ಬಲಮುರಿ: ತುಲಾಸಂಕ್ರಮಣ ಜಾತ್ರಾ ಉತ್ಸವ

7

ಬಲಮುರಿ: ತುಲಾಸಂಕ್ರಮಣ ಜಾತ್ರಾ ಉತ್ಸವ

Published:
Updated:

ನಾಪೋಕ್ಲು: ಇಲ್ಲಿಗೆ ಸಮೀಪದ ಬಲಮುರಿಯ ಅಗಸ್ತ್ಯೇಶ್ವರ ದೇವಾಲಯದಲ್ಲಿ ಹಾಗೂ ಕಣ್ವಮುನೀಶ್ವರ ದೇವಾಲಯದಲ್ಲಿ ತುಲಾಸಂಕ್ರಮಣ ಪ್ರಯುಕ್ತ ಗುರುವಾರ ಜಾತ್ರಾ ಮಹೋತ್ಸವ ನಡೆಯಿತು.ದೇವಾಲಯದಲ್ಲಿ ಬೆಳಗ್ಗಿನಿಂದಲೇ ಅರ್ಚಕ ಚಂದ್ರಶೇಖರ ಐತಾಳ್ ನೇತೃತ್ವದಲ್ಲಿ ವಿವಿಧ ಪೂಜೆಗಳು ಜರುಗಿದವು. ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಬುಧವಾರ ನಡೆದ ತೀರ್ಥೋದ್ಭವದ ಪವಿತ್ರ ಘಳಿಗೆಯಲ್ಲಿ ಪಾಲ್ಗೊಳ್ಳಲು ವಿವಿಧ ಊರುಗಳಿಂದ ಭಕ್ತಾದಿಗಳು ತೆರಳಿದ್ದರೆ ಅಲ್ಲಿಗೆ ತೆರಳಲಾರದ ಯಾತ್ರಾರ್ಥಿಗಳು ಬಲಮುರಿಯ ದೇವಾಲಯಗಳಿಗೆ ತೆರಳಿ ಜಾತ್ರೆಯಲ್ಲಿ ಪಾಲ್ಗೊಂಡರು.

 

ಬೆಳಗ್ಗಿನಿಂದಲೇ  ಭಕ್ತಾದಿಗಳು ಕಾವೇರಿ ನದಿಯಲ್ಲಿ ಪವಿತ್ರ ತೀರ್ಥ ಸ್ನಾನ ಮಾಡಿದರು. ಕೇಶಮುಂಡನ ಹರಕೆ ಸಲ್ಲಿಸಿದ ನಂತರ ಪಿಂಡಪ್ರದಾನ ಮಾಡಿದರು. ದೇವಾಲಯದಲ್ಲಿ ಭಕ್ತರ ಸಂಖ್ಯೆ ಆರಂಭದಲ್ಲಿ ಕಡಿಮೆ ಇದ್ದಂತೆ ಕಂಡುಬಂದರೂ ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡರು.ದೇವಾಲಯದಲ್ಲಿ ಮಹಾಪೂಜೆ ಬಳಿಕ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಚಂಗಂಡ ಪೊನ್ನವ್ವ ಮತ್ತು ಮಕ್ಕಳು ಅನ್ನಸಂತರ್ಪಣೆ ಏರ್ಪಡಿಸಿದ್ದರು. ಭಕ್ತಾದಿಗಳಿಗೆ ಹತ್ತು ವರ್ಷಗಳಿಂದ ಅನ್ನದಾನ ವ್ಯವಸ್ಥೆಯನ್ನು ದಾನಿಗಳ ನೆರವಿನಿಂದ ಕೈಗೊಳ್ಳಲಾಗುತ್ತಿದೆ.ತಲಕಾವೇರಿ ಭಾಗಮಂಡಲ ಹೊರತುಪಡಿಸಿದರೆ ಭಕ್ತಾದಿಗಳಿಗೆ ಬಲಮುರಿ ಪವಿತ್ರ ಯಾತ್ರಾಸ್ಥಳ.

ಆದರೆ ಇಲ್ಲಿನ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾದುತಮ್ಮಯ್ಯ ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.ಕಾರ್ಯದರ್ಶಿ ಪೊನ್ನಚನ ಜಯ ಮತ್ತು ಅಡಳಿತ ಮಂಡಳಿ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry