ಶನಿವಾರ, ಏಪ್ರಿಲ್ 17, 2021
23 °C

ಬರ ಅಧ್ಯಯನಕ್ಕೆ ಮೂರು ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನ ಹಾಗೂ ಪಕ್ಷ ಸಂಘಟನೆ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರವಲ್ಲದೆ, ಇನ್ನೂ ಎರಡು ಪ್ರತ್ಯೇಕ ತಂಡಗಳು ರಾಜ್ಯ ಪ್ರವಾಸ ತೆರಳಲಿವೆ.

ನಗರದಲ್ಲಿ ಸೋಮವಾರ ನಡೆದ ಪಕ್ಷದ ರಾಜ್ಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತ ತೀರ್ಮಾನ ತೆಗೆದುಕೊಳ್ಳಲಾಗಿದೆ.ಯಡಿಯೂರಪ್ಪ ನೇತೃತ್ವದ ತಂಡದ ಪ್ರವಾಸ ತುಮಕೂರಿನಿಂದ ಮಂಗಳವಾರ ಆರಂಭವಾಗಲಿದೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ನೇತೃತ್ವದಲ್ಲಿ ಮತ್ತೆರಡು ತಂಡಗಳು ಪ್ರವಾಸ ಮಾಡಲಿದ್ದು, ಸದ್ಯದಲ್ಲೇ ದಿನಾಂಕಗಳನ್ನು ಅಂತಿಮಗೊಳಿಸಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಪ್ರಹ್ಲಾದ ಜೋಶಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ಯಡಿಯೂರಪ್ಪ ಒಬ್ಬರೇ ಪ್ರವಾಸ ಕೈಗೊಂಡಲ್ಲಿ `ಸಾಮೂಹಿಕ ನಾಯಕತ್ವ ಸೂತ್ರ~ಕ್ಕೆ ಹಿನ್ನಡೆ ಆಗಲಿದೆ ಎಂಬ ಆತಂಕದಿಂದ ಇನ್ನಿಬ್ಬರು ಮುಖಂಡರ ನೇತೃತ್ವದಲ್ಲಿ ಪ್ರವಾಸ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಯಡಿಯೂರಪ್ಪ ಜತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರವಾಸಕ್ಕೆ ತೆರಳಲಿದ್ದಾರೆ. ಎಲ್ಲ ಸಭೆ- ಸಮಾರಂಭಗಳಲ್ಲಿ ಶೆಟ್ಟರ್ ಭಾಗವಹಿಸದಿದ್ದರೂ ಪ್ರಮುಖ ಸಭೆಗಳಲ್ಲಿ ಅವರು ಹಾಜರಿರುತ್ತಾರೆ. ಸದಾನಂದ ಗೌಡ ಅವರ ಜತೆ ಉಪ ಮುಖ್ಯಮಂತ್ರಿಯೂ ಆದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪ್ರವಾಸ ಮಾಡುವರು. ಅನಂತಕುಮಾರ್ ಜತೆ ಮತ್ತೊಬ್ಬ ಉಪಮುಖ್ಯಮಂತ್ರಿ ಆರ್.ಅಶೋಕ ತೆರಳಲಿದ್ದಾರೆ.ಈ ಮೂರು ತಂಡಗಳು ಪ್ರತ್ಯೇಕವಾಗಿ ಪ್ರವಾಸ ಮಾಡಲಿದ್ದು, ಪಕ್ಷ ಸೂಚಿಸಿದ ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಪಕ್ಷದ ಸ್ಥಳೀಯ ಪ್ರಮುಖರು, ಸಚಿವರು ಮತ್ತು ಶಾಸಕರು ಕೂಡ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ಜೋಶಿ ವಿವರಿಸಿದರು.ಸದಸ್ಯತ್ವ ನೋಂದಣಿ: ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಸದಸ್ಯತ್ವ ನೋಂದಣಿ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ.ಮೂರೂವರೆ ವರ್ಷಗಳ ಹಿಂದೆ ಹಮ್ಮಿಕೊಂಡಿದ್ದ ಅಭಿಯಾನ ಸಂದರ್ಭದಲ್ಲಿ 27 ಲಕ್ಷ ಮಂದಿಯ ಸದಸ್ಯತ್ವ ನೋಂದಣಿ ಆಗಿತ್ತು. ಈಗ ಕನಿಷ್ಠ 50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದು, ಅದರ ಯಶಸ್ಸಿಗೆ ಎಲ್ಲರೂ ಪ್ರಯತ್ನ ನಡೆಸಲಿದ್ದಾರೆ ಎಂದು ಜೋಶಿ ವಿವರಿಸಿದರು.ಸೆ.9ರಿಂದ 16ರವರೆಗೆ ಮೊದಲ ಹಂತದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಇದಕ್ಕೂ ಮುನ್ನ, ಇದೇ 28 ಮತ್ತು 29ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸದಸ್ಯತ್ವ ನೋಂದಣಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಸದಸ್ಯತ್ವ ನೋಂದಣಿ ಹೇಗೆ ಮಾಡಿಸಬೇಕು ಎಂಬುದರ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶ ಎಂದು ಅವರು ಹೇಳಿದರು.ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಕನಿಷ್ಠ 50 ಮಂದಿಯನ್ನು ಸದಸ್ಯರನ್ನಾಗಿ ನೋಂದಾಯಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದ ಪರಿಶೀಲನೆ ನಂತರ 2ನೇ ಹಂತದ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.ರೈತರ ಪ್ರತಿಭಟನೆ: ರಸಗೊಬ್ಬರ ಬೆಲೆ ಹೆಚ್ಚಳ ಖಂಡಿಸಿ ಇದೇ 27ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪಕ್ಷದ ವತಿಯಿಂದ ಪ್ರತಿಭಟನೆಗಳನ್ನು ನಡೆಸಲಾಗುವುದು. ರಸಗೊಬ್ಬರದ ಮೇಲಿನ ಸಬ್ಸಿಡಿ ಕಡಿತ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಲಾಗುವುದು ಎಂದರು.ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಇದೇ 24 ಮತ್ತು 25ರಂದು ಮುರ್ಡೇಶ್ವರದಲ್ಲಿ ಹಾಗೂ ಯುವ ಮೋರ್ಚಾದ ಕಾರ್ಯಕಾರಿಣಿ ಸಭೆ ಇದೇ 25 ಮತ್ತು 26ರಂದು ಬೆಳಗಾವಿಯಲ್ಲಿ ನಡೆಯಲಿದೆ. ಸದಸ್ಯತ್ವ ಅಭಿಯಾನಕ್ಕೂ ಮುನ್ನ ಸೆ. 8ರಂದು ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಜೋಶಿ ವಿವರಿಸಿದರು.ಬಿಎಸ್‌ವೈ ಗೈರುಹಾಜರಿ: ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಗದೀಶ ಶೆಟ್ಟರ್, ಸದಾನಂದ ಗೌಡ, ಅನಂತಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಿದ್ದರು. ಸಭೆಗೆ ಯಡಿಯೂರಪ್ಪ ಗೈರುಹಾಜರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.