ಬುಧವಾರ, ಮೇ 12, 2021
18 °C

ಬರ ಪರಿಸ್ಥಿತಿ ನಿರ್ವಹಣೆಗೆ 500 ಕೋಟಿ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ರಾಜ್ಯದಲ್ಲಿ ಎದುರಾಗಿರುವ ಭೀಕರ ಪರ ಪರಿಸ್ಥಿತಿ ನಿವಾರಣೆ ಗಾಗಿ ಕೇಂದ್ರ ಸರ್ಕಾರ ವಿಶೇಷ ಅನುದಾನದಲ್ಲಿ ಶೀಘ್ರ 500 ಕೋಟಿ ರೂ.ಬಿಡುಗಡೆಗೊಳಿಸಬೇಕು. ರಾಜ್ಯದ ಭೀಕರ     ಬರದ ಸ್ಥಿತಿಗತಿಗಳನ್ನು ಮನವರಿಕೆ     ಮಾಡಿಕೊಡುವುದಕ್ಕಾಗಿ ರಾಜ್ಯದಿಂದ ನಿಯೋಗ ಕೊಂಡೊಯ್ಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಆಗ್ರಹಿಸಿದರು.ಬುಧವಾರ ಸಮೀಪದ   ನಾಗೇಂದ್ರಗಡ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಧಾನಸೌಧದಲ್ಲಿ ಕುಳಿತು ವೀಡಿಯೋ ಕಾನ್ಪರೆನ್ಸ್           ನಡೆಸುವುದರಿಂದ ರಾಜ್ಯಕ್ಕೆ ಎದುರಾಗಿರುವ ಬರ ಪರಿಸ್ಥಿತಿ ಅರ್ಥವಾಗುವುದಿಲ್ಲ. ಬದಲಾಗಿ ಪ್ರದೇಶವಾರು ಪರಿಶೀಲನೆ ನಡೆಸಬೇಕು ಅಂದಾಗ ಮಾತ್ರ ಭೀಕರ ಬರಗಾಲದಲ್ಲಿ ರೈತ, ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ನೈಜ ಚಿತ್ರಣ ದೊರೆಯಲು ಸಾಧ್ಯ ಎಂದು ಪರೋಕ್ಷವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ರಾಜ್ಯ 125 ತಾಲ್ಲೂಕುಗಳಲ್ಲಿ ಎದುರಾಗಿರುವ ಬರದಿಂದಾಗಿ ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ಹೊಟ್ಟು-ಮೇವುಗಳಿಗೆ ಹಾಹಾಕಾರ ಉಂಟಾಗಿ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಗರಿಕರ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ಕೇಂದ್ರದ ಅನುದಾನವನ್ನು ಎದುರು ನೋಡದೆ ತಾತ್ಕಾಲಿಕ ಪ್ರತಿ ಜಿಲ್ಲೆಗೆ 5 ಕೋಟಿ ಹಣ ಬಿಡುಗಡೆಗೊಳಿಸಿ ನಾಗರಿಕರಿಗೆ ಸ್ಪಂದಿಸಬೇಕು ಎಂದರು.ಸರ್ಕಾರದ ಸಂಪತ್ತು ರಾಜ್ಯದ ಜನತೆಯ ಸ್ವತ್ತು. ಹೀಗಾಗಿ ರಾಜ್ಯ ಸರ್ಕಾರ ರೈತರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ರಾಜ್ಯದಲ್ಲಿ ಎದುರಾಗಬಹುದಾದ ಬರ ಪರಿಸ್ಥಿತಿ ಬಗ್ಗೆ ಮುಂಚಿತವಾಗಿ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಹೀಗಾಗಿ ಬರ ಸ್ಥಿತಿ ಎದುರಿಸಲು ಅಗತ್ಯವಿರುವ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಕಲ ರೀತಿಯಲ್ಲಿಯೂ ಸನ್ನದ್ದವಾಗಬೇಕಾಗಿದೆ ಎಂದರು.ಮುಂಬರುವ ವರ್ಷಗಳಲ್ಲಿ ಎದುರಾಗಬಹುದಾದ ಬರಗಾಲವನ್ನು ಸಮರ್ಥವಾಗಿ ಎದುರಿಸುವ ನಿಟ್ಟನಲ್ಲಿ ಕೆರೆಗಳ ನಿರ್ಮಾಣ, ಸದ್ಯ ಇರೋ ಕೆರೆಗಳಲ್ಲಿನ ಹೂಳೆತ್ತಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಜಾನುವಾರುಗಳ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳುವುದರ ಮೂಲಕ ಶಾಶ್ವತ ಬರ ಪರಿಹಾರಕ್ಕೆ ಅಗತ್ಯ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂಬ ಸಲಹೆ ನೀಡಿದರು.ಏ.8 ರವರೆಗೆ ರಾಜ್ಯದ ಎಂಟು ಬರ ಜಿಲ್ಲೆಗಳಲ್ಲಿನ ಪ್ರವಾಸ ಪೂರ್ಣಗೊಂಡ ಬಳಿಕ ಏ.9 ಕ್ಕೆ ರಾಜ್ಯ ಸರ್ಕಾರಕ್ಕೆ ಬರದ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಇದಕ್ಕೆ ಸರ್ಕಾರ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸುತ್ತದೆ ಎಂದರು.ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಸರ್ಕಾರ ನೀಡಬೇಕಾಗಿದ್ದ 8 ಕೋಟಿ ಹಣವನ್ನು ನೀಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ರೈತರಿಗೆ ಅನುಕೂಲವಾಗು ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಶೀಘ್ರ ಈರುಳ್ಳಿ ಬೆಳೆಗಾರರ ಹಣ ಪಾವತಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.ರಾಷ್ಟ್ರದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಸರ್ಕಾರ ನಮ್ಮದ್ದು, ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಶಾಸಕ ಕಳಕಪ್ಪ ಬಂಡಿ, ಮಾಜಿ ಸಚಿವ ಸಿ.ಸಿ.ಪಾಟೀಲ, ಕೈಮಗ್ಗ ನಿಗಮದ ಅಧ್ಯಕ್ಷ, ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಜಿ.ಪಂ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್.ಕರಿಗೌಡರ, ಬಿ.ಎಂ.   ಸಜ್ಜನರ, ಮುಂಖಡ ಸಿದ್ದಪ್ಪ ಬಂಡಿ ಮುಂತಾದವರು ಉಪಸ್ಥಿತರಿದ್ದರು.   

ಗೋಶಾಲೆಗೆ ಸೀಮಿತವಾದ ಬರ ಪರಿಶೀಲನೆ ಭೇಟಿ

ಗಜೇಂದ್ರಗಡ: ಬರ ಕಾಮಗಾರಿ ನೆಪದಲ್ಲಿ ರಾಜ್ಯ ಪ್ರವಾಸ ಹೊರಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬುಧವಾರದ ರೋಣ ತಾಲ್ಲೂಕಿನ ಬರ ಕಾಮಗಾರಿ ಪರಿಶೀಲನೆ ಭೇಟಿ ಕೇವಲ ನಾಗೇಂದ್ರಗಡ ಗೋಶಾಲೆ ಒಂದಕ್ಕೆ ಮಾತ್ರ ಸೀಮಿತವಾಗಿತ್ತು.ನಿಗದಿತ ಸಮಯಕ್ಕಿಂತ ಎರಡು ಗಂಟೆ (ಮಧ್ಯಾಹ್ನ 3ಕ್ಕೆ) ತಡವಾಗಿ ಗಜೇಂದ್ರಗಡಕ್ಕೆ ಆಗಮಿಸಿದ ಯಡಿಯೂರಪ್ಪ ಅವರು ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ನಿವಾಸದಲ್ಲಿ ಏರ್ಪಡಿಸಿದ್ದ ಔತನಕೂಟದಲ್ಲಿ ಭಾಗವಹಿಸಿದ ಬಳಿಕ ಸಮೀಪದ ನಾಗೇಂದ್ರಗಡ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದನ್ನು ಹೊರತು ಪಡಿಸಿದರೆ ತಾಲ್ಲೂಕಿನ ಬರಪೀಡಿತ ಪ್ರದೇಶಗಳಿಗೆ ತೆರಳಿ, ರೈತರು ಅನುಭವಿಸುತ್ತಿರುವ ನರಕ ಸದೃಶ್ಯ ಬದುಕಿನ ಚಿತ್ರಣ ತಿಳಿಯುತ್ತಾರೆ. ರೈತ ಸಮೂಹದ ಬರದ ಗೋಳಿನ ಕಥೆ ಆಲಿಸಿ, ರೈತರಿಗೆ ಸಮಸ್ಯೆ ನಿವಾರಣೆಯ ಅಭಯ ನೀಡಿ ಎದೆಗುಂದಿದ ಬದುಕಿಗೆ ಧೈರ್ಯದ ಮಾತುಗಳನ್ನಾಡಿ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂಬ ನಿರೀಕ್ಷೆಗಳನ್ನಿಟ್ಟುಕೊಂಡಿದ್ದ     ತಾಲ್ಲೂಕಿನ ರೈತ ಸಮೂಹದ ಆಶಾ ಭಾವನೆಗೆ ಯಡಿಯೂರಪ್ಪನವರು ತಣ್ಣೀರು ಎರಚಿದರು.ಮಾರ್ಗದುದ್ದಕ್ಕೂ ಅಭಿಮಾನಿಗಳು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗಜೇಂದ್ರಗಡದಿಂದ             ನಾಗೇಂದ್ರಗಡ ಗೋಶಾಲೆಗೆ ತೆರಳುವ ಮಾರ್ಗದುದ್ದಕ್ಕೂ ಇರುವ ಗ್ರಾಮಗಳಲ್ಲಿ ಅಭಿಮಾನಿಗಳು ಯಡಿಯೂರಪ್ಪ ಅವರ ವಾಹನವನ್ನು ತಡೆದು ಕುಶಲೋಪರಿ ವಿಚಾರಿಸಿ, ಜೈಘೋಷಗಳನ್ನು ಹಾಕಿ ಹಾರೈಸಿ ಕಳುಹಿಸುವ ದೃಶ್ಯ ಸಾಮಾನ್ಯವಾಗಿದ್ದವು. ರಾಜೂರ, ಬೆವಿನಕಟ್ಟಿ, ಲಕ್ಕಲಕಟ್ಟಿ, ನಾಗೇಂದ್ರಗಡ ಗ್ರಾಮಸ್ಥರು ತಮ್ಮ ನೆಚ್ಚಿನ ನಾಯಕನಿಗೆ ಅದ್ದೂರಿ ಸ್ವಾಗತ ನೀಡಿ ಶುಭ ಹಾರೈಸಿದರು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.