ಗುರುವಾರ , ಜೂನ್ 17, 2021
29 °C

ಬರ ಪರಿಹಾರ: ಉಸ್ತುವಾರಿ ಸಚಿವರು ಸುಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತೀವ್ರ ಬರದಿಂದ ಕಂಗಾಲಾಗಿರುವ ಜಿಲ್ಲೆಯಲ್ಲಿ ನಡೆದಿರುವ ಬರಪೀಡಿತ ಕಾಮಗಾರಿಗಳ ಪ್ರಗತಿ ಕೇಳಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ `ಸುಸ್ತಾದ~ ಪ್ರಸಂಗ ಬುಧವಾರ ಬರ ಪರಿಹಾರ ಸಮಿತಿ ಸಭೆಯಲ್ಲಿ ನಡೆಯಿತು. ಅಧಿಕಾರಿಗಳ ಮಾಹಿತಿಯಿಂದ ಕಂಗಾಲಾದ ಸಚಿವರ ನೆರವಿಗೆ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಬರಬೇಕಾಯಿತು.ಉಡುಪಿ- ಚಿಕ್ಕಬಳ್ಳಾಪುರ ಲೋಕಸಭಾ ಉಪಚುನಾವಣಾ ಪ್ರಚಾರಕ್ಕೆ ತೆರಳಬೇಕಾಗಿದೆ. ಬರ ಪರಿಹಾರ ಸಮಿತಿಯ ಪೂರ್ಣ ಸಭೆ ನಡೆಸಲು ಸಾಧ್ಯವಿಲ್ಲ. ಮುಂದಿನ ವಾರದಲ್ಲಿ ಮತ್ತೊಮ್ಮೆ ಸಭೆ ಕರೆದು ಸಮಗ್ರ ಚರ್ಚೆ ಮಾಡುತ್ತೇನೆ ಎಂದು ಸಭೆಗೆ ಬಂದಷ್ಟೇ ವೇಗದಲ್ಲಿ ಹೊರಡಲು ಮುಂದಾದ ಉಸ್ತುವಾರಿ ಸಚಿವರನ್ನು ಪಾವಗಡ ಶಾಸಕ ವೆಂಕಟರವಣಪ್ಪ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತರಾಟೆಗೆ ತೆಗೆದು ಕೊಂಡರು. ಶಾಸಕರಿಂದಾಗಿ ಕೆಲ ಹೊತ್ತು ಸಭೆ ನಡೆಸುವ ಅನಿವಾರ್ಯತೆ ಸಚಿವರಿಗೆ ಎದುರಾಯಿತು.ಜನರು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಜನ ಜಾನುವಾರುಗಳಿಗೂ ನೀರಿಲ್ಲ. ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಶಾಸಕ ವೆಂಕಟರವಣಪ್ಪ ಪಟ್ಟು ಹಿಡಿದರು.

ಜಿಲ್ಲೆಯಿಂದ ರೂ. 10 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಸರ್ಕಾರ ಶೀಘ್ರ ಒಪ್ಪಿಗೆ ನೀಡಲಿದೆ ಸಚಿವ ನಿರಾಣಿ ತಿಳಿಸಿದರು. ಪ್ರಸ್ತಾವ ಪಟ್ಟಿ ಬೇಡ, ಇಲ್ಲಿವ ರೆಗೂ ಏನೇನು ಕೆಲಸ ಆಗಿದೆ. ಎಷ್ಟು ಕೊಳವೆ ಬಾವಿ ಕೊರೆಸ ಲಾಗಿದೆ. ಎಷ್ಟು ಕಡೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ ಅದನ್ನು ಹೇಳಿ ಎಂದು ಶಾಸಕರು ಪಟ್ಟುಹಿಡಿದರು.ಇದಕ್ಕೆ ಉತ್ತರಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರಾಜು, ಪಾವಗಡ ತಾಲ್ಲೂಕಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ತುರ್ತು ಕಾರ್ಯಪಡೆ ಕುಡಿಯುವ ನೀರಿಗಾಗಿ ರೂ. 1.27 ಕೋಟಿ ಕ್ರಿಯಾ ಯೋಜನೆ ರೂಪಿಸಿದೆ. ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಕಾಮಗಾರಿಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಇದರಿಂದ ಮತ್ತಷ್ಟು ಕೆರಳಿದ ಶಾಸಕರು ಪ್ರಸ್ತಾವ ವಿಷಯ ಬೇಡ, ಎಲ್ಲಿ ಕೆಲಸ ಆಗಿದೆ ಎಂಬದುನ್ನು ಹೇಳಿ ಎಂದರು. ಆಗ ಪಾವಗಡ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಉತ್ತರಿಸುವಂತೆ ಸಿಇಒ ಸೂಚಿಸಿದರು. ಆದರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೂಡ ಸಿಇಒ ಹೇಳಿದ್ದನ್ನೇ ಪುನರಾವರ್ತನೆ ಮಾಡಿದರು.ಬರ ಪರಿಹಾರದ ಹಣ ಬ್ಯಾಂಕ್‌ನಲ್ಲಿ ಭದ್ರವಾಗಿದೆ. ಎಲ್ಲೂ ಕೂಡ ಒಂದೇ ಒಂದು ಕೆಲಸ ಆಗಿಲ್ಲ ಎಂದು ವೆಂಕಟರವಣಪ್ಪ ದೂರಿದರು. ಕಾಮಗಾರಿಗಳ ಮಾಹಿತಿ ನೀಡಲು ಅಧಿಕಾರಿಗಳು ತಬ್ಬಿಬ್ಬಾದರು.ಇದೆಲ್ಲವನ್ನು ನೋಡುತ್ತಿದ್ದ ಉಸ್ತುವಾರಿ ಸಚಿವರಿಗೆ ಏನನ್ನು ಉತ್ತರಿಸಲಾಗದೆ ಮೌನವಾದರು. ಆಗ ಮಧ್ಯ ಪ್ರವೇಶಿಸಿದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಅನುಮತಿಗೆ ಕಾಯಬೇಡಿ. ಕೆಲಸ ಶುರು ಮಾಡಿ. ಕೆಲಸ ಮುಗಿಯುವುದರೊಳಗೆ ಅನುಮತಿ ಬರಲಿದೆ. ಆಗ ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.ಜಾನುವಾರು ಮೇವು ಸಮಸ್ಯೆ, ಮೇವು ತರಿಸಲು ಮಾಡಿಕೊಂಡಿರುವ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಂಡಿಲ್ಲದೇ ಇರುವುದು ಸಭೆಯಲ್ಲಿ ಗಮನಕ್ಕೆ ಬಂತು. ಬರಪರಿಹಾರ ಕೆಲಸ ಕೈಗೊಳ್ಳುವಲ್ಲಿ ಅಧಿಕಾರಿಗಳ ವೈಫಲಗಳು ಈಚೆ ಬರುತ್ತಿದ್ದಂತೆ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಬೇಕಾಯಿತು. ಕೊನೆಗೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಒಂದಷ್ಟು ಸಲಹೆ, ಸೂಚನೆ ನೀಡಿ ಸಭೆ ಬರ್ಖಾಸ್ತುಗೊಳಿಸಿದರು.ಕ್ರಿಯಾ ಯೋಜನೆ: ಜಿಲ್ಲಾಡಳಿತ ಸಿದ್ಧಪಡಿಸಿರುವ ಬರಪರಿಹಾರ ಕಾಮಗಾರಿ ಕ್ರಿಯಾ ಯೋಜನೆಗೆ ಶೀಘ್ರ ಸರ್ಕಾರ ಅನುಮೋದನೆ ನೀಡಲಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ತಲೆದೋರಿರುವ ಕುರಿತು ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಜಿಲ್ಲೆಯಿಂದ ಬೇಡಿಕೆ ಬಂದರೆ ಮತ್ತಷ್ಟು ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.ತುಮಕೂರು ತಾಲ್ಲೂಕಿಗೆ ರೂ. 1.68 ಕೋಟಿ, ಗುಬ್ಬಿ ರೂ. 84 ಲಕ್ಷ, ಕುಣಿಗಲ್ ರೂ. 83 ಲಕ್ಷ, ತಿಪಟೂರು ರೂ. 97 ಲಕ್ಷ, ತುರುವೇಕೆರೆ ರೂ. 64 ಲಕ್ಷ, ಚಿ.ನಾ.ಹಳ್ಳಿ ರೂ. 47 ಲಕ್ಷ,  ಕೊರಟಗೆರೆ ರೂ. 1.23 ಕೋಟಿ, ಶಿರಾ ರೂ. 1.43 ಕೋಟಿ, ಮಧುಗಿರಿ ರೂ. 1.55 ಕೋಟಿ, ಪಾವಗಡ ರೂ. 1.27  ಕೋಟಿ  ಕ್ರಿಯಾ ಯೋಜನೆಗೆ ಸಭೆ ಅನುಮತಿ ನೀಡಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷ ಆನಂದ ರವಿ, ಶಾಸಕ ಎಸ್.ಶಿವಣ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿದ್ಯಾಶಂಕರ್, ಜಿಲ್ಲಾಧಿಕಾರಿ ಆರ್.ಕೆ.ರಾಜು, ಪೊಲೀಸ್ ವರಿಷ್ಠಾಧಿಕಾರಿ ಲಂಭು ರಾಂ, ಮತ್ತಿತರರು ಇದ್ದರು.

ಬರ, ಆದರೂ ಇಲ್ಲ ಚಿಂತೆ!

ಜಿಲ್ಲೆ ಜನರು ಬರ, ವಿದ್ಯುತ್ ಸಮಸ್ಯೆ, ಕುಡಿಯುವ ನೀರಿಗಾಗಿ ಮೈಲು ದೂರ ಅಲೆದಾಡುವಂಥ ಪರಿಸ್ಥಿತಿ ಇದ್ದರೂ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಹಾರ ಸಮಿತಿ ಸಭೆಗೆ ಸಾಕಷ್ಟು ಶಾಸಕರು ಗೈರು ಹಾಜರಾಗಿದ್ದರು. ತಿಪಟೂರು, ತುರುವೇಕೆರೆ, ಕುಣಿಗಲ್, ಮಧುಗಿರಿ, ಶಿರಾ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರು ಸಭೆಯತ್ತ ಸುಳಿಯಲಿಲ್ಲ. ವೆಂಕಟರವಣಪ್ಪ ಅವರು ತಮ್ಮ ಕ್ಷೇತ್ರದ ಸಮಸ್ಯೆ, ಬರ ಪರಿಹಾರ ಕಾಮಗಾರಿ ನಡೆಯುತ್ತಿರುವ ಬಗೆಯನ್ನು ಹಿಡಿಹಿಡಿಯಾಗಿ ಬಿಚ್ಚಿಟ್ಟರು.ಕೊಂಡ್ಲಿ, ದೊಡ್ಡಗುಣಿಗೆ ನೀರು

ಅಮ್ಮಸಂದ್ರದ ಮೈಸೆಂ ಸಿಮೆಂಟ್ ಕಾರ್ಖಾನೆಗೆ ಕೊಂಡ್ಲಿಕ್ರಾಸ್ ಬಳಿ 400 ಅಡಿಯಷ್ಟು ಆಳಕ್ಕೆ ಬಂಡೆ ಸೀಳಿ ಮಾಡಿಕೊಂಡಿರುವ ಅತಿ ವಿಸ್ತಾರವಾದ ಹಳ್ಳದಿಂದ ಕೊಡ್ಲಿ, ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಹಳ್ಳಿ ಗಳಿಗೆ ಕುಡಿಯುವ ನೀರು ಕೊಡುವ ಸಂಬಂಧ ಯೋಜನೆ ರೂಪಿಸುವಂತೆ ಸಚಿವರಾದ ಮುರುಗೇಶ ನಿರಾಣಿ, ಬಸವರಾಜ್ ಬೊಮ್ಮಾಯಿ ಜಿಲ್ಲಾಧಿಕಾರಿಗೆ ಸೂಚಿಸಿದರು.ಶಾಸಕ ಎಸ್.ಆರ್.ಶ್ರೀನಿವಾಸ್ ಈ ಹಳ್ಳದಿಂದ ಗ್ರಾಮಗಳಿಗೆ ನೀರು ಕೊಡಬೇಕು. ಇದೊಂದು ಶಾಶ್ವತ ಪರಿಹಾರವಾಗಿದೆ ಎಂದು ಸಭೆಯಲ್ಲಿ ಪಟ್ಟು ಹಿಡಿದರು.ಈ ಹಳ್ಳದಲ್ಲಿ ಸಾಕಷ್ಟು ನೀರು ಶೇಖರಣೆಯಾಗುತ್ತದೆ. ಈ ನೀರನ್ನು ಕಂಪೆನಿ ಬಳಸಿಕೊಳ್ಳುತ್ತಿದೆ. ಕಂಪೆನಿಗೆ ಹೋಗುವ ನೀರಿನ ಪೈಪ್‌ಗೆ ಮೂರು ಅಡಿ ಅಗಲದ ಪೈಪ್ ಜೋಡಿಸಿ ದೊಡ್ಡಗುಣಿ ಬಳಿ 1.20 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿ ಅದಕ್ಕೆ ನೀರು ಶೇಖರಿಸಿಕೊಳ್ಳುವುದು. ಆನಂತರ ಆಯಾಯ ಗ್ರಾಮಗಳ ಕಿರು ನೀರು ಸರಬರಾಜು ಘಟಕಗಳಿಗೆ ಪೂರೈಸುವುದು ಯೋಜನೆ ಉದ್ದೇಶವಾಗಿದೆ. ಇದಕ್ಕಾಗಿ ರೂ. 18 ಲಕ್ಷ ವೆಚ್ಚ ತಗುಲಲಿದೆ. ಹದಿನೈದು ದಿನದಲ್ಲಿ ಹಣ ಬಿಡುಗಡೆ ಮಾಡುವ ಭರವಸೆಯನ್ನು ಸಚಿವರು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.