ಬರ ಪರಿಹಾರ ಬಿಡುಗಡೆಗೆ ಒತ್ತಾಯ

7

ಬರ ಪರಿಹಾರ ಬಿಡುಗಡೆಗೆ ಒತ್ತಾಯ

Published:
Updated:

ಹಾಸನ: `ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಬರಪೀಡಿತ ಪ್ರದೇಶಗಳ ಕಾಮಗಾರಿಗೆ ವಾರದೊಳಗೆ ಹಣ ಬಿಡುಗಡೆ ಮಾಡದಿದ್ದಲ್ಲಿ ಹಿಂದಿನಂತೆ ಪುನಃ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸಲಾಗುವುದು~ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕಾಂಗಪಕ್ಷದ ನಾಯಕ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದ್ದಾರೆ.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, `ರಾಜ್ಯದ ಹಲವು ತಾಲ್ಲೂಕುಗಳನ್ನು ಬರಪೀಡಿರ ಎಂದು ಘೋಷಿಸಿ ಎರಡು ವಾರಗಳು ಸಂದಿವೆ. ಹಣಕಾಸು ಹಾಗೂ ಕಂದಾಯ ಇಲಾಖೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸದಾನಂದಗೌಡ ಅವರು ಈವರೆಗೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು. ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೆ. ಬೇಲೂರು ತಾಲ್ಲೂಕಿನ ಹಳೇಬೀಡು, ಹಗರೆ ಮಾದಿಹಳ್ಳಿ ಮತ್ತಿತರ ಕಡೆ ಕುಡಿಯುವ ನೀರು, ಮೇವಿಗೆ ಸಮಸ್ಯೆ ಉಂಟಾಗಿದೆ. ಇಲ್ಲೂ ಬರಗಾಲ ಘೋಷಣೆ ಮಾಡಬೇಕು.ಬರ ಪರಿಹಾರ ಕಾಮಗಾರಿಗಾಗಿ ಕೂಡಲೇ ಕನಿಷ್ಠ 25 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಹಿಂದೆ ದೇವೇಗೌಡ ನೇತೃತ್ವದಲ್ಲಿ ಮುಖ್ಯಮಂತ್ರಿ ಮನೆಮುಂದೆ ಪ್ರತಿಭಟನೆ ನಡೆಸಿದ ಬಳಿಕ ಮಾತುಕತೆ ನಡೆಸಿದ್ದ ಅಂದಿನ ಮುಖ್ಯಮಂತ್ರಿ ಜಿಲ್ಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆ ಹಣವನ್ನೂ ಬಿಡುಗಡೆ ಮಾಡಿಲ್ಲ. ಇನ್ನೂ ಒಂದು ವಾರ ಕಾಯ್ದು, ಹಣ ಬಿಡುಗಡೆ ಮಾಡದಿದ್ದರೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮತ್ತೆ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸುತ್ತೇವೆ ಎಂದು ರೇವಣ್ಣ ತಿಳಿಸಿದರು.ರೇಲ್ವೆ ಸಚಿವರಿಗೆ ಮನವಿ: ರೈಲ್ವೆ ಸಚಿವರು ಬರುವ ಅ.20ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ದೇವೇಗೌಡ ಹಾಗೂ ಪಕ್ಷದ ಮುಖಂಡರು ಅವರನ್ನು ಭೇಟಿಮಾಡಿ ಬೆಂಗಳೂರು- ಹಾಸನ ರೈಲ್ವೆಮಾರ್ಗದ ಕಾಮಗಾರಿ ಆರಂಭಕ್ಕೆ ಒತ್ತಾಯಿಸುತ್ತೇವೆ ಎಂದರು.ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ: `ಯಡಿಯೂರಪ್ಪ ಅವರನ್ನು ಬಂಧಿಸಿರುವ ಸುದ್ದಿ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದು ಅವರ ಸಂಸ್ಕೃತಿ ತೋರಿಸುತ್ತದೆ~ ಎಂದು ರೇವಣ್ಣ ಲೇವಡಿ ಮಾಡಿದ್ದಾರೆ.`ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅವರ ಮನೆಗೇ ಹೋಗಿ ಸಿದ್ದರಾಮಯ್ಯ ವಿವಿಧ ಫೈಲ್‌ಗಳಿಗೆ ಸಹಿ ಹಾಕಿಸಿದ್ದರು. ಇದನ್ನು ವಿಧಾನಸಭೆಯಲ್ಲೇ ಯಡಿಯೂರಪ್ಪ ಹೇಳಿದ್ದರು. ಹಿಂದೆ ಅವರ ಜತೆ ಕೈಜೋಡಿಸಿದ್ದವರು ಇಂದು ವಿಜಯೋತ್ಸವ ಆಚರಿಸಿದ್ದು ಹಾಸ್ಯಾಸ್ಪದ. ಯಡಿಯೂರಪ್ಪ ತಪ್ಪು ಮಾಡಿದ್ದಾರೆ.ಈಗ ಅದಕ್ಕೆ ಶಿಕ್ಷೆ ಅನುಭವಿಸುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಆರಂಭಿಸಿರುವ ಅಡ್ವಾಣಿ ಅವರು ತಮ್ಮ ಯಾತ್ರೆ ಅರ್ಥಪೂರ್ಣವಾಗಬೇಕು ಎಂದಾದರೆ ರಾಜ್ಯ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು ರೇವಣ್ಣ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry