ಮಂಗಳವಾರ, ಮೇ 18, 2021
30 °C

ಬರ ಬೇಗುದಿ: ಹಾಯಾಗಿ ಕುಳಿತ ಜನ ಸೇವಕರು!

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಭೀಕರ ಬರಕ್ಕೀಡಾಗಿರುವ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲು ಸಚಿವರು ಮತ್ತು ವಿರೋಧ ಪಕ್ಷಗಳ ಮುಖಂಡರ ದಂಡು ಒಂದೆಡೆ ಪೈಪೋಟಿಗಿಳಿದಿದ್ದರೆ. ತಾಲ್ಲೂಕಿನಲ್ಲಿರುವ ಹಾಲಿ ಮಾಜಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಮಾತ್ರ ಇದ್ಯಾವುದೂ ತಮಗೆ ಸಂಬಂಧಪಡುವಂಥದ್ದಲ್ಲ ಎಂದು ಗಾಳಿಗೆ ಮೈಯೊಡ್ಡಿ ಮನೆಯಲ್ಲಿ ಹಾಯಾಗಿ ಕುಳಿತಿರುವುದು ಕಂಡುಬಂದಿದೆ.ಬರ ಮತ್ತು ಬಿಸಿಲಿನ ತೀವ್ರತೆಯಿಂದ ಕಂಗಾಲಾಗಿರುವ ರೈತರು ಒಂದೆರಡು ದನಕರುಗಳನ್ನು ಸಾಕಲಾಗದೆ ಅಸಹಾಯಕ ಸ್ಥಿತಿ ತಲುಪಿದ್ದಾರೆ. ಸರ್ಕಾರ ಬೆರಳೆಣಿಕೆ ಗೋಶಾಲೆಗಳನ್ನು ತೆರೆದಿದ್ದರೂ ಅಲ್ಲಿನ ದನಗಳ ಸಂಖ್ಯೆ ಐದು ನೂರು ದಾಟಿಲ್ಲ. ಮೇವು ನೀರಿನ ಅಭಾವದಿಂದ ಸದ್ದುಗದ್ದಲವಿಲ್ಲದೆ ಸಹಸ್ರ ಸಂಖೆಯ ಎತ್ತು, ಎಮ್ಮೆ, ಆಕಳು ಕರುಗಳು ಕಸಾಯಿಖಾನೆ ಸೇರಿದ್ದಾಗಿದೆ, ಗೋಶಾಲೆಗಳಲ್ಲಿ ಕೇವಲ ಬತ್ತದ ಹುಲ್ಲು ಹಾಕುತ್ತಿರುವುದರಿಂದ ಜಾನುವಾರುಗಳು ಸಾಯುವ ಸ್ಥಿತಿ ತಲುಪಿವೆ ಎಂದು ರೈತ ಮುಖಂಡ ಡಿ.ಶಂಕರಪ್ಪ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅಷ್ಟೇ ಸಂಖ್ಯೆ ಕೂಲಿಕಾರ್ಮಿಕರು ಉದ್ಯೋಗ ಅರಸಿ ದೂರದ ಮಹಾನಗರಗಳನ್ನು ಸೇರಿದ್ದಾರೆ. ಉಳಿದಿರುವ ರೈತರು, ಕೃಷಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗ ಖಾತರಿ ಕಾಯ್ದೆ ಜಾರಿಯಾದರೂ ಜನ ಮದ್ಯವರ್ತಿಗಳ ಹಾವಳಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ದಾಖಲೆಯಲ್ಲಿ ಮಾತ್ರ ಯದ್ವಾತದ್ವಾ ಹಣ ಖರ್ಚಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.20ಕ್ಕೂ ಅಧಿಕ ಕರೆಗಳು ಬತ್ತಿವೆ. 2009ರಲ್ಲಿನ ಅತಿವೃಷ್ಟಿಯಿಂದ ಚೇತರಿಸಿಕೊಂಡಿದ್ದ ಕೊಳವೆಬಾವಿಗಳು ಸದ್ಯ ಬತ್ತಿಹೋಗಿವೆ. ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಅಂತರ್ಜಲವನ್ನೇ ಅವಲಂಬಿಸಿದ್ದು ಸಮಸ್ಯೆ ತಾರಕಕ್ಕೇರಿದೆ. ಹಾಗಾಗಿ ನೀರಿನ ವಿಷಯವೇ ಪ್ರಮುಖವಾಗಿ ಚರ್ಚೆಯಾಗುತ್ತಿದ್ದು ನೀರಿಗಾಗಿ ಜನತೆ ಯಾತನೆ ಅನುಭವಿಸುತ್ತಿರುವುದಾಗಿ ಹಳ್ಳಿಗಳಲ್ಲಿನ ಜನ ಗೋಳು ತೊಡಿಕೊಂಡರು.ಬರ ನಿರ್ವಹಣಗೆ ಹಣದ ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೆ, ಸಮರ್ಪಕ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಇಲ್ಲಿಯ ಅಧಿಕಾರಿಗಳು ಸರ್ಕಾರಕ್ಕೆ `ಗಿಳಿಪಾಠ~ ಒಪ್ಪಿಸುತ್ತಿದ್ದಾರೆ. ಆದರೆ ಅಸಮರ್ಪಕ ವ್ಯವಸ್ಥೆ ಕಣ್ಣಿಗೆ ರಾಚುತ್ತಿದೆ. ನೀರಿಗಾಗಿ ಕೊಡ ಹಿಡಿದು ತೋಟಗಳಿಗೆ ಜನ ಲಗ್ಗೆ ಹಾಕಿರುವುದು ಈಚೆಗೆ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದಾಗ ಕಂಡುಬರುತ್ತಿದೆ.ಮನೆಯಲ್ಲಿ ಜನ ಸೇವಕರು: ಭೀಕರ ಬರ ಪರಿಸ್ಥಿತಿಯಿಂದಾಗಿ ಜನ ನರಳುತ್ತಿದ್ದರೆ ಹಾಲಿ ಮಾಜಿ `ಜನಸೇವಕರು~ ಮನೆ ಬಿಟ್ಟು ಹೊರಗೆ ಬಂದಿಲ್ಲ. ಮೂವರು ಮಾಜಿ ಶಾಸಕರು ಇದ್ದರೂ ಜನರ ಸಂಕಷ್ಟಕ್ಕೆ ದನಿಗೂಡಿಸಿಲ್ಲ.ಹಳ್ಳಿಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿಯುವ ಪ್ರಯತ್ನ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿಯ ದೊಡ್ಡನಗೌಡ ಅಧಿಕಾರಿಗಳ ವರ್ಗಾವಣೆಯಲ್ಲಿ `ಬ್ಯೂಸಿ~ಯಾಗಿದ್ದರೆ ಕಾಂಗ್ರೆಸ್‌ನ ಹಸನ್‌ಸಾಬ್ ದೋಟಿಹಾಳ ದಲ್ಲಾಳಿ ಅಂಗಡಿ ಹಿಡಿದಿದ್ದಾರೆ, ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿರುವುದಾಗಿ ಘೋಷಿಸಿಕೊಂಡಿದ್ದರೂ ರಾಜಕೀಯ ಸೂತ್ರಧಾರಿಗಳ ನಿಕಟ ಸಂಪರ್ಕದಲ್ಲಿರುವ ಜೆಡಿಎಸ್‌ನ ಕೆ.ಶರಣಪ್ಪ ಮನೆ ಬಿಟ್ಟು ಹೊರಗೆ ಬಂದಿಲ್ಲ.

 

ಜನರ ತೆರಿಗೆ ಹಣದಲ್ಲಿ ನಿವೃತ್ತಿವೇತನ ಪಡೆಯುತ್ತಿರುವ ಇವರು ಇಂಥ ಸಂದರ್ಭದಲ್ಲಾದರೂ ನೆರವಿಗೆ ಬಂದು ಸರ್ಕಾರದ ಮೇಲೆ ಒತ್ತಡ ಹೇರಿ ಜನ ಋಣ ತೀರಿಸಬಹುದಿತ್ತು. ಆದರೆ ಮುಖಂಡರು ಬಂದಾಗ `ಫೋಸು~ಕೊಡುವುದು ಮಾತ್ರ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.ಅದೇ ರೀತಿ ಚುನಾವಣೆಯಲ್ಲಿ ಮೂಲೆ ಮೂಲೆ ಸುತ್ತಿದ ಸಂಸದ ಶಿವರಾಮಗೌಡ, ಪರಿಷತ್ ಸದಸ್ಯರಾಗಿ ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವ ಎಚ್.ಸಿ.ನೀರಾವರಿ ತಾಲ್ಲೂಕಿನ ಜನರತ್ತ ದೃಷ್ಟಿಹರಿಸಿಲ್ಲ. ಹಳ್ಳಿಹಳ್ಳಿ ಸುತ್ತುವ ಶಾಸಕ ಅಮರೇಗೌಡ ಬಯ್ಯಾಪೂರ ಬರ ಪರಿಸ್ಥಿಯ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ, ಬಿಜೆಪಿಯ 6 ಜನ ಜಿ.ಪಂ ಸದಸ್ಯರಿದ್ದರೂ ಬರ ಸ್ಥಿತಿಗೆ ತುಟಿಬಿಚ್ಚಿಲ್ಲ ಎಂದು ಜನ ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪಟ್ಟಿ ಒಪ್ಪಿಸುತ್ತಿದ್ದಾರೆ.

ಬಾರದ ಅಧಿಕಾರಿಗಳು, ಅಭಿವೃದ್ಧಿ ಕುಂಠಿತ

ಕನಕಗಿರಿ: ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು  ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಹುಲಿಹೈದರ ಜಿಪಂ ಸದಸ್ಯ ವೀರೇಶ ಸಾಲೋಣಿ ದೂರಿದರು.ಸಮೀಪದ ವಡಕಿ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ನಡೆದ ನವಲಿ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಪಂ ಕಾರ್ಯದರ್ಶಿಗಳು ಸರಿಯಾಗಿ ಕಾರ್ಯಾಲಯಗಳಿಗೆ ಬರುವುದಿಲ್ಲ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಕೆಲಸಗಳು ಸೇರಿದಂತೆ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು ಅಧ್ಯಕ್ಷರ ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡುವದು ಒಳ್ಳೆಯದಲ್ಲ ಎಂದು ಕೆಲ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ತರಾಟೆಗೆ: ಚೈತ್ರಾ ಎಂಬ ಬಾಲಕಿಗೆ ಕಳೆದ ನಾಲ್ಕಾರು ವರ್ಷಗಳಿಂದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಪಾಲಕರು ತರಾಟೆಗೆ ತೆಗೆದುಕೊಂಡರು.ವಿಶೇಷ ತಹಸೀಲ್ದಾರ ಮಲ್ಲಿನಾಥ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಸ್. ಮಠ ಅಧಿಕಾರಿಗಳಾದ ಎಂ. ಎನ್. ಪಾಟೀಲ, ಮಹಾಬಳೇಶ್ವರ, ಪ್ರಶಾಂತ್, ದೊಡ್ಡಬಸಪ್ಪ ನೀರಲಕೇರಿ, ವೈದ್ಯ ರಾಮಪ್ಪ, ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರುಪಾದಿಗೌಡ, ಉಪಾಧ್ಯಕ್ಷೆ ಲಕ್ಷ್ಮಮ್ಮ, ತಾಪಂ ಉಪಾಧ್ಯಕ್ಷೆ ಹಿರೇಹನುಮಮ್ಮ, ಸದಸ್ಯರಾದ ಜೂಲೆಪ್ಪ, ಜುಮ್ಮಣ್ಣ, ಗ್ರಾಪಂ ಸದಸ್ಯರಾದ ಸರೋಜಮ್ಮ, ಹೊನ್ನೂರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶೇಖರಪ್ಪ ಹೊಸ್ಗೇರ, ಬಿಸಿಯೂಟ ಅಧಿಕಾರಿ ರಾಮಣ್ಣ. ಕೆ./ ರಾಮೋಜಪ್ಪ, ವೀರೇಶ, ಪಶು ಸಂಗೋಪನೆಯ ಸಹಾಯಕ ನಿರ್ದೇಶಕ ಡಾ. ರವಿಶಂಕರ ಇತರರು ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.