ಶುಕ್ರವಾರ, ಮೇ 7, 2021
26 °C

ಬರ ಹಿನ್ನೆಲೆ: ತಿಂಗಳ ಬಳಿಕ ಮುಂದುವರಿಕೆ:ಕಾಂಗ್ರೆಸ್ ಅಭಿಯಾನಕ್ಕೆ ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಾಂಗ್ರೆಸ್‌ಗೆ ಬನ್ನಿ-ಬದಲಾವಣೆ ತನ್ನಿ~ ಅಭಿಯಾನಕ್ಕೆ ನಿಗದಿಯಂತೆ ಭಾನುವಾರ ಚಾಲನೆ ದೊರೆಯಲಿದೆ. ಆದರೆ, ಬರಗಾಲದ ಹಿನ್ನೆಲೆಯಲ್ಲಿ ಒಂದು ತಿಂಗಳ ಬಳಿಕ ಅಭಿಯಾನ ಮುಂದುವರಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.ನಗರದ ಗೊಲ್ಲರಹಟ್ಟಿಯಲ್ಲಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ನಡೆದಿರುವ ಸಿದ್ಧತೆಯನ್ನು ಶನಿವಾರ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಅಭಿಯಾನ ಸ್ಥಗಿತಗೊಳ್ಳಲಿದೆ. ಬರ ಅಧ್ಯಯನ ವರದಿ ಸಲ್ಲಿಸಿ ಮೇ ತಿಂಗಳಿನಲ್ಲಿ ಅಭಿಯಾನ ಮುಂದುವರೆಸಲಾಗುವುದು~ ಎಂದರು.`ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸ್ವಜನ ಪಕ್ಷಪಾತ ಮತ್ತು ದುರಾಡಳಿತದಲ್ಲಿ ಮುಳುಗಿದೆ. ಪರಿಣಾಮವಾಗಿ ಜನತೆ ಬದಲಾವಣೆ ಬಯಸಿದ್ದಾರೆ. ಜನತೆಯ ಬಯಕೆಯಂತೆಯೇ `ಕಾಂಗ್ರೆಸ್‌ಗೆ ಬನ್ನಿ-ಬದಲಾವಣೆ ತನ್ನಿ~ ಕಾರ್ಯಕ್ರಮ ರೂಪಿಸಿದ್ದೇವೆ. ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಅಭಿಯಾನ ನಡೆಸಲಾಗುವುದು~ ಎಂದರು.ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ತಕ್ಷಣವೇ ವರದಿ ನೀಡುವಂತೆ ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬರ ಪ್ರದೇಶಗಳ ಅಧ್ಯಯನಕ್ಕೆ ಮೂರು ತಂಡ ರಚಿಸಲಾಗಿದೆ.ಏಪ್ರಿಲ್ 28ರಂದು ತುಮಕೂರಿನಲ್ಲಿ ನಡೆಯುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಗುರುವಂದನೆ ಕಾರ್ಯಕ್ರಮಕ್ಕೆ ಸೋನಿಯಾ  ಬರುತ್ತಿದ್ದಾರೆ. ಅದೇ ಸಂದರ್ಭದಲ್ಲಿ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರಪೀಡಿತ ಪ್ರದೇಶಗಳ ಜನರ ಕಷ್ಟ ಅರಿಯಲು ಪ್ರವಾಸ ಮಾಡುತ್ತಿಲ್ಲ. ಅವರಿಗೆ ಅಧಿಕಾರದ ಬರ ಬಂದಿದೆ. ಅದಕ್ಕಾಗಿ ಅವರ ಪಕ್ಷದ ಮುಖ್ಯಮಂತ್ರಿಯ ವಿರುದ್ಧವೇ ಪ್ರವಾಸ ಕಾರ್ಯಕ್ರಮ ನಡೆಸುತ್ತಿದ್ದಾರೆ~ ಎಂದು ಪರಮೇಶ್ವರ್ ಟೀಕಿಸಿದರು.ಭಿನ್ನಾಭಿಪ್ರಾಯವಿಲ್ಲ...ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಅವರು, `ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ರಾಜ್ಯದ ರೇಷ್ಮೆ ಕೃಷಿಕರು ಮತ್ತು ಅಡಿಕೆ ಬೆಳಗಾರರ ಸಮಸ್ಯೆಗೆ ಪರಿಹಾರ ದೊರಕಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೆಹಲಿಗೆ ಹೋಗಿದ್ದೆವು. ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ನಾವು ಒಟ್ಟಿಗೆ ಇದ್ದೇವೆ~ ಎಂದರು.ಶಾಸಕ ದಿನೇಶ್ ಗುಂಡೂರಾವ್, ಮಾಜಿ ಶಾಸಕ ಎನ್.ಎಸ್.ಬೋಸರಾಜು, ಮುಖಂಡರಾದ ಎಸ್.ಟಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.