ಬಲವಂತದ ಪದತ್ಯಾಗ: ನಶೀದ್

7

ಬಲವಂತದ ಪದತ್ಯಾಗ: ನಶೀದ್

Published:
Updated:

ಮಾಲೆ (ಎಪಿ/ಎಎಫ್‌ಪಿ): ಶಸ್ತ್ರಸಜ್ಜಿತ ಪೊಲೀಸರು ಮತ್ತು ಸೇನಾಧಿಕಾರಿಗಳ ತಂಡ ತಮ್ಮತ್ತ ಬಂದೂಕಿನ ಗುರಿ ಇಟ್ಟು ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿತು; ಇಲ್ಲದಿದ್ದರೆ ರಕ್ತಪಾತ ನಡೆಸುವುದಾಗಿ ಬೆದರಿಕೆ ಒಡ್ಡಿತ್ತು ಎಂದು ಮಾಲ್ಡೀವ್ಸ್‌ನ ನಿರ್ಗಮಿತ ಅಧ್ಯಕ್ಷ ಮೊಹಮ್ಮದ್ ನಶೀದ್ ಬುಧವಾರ ಆರೋಪಿಸಿದ್ದಾರೆ. ತಮ್ಮ ವಿರುದ್ಧ ನಡೆದ `ಕ್ಷಿಪ್ರ ದಂಗೆ~ಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಸಹ ಅವರು ದೂರಿದ್ದಾರೆ.ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಾಧೀಶರೊಬ್ಬರ ಬಂಧನಕ್ಕೆ ತಾವು ನೀಡಿದ ಆದೇಶದ ವಿರುದ್ಧ ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ನೂರಾರು ಪೊಲೀಸರು ಕೈಜೋಡಿಸಿದ ನಂತರ, ನಶೀದ್ ಮಂಗಳವಾರ ಹಠಾತ್ ಪದತ್ಯಾಗ ಮಾಡಿದ್ದರು.ಆ ಬಳಿಕ ಮೊದಲ ಬಾರಿಗೆ ತಮ್ಮ ಮಾಲ್ಡೀವ್ಸ್ ಪ್ರಜಾಸತ್ತಾತ್ಮಕ ಪಕ್ಷದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬೆಳವಣಿಗೆಗೆ ನೂತನ ಅಧ್ಯಕ್ಷ ಮೊಹಮ್ಮದ್ ವಹೀದ್ ಹಸನ್ ಅವರೇ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.  ನ್ಯಾಯಾಂಗವು `ಕ್ಷಿಪ್ರಕ್ರಾಂತಿ~ಯ ಸಂಚುಕೋರರ ವಿರುದ್ಧ ಕ್ರಮ ಜರುಗಿಸಬೇಕು, ಹಸನ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಸದ್ಯದಲ್ಲೇ ಮರಳಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.ದಂಗೆ ಹಿಂದೆ ಪೊಲೀಸ್ ಇಲಾಖೆಯ ಕೆಲ ದುಷ್ಟ ಶಕ್ತಿಗಳು, ಮುಸ್ಲಿಂ ಮೂಲಭೂತವಾದಿಗಳು ಮತ್ತು ಹಿಂದಿನ ಸರ್ವಾಧಿಕಾರಿ ಗಯೂಮ್ ಬೆಂಬಲಿಗರ ಕೈವಾಡವಿದೆ ಎಂದು ಮಾಲ್ಡೀವ್ಸ್ ಪ್ರಜಾಸತ್ತಾತ್ಮಕ ಪಕ್ಷ ಆರೋಪಿಸಿದೆ. ನಶೀದ್ ಪಕ್ಷದ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಆದರೆ ತಮ್ಮ ಮೇಲಿನ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಹಸನ್, ಪದಚ್ಯುತಿ ಸಂಚಿನಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನೂತನ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ರಾಷ್ಟ್ರೀಯ ಐಕ್ಯಮತದ ಸರ್ಕಾರ~ ರಚನೆಯ ಪ್ರಸ್ತಾವ ಮುಂದಿಟ್ಟಿದ್ದಾರೆ.ದೇಶದ ಹಿತದೃಷ್ಟಿಯಿಂದ ಪ್ರಜಾಪ್ರಭುತ್ವವಾದಿ ಮತ್ತು ಸ್ಥಿರ ಸರ್ಕಾರ ರಚನೆಗೆ ಎಲ್ಲರೂ ಒಗ್ಗಟ್ಟಾಗಿ ಮುಂದಾಗುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಈ ಆಹ್ವಾನವನ್ನು ತಿರಸ್ಕರಿಸಿರುವ ಮಾಲ್ಡೀವ್ಸ್ ಪ್ರಜಾಸತ್ತಾತ್ಮಕ ಪಕ್ಷ, ಐಕ್ಯಮತದ ಸರ್ಕಾರವನ್ನು ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.ಪ್ರತೀಕಾರ ಇಲ್ಲ: ನಶೀದ್ ಅವರ ಗೃಹಬಂಧನ ಆರೋಪಗಳನ್ನು ನಿರಾಕರಿಸಿರುವ ಹಸನ್, ಪ್ರತೀಕಾರದ ಸಾಧ್ಯತೆ ಇರುವುದರಿಂದ ಅವರಿಗೆ ಸಂಪೂರ್ಣ ರಕ್ಷಣೆ ಒದಗಿಸಲಾಗಿದೆ. ಆದರೆ ಯಾವುದೇ ರೀತಿಯ ಕಟ್ಟಳೆ ವಿಧಿಸಿಲ್ಲ. ದೇಶ ತೊರೆಯಲೂ ಅವರು ಸ್ವತಂತ್ರರು ಎಂದು ಹೇಳಿದ್ದಾರೆ.  ದೇಶದ ಪ್ರಥಮ ಚುನಾಯಿತ ಅಧ್ಯಕ್ಷರಾಗಿದ್ದ ನಶೀದ್ ಅವರ ವಿರುದ್ಧ ಪ್ರತೀಕಾರದ ಕ್ರಮಕ್ಕೆ ಮುಂದಾಗದಂತೆ ಅಂತರ ರಾಷ್ಟ್ರೀಯ ಕ್ಷಮಾದಾನ ಸಂಸ್ಥೆಯ ನಿರ್ದೇಶಕ ಸ್ಯಾಮ್ ಝರಿಫಿ  ನೂತನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಮದ್ಯದ ಬಾಟಲಿ!: ನಶೀದ್ ಅವರು ವಾಸವಾಗಿದ್ದ ಅಧ್ಯಕ್ಷರ ಭವನವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಮದ್ಯದ ಬಾಟಲಿಗಳು ದೊರೆತಿವೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ ನಶೀದ್ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಮುಸಲ್ಮಾನ ರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಿಷಿದ್ಧ. ಹೀಗಾಗಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಶೀದ್ ಅವರಿಗೆ ಗೃಹಬಂಧನ ವಿಧಿಸಬಹುದು ಅಥವಾ ದೂರದ ದ್ವೀಪದಲ್ಲಿ ಅವರನ್ನು ಕೂಡಿ ಹಾಕುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry