ಸೋಮವಾರ, ಏಪ್ರಿಲ್ 19, 2021
30 °C

ಬರ ನಿರ್ವಹಣೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬರ ನಿರ್ವಹಣೆಗೆ ಹಣ ನೀಡಿ ಎಂದು ಕೇಂದ್ರ ಸರ್ಕಾರವನ್ನು ಅಂಗಲಾಚುವ ಬದಲು ಸಂಪನ್ಮೂಲ ಕ್ರೋಡೀಕರಿಸಲು ಶ್ರಮಿಸಿ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬರ ನಿರ್ವಹಿಸುವ ರೀತಿ ತಿಳಿದಿಲ್ಲ. ಮಳೆ ಅವಕೃಪೆ ತೋರಿದ ತಕ್ಷಣ ಅರ್ಜಿ ಹಿಡಿದು ಕೇಂದ್ರ ಸರ್ಕಾರದ ಬಾಗಿಲು ಬಡಿಯುತ್ತದೆ. ಹುಸಿ ಬರಗಾಲ, ಹಸಿ ಬರಗಾಲದ ನಡುವಿನ ವ್ಯತ್ಯಾಸ ಕೂಡ ಸರ್ಕಾರಕ್ಕೆ ತಿಳಿದಂತೆ ಕಾಣುತ್ತಿಲ್ಲ. ಬರ ನಿರ್ವಹಣೆಗೆ ಬೇಕಾದ ರೂ.15 ಸಾವಿರ ಕೋಟಿ ಸರ್ಕಾರದ ಬೊಕ್ಕಸದಲ್ಲಿ ಇಲ್ಲ ಎಂದು ಆರೋಪಿಸಿದರು.ರೈತ ಪರ ನೀತಿಗಳನ್ನು ರೂಪಿಸಿದ್ದರೆ ಬರ ಎದುರಿ ಸಲು ಈ ಪರಿ ಪರದಾಡಬೇಕಾಗದ ಅಗತ್ಯ ಇರುತ್ತಿ ರಲಿಲ್ಲ. ರೈತರಿಗೆ ಸಂಬಂಧಿಸಿದ ಯಾವ ಕಾನೂನುಗಳು ಸರ್ಕಾರ ಬಳಿ ಇಲ್ಲ. ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕಾಗಿ ಸಮಿತಿಗಳನ್ನು ರಚಿಸುವ ರೀತಿಯಲ್ಲಿಯೇ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಕುರಿತು ಸಮೀಕ್ಷೆ ನಡೆಸಬೇಕು. ಬರಕ್ಕೆ ತುತ್ತಾಗಿರುವ ರೈತರ ಸಾಲ ಮನ್ನಾ ಮಾಡಿ, ಗುಳೆ ಹೋಗುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.ಬರ ನಿರ್ವಹಣೆಗಾಗಿ ಪ್ರತ್ಯೇಕ ತೆರಿಗೆ ವಿಧಿಸುವುದು ಸೂಕ್ತ. ವ್ಯಾಟ್ ಜೊತೆಗೆ ರೂ.50 ಪೈಸೆ ಹೆಚ್ಚುವರಿ ತೆರಿಗೆ ವಸೂಲಿ ಮಾಡಬೇಕು. ಅದರಲ್ಲಿ ಬರ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು. ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದ್ದು, ರಸಗೊಬ್ಬರದ ಬೆಲೆ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ವಾಣಿಜ್ಯ ಬೆಳೆಗಳಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ಅಂತರ ರಾಷ್ಟ್ರೀಯ ಸಕ್ಕರೆ ನೀತಿಗೆ ಅನುಗುಣವಾಗಿ ಕಬ್ಬು ದರ ನಿಗದಿ ಮಾಡಿಲ್ಲ.ಹಾವೇರಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 19 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ವಬ್ಯಾಂಕಿನ ಆರ್ಥಿಕ ಸಲಹೆಗಾರರಾಗಿದ್ದ ಮನಮೋಹನ್‌ಸಿಂಗ್ ಅವರು ಈ ದೇಶದ ಪ್ರಧಾನಿ ಆದರೂ ರೈತರ ಪರಿಸ್ಥಿತಿಗಳು ಬದಲಾಗಲಿಲ್ಲ ಎಂದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲ ಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡ ಎಂ.ಎಸ್. ಅಶ್ವತ್ಥ್ ನಾರಾಯಣರಾಜೇ ಅರಸ್ ಹಾಜರಿದ್ದರು.

21ಕ್ಕೆ ಧಾರವಾಡದಲ್ಲಿ ಸಮಾವೇಶ

ಮೈಸೂರು: ನರಗುಂದ, ನವಲಗುಂದ ರೈತ ಬಂಡಾಯ ನಡೆದು 32 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ರೈತ ಸಂಘ ಜುಲೈ 21ರಂದು ಧಾರವಾಡದ ಕಡಪಾ ಮೈದಾನ ದಲ್ಲಿ ಬೃಹತ್ ಸಮಾವೇಶ ಏರ್ಪಡಿ ಸಿದೆ. ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಹಮ್ಮಿ ಕೊಳ್ಳಲಾಗಿದೆ ಎಂದು ಪುಟ್ಟಣ್ಣಯ್ಯ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.