ಬಲವಂತದ ಮದುವೆ ಅಲ್ಲ

7

ಬಲವಂತದ ಮದುವೆ ಅಲ್ಲ

Published:
Updated:

ಬೆಂಗಳೂರು:  `ಸುರೇಂದ್ರ ಬಾಬು ಅವರನ್ನು ಹೇಮಶ್ರೀ ಸ್ವಇಚ್ಛೆಯಿಂದಲೇ ಮದುವೆಯಾಗಿದ್ದಳು~ ಎಂದು ಆಕೆಯ ಅಕ್ಕ ರೂಪಶ್ರೀ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹೇಮಶ್ರೀಯ ಮದುವೆ ಹಣದಾಸೆಗೆ ನಡೆದದ್ದಲ್ಲ. ಸುರೇಂದ್ರಬಾಬು ಯಾವುದೇ ರೀತಿಯ ವಧುದಕ್ಷಿಣೆ ನೀಡಿರಲಿಲ್ಲ. ಮದುವೆ ನಂತರ ಸಹಜವಾಗಿಯೇ ಪತ್ನಿಗೆ ಒಡವೆ, ಸೀರೆಗಳನ್ನು ಕೊಡಿಸಿದ್ದರು~ ಎಂದರು.`ನನಗೆ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸುರೇಂದ್ರ ಬಾಬು ಜತೆ ನನ್ನ ತಂಗಿ ಮದುವೆ ಮಾಡಿಸಿದೆ ಎಂಬ ಆರೋಪ ಸುಳ್ಳು. ನಾನು ವೈದ್ಯೆ. ಪತಿ ಸೀಮಾ ಸುಂಕ ಇಲಾಖೆಯಲ್ಲಿ ಡೆಪ್ಯೂಟಿ ಕಮಿಷನರ್. ಹೀಗಾಗಿ ನಮಗೆ ಹಣದ ತೊಂದರೆ ಇಲ್ಲ~ ಎಂದು ಸ್ಪಷ್ಟನೆ ನೀಡಿದರು.`ಮಂಗಳವಾರ ಹೇಮಶ್ರೀ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಆದರೆ, ನಂತರದ ಮೂರು ದಿನಗಳಲ್ಲಿ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ  ಪ್ರಸಾರವಾದ ವರದಿಗಳು, ಚರ್ಚೆಗಳು ಮತ್ತಷ್ಟು ನೋವುಂಟು ಮಾಡಿವೆ. ಆಕೆಗೆ ಮೊದಲೇ ಮದುವೆಯಾಗಿತ್ತು; ಮತ್ತೊಬ್ಬ ಪ್ರಿಯಕರನಿದ್ದಾನೆ ಎಂದು ಅಪಪ್ರಚಾರ ಮಾಡುವ ಮೂಲಕ ಆಕೆ ಗೌರವಕ್ಕೆ ಧಕ್ಕೆ ಮಾಡಲಾಗಿದೆ~ ಎಂದು ಆರೋಪಿಸಿದರು. `ಹೇಮಶ್ರೀಯದು ಬಲವಂತದ ಮದುವೆಯಲ್ಲ. ಕುಟುಂಬದವರೆಲ್ಲ ಬಾಬು ಅವರನ್ನು ಒಪ್ಪಿಕೊಂಡಿದ್ದರು. ಹೇಮಶ್ರೀ ಕೂಡ ಒಪ್ಪಿಕೊಂಡು ಖುಷಿಯಿಂದಲೇ ಮದುವೆಯಾಗಿದ್ದಳು. ನಮ್ಮ ತಂದೆ ನಾಗರಾಜ್ ಬ್ಯಾಂಕ್‌ನಲ್ಲಿ ಮೇಲ್ವಿಚಾರಕ. ದಲ್ಲಾಳಿ ಮೂಲಕ ಅವರಿಗೆ ಬಾಬು ಪರಿಚಯವಾಗಿತ್ತು~ ಎಂದು ತಿಳಿಸಿದರು.`ಹೇಮಶ್ರೀ ಸ್ನೇಹಿತೆಯೊಂದಿಗೆ ಕೊನೆಯ ಬಾರಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆಯಲ್ಲಿ ನಿಜಕ್ಕೂ ನನ್ನ ತಂಗಿಯೇ ಮಾತನಾಡಿದ್ದಾಳೆಯೇ, ಅದು ಯಾರೊಟ್ಟಿಗೆ, ಧ್ವನಿಮುದ್ರಿಸಿದವರು ಯಾರು, ಅದನ್ನು ಮಾಧ್ಯಮದವರಿಗೆ ಕೊಟ್ಟವರು ಯಾರು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದ್ದರಿಂದ ಅದನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ಮಾಡಬೇಕು~ ಎಂದು ಒತ್ತಾಯಿಸಿದರು.`ಹೇಮಶ್ರೀ ಪತಿಯಿಂದ ದೂರವಾಗಲು ನಿರ್ಧರಿಸಿದ್ದಳು. ಇದಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದಳು. ಪೊಲೀಸರು ಹಲಸೂರು ಗೇಟ್ ಮಹಿಳಾ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು~.  `ಹದಿನೈದು ದಿನಗಳ ಹಿಂದೆಯಷ್ಟೇ ನಾನು, ಸುರೇಂದ್ರಬಾಬು ಹಾಗೂ ಹೇಮಶ್ರೀ ಠಾಣೆಗೆ ಹೋಗಿ ಬಂದಿದ್ದೆವು~ ಎಂದು ಹೇಳಿದರು.ಯಾರು ಈ ಮಂಜುನಾಥ್?

ಬೆಂಗಳೂರು: 
`ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಮಂಜುನಾಥ್, ಹೇಮಶ್ರೀಯ ಪರಮಾಪ್ತ~ ಎಂಬುದನ್ನು ಆಕೆಯ ಅಕ್ಕ ರೂಪಶ್ರೀ ಒಪ್ಪಿಕೊಂಡರು.  `ನಮ್ಮ ಮನೆಗೆ ಸಮೀಪವೇ ಮಂಜುನಾಥ್ ವಾಸವಿದ್ದಾನೆ. 2006ರಿಂದ ಹೇಮಶ್ರೀಯೊಂದಿಗೆ ಒಡನಾಟ ಇಟ್ಟುಕೊಂಡಿದ್ದ.ಆಕೆಯ ನಿರ್ಧಾರಗಳಲ್ಲಿ, ಜೀವನಶೈಲಿಯಲ್ಲಿ ಮಂಜುನಾಥ್‌ನ ಪ್ರಭಾವ ಇತ್ತು. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರಾದರೂ, ಮಂಜುನಾಥ್ ಒಮ್ಮೆಯೂ ನಮ್ಮ ಪೋಷಕರ ಎದುರು ಪ್ರೀತಿ ವಿಷಯವನ್ನು ಪ್ರಸ್ತಾವ ಮಾಡಿರಲಿಲ್ಲ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry