ಶನಿವಾರ, ಮೇ 8, 2021
26 °C

ಬರ ನಿರ್ವಹಣೆಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ಕೆಲವೆಡೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದ್ದು, ಮೇವಿನ ಕೊರತೆ ಕೆಲವೇ ಗ್ರಾಮಗಳಲ್ಲಿ ಕಂಡುಬಂದಿದೆ. ಆದರೆ, ಎಲ್ಲಿಯೂ ನೀರಿಗೆ ಹಾಹಾಕಾರ ಇಲ್ಲ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಹೆಚ್ಚು ಸಮಸ್ಯೆ ಇರುವುದು ತಿಳಿದುಬಂದಿದೆ.ಸಿರುಗುಪ್ಪ ತಾಲ್ಲೂಕಿನಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಲಾಗಿದೆ. ಸಂಡೂರು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಂಡುಬಂದಿದ್ದ ನೀರಿನ ತೊಂದರೆಯನ್ನು ನಿವಾರಿಸಲಾಗಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಎದುರಾಗಿದ್ದ ಮೇವಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಜಿಲ್ಲೆಯ 7 ತಾಲ್ಲೂಕುಗಳನ್ನು `ಬರಪೀಡಿತ~ ಪ್ರದೇಶ ಎಂದು ಘೋಷಣೆ ಮಾಡಿರುವ ಸರ್ಕಾರ, ಕುಡಿಯುವ ನೀರು, ಮೇವು ಸೇರಿದಂತೆ ಎಲ್ಲ ಅಗತ್ಯ  ಸೌಕರ್ಯ ಒದಗಿಸಲು ಈ ಹಿಂದೆಯೇ ರೂ 6 ಕೋಟಿ ಬಿಡುಗಡೆ ಮಾಡಿದೆ.ಈಗಾಗಲೇ ಈ ಅನುದಾನದಲ್ಲಿ ವಿವಿಧ ರೀತಿಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮತ್ತೆ ರೂ 1 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.ಕೇಂದ್ರಕ್ಕೆ ಪ್ರಸ್ತಾವನೆ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಕಾಮಗಾರಿ ಕೈಗೆತ್ತಿಕೊಂಡು ಜನತೆಗೆ ಉದ್ಯೋಗ ನೀಡುವ ಹಿನ್ನೆಲೆಯಲ್ಲಿ ಎರಡನೇ ಹಂತದ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಕೃತಿ ವಿಕೋಪ ಅನುದಾನವನ್ನು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗೂ, ಕೊಳವೆ ಬಾವಿ ತೋಡಿಸುವುದಕ್ಕೂ ಬಳಸಲು ಅನುಮತಿ ಇರುವುದರಿಂದ ಜನತೆಗೆ ಉದ್ಯೋಗ ನೀಡಲು ಖಾತರಿ ಯೋಜನೆಯಲ್ಲೇ ಅವಕಾಶವಿದೆ ಎಂದು ಅವರು ತಿಳಿಸಿದರು.ಆಯಾ ಶಾಸಕರ ನೇತೃತ್ವದ ಟಾಸ್ಕ್‌ಫೋರ್ಸ್ ಸಮಿತಿಗಳು ಸಲ್ಲಿಸಿರುವ ಶಿಫಾರಸ್ಸಿನಂತೆ ಜಿಲ್ಲೆಯದ್ಯಂತ 518 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಗೋಶಾಲೆ ತೆರೆಯುವ ಕುರಿತು ಪ್ರಸ್ತಾಪ ಬಂದಿತ್ತು. ಆದರೆ, ಅಲ್ಲಿ ಗಂಭೀರ ಸಮಸ್ಯೆ ಇರದ್ದರಿಂದ ಸದ್ಯಕ್ಕೆ ಪ್ರಸ್ತಾವ ಕೈಬಿಡಲಾಗಿದೆ ಎಂದು ಅವರು ಹೇಳಿದರು.ಜಿಲ್ಲೆಯಲ್ಲಿ ಎಲ್ಲೂ ಮೇವಿನ ಕೊರತೆ ಎದುರಾಗಿಲ್ಲ. ಮುಂದಿನ 39 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದ್ದು, ಜಾನುವಾರುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಅಂತರ್ ರಾಜ್ಯಕ್ಕೆ ಮೇವು ಸಾಗಣೆ ಮಾಡಬಾರದು ಎಂಬ ಉದ್ದೇಶದಿಂದ ಒಟ್ಟು 5 ಕಡೆ ಚೆಕ್‌ಪೊಸ್ಟ್ ಸ್ಥಾಪಿಸಲಾಗಿದೆ. ಸರ್ಕಾರ ಬರ ನಿರ್ವಹಣೆಗೆ ಸಾಕಷ್ಟು ಅನುದಾನ ನೀಡಿದ್ದು, ಆಯಾ ಗ್ರಾಮ ಪಂಚಾಯಿತಿಗಳಿಗೆ 13ನೇ ಹಣಕಾಸು ಯೋಜನೆ ಅಡಿ ಅನುದಾನ ನೀಡಲಾಗುವುದು ಎಂದು ವಿವರಿಸಿದರು.ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಸಂಬಂಧ ಸರ್ಕಾರ ರೂ 82 ಲಕ್ಷ ಬಿಡುಗಡೆ ಮಾಡಿದೆ. 2011-12 ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 222 ಕೊಳವೆ ಬಾವಿ ಕೊರೆಯಲು ರೂ 1.55 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಕುರಿತ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು.ಸರ್ಕಾರ ಬಿಡುಗಡೆ ಮಾಡಿರುವ ರೂ 6 ಕೋಟಿ ಅನುದಾನದಲ್ಲಿ ಬಳ್ಳಾರಿ ತಾಲ್ಲೂಕಿನಲ್ಲಿ ರೂ 1.44 ಕೋಟಿ ವೆಚ್ಚದಲ್ಲಿ 42 ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಿರುಗುಪ್ಪದಲ್ಲಿ ರೂ 1.19 ಕೋಟಿ ವೆಚ್ಚದ 16, ಸಂಡೂರಿನಲ್ಲಿ ರೂ 91 ಲಕ್ಷದಲ್ಲಿ 52, ಹೊಸಪೇಟೆಯಲ್ಲಿ ರೂ 56 ಲಕ್ಷದ 27, ಹಗರಿ ಬೊಮ್ಮನಹಳ್ಳಿಯಲ್ಲಿ ರೂ 1.96 ಕೋಟಿಯಲ್ಲಿ 31, ಹಡಗಲಿಯಲ್ಲಿ ರೂ 1.12 ಕೋಟಿಯಲ್ಲಿ 31 ಹಾಗೂ ಕೂಡ್ಲಿಗಿ ತಾಲ್ಲೂಕಿನಲ್ಲಿ ರೂ 3.20 ಕೋಟಿ ಅನುದಾನ ಬಳಸಿ 29 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಸ್ವಾಸ್ ತಿಳಿಸಿದರು.ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಮತ್ತು ದೇವರಹಟ್ಟಿ ಗ್ರಾಮಗಳಲ್ಲಿ ಮೇವಿನ ಕೊರತೆ ಕಂಡು ಬಂದಿರುವುದರಿಂದ ಏಪ್ರಿಲ್ 7ರಂದು 12 ಟನ್ ಮೇವು ಖರೀದಿಸಿ ವಿತರಿಸಲಾಗಿದೆ. ಇನ್ನು 20 ಟನ್ ಮೇವನ್ನು ಗುಡೇಕೋಟೆ ಗ್ರಾಮದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಡೂರು ತಾಲ್ಲೂಕಿನಲ್ಲಿ ದೇವಗಿರಿ ಹತ್ತಿರದ ಕಮ್ಮತೂರು ಗ್ರಾಮದಲ್ಲಿ ಮೇವಿನ ಅಭಾವ ಕಂಡು ಬಂದಿರುವುದರಿಂದ, 55 ಟನ್ ಮೇವು ಖರೀದಿಸಲಾಗಿದೆ ಎಂದು ಹೇಳಿದರು.ಬರದಿಂದ ಎದುರಾಗಿರುವ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಸಹಾಯವಾಣಿ ತೆರೆಯಲಾಗಿದೆ. ಇದುವರೆಗೆ 115 ದೂರುಗಳು ಬಂದಿದ್ದು, 105 ಕಡೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ. ಸಿಇಒ ಮಂಜುನಾಥ ನಾಯಕ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.