ಶನಿವಾರ, ಮೇ 8, 2021
26 °C

ಬರ ಪರಿಶೀಲನೆ ಹೆಸರಲ್ಲಿ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದವರು ಬರ ಪರಿಶೀಲನೆ ಹೆಸರಲ್ಲಿ ನಾಟಕ ಮಾಡುತ್ತಿದ್ದಾರೆ. ಕಾರಿನಲ್ಲಿ ಕುಳಿತು ಊರೂರು ಸುತ್ತುವ ಅವರಿಗೆ ಜನರ ನಿಜಸ್ಥಿತಿ ಹೇಗೆ ಗೊತ್ತಾಗಬೇಕು ಎಂದು ಮಾಜಿ ಸಚಿವರು ಮತ್ತು ಹಾಲಿ ಶಾಸಕರಾದ ಬಿ.ಶ್ರೀರಾಮುಲು ಟೀಕಿಸಿದರು.ಇಲ್ಲಿನ ರಥ ಮೈದಾನದಲ್ಲಿ ಮಂಗಳವಾರ ರಾಜ್ಯಾದ್ಯಂತ 54 ದಿನಗಳವರೆಗೆ ನಡೆಯುವ 921 ಕಿ.ಮೀ. ಪಾದಯಾತ್ರೆಗೆ ಚಾಲನೆ ಕೊಡುವ ಮೊದಲು ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ದನಕರುಗಳಿಗೆ ಮೇವಿಲ್ಲ. ಜನರಿಗೆ ಕುಡಿಯಲು ನೀರಿಲ್ಲ. ಆದರೂ ಯಾವುದೇ ಸಚಿವರಾಗಲಿ,        ಮುಖ್ಯಮಂತ್ರಿ ಈ ಕಡೆ ನೋಡುತ್ತಿಲ್ಲ. ಅಧಿಕಾರಿಗಳು ಕಚೇರಿ ಬಿಟ್ಟು ಕದಲುತ್ತಿಲ್ಲ.

 

ಸಚಿವರುಗಳು ನಿಷ್ಕಾಳಜಿ ತೋರುತ್ತಿದ್ದರೆ, ಮುಖ್ಯಮಂತ್ರಿಗಳು ಜನರ ಬಳಿಗೆ ಹೋಗದೆ ವಿಡಿಯೋ ಕಾನ್ಫರನ್ಸಿಂಗ್ ಮೂಲಕ ಬರ ಪರಿಸ್ಥಿತಿ ಅಧ್ಯಯನ ಮಾಡುತ್ತಾರೆ. ಹೀಗಾದರೆ ಜನತೆಯ ಸಂಕಟ ದೂರ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರದ ಬಜೆಟ್ ಬರೀ ಹೆಸರಿಗಷ್ಟೇ ಕೃಷಿ ಬಜೆಟ್ ಆಗಿದೆ.ಬಡವರ, ರೈತರ ಮತ್ತು ಹಿಂದುಳಿದವರ ಉದ್ಧಾರಕ್ಕಾಗಿ ಯಾವುದೇ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿಲ್ಲ. ಸಾವಯವ ಕೃಷಿಗೆ ನೂರಾರು ಕೋಟಿ ಕೊಡಲಾಗಿದ್ದರೂ ಅದರಿಂದ ಉಪಯೋಗವಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿದ್ದು ಸರ್ಕಾರ ಇದೇಯೋ ಇಲ್ಲವೋ ಎಂಬಂತಹ ಪರಿಸ್ಥಿತಿ ಇದೆ ಎಂದರು.ಹೈದರಾಬಾದ್ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ 371 ನೇ ಕಾಯ್ದೆಯಲ್ಲಿ ತಿದ್ದುಪಡಿ ತರುವುದು ಅಗತ್ಯವಿದೆ. ನಂಜುಂಡಪ್ಪ ವರದಿ ಪ್ರಕಾರ  ಅಭಿವೃದ್ಧಿ ಕೈಗೊಳ್ಳಬೇಕಾಗಿದೆ.ಇದಕ್ಕಾಗಿ ತಾವು ಸತತವಾಗಿ ಹೋರಾಟ ನಡೆಸುತ್ತೇನೆ ಎಂದರು. ತಾವು ಸಚಿವರಾಗಿದ್ದಾಗ 108 ಅಂಬ್ಯುಲನ್ಸ್ ವ್ಯವಸ್ಥೆ ಮತ್ತು ವಾಜಪೇಯಿ ಆರೋಗ್ಯಶ್ರೀ ಯೋಜನೆ ಜಾರಿಗೆ ತಂದಿದ್ದು ಇದರಿಂದ ಬಡವರಿಗೆ ಅನುಕೂಲ ಆಗಿದೆ. ಮುಂದೆಯೂ ಜನರ ಪರವಾಗಿ ಕೆಲಸ ಮಾಡಲಿದ್ದು ತಮಗೆ ಎಲ್ಲರೂ ಸಹಕರಿಸಬೇಕು ಎಂದರು.ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಂಸದರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಹಿಂದುಳಿದವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ, ಶಾಸಕ ಸುರೇಶಬಾಬು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್, ನಟಿ ರಕ್ಷಿತಾ, ಮೃತ್ಯುಂಜಯ ಜಿನಗಾ, ಕೊಲ್ಕತ್ತದ ಅಬುಲ್ ರಹೇಮಾನಿ, ಸಂಜಯ ಬೆಟಗೇರಿ    ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರರೆಡ್ಡಿ ಗೋಕುಳ, ಗುಂಡಾರೆಡ್ಡಿ, ಖಲೀಲ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು. ಗುರುರಾಜ ಹೊಸಕೋಟೆ ಮತ್ತು ಪಂಚಾಕ್ಷರಿ ಗವಾಯಿ ಸಂಗೀತ ಶಾಲೆಯ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಶ್ರೀರಾಮುಲು ಅವರಿಗೆ ಬಸವಣ್ಣನ ಪ್ರತಿಮೆ ಕೊಟ್ಟು ಸನ್ಮಾನಿಸಲಾಯಿತು. ಪಾಂಚಜನ್ಯ ಊದುವ ಮೂಲಕ ಪಾದಯಾತ್ರೆಗೆ ಚಾಲನೆ ಕೊಡಲಾಯಿತು. ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಸಹ ಈ ಸಂದರ್ಭದಲ್ಲಿ ಹಾರಿ ಬಿಡಲಾಯಿತು.ಪಾದಯಾತ್ರೆ ಇಲ್ಲಿಂದ ನಾರಾಯಣಪುರ, ರಾಜೋಳಾ ಮಾರ್ಗವಾಗಿ ಹುಮನಾಬಾದ್ ಕಡೆಗೆ ಹೊರಟಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.