ಗುರುವಾರ , ಮೇ 13, 2021
39 °C

ಬರ: ಪಡಿತರ ಬಿಡುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯಲ್ಲಿ ಸುಮಾರು 37,328 ಪಡಿತರ ಚೀಟಿದಾರರಿಗೆ ಪಡಿತರದಾರರ ಚೀಟಿಯಲ್ಲಿ ಹೆಸರು ದಾಖಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಪಡಿತರ ವಿತರಣೆ ಮಾಡಿಲ್ಲ ಎಂಬುದು ಈಗ ಟೀಕೆಗೆ ಗುರಿಯಾಗಿದೆ.ಜಿಲ್ಲೆಯಲ್ಲಿ ಸದಸ್ಯಕ್ಕೆ ಬರಗಾಲವಿದೆ. ಈ ಹಂತದಲ್ಲಿ ಪಡಿತರ ಬಿಡುಗಡೆ ಮಾಡದೇ ಇರುವುದು ಬಡಜನರ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಪಡಿತರ ವಿತರಕರ ಸಂಘ ಅಭಿಪ್ರಾಯಪಟ್ಟಿದ್ದಾರೆ, ಪಡಿತರ ವಿತರಣೆ ಮಾಡದೇ ಇದ್ದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾದಿತು ಎಂದು ಎಚ್ಚರಿಸಿದೆ.ಪಡಿತರದಾರರ ಹೆಸರು ಪಟ್ಟಿಯಲ್ಲಿ ಲಿಂಕ್ ಆಗಿಲ್ಲ ಎಂಬ ಕಾರಣಕ್ಕೆ ಪಡಿತರ ತಡೆಹಿಡಿಯಲಾಗಿದೆ. ಆದರೆ, ಇದಕ್ಕೆ ಪಡಿತರ ವಿತರಕರು ಕಾರಣರಲ್ಲ. ಪಡಿತರದಾರರರ ಹೆಸರು ಇಂಟರ್‌ನೆಟ್‌ನಲ್ಲಿ ದಾಖಲು ಮಾಡುವಲ್ಲಿ ಸಿಬ್ಬಂದಿಯೇ ಕ್ರಮ ಕೈಗೊಂಡಿಲ್ಲ ಎಂದು ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ (ಕೆ.ಕೆ) ಹೇಳಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ತಕ್ಷಣದಲ್ಲಿ ಆಹಾರ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡದೇ ಇದ್ದಲ್ಲಿ ಗ್ರಾಮಗಳಲ್ಲಿ ಜೀವನ ಮಾಡುವುದೇ ದುಸ್ತರವಾಗಲಿದ್ದು, ಗಲಭೆಯಾಗುವ ಸಂಭವವು ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಸರ್ಕಾರ ಈ ಬಗೆಗೆ ಕೂಡಲೇ ಗಮನಹರಿಸಿ ಆದಷ್ಟು ಶೀಘ್ರ ಪಡಿತರ ವಿತರಿಸಲು, ಏಪ್ರಿಲ್ ಮಾಹೆಯಲ್ಲಿ ಪಡಿತರ ತಡೆಹಿಡಿದಿರುವ 37,328 ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.ಬರ ಪರಿಸ್ಥಿತಿ ವೀಕ್ಷಿಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ಅವರಿಗೂ ರಾಮಕೃಷ್ಣೇಗೌಡ, ಶ್ರೀನಿವಾಸ್, ಸತೀಶ್, ಪರಶುರಾಮ್, ಮುದ್ದೇಗೌಡ ಮತ್ತಿತರರು ಮನವಿಯನ್ನು ಸಲ್ಲಿಸಿದರು.ಕಾಂಗ್ರೆಸ್ ಎಚ್ಚರಿಕೆ: ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರವೇ ಈಗ ಪಡಿತರ ತಡೆಹಿಡಿದಿರುವುದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಘಟಕದ ವಕ್ತಾರ ಟಿ.ಎಸ್. ಸತ್ಯಾನಂದ ಅವರು, ತಾಂತ್ರಿಕ ಕಾರಣ ತೋರಿಸಿ 37,865 ಅರ್ಹ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥಗಳ ವಿತರಿಸದೆ ತಡೆ ಹಿಡಿದಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ.ಪಂಚತಂತ್ರ ತಂತ್ರಾಂಶದಲ್ಲಿ ವಿವರಗಳು ಅಪ್‌ಲೋಡ್ ಆಗಿಲ್ಲ ಎಂಬ ಕಾರಣ ಒಡ್ಡಿ ಪಡಿತರ ತಡೆಹಿಡಿಯಲಾಗಿದೆ. ಜಿಲ್ಲಾಡಳಿತ ಈ ಬಗೆಗೆ ಏಪ್ರಿಲ್ 5ರಂದು ಪತ್ರ ಬರೆದಿದ್ದರೂ ಕ್ರಮ ಜರುಗಿಸಿಲ್ಲ. ಇನ್ನಾದರೂ ಪಡಿತರ ಬಿಡುಗಡೆಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ, ಧರಣಿ ಅನಿವಾರ್ಯ ಆಗಬಹುದು ಎಂದು ಹೇಳಿದ್ದಾರೆ.ಈ ಬಗೆಗೆ ಗಮಹರಿಸಬೇಕಾದ ಉಸ್ತುವಾರಿ ಸಚಿವ ಆರ್. ಅಶೋಕ್ ಅವರು ಕೇವಲ ಕಾಟಾಚಾರಕ್ಕೆ ಒಂದು ಗಂಟೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಗಂಭೀರ ಸಮಸ್ಯೆಯ ಬಗೆಗೆ ಗಮನಹರಿಸಲಿ ಎಂದಿದ್ದಾರೆ.ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಹೀಗೇ ಮುಂದುವರಿದರೆ ಜಿಲ್ಲಾ ಕಾಂಗ್ರೆಸ್ “ಅಶೋಕ್ ಹಠಾವೋ, ಮಂಡ್ಯ ಬಚಾವೋ~ ಆಂದೋಲನ ನಡೆಸಿ ಪಾಠ ಕಲಿಸುವುದು ಅನಿವಾರ್ಯ ಆಗಲಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.