ಮಂಗಳವಾರ, ಮೇ 11, 2021
22 °C

ಬರ ನಿರ್ವಹಣೆ; ಸರ್ಕಾರ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: `ರಾಜ್ಯದ 123 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿ ಆರು ತಿಂಗಳುಗಳೇ ಕಳೆದಿದ್ದರೂ ರಾಜ್ಯ ಸರ್ಕಾರ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ತುರ್ತಾಗಿ ಪರಿಹಾರ ಕಾಮಗಾರಿಯನ್ನು ಅನುಷ್ಠಾನಗೊಳಿಸದ ಸರ್ಕಾರ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತ ಕಾಲವ್ಯಯ ಮಾಡುತ್ತಿದೆ~ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.`ರಾಜ್ಯದಲ್ಲಿ ಬರಗಾಲ ಆವರಿಸಿ ಆರು ತಿಂಗಳುಗಳೇ ಕಳೆದಿವೆಯಾದರೂ ರಾಜ್ಯ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಾಟಾಚಾರಕ್ಕೆ ಬರ ಗಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಮತ್ತು ಸಚಿವರು ಇದುವರೆಗೆ ಪರಿಹಾರ ಕಾಮಗಾರಿಗೆ ಚಾಲನೆ ನೀಡಿಲ್ಲ. ಆಹಾರ ಮತ್ತು ನೀರಿಲ್ಲದೇ ಸಂತ್ರಸ್ತರಾಗಿರುವ ಜನರಲ್ಲಿ ಆಶಾಭಾವನೆ ಮೂಡಿಸದ ಸರ್ಕಾರವು ಬರ ಗಾಲಕ್ಕೂ ಮತ್ತು ತನ್ನ ಅಸ್ತಿತ್ವಕ್ಕೆ ಯಾವುದೇ ರೀತಿ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ~ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.`ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ 55.90 ಸಾವಿರಾರು ಎಕರೆ ಮುಂಗಾರು ಕೃಷಿ ಬೆಳೆ ಮತ್ತು 30.28 ಸಾವಿರಾರು ಎಕರೆ ಹಿಂಗಾರು ಕೃಷಿ ಬೆಳೆ ನಷ್ಟವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಸುಮಾರು 4853 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿದೆ ಎಂದು ಕಂದಾಯ ಅಧಿಕಾರಿಗಳೇ ವರದಿ ಸಲ್ಲಿಸಿದ್ದಾರೆ. ನೀರಿಲ್ಲದ ಕಾರಣ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರೇ ಸಚಿವರನ್ನು ಮತ್ತು ಅಧಿಕಾರಿಗಳನ್ನು ಘೇರಾವ್ ಮಾಡಿದ ಘಟನೆಗಳು ನಡೆದಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ~ ಎಂದು ಅವರು ಕಟುವಾಗಿ ಟೀಕಿಸಿದರು.`ರೆಸಾರ್ಟ್ ರಾಜಕೀಯದಲ್ಲಿ ಮಗ್ನರಾಗಿರುವ ಸಚಿವರು ಮತ್ತು ರಾಜಕಾರಣಿಗಳು ಜನರ ಬಳಿ ಹೋಗಲು ಮತ್ತು ಸಂಕಷ್ಟಗಳನ್ನು ಆಲಿಸಲು ಬಯ ಸುತ್ತಿಲ್ಲ. ಕ್ಷೇತ್ರದಲ್ಲಿದ್ದರೆ, ಒಂದಿಲ್ಲೊಂದು ಸಂಕಷ್ಟ ಆಲಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸಚಿವರು ಕ್ಷೇತ್ರದಲ್ಲಿ ಉಳಿಯದೇ ರೆಸಾರ್ಟ್‌ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಸರ್ಕಾರವನ್ನು ತೀವ್ರ ಸ್ವರೂಪದಲ್ಲಿ ತರಾಟೆ ತೆಗೆದುಕೊಂಡು ಬುದ್ಧಿ ಕಲಿಸಬೇಕಿದ್ದ ವಿರೋಧ ಪಕ್ಷದವರೂ ಕೂಡ ಸತ್ವವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವಂತಹ ಹೋರಾಟ ರೂಪಿಸುತ್ತಿಲ್ಲ~ ಎಂದು ಅವರು ಹೇಳಿದರು.`ಮೂರು ವರ್ಷಗಳ ಹಿಂದೆ ರಾಜ್ಯದ ಕೆಲವಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದಾಗ ಬಿಜೆಪಿ ಸರ್ಕಾರದ ಕೆಲ ಸಚಿವರು ಮತ್ತು ಶಾಸಕರು ಮೈಸೂರಿನಲ್ಲಿ ಆರ್‌ಎಸ್‌ಎಸ್ ನಾಯಕರಿಂದ ಪಾಠವನ್ನು ಬೋಧಿಸಿಕೊಳ್ಳುತ್ತಿದ್ದರು.

 

ಬರ ಪರಿಸ್ಥಿತಿ ಎದುರಾಗಿರುವ ಈ ಸಂದರ್ಭದಲ್ಲಿ ರೆಸಾರ್ಟ್‌ನಲ್ಲಿ ಕೂತುಕೊಂಡು ಅಧಿಕಾರಕ್ಕಾಗಿ ಹಪಹಪಿ ಸುತ್ತಿದ್ದಾರೆ. ಸರ್ಕಾರ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿರುವ ಕಾರಣದಿಂದಲೇ ಇಂತಹ ಭೀಕರ ಪರಿಸ್ಥಿತಿ ಸೃಷ್ಟಿಯಾಗಿದೆ~ ಎಂದು ಅವರು ತಿಳಿಸಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ ಮತ್ತು ರವಿಚಂದ್ರರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.