ಬುಧವಾರ, ಮೇ 18, 2022
23 °C

ಬರ ಎದುರಿಸಲು ಸಜ್ಜಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಅಥವಾ ಅತಿವೃಷ್ಠಿ ಪರಿಸ್ಥಿತಿ ಸೇರಿದಂತೆ ಯಾವುದೇ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ವಿಳಂಬವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆಯ ಕಡೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ. ಜಿಲ್ಲೆಯಲ್ಲಿ 15 ಗ್ರಾಮಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ.ಈ ಗೋಶಾಲೆಗಳಲ್ಲಿ ಒಟ್ಟು 14 ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ಗೋಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿರುವ ಮೇವಿನ ವಿತರಣೆ ಸಮರ್ಪಕವಾಗಿ ನಡೆಯಬೇಕು. ಸಮರ್ಪಕ ವಿತರಣೆಯ ಗೊಂದಲದಿಂದಾಗಿ ಮೇವಿನ ಕೊರತೆ ಕಂಡು ಬರುತ್ತಿದೆ ಎಂಬ ವರದಿಗಳು ಬಂದಿದ್ದು, ಅಧಿಕಾರಿಗಳು ಗೋಶಾಲೆಗಳಿಗೆ ಸರಬರಾಜು ಮಾಡಲಾಗುವ ಮೇವನ್ನು ಸಮರ್ಪಕವಾಗಿ ಜಾನುವಾರುಗಳಿಗೆ ವಿತರಿಸಲು ಮುಂದಾಗಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಸುಮಾರು 400 ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ಈ ಹೊಸ ಕೊಳವೆಬಾವಿ ಕೊರೆಯಿಸಿರುವ ಸ್ಥಳದ ಬಗ್ಗೆ ಜಿಪಿಎಸ್ ನಲ್ಲಿ ಅಕ್ಷಾಂಶ, ರೇಖಾಂಶಸಹಿತ ಮಾಹಿತಿಯನ್ನು ಕೂಡಲೇ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು.ಪ್ರಸಕ್ತ ಮುಂಗಾರು ಹಂಗಾಮಿಗೆ ಮುಂದಿನ 6 ತಿಂಗಳ ಅವಧಿಗೆ ಒಟ್ಟು 33 ಸಾವಿರ ಟನ್ ಯೂರಿಯಾ           ಬೇಕಾಗುವ ಸಾಧ್ಯತೆ ಇದೆ.ಜಿಲ್ಲೆಯಲ್ಲಿ ಸದ್ಯ 2,200 ಟನ್ ಯೂರಿಯಾ ದಾಸ್ತಾನಿದ್ದು, ಇನ್ನೊಂದು ವಾರದೊಳಗಾಗಿ ಇನ್ನೂ 2,500 ಟನ್ ಯೂರಿಯಾ ಬರಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಿ.ಬಿ.ಬಾಲರೆಡ್ಡಿ ಸಭೆಗೆ ವಿವರಿಸಿದರು.ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮುರಳೀಧರ್ ಜ್ಲ್ಲಿಲೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.