ಬಲಾತ್ಕಾರ: ವಿವಿಧ ಸಂಘಟನೆ ಆಕ್ರೋಶ

7

ಬಲಾತ್ಕಾರ: ವಿವಿಧ ಸಂಘಟನೆ ಆಕ್ರೋಶ

Published:
Updated:

ಗುಲ್ಬರ್ಗ: ಬಲಾತ್ಕಾರಕ್ಕೆ ಒಳಗಾದವರೇ ದೂರು ಕೊಟ್ಟ ಮೇಲೆಯೂ ದೂರು ದಾಖಲಿಸಲಾರದ ಘಟನೆಯೊಂದು ಚಿಂಚೋಳಿ ತಾಲ್ಲೂಕಿನ ಗಡಿನಿಂಗದಳ್ಳಿ ಗ್ರಾಮದಲ್ಲಿ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಯುವಕ ರಮೇಶ ಬಲಾತ್ಕರಿಸಿ ದೌರ್ಜನ್ಯ ಎಸಗಿರುವ ಪ್ರಕರಣ ನಡೆದಿದೆ. ಈ ದುರ್ಘಟನೆ ಕುರಿತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ,

ಪ್ರಜ್ಞಾ ಕಾನೂನು ಸಲಹಾ ಸಮಿತಿ, ಜಿಲ್ಲಾ ದಲಿತ ಯುವ ಸಮನ್ವಯ ಸಮಿತಿ ಮತ್ತು ಸಾಮಾಜಿಕ ಪರಿವರ್ತನಾ ಜನಾಂದೋಲನ ತೀವ್ರ ಆತಂಕ ವ್ಯಕ್ತಪಡಿಸಿವೆ.ಬಾಲಕಿಯು ತೀವ್ರ ರಕ್ತಸ್ರಾವದಿಂದ ನರಳುತ್ತಿರುವುದರಿಂದ ತಂದೆ ತಾಯಿ ಆಕೆಯನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗಡಿನಿಂಗದಳ್ಳಿಯ ಗ್ರಾಮದ ನಿವಾಸಿಯಾದ ಪೋಷಕರು ಸಂಬಂಧಪಟ್ಟ ಪೋಲಿಸರು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ದೂರಿ ಸಂಘಟನೆಯೊಂದಿಗೆ ಮಾತಾಡಿರುವರು. ಸಂಘಟನೆಯ ನಿಯೋಗವೊಂದು ಆಸ್ಪತ್ರೆಗೆ ಭೇಟಿ ಕೊಟ್ಟಿದೆ ಎಂದು ಈ ಸಂಘಟನೆಗಳ ನೀಲಾ ಕೆ, ಡಾ.ಮೀನಾಕ್ಷಿ ಬಾಳಿ, ಜಗದೇವಿ ನೂಲಕರ್, ವಿಠಲ್ ಚಿಕಣಿ, ಅಮೀನಾ ಬೇಗಂ, ಇಂದುಮತಿ, ಶಶಿಕಲಾ ಕಡಗಂಚಿ, ಸಂತೋಷ ತಿಳಿಸಿದ್ದಾರೆ.ನಾಲ್ಕು ದಿನದ ಹಿಂದೆ ನಡೆದ ಬಲಾತ್ಕಾರದ ಪ್ರಕರಣದ ದೂರು ನೋಂದಾಯಿಸಿ ಆರೋಪಿಯನ್ನು ಬಂಧಿಸಲು ಹಿಂದೇಟು ಹಾಕಿದ ಚಿಂಚೋಳಿಯ ಸಬ್ ಇನ್‌ಸ್ಪೆಕ್ಟರ್ ಅವರನ್ನು ವಜಾ ಮಾಡುವಂತೆ ಒತ್ತಾಯಿಸಿದ್ದಾರೆ.ಸಂಬಂಧಪಟ್ಟ ಬಲಾತ್ಕಾರದ ಪ್ರಕರಣದ ಆರೋಪಿಯನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಬೇಕು. ದೂರು ದಾಖಲಿಸಲಾರದ ಚಿಂಚೋಳಿ ಪಿಎಸ್‌ಐಯನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೂ ಅಪರಾಧಗಳು ನಿರ್ಭಯದಿಂದ ನಡೆಯಲು ಕಾರಣವಾಗುತ್ತಿವೆ ಎಂಬುದು ಪೋಲೀಸ್ ವರಿಷ್ಠಾಧಿಕಾರಿಗಳು ಗಮನಿಸಬೇಕು. ಇಲ್ಲದಿದ್ದರೆ ಜನತೆ ತೀವ್ರ ಚಳವಳಿಗೆ ಇಳಿಯುವರು ಎಂದು ಅವರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry