ಭಾನುವಾರ, ಜೂನ್ 13, 2021
28 °C

ಬಲವಂತದ ಭೂಸ್ವಾಧೀನಕ್ಕೆ ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ರೈತರನ್ನು ಕತ್ತಲಲ್ಲಿ ಇಟ್ಟು, ಬಲವಂತದಿಂದ ಭೂಸ್ವಾಧೀನ ಮಾಡುವುದಾದರೆ, ಅದಕ್ಕೆ ತಮ್ಮ ವಿರೋಧವಿದೆ ಎಂದು ತಾಲ್ಲೂಕಿನ ಕಡೇಚೂರು, ಬಾಡಿಯಾಲ ಹಾಗೂ ಶೆಟ್ಟಿಹಳ್ಳಿ ಗ್ರಾಮದ ರೈತರು ಸ್ಪಷ್ಟಪಡಿಸಿದರು.ತಾಲ್ಲೂಕಿನ ಕಡೇಚೂರಿನಲ್ಲಿ ಭಾನುವಾರ ನಡೆದ ರೈತರ ಭೂ ರಕ್ಷಣಾ ಹೋರಾಟ ಸಮಿತಿಯ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.ಯಾವ ಕಂಪೆನಿಗಳಿಗೆ, ಯಾವ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಲಾಗುತ್ತಿದೆ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ. ಸದ್ಯಕ್ಕೆ ನೀಡುತ್ತಿರುವ ಬೆಲೆ ಅವೈಜಾನಿಕವಾಗಿದ್ದು, ಇಷ್ಟು ಕಡಿಮೆ ಬೆಲೆಗೆ ಭೂಮಿಯನ್ನು ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ರೈತರು ಹೇಳಿದರು.ಕೈಗಾರಿಕೆಗಳ ಸ್ಥಾಪನೆಗೆ ತಮ್ಮ ವಿರೋಧವಿಲ್ಲ. ಆದರೆ ಭೂಮಿ ಕೊಡುವ ಗ್ರಾಮಗಳ ರೈತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಪ್ರತಿಯೊಂದು ಕುಟುಂಬಕ್ಕೆ ಉದ್ಯೋಗ ಒದಗಿಸಬೇಕು. ಈ ಭಾಗದ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ, ಅವರಿಗೆ ಕೈಗಾರಿಕೆಗಳಲ್ಲಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.ಕಡೇಚೂರು, ಶೆಟ್ಟಿಹಳ್ಳಿ, ಬಾಡಿಯಾಳ ಗ್ರಾಮಗಳಲ್ಲಿ ಸುಮಾರು 3300 ಎಕರೆ ಭೂಮಿಯನ್ನು ಕೈಗಾರಿಕೆಗಳಿಗಾಗಿ ಪಡೆಯಲು ಸರ್ಕಾರ ಮುಂದಾಗಿದೆ. ಕೇವಲ ರೂ.5-6 ಲಕ್ಷ ದರ ನಿಗದಿ ಮಾಡಲಾಗಿದ್ದು, ಇದು ಅವೈಜ್ಞಾನಿಕವಾಗಿದೆ. ಜಮೀನು ಖರೀದಿಸುವ ಕಂಪೆನಿಗಳು ಹಾಗೂ ಜಮೀನು ಕೊಡುವ ರೈತರು ನೇರವಾಗಿ ಚರ್ಚೆ ಮಾಡುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ಆಗ್ರಹಿಸಿದರು.ಪ್ರಾಂತ ರೈತ ಸಂಘದ ಬಸವರಾಜಪ್ಪ ಬಳ್ಳಾರಿ, ಗೌರಮ್ಮ ಪಾಟೀಲ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನಾ ಕುಪ್ಪಿ, ಕಾಂಗ್ರೆಸ್ ಮುಖಂಡ ಸಾಯಿಬಣ್ಣ ಬೋರಬಂಡ್, ಎಪಿಎಂಸಿ ಸದಸ್ಯ ಭೀಮನಗೌಡ ಕ್ಯಾತನಾಳ, ಜಗನ್ನಾಥರೆಡ್ಡಿ ಸಂಬರ, ರವೂಫ್‌ಸಾಬ್ ಕಡೇಚೂರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗುರಪ್ಪ ಸಾಹುಕಾರ, ಹೋರಾಟ ಸಂಘದ ಅಧ್ಯಕ್ಷ ಸಿದ್ಧಣ್ಣಗೌಡ ಪಾಟೀಲ ಕಡೇಚೂರು ಮುಂತಾದವರು ಭಾಗವಹಿಸಿದ್ದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.