ಬರ: ಸರ್ಕಾರ ತರಾಟೆಗೆ, 13ರಂದು ರಾಜ್ಯಕ್ಕೆ ಕೇಂದ್ರ ಪರಿಣತರ ತಂಡ

7

ಬರ: ಸರ್ಕಾರ ತರಾಟೆಗೆ, 13ರಂದು ರಾಜ್ಯಕ್ಕೆ ಕೇಂದ್ರ ಪರಿಣತರ ತಂಡ

Published:
Updated:
ಬರ: ಸರ್ಕಾರ ತರಾಟೆಗೆ, 13ರಂದು ರಾಜ್ಯಕ್ಕೆ ಕೇಂದ್ರ ಪರಿಣತರ ತಂಡ

ನವದೆಹಲಿ: ಬರಗಾಲ ಪರಿಸ್ಥಿತಿ ಅಧ್ಯಯನಕ್ಕೆ ನಿಯೋಜಿತವಾಗಿರುವ ಕೇಂದ್ರ ಪರಿಣತರ ತಂಡ ಈ ತಿಂಗಳ 13ರಿಂದ  ನಾಲ್ಕು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದೆ.

 

`ಸಣ್ಣ ರೈತರ ಕೃಷಿ ವ್ಯವಹಾರಗಳ ಒಕ್ಕೂಟ~ದ ವ್ಯವಸ್ಥಾಪಕ ನಿರ್ದೇಶಕ ಪ್ರವೇಶ್ ಶರ್ಮ ನೇತೃತ್ವದ 10ರಿಂದ 12 ಅಧಿಕಾರಿಗಳ ತಂಡ 13ರಂದು ಬೆಂಗಳೂರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಂದ  ಮಾಹಿತಿ ಪಡೆಯಲಿದೆ.ಅನಂತರ ತಂಡ 14 ಮತ್ತು 15ರಂದು ಎರಡು ಗುಂಪುಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬರ ಪರಿಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಲಿದೆ. 16ರಂದು ಬೆಂಗಳೂರಿಗೆ ಹಿಂತಿರುಗಿ ಮತ್ತೊಮ್ಮೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ. ದೆಹಲಿಗೆ ವಾಪಸಾಗುವ ಮೊದಲು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಭೇಟಿ ಮಾಡಲಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.ಪರಿಣತರ ತಂಡದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮಿಣ ಕುಡಿಯುವ ನೀರು ಮತ್ತು ಯೋಜನಾ ಆಯೋಗದ ಅಧಿಕಾರಿಗಳು ಇರುತ್ತಾರೆ. ಈ ತಂಡ ದೆಹಲಿಗೆ ಮರಳಿದ ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ಸರ್ಕಾರ ರಾಜ್ಯಕ್ಕೆ ನೆರವು ನೀಡುವ ಕುರಿತು ತೀರ್ಮಾನ ಕೈಗೊಳ್ಳಲಿದೆ.ಈಚೆಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ದೆಹಲಿಗೆ ಧಾವಿಸಿದ್ದ ಸರ್ವಪಕ್ಷ ನಿಯೋಗ ಪ್ರಧಾನಿ ಮನಮೋಹನ್‌ಸಿಂಗ್, ಕೃಷಿ ಸಚಿವ ಶರದ್ ಪವಾರ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಬರಗಾಲದ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಿ ವರದಿ ಸಲ್ಲಿಸಲು ಪ್ರವೇಶ್ ಶರ್ಮ ನೇತೃತ್ವದ ತಂಡವನ್ನು  ಕಳುಹಿಸಲಾಗುತ್ತಿದೆ.`ಕೇಂದ್ರ ತಂಡ ರಾಜ್ಯಕ್ಕೆ ಅಕಾಲಿಕವಾಗಿ ಭೇಟಿ ಕೊಡುತ್ತಿದೆ. ಬಹುತೇಕ ಕಡೆಗಳಲ್ಲಿ ಮಳೆ ಬೀಳುತ್ತಿದ್ದು ಪರಿಸ್ಥಿತಿ ಸುಧಾರಣೆ ಆಗಿದೆ. ಹೀಗಾಗಿ ತಂಡದ ಭೇಟಿ ಲಾಭವಾಗುವುದಿಲ್ಲ. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ತಂಡ ಧಾವಿಸಿದ್ದರೆ ಸಂಕಷ್ಟದಲ್ಲಿರುವ ರೈತರಿಗೆ ಸ್ವಲ್ಪವಾದರೂ ಪ್ರಯೋಜನವಾಗುತಿತ್ತು. ಆದರೆ, ಅಧಿಕಾರದ ಕಿತ್ತಾಟದಲ್ಲಿ ಬಿಜೆಪಿ ನಾಯಕರು ಬರಗಾಲವನ್ನು ಮರೆತುಬಿಟ್ಟರು~ ಎಂದು ಮೂಲಗಳು ವ್ಯಂಗ್ಯವಾಡಿವೆ.ಮುಖ್ಯಮಂತ್ರಿ ನೇತೃತ್ವದ ಸರ್ವಪಕ್ಷ ನಿಯೋಗಕ್ಕೆ ಪಿ. ಚಿದಂಬರಂ, `ಬರ ಬಂದಿದ್ದು ಯಾವಾಗ?~ ಎಂದು ಕೇಳಿದ್ದರು. ನಿಯೋಗದಲ್ಲಿದ್ದ ಕೆಲವರು ಜನವರಿ ಎಂದು ಉತ್ತರಿಸಿದರು. ಅಷ್ಟಕ್ಕೆ ಸುಮ್ಮನಾಗದ ಸಚಿವರು `ಇದು ಯಾವ ತಿಂಗಳು. ಇಲ್ಲಿವರೆಗೂ ಏನು ಮಾಡ್ತಿದ್ರಿ~ ಎಂದು ತಮಾಷೆ ಮಾಡಿದರು. ಕೃಷಿ ಸಚಿವ ಶರದ್ ಪವಾರ್ `ಬರಗಾಲ ಕುರಿತು ರಾಜ್ಯದಿಂದ ನನಗೆ  ಮನವಿ ಬಂದಿಲ್ಲ. ಹತ್ತಾರು ಪುಟಗಳ ಮನವಿ ಕಳುಹಿಸಿದ್ದರೆ ಓದಿರಲು ಸಾಧ್ಯವಿಲ್ಲ. ಸಮಗ್ರ ಚಿತ್ರಣ ಕೊಡುವ ಸಂಕ್ಷಿಪ್ತ ಟಿಪ್ಪಣಿಯಂತೂ ಕಣ್ಣಿಗೆ ಬಿದ್ದಿಲ್ಲ~ ಎಂದರೆಂದು ಮೂಲಗಳು ಹೇಳಿವೆ.`ಬರಿಗೈಯಲ್ಲಿ ಬಂದು ಹಣ ಕೊಡಿ ಎಂದರೆ ಜನರ ದುಡ್ಡನ್ನು ದಾನ ಕೊಡಲಾದೀತೆ? ಸರ್ಕಾರದಿಂದ ಒಂದು ಅಧಿಕೃತ ಮನವಿ- ಪ್ರಸ್ತಾವ ಬೇಡವೆ?~ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನಿಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. `ನಾವು ಮನವಿ ಕೊಟ್ಟಿದ್ದೇವೆ~ ಎಂದು ಮುಖ್ಯಮಂತ್ರಿ ಸಮಜಾಯಿಷಿ ನೀಡಿದ್ದಾರೆ.ಮುಖ್ಯಮಂತ್ರಿಗಳ ಮಾತನ್ನು ಕೇಳುವ ಸ್ಥಿತಿಯಲ್ಲಿ ಪ್ರಣವ್ ಇರಲಿಲ್ಲ. `ರಾಜ್ಯದ ಬರಗಾಲ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ಎರಡು ಸಲ ಮನವಿ ಸಲ್ಲಿಸಲಾಗಿದೆ. ವಿಜಯ ಕುಮಾರ್ ನೇತೃತ್ವದ ಕೇಂದ್ರ ತಂಡ ಡಿಸೆಂಬರ್‌ನಲ್ಲಿ ರಾಜ್ಯದ ಬರ ಪ್ರದೇಶಗಳಿಗೆ ಭೇಟಿ ನೀಡಿ ಹಿಂತಿರುಗಿದೆ. ಈ ವರದಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ. ವಿಕೋಪ ಪರಿಹಾರ ನಿಧಿ (ಸಿಆರ್‌ಎಫ್) ನಿಧಿಯಿಂದ ಬರೀ 70 ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ 600 ಕೋಟಿ ಹಣವನ್ನು ತುರ್ತು ಉದ್ದೇಶಗಳಿಗೆ ಖರ್ಚು ಮಾಡಿದೆ~ ಎಂದು ಮೂಲಗಳು ಅಂಕಿಸಂಖ್ಯೆ ನೀಡಿವೆ.ಪ್ರಧಾನಿ ಮತ್ತಿತರ ಗಣ್ಯರಿಗೆ ಸರ್ವಪಕ್ಷ ನಿಯೋಗ `ಬರಗಾಲದಿಂದ 5865 ಕೋಟಿ ರೂಪಾಯಿ ಬೆಳೆ ನಷ್ಟವಾಗಿದ್ದು, ಕೇಂದ್ರದ ಎನ್‌ಸಿಸಿಎಫ್‌ನಿಂದ ಅರ್ಧದಷ್ಟು ಪರಿಹಾರ ಕೊಡಬೇಕು~ ಎಂದು ಮನವಿ ಸಲ್ಲಿಸಿದೆ.`ಪ್ರವೇಶ್ ಶರ್ಮ ನೇತೃತ್ವದ ಪರಿಣತರ ತಂಡ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸಲಿದೆ. ಕೇಂದ್ರದ ನೆರವು ದೊರೆಯುವ ಭರವಸೆ ಇದೆ~ ಎಂದು ಸದಾನಂದಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry