ಶುಕ್ರವಾರ, ಮೇ 14, 2021
25 °C

ಬರ ಇರುವಾಗ ಸನ್ಮಾನ ಯಾಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದ 123 ತಾಲ್ಲೂಕುಗಳು ಬರಪೀಡಿತವಾಗಿವೆ. ಅಲ್ಲಿನ ಜನ ಕಣ್ಣೀರು ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸನ್ಮಾನ ಮಾಡಿಸಿಕೊಳ್ಳುವುದು, ಸಮಾವೇಶ ಆಯೋಜಿಸುವುದು ಸಮಂಜಸವಲ್ಲ. ನಾನಂತೂ ಇಂಥ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡಲಾರೆ~.

- ಈ ಮಾತು ಹೇಳಿದವರು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ.

ಪ್ರಥಮ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿರುವ, ಹಿಂದುಳಿದ ವರ್ಗಗಳಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿರುವ ಸದಾನಂದ ಗೌಡರನ್ನು ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಸನ್ಮಾನಿಸಲಾಗುವುದು ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಶನಿವಾರ ತಿಳಿಸಿದ್ದರು.

ಸನ್ಮಾನ ಕಾರ್ಯಕ್ರಮವನ್ನು ಪಕ್ಷದ ವರಿಷ್ಠರ ಅನುಮತಿ ಪಡೆದೇ ಆಯೋಜಿಸಲಾಗುವುದು ಎಂದು ಯೋಗೇಶ್ವರ್ ಸ್ಪಷ್ಟಪಡಿಸಿದ್ದರು. ಆದರೆ, ಸನ್ಮಾನ-ಸಮಾವೇಶ ಆಯೋಜನೆಗೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, `ರಾಜ್ಯ ಇಂದು ಎದುರಿಸುತ್ತಿರುವ ಬರಗಾಲದ ಸಂದರ್ಭದಲ್ಲಿ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮ ಒಪ್ಪಲಾರೆ~ ಎಂದು ಹೇಳಿದರು.

ಗೃಹ ಕಚೇರಿ `ಕೃಷ್ಣಾ~ದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಮುಖ್ಯಮಂತ್ರಿಗಳು, `ಸನ್ಮಾನ ಸಮಾರಂಭಗಳಿಗೆ ಖರ್ಚು ಮಾಡುವ ಲಕ್ಷಾಂತರ ರೂಪಾಯಿ ಬಳಸಿ, ಬರಪೀಡಿತ ಪ್ರದೇಶಗಳ ಹಸಿದ ಜನತೆಗೆ ಊಟ ಹಾಕಬಹುದು. ಸಾವಿರಾರು ಕೊಳವೆ ಬಾವಿಗಳನ್ನು ಕೊರೆಸಬಹುದು. ಇದನ್ನೆಲ್ಲ ನಾವೇ ಅರ್ಥ ಮಾಡಿಕೊಳ್ಳಬೇಕು. ಬೇರೆಯವರಿಂದ ಹೇಳಿಸಿಕೊಳ್ಳುವ ಸಂದರ್ಭ ಎದುರಾಗಬಾರದು~ ಎಂದು ಹೇಳಿದರು.

`ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕು ಎಂಬುದು ಚುನಾಯಿತ ಪ್ರತಿನಿಧಿಗಳಿಗೆ ತಿಳಿದಿರಬೇಕು. ಸನ್ಮಾನ ಕಾರ್ಯಕ್ರಮಗಳಿಗೆ ನಾನು ಹೋಗುವುದಿಲ್ಲ. ಸಮಾವೇಶಕ್ಕೆ ಖರ್ಚು ಮಾಡುವ ಹಣವನ್ನು ನನಗೇ ಕೊಟ್ಟರೆ, ಅದನ್ನು ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಬಳಸುತ್ತೇನೆ~ ಎಂದರು.

ಸನ್ಮಾನ, ಸಮಾವೇಶ ಆಯೋಜಿಸುವುದರಿಂದ ಏನನ್ನೋ ಸಾಧಿಸಬಹುದು ಎಂಬ ಕಲ್ಪನೆ ಇಲ್ಲ. ಇತಿಹಾಸವೂ ಇದನ್ನೇ ಹೇಳುತ್ತದೆ. ಸರ್ಕಾರ ಕೈಗೊಳ್ಳುವ ಕಾರ್ಯಕ್ರಮಗಳು ಜನಪರವಾಗಿರಬೇಕು, ಕಾರು-ಬಸ್ಸುಗಳಲ್ಲಿ ಜನರನ್ನು ಕರೆಸಿ, ಸಮಾವೇಶ ಆಯೋಜಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಕಾರ್ಯಕ್ರಮಕ್ಕೆ ಬಂದ ಜನರಿಂದ ಒಂದಿಷ್ಟು ಜೈಕಾರ ದೊರೆಯಬಹುದಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 70ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶ ಆಯೋಜಿಸಿದ ಬೆನ್ನಲ್ಲೇ, ಸದಾನಂದ ಗೌಡರನ್ನೂ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಯೋಗೇಶ್ವರ್ ಹೇಳಿಕೆ ನೀಡಿದ್ದರು.

`ಅಭಿನಂದನಾ ಸಮಾವೇಶ ಆಯೋಜಿಸುವ ಕುರಿತು ಸಚಿವ ಯೋಗೇಶ್ವರ್ ಇದುವರೆಗೆ ನನ್ನನ್ನು ಸಂಪರ್ಕಿಸಿಲ್ಲ. ನನ್ನನ್ನು ಸನ್ಮಾನಿಸಲು ಅಂಥ ಸಮಾವೇಶ ಆಯೋಜಿಸುವುದು ಬೇಡವೆಂದು ಅವರಿಗೆ ಹೇಳುತ್ತೇನೆ~ ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.