ಸೋಮವಾರ, ಮೇ 23, 2022
21 °C

ಬರ ಪರಿಹಾರಕ್ಕೆ ರೈತರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ:  ಬರಗಾಲದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಾಗಬೇಕು, ಬರ ಪರಿಹಾರವನ್ನು ತುರ್ತಾಗಿ ವಿತರಿಸಬೇಕು, ರಸಗೊಬ್ಬರ ಬೆಲೆ ಏರಿಕೆ ನಿಯಂತ್ರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡನಾಡು ರಾಜ್ಯ ರೈತ ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ಉಪ ವಿಭಾಗಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, `ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರಬಾರದು~ ಎಂದು ಒತ್ತಾಯಿಸಿದರು.ಸಂಘದ ಅಧ್ಯಕ್ಷ ಮುನಿರಾಮೇಗೌಡ ಮಾತನಾಡಿ, `ಜಿಲ್ಲೆಯಾದ್ಯಂತ ಬರಗಾಲ ಆವರಿಸಿದ್ದು, ರೈತರು ತತ್ತರಿಸಿದ್ದಾರೆ. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೇವಲ ಭರವಸೆ ಸಿಕ್ಕಿದೆಯೇ ಹೊರತು ಯಾವುದೂ ಈಡೇರಿಲ್ಲ. ಮಳೆಯಿಲ್ಲದೆ ಒಂದೆಡೆ ರೈತರು ಕಂಗಾಲಾಗಿದ್ದಾರೆ.ಮತ್ತೊಂದೆಡೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಿದ್ದರೂ ರೈತರತ್ತ ಸರ್ಕಾರ ಕಾಳಜಿ ತೋರುತ್ತಿಲ್ಲ~ ಎಂದು ಆರೋಪಿಸಿದರು.`ಕೃಷಿ ಪರ ಮತ್ತು ರೈತ ಪರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ವಾಗ್ದಾನ ನೀಡಿದಾಗ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವತ್ತ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ತಡೆಗಟ್ಟಬೇಕು~ ಎಂದು ಅವರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.