ಬರ ಸ್ಥಿತಿ ಗಂಭೀರ ನೀರಿಗೆ ಹಾಹಾಕಾರ

7

ಬರ ಸ್ಥಿತಿ ಗಂಭೀರ ನೀರಿಗೆ ಹಾಹಾಕಾರ

Published:
Updated:

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗತೊಡಗಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ವಿದ್ಯುತ್ ಕಡಿತ ನೀರಿನ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ರಾಜ್ಯದ 123 ತಾಲ್ಲೂಕುಗಳು ಬರದ ಬವಣೆಗೆ ಸಿಲುಕಿವೆ. ಸುಮಾರು 200 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕರಾವಳಿ ಮತ್ತು ಮಲೆನಾಡಿನ ಕೆಲವು ಪ್ರದೇಶಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ವಿದ್ಯುತ್ ಕೊರತೆಯಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಹಗಲು ವೇಳೆ ತ್ರೀ ಫೇಸ್ ವಿದ್ಯುತ್ ಮೂರು ಗಂಟೆ ಮಾತ್ರ ಪೂರೈಕೆ ಆಗುತ್ತಿದ್ದು ಆ ಸಂದರ್ಭದಲ್ಲಿ ಮಾತ್ರ ಕೊಳವೆ ಬಾವಿಗಳಿಂದ ನೀರೆತ್ತಲು ಸಾಧ್ಯವಾಗುತ್ತಿದೆ. ವಿದ್ಯುತ್ ಸರಬರಾಜು ಇದ್ದರೂ ವೋಲ್ಟೇಜ್ ಕೊರತೆಯಿಂದ ಮೋಟಾರ್ ಪಂಪ್‌ಗಳು ನೀರೆತ್ತುವುದಿಲ್ಲ.

ಕೆಲವು ಜಿಲ್ಲೆಗಳ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ವಿದ್ಯುತ್ ಕಡಿತದ ಕಾರಣ ನೀರಿನ ಸಮಸ್ಯೆ ಎದುರಿಸುತ್ತಿವೆ. ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಕೋಲಾರ, ವಿಜಾಪುರ, ಧಾರವಾಡ, ರಾಮನಗರ ಮತ್ತು ಬೆಳಗಾವಿ ಜಿಲ್ಲೆಗಳ ಹಳ್ಳಿಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ತೀವ್ರವಾಗುತ್ತಿರುವ ವಿದ್ಯುತ್ ಕೊರತೆ ಮತ್ತು ಬರ ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಕುಡಿಯುವ ನೀರಿನ ಪೂರೈಕೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಪೌರಾಡಳಿತ ನಿರ್ದೇಶನಾಲಯ (ಡಿಎಂಎ) ನೀಡಿರುವ ಅಂಕಿ-ಅಂಶಗಳ ಅನ್ವಯ ಪ್ರಸ್ತುತ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಹಾಸನ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ಅನಿಯಮಿತ ವಿದ್ಯುತ್ ಕಡಿತದ ಕಾರಣ ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಬನ್ನೂರು, ತಿರುಮಕೂಡಲು ನರಸೀಪುರ ಮತ್ತು ಸರಗೂರು ಪಟ್ಟಣಗಳಲ್ಲಿ ಕುಡಿಯುವ ನೀರನ್ನು ಸಕಾಲದಲ್ಲಿ ಪೂರೈಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಮಂಡ್ಯ ಜಿಲ್ಲೆಯ ಪಾಂಡವಪುರ, ಮದ್ದೂರು, ಮಳವಳ್ಳಿ ಮತ್ತು ನಾಗಮಂಗಲದ ಕತೆಯೂ ಇದೇ ಆಗಿದೆ. ದಾವಣಗೆರೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮೂರು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ಕುಡಿವ ನೀರು ಸರಬರಾಜು ಮಾಡುತ್ತಿವೆ.

ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 80 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗದ ಸ್ಥಿತಿ ಬೇಸಿಗೆಯ ಮುಂದಿನ ದಿನಗಳಲ್ಲಿ ತಲೆದೋರಲಿದೆ ಎಂದು ಡಿಎಂಎ ಅಧಿಕಾರಿಗಳು ಗುರ್ತಿಸಿದ್ದಾರೆ. ಈ ನಗರಗಳ ಪಾಲಿಗೆ ಕುಡಿಯುವ ನೀರಿನ ಏಕೈಕ ಮೂಲವಾದ ಅಂತರ್ಜಲ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಕೊಳವೆ ಬಾವಿಗಳಿಂದ ದೊರೆಯುತ್ತಿರುವ ನೀರು ಹೆಚ್ಚಿನ ಪ್ರದೇಶಗಳಲ್ಲಿ ಕುಡಿಯಲು ಯೋಗ್ಯವಾಗಿಲ್ಲ. ತಾಪಮಾನದಲ್ಲಿ ಏರಿಕೆಯಾದಂತೆ ಸಮಸ್ಯೆಯ ತೀವ್ರತೆಯೂ ಹೆಚ್ಚಾಗಲಿದೆ.

ಬೆಂಗಳೂರು ಮತ್ತು ಕೆಲವು ದೊಡ್ಡ ನಗರಗಳನ್ನು ಹೊರತುಪಡಿಸಿದರೆ ರಾಜ್ಯದ ಇತರೆಡೆ ವಿದ್ಯುತ್ ಕಡಿತ ಇತ್ತೀಚೆಗೆ ಹೆಚ್ಚಾಗಿರುವ ಕಾರಣ, ನಿಯಮಿತವಾಗಿ ಕುಡಿಯುವ ನೀರು ಪೂರೈಸಲು ಸ್ಥಳೀಯ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಆದರೆ, ನಗರ, ಪಟ್ಟಣ ಪ್ರದೇಶಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ದಿನದ 18 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.

ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಮಾರ್ಚ್ ವೇಳೆಗೆ ದಿನದ ಬೇಡಿಕೆ ಪ್ರಮಾಣ 185 ದಶಲಕ್ಷ ಯೂನಿಟ್‌ಗೆ ಏರಿಕೆ ಆಗುವ ಸಾಧ್ಯತೆ ಇದೆ. ಈ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸುವುದು ಕಷ್ಟಸಾಧ್ಯದ ಕೆಲಸವಾಗಿದೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

ಕಳೆದ ವರ್ಷ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲದಿದ್ದರೂ 49 ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸಿದ್ದವು.

ಕೆಲವೆಡೆ ಹದಿನೈದು ದಿನಕ್ಕೊಮ್ಮೆ ನೀರು ಪೂರೈಸಲಾಯಿತು. ಕೆಲವು ಪಟ್ಟಣಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಯಿತು.

ಆನೇಕಲ್ (ಬೆಂಗಳೂರು ನಗರ ಜಿಲ್ಲೆ), ದೇವನಹಳ್ಳಿ, ವಿಜಯಪುರ, ನೆಲಮಂಗಲ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಚಿತ್ರದುರ್ಗ, ಹೊಸದುರ್ಗ (ಚಿತ್ರದುರ್ಗ), ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ (ಚಿಕ್ಕಬಳ್ಳಾಪುರ), ಕೋಲಾರ, ಕೆಜಿಎಫ್, ಬಂಗಾರಪೇಟೆ, ಮುಳಬಾಗಿಲು (ಕೋಲಾರ), ಮಧುಗಿರಿ, ಪಾವಗಡ (ತುಮಕೂರು), ಜಮಖಂಡಿ ಮತ್ತು ಇಳಕಲ್ (ಬಾಗಲಕೋಟೆ) ತಾಲ್ಲೂಕುಗಳು ಕಳೆದ ವರ್ಷ ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸಿದ್ದವು.

ಮುಂದಿನ ಮೂರು ತಿಂಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸುವ ಸಂಬಂಧ ಡಿಎಂಎ ರೂಪುರೇಷೆಗಳನ್ನು ಅಂತಿಮಗೊಳಿಸುತ್ತಿದೆ. `ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಗಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಮಾರ್ಚ್ ಮೊದಲ ವಾರದ ವೇಳೆಗೆ ಯೋಜನೆ ಸಿದ್ಧವಾಗಿರುತ್ತದೆ~ ಎಂದು ಡಿಎಂಎ ಜಂಟಿ ನಿರ್ದೇಶಕ (ಅಭಿವೃದ್ಧಿ) ಸಿ.ಜಿ. ಸುಪ್ರಸನ್ನ ತಿಳಿಸಿದರು.

ಪರಿಸ್ಥಿತಿ ಅವಲೋಕಿಸಿದ ನಂತರ ಎಲ್ಲ ನಗರಗಳ ಸ್ಥಳೀಯ ಆಡಳಿತಕ್ಕೂ ಪ್ರತ್ಯೇಕವಾಗಿ ಸೂಚನೆ ನೀಡಲಾಗುವುದು ಎಂದರು.

ಖಾಸಗಿ ನೆರವು: ಖಾಸಗಿ ಕೊಳವೆ ಬಾವಿಗಳ ನೆರವು, ಅನಿವಾರ್ಯ ಸಂದರ್ಭಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ಸೇರಿದಂತೆ ಎಲ್ಲ ಪರಿಹಾರ ಕ್ರಮಗಳ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಸೂಚನೆ ನೀಡಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ 23ರಿಂದ ಕೊಳವೆ ಬಾವಿಗಳ ದುರಸ್ತಿ ಸಪ್ತಾಹವನ್ನು ಆಚರಿಸಲು ನಿರ್ಧರಿಸಲಾಗಿದೆ. ಕೆಟ್ಟಿರುವ ಕೊಳವೆ ಬಾವಿಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು. ನೀರು ಪೂರೈಕೆ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry