ಭಾನುವಾರ, ಮೇ 16, 2021
22 °C

ಬರ: ತಿಂಗಳಾಂತ್ಯಕ್ಕೆ ದೆಹಲಿಗೆ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ತಿಂಗಳ ಕೊನೆಯ ವಾರ ಸರ್ವಪಕ್ಷಗಳ ಮುಖಂಡರ ನಿಯೋಗವನ್ನು ದೆಹಲಿಗೆ ಕರೆದೊಯ್ದು, ಬರದಿಂದ ರಾಜ್ಯದಲ್ಲಿ 4,500 ಕೋಟಿ ರೂಪಾಯಿ ಹಾನಿ ಸಂಭವಿಸಿರುವ ಬಗ್ಗೆ ಪ್ರಧಾನಿಯವರಿಗೆ ಪರಿಷ್ಕೃತ ವರದಿ ಸಲ್ಲಿಸಲಾಗುವುದು. ಅರ್ಧದಷ್ಟು ಮೊತ್ತವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ಸಂಚಿತ ನಿಧಿಯಿಂದ (ಎನ್‌ಸಿಸಿಎಫ್) ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಜೆಡಿಎಸ್ ನಾಯಕರಾದ ಎಂ.ಸಿ.ನಾಣಯ್ಯ, ಎಚ್.ಡಿ.ರೇವಣ್ಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಸಚಿವ ಜಗದೀಶ ಶೆಟ್ಟರ್ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ

ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಗುರುವಾರ ವಿಧಾನಸೌಧದಲ್ಲಿ ಸತತ ಐದು ಗಂಟೆಗಳ ಕಾಲ ಸರ್ವಪಕ್ಷಗಳ ಮುಖಂಡರ ಸಭೆ ನಡೆಸಿದ ಮುಖ್ಯಮಂತ್ರಿಯವರು, ಪರಿಹಾರ ಕಾರ್ಯ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಬಗ್ಗೆ ಸರ್ವಸಮ್ಮತ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ದಿನಾಂಕ ನಿಗದಿ ಇನ್ನಷ್ಟೇ ಆಗಬೇಕಿದೆ ಎಂದು ಪ್ರಕಟಿಸಿದರು.ರಾಜ್ಯದಲ್ಲಿ ಬರದಿಂದ 2,600 ಕೋಟಿ ರೂಪಾಯಿ ಹಾನಿ ಆಗಿದೆ ಎಂಬ ವರದಿಯನ್ನು ಈ ಹಿಂದೆ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಬರದಿಂದ ರೂ 4,500 ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ. ಈ ಕುರಿತ ಸಮಗ್ರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಹಾನಿಯ ಒಟ್ಟು ಮೊತ್ತದ ಶೇಕಡ 50ರಷ್ಟನ್ನಾದರೂ ನೆರವು ನೀಡುವಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಲಾಗುವುದು ಎಂದರು.ರೇಷ್ಮೆ ಬೆಳೆಗಾರರ ಸಮಸ್ಯೆಗೆ ವಿಶೇಷ ಪ್ಯಾಕೇಜ್ ನೀಡುವಂತೆಯೂ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಕರ್ನಾಟಕದ ರೇಷ್ಮೆ ಬೆಳೆಗಾರರಿಗೆ 1,000 ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಘೋಷಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಅದನ್ನು ತಕ್ಷಣವೇ ಪ್ರಕಟಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಲಾಗುವುದು ಎಂದು ಸದಾನಂದ ಗೌಡ ತಿಳಿಸಿದರು.ಕೇಂದ್ರಕ್ಕೆ ಪ್ರಸ್ತಾವ: ಬರಪೀಡಿತ ತಾಲ್ಲೂಕುಗಳ ರೈತರು ಪಡೆದಿರುವ ಬೆಳೆಸಾಲ ಮನ್ನಾ ಮಾಡುವ ಕುರಿತು ಪ್ರಶ್ನಿಸಿದಾಗ, `ಬೆಳೆ ಸಾಲ ಮನ್ನಾ ಮಾಡಲು ಪೂರಕವಾಗಿ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು~ ಎಂದು ಪ್ರತಿಕ್ರಿಯಿಸಿದರು.ಬರ ಪರಿಹಾರ ಕಾರ್ಯದ ಬಗ್ಗೆ ವಿರೋಧ ಪಕ್ಷಗಳು ಮತ್ತು ಇತರೆ ವಲಯದ ಮುಖಂಡರಿಂದ ಸಕಾರಾತ್ಮಕ ಸಲಹೆ ಲಭ್ಯವಾಗಿದೆ. ಈವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸಮಾಧಾನದ ಭಾವನೆ ವ್ಯಕ್ತಪಡಿಸಿದ್ದಾರೆ.ಕೆಲವು ಕಡೆಗಳಲ್ಲಿ ಪರಿಹಾರ ಕಾಮಗಾರಿಯಲ್ಲಿ ಲೋಪ ಇದೆ ಎಂಬುದಾಗಿ ವಿರೋಧ ಪಕ್ಷದ ನಾಯಕರು ತಿಳಿಸಿದ್ದಾರೆ. ಅವುಗಳ ನಿವಾರಣೆಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಾರಂಭವಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈ ವಾರ ಹೆಚ್ಚಿನ ಮಳೆಯಾಗಲಿದೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.