ಯಗಳನ್ನು ಆಡಿದೆ. ತವರು ನೆಲದಲ್ಲಿ ಮಂಗಳವಾರ ಮೊದಲ ಪಂದ್ಯ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ. ಆದರೆ, ಪಂದ್ಯ ನೋಡುವವರು ಯಾರು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ...!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry