ಬರ ಕಾಮಗಾರಿ: ರೂ.7.5 ಕೋಟಿ ಬಿಡುಗಡೆಗೆ ಮನವಿ

7

ಬರ ಕಾಮಗಾರಿ: ರೂ.7.5 ಕೋಟಿ ಬಿಡುಗಡೆಗೆ ಮನವಿ

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿನ ಬರ ನಿರ್ವಹಣೆಗಾಗಿ ಈಗಾಗಲೇ ಕೈಗೊಂಡಿರುವ ಹಾಗೂ ಅಗತ್ಯವಿರುವ ಕಾಮಗಾರಿಗಳಿಗೆ ಮತ್ತು ಗೋಶಾಲೆಗಳಿಗೆ ಬೇಕಾದ ಮೇವಿನ ಖರೀದಿಗಾಗಿ ರೂ. 7.5 ಕೋಟಿ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮನವಿ ಮಾಡಿದರು.ಮುಖ್ಯಮಂತ್ರಿ ಸದಾನಂದಗೌಡ ಅವರು ತಮ್ಮ ಗೃಹ ಕಚೇರಿಯಿಂದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೊ ಕಾನ್ಪರೆನ್ಸ್‌ನಲ್ಲಿ ಜಿಲ್ಲೆಯಲ್ಲಿನ ಬರ ನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಬೇಸಿಗೆ ಕಾಲವಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಕೊರತೆಯಾಗಲಿದೆ. ಮುಂಬರುವ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಇನ್ನೂ ಹೆಚ್ಚಿನ ತೊಂದರೆಯಾಗಲಿದೆ. ಇದಕ್ಕಾಗಿ ಜಿಲ್ಲಾ ಆಡಳಿತ ಸನ್ನದ್ಧವಾಗಿರಬೇಕೆಂದು ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ತಿಳಿಸಿದರು. ಜಿಲ್ಲೆಗೆ ಮೊದಲ ಹಂತದಲ್ಲಿ ರೂ. 5 ಕೋಟಿ ಬಿಡುಗಡೆ ಮಾಡಲಾಗಿದ್ದು, ಇನ್ನೂ ಅಗತ್ಯವಿರುವ ಅನುದಾನವನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ತಲೆದೋರದಂತೆ ನೋಡಿಕೊಳ್ಳಬೇಕು ಹಾಗೂ ಇದಕ್ಕಾಗಿ ಹೆಚ್ಚಿನ ಆದ್ಯತೆ ನೀಡಬೇಕು ಬರ ನಿರ್ವಹಣೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರ್ಕಾರ ನೀಡಲಿದೆ ಎಂದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು ಇದಕ್ಕಾಗಿ ಎಷ್ಟು ಹಣ ಬೇಕಿದ್ದರೂ ನೀಡಲಾಗುತ್ತದೆ. ಈಗಾಗಲೇ ತೀವ್ರತರದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ 321 ಗ್ರಾಮಗಳನ್ನು ಗುರುತಿಸಿ 438 ಕೆಲಸಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ 238 ಕೆಲಸಗಳನ್ನು ಮುಕ್ತಾಯ ಮಾಡಲಾಗಿದೆ.  ಈಗಾಗಲೇ ಜಿಲ್ಲೆಯಲ್ಲಿ ಬರಗಾಲವಿರುವುದರಿಂದ ಉದ್ಯೋಗ ಖಾತರಿಯಡಿ ಜನರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಹಿಂದಿನ ವರ್ಷದ ಕಾಮಗಾರಿಯ ಬಾಕಿ ಸೇರಿದಂತೆ ಒಟ್ಟು 5 ಸಾವಿರ ಕಾಮಗಾರಿಗಳಿಗೆ ರೂ. 109 ಕೋಟಿಯನ್ನು ಪಾವತಿಸಲಾಗಿದೆ. ಇದರಲ್ಲಿ ಪ್ರಸಕ್ತ ವರ್ಷ ರೂ. 40 ಕೋಟಿಯ ಕೆಲಸಗಳನ್ನು ಆರಂಭಿಸಲಾಗಿದ್ದು, ಈಗಾಗಲೇ ರೂ. 22 ಕೋಟಿ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಮ್ ಮುಖ್ಯಮಂತ್ರಿಗಯೊಂದಿಗೆ ನಡೆದ ವೀಡಿಯೋ ಕಾನ್ಪರೆನ್ಸ್‌ನಲ್ಲಿ ತಿಳಿಸಿದರು.ಮುಖ್ಯಮಂತ್ರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೆಲಸ ಬೇಕೆಂದು ಬಂದವರಿಗೆ ಕೆಲಸ ಕೊಡಬೇಕು, ಯಾರು ಸಹ ಉದ್ಯೋಗವಿಲ್ಲವೆಂದು ಸಂಕಷ್ಟವನ್ನು ಅನುಭವಿಸಬಾರದು ಎಂದು ಸೂಚನೆ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ, ಜಿ.ಪಂ. ಉಪ ಕಾರ್ಯದರ್ಶಿ ರುದ್ರಪ್ಪ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹನುಮಂತಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry