ಶುಕ್ರವಾರ, ಮೇ 14, 2021
28 °C

ಬರ ಅಧ್ಯಯನ: ಇಂದಿನಿಂದ ಸಚಿವರ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ ಬರಪೀಡಿತ ಜಿಲ್ಲೆಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಅನುಷ್ಠಾನ, ಕುಡಿಯುವ ನೀರು ಮತ್ತು ಮೇವಿನ ಪರಿಸ್ಥಿತಿ ಕುರಿತ ವಸ್ತುಸ್ಥಿತಿ ಅರಿಯಲು 12 ಸಚಿವರು ಮೂರು ತಂಡಗಳಲ್ಲಿ ಸೋಮವಾರದಿಂದ ಪ್ರವಾಸ ಕೈಗೊಳ್ಳಲಿದ್ದಾರೆ.ಈಗಾಗಲೇ ಬರಪೀಡಿತ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿರುವ ಮುಖ್ಯಮಂತ್ರಿ  ಡಿ.ವಿ.ಸದಾನಂದಗೌಡ ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಸಚಿವರ ತಂಡಗಳು ಬುಧವಾರದವರೆಗೂ ಪ್ರವಾಸದಲ್ಲಿರುತ್ತವೆ.ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬರ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿ, ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್, ಗೃಹ ಸಚಿವ ಆರ್.ಅಶೋಕ ಮತ್ತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 3 ತಂಡಗಳಲ್ಲಿ ಸಚಿವರು ಪ್ರವಾಸ ಮಾಡಲಿದ್ದಾರೆ.ಶೆಟ್ಟರ್ ತಂಡ ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಒಳಗೊಂಡಿದ್ದು, ವಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ.ಆರ್.ಅಶೋಕ ನೇತೃತ್ವದಲ್ಲಿ ಎಸ್.ಸುರೇಶ್‌ಕುಮಾರ್, ಬಿ.ಎನ್.ಬಚ್ಚೇಗೌಡ, ಎಸ್.ಎ.ರವೀಂದ್ರನಾಥ್ ಅವರ ತಂಡ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಲಿದೆ. ಈ ತಂಡವು ಸೋಮವಾರ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.ಬಸವರಾಜ ಬೊಮ್ಮಾಯಿ ತಂಡ ರೇವೂನಾಯಕ ಬೆಳಮಗಿ, ರಾಜೂಗೌಡ, ಎಸ್.ಎ.ರಾಮದಾಸ್ ಅವರನ್ನು ಒಳಗೊಂಡಿದ್ದು, ಗುಲ್ಬರ್ಗ, ಕೊಪ್ಪಳ, ರಾಯಚೂರು, ಬಳ್ಳಾರಿ, ಬೀದರ್, ಚಿತ್ರದುರ್ಗ, ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.