ಬಲಿಗಾಗಿ ಕಾದು ನಿಂತ ನೀರಿನ ಟ್ಯಾಂಕ್

7

ಬಲಿಗಾಗಿ ಕಾದು ನಿಂತ ನೀರಿನ ಟ್ಯಾಂಕ್

Published:
Updated:

ಹಾವೇರಿ: ಜಿಲ್ಲೆಯಲ್ಲಿ ಹರಿಯುವ ನಾಲ್ಕು ನದಿಗಳಲ್ಲಿ ಎರಡು ಪ್ರಮುಖ ನದಿಗಳಿಂದ ನಗರಕ್ಕೆ ನೀರು ತರಲಾಗುತ್ತದೆ. ಸಾಲದೆಂಬಂತೆ ಹೆಗ್ಗೇರಿ ಕೆರೆ ನೀರನ್ನು ಸಹ ಬಳಸಿಕೊಳ್ಳಲಾಗುತ್ತದೆ. ಇನ್ನೂ ನೀರಿನ ನಿರ್ವಹಣೆಗಾಗಿ ನಗರಸಭೆ ಪ್ರತಿ ವರ್ಷ ಕೋಟ್ಯಂತರ ರೂ. ಖರ್ಚು ಮಾಡುತ್ತದೆ.ಕೇವಲ 65ರಿಂದ 70 ಸಾವಿರ ಜನರು ಇರುವ ನಗರಕ್ಕೆ ಇಷ್ಟೊಂದು ನೀರಿನ ಮೂಲಗಳಿದ್ದಾಗಲೂ ಸಮರ್ಪಕ ನೀರು ಪೂರೈಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆಗೆ ಈವರೆಗೆ ಉತ್ತರ ದೊರೆತಿಲ್ಲ. ಆದರೆ, ಮೇಲ್ನೋಟಕ್ಕೆ ನಗರಸಭೆ ನೀರಿನ ನಿರ್ವಹಣೆಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಿದೆ, ಹೊರತು ನೀರನ್ನಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.ಇದಕ್ಕೊಂದು ತಾಜಾ ಉದಾಹರಣೆ ನಗರದ ಮಧ್ಯವರ್ತಿ ಸ್ಥಳವಾದ ದೇಸಾಯಿಗಲ್ಲಿ (ಸೀತಾರಾಮ ಕಲ್ಯಾಣ ಮಂಟಪ) ಬಳಿ ಇರುವ ನೀರಿನ ಟ್ಯಾಂಕ್. ಹೆಸರಿಗೆ ಮಾತ್ರ ನೀರು ಸಂಗ್ರಹಿಸುವ ಟ್ಯಾಂಕ್ ಆಗಿರುವ ಇದು, ಸಂಗ್ರಹಿಸಿದ ನೀರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ಗಟಾರಿಗೆ ಹರಿದು ಬಿಡುತ್ತದೆ ಎಂದರೆ ಅತೀಶೋಕ್ತಿ ಆಗಲಾರದು.ಸುಮಾರು ಇಪ್ಪತ್ತು- ಇಪ್ಪತ್ತೆರಡು ವರ್ಷಗಳ ಹಿಂದೆ ನಿರ್ಮಿಸಲಾದ ಈ ಟ್ಯಾಂಕ್ ನಗರದ ದೇಸಾಯಿ ಗಲ್ಲಿ, ರಾಮದೇವರ ಗುಡಿ ಸುತ್ತಮುತ್ತಲಿನ ಹಾಗೂ ಹಾವೇರಿ ಹಳೇಯ ಊರು ಆಗಿರುವ ರೈತರ ಓಣಿಗಳಿಗೆ ನೀರು ಪೂರೈಕೆ ಮಾಡುತ್ತದೆ. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಸಂಪೂರ್ಣ ಶಿಥಿಲಗೊಂಡ ಈ ಟ್ಯಾಂಕ್ ಯಾವಾಗ ನೆಲಕ್ಕುರಳಬೇಕು ಎಂಬ ದಿನಗಳ ಲೆಕ್ಕ ಹಾಕುತ್ತಿದೆ. ಕೇವಲ ಟ್ಯಾಂಕಿನ ಮೇಲ್ಭಾಗವಷ್ಟೇ ಅಲ್ಲದೇ ಆ ಟ್ಯಾಂಕಿಗೆ ಹಾಕಲಾದ ಬುನಾದಿಯೂ ಸಂಪೂರ್ಣ ಸಡಿಲುಗೊಂಡಿದೆ.

 

ಟ್ಯಾಂಕಿನ ಪೈಪ್‌ಗಳು ಕೂಡಾ ಸಂಪೂರ್ಣ ಹಾಳಾಗಿದ್ದರಿಂದ ನೀರು ಏರಿಸುವಾಗಲು ಹಾಗೂ ಇಳಿಸುವಾಗಲೇ ನೀರು ಲೀಕೇಜ್ ಆಗಿ ಟ್ಯಾಂಕಿನ ಬುಡದಲ್ಲಿ ಯಾವಾಗಲೂ ಹೊಂಡವೊಂದು ನಿರ್ಮಾಣವಾಗಿದೆ. ಆ ನೀರು ಟ್ಯಾಂಕಿನ ಬುನಾದಿಯನ್ನು ಅಭದ್ರಗೊಳಿಸಿದೆಯಲ್ಲದೇ, ಟ್ಯಾಂಕಿನಲ್ಲಿ ನೀರು ಒಡೆದ ಪೈಪ್‌ಗಳ ಮೂಲಕ ನಿರಂತರವಾಗಿ ಗಟಾರು ಸೇರುತ್ತಲೇ ಇರುತ್ತದೆ.ಇಲ್ಲಿ ಸೋರಿಕೆ ಮತ್ತು ಅಪವ್ಯಯವಾಗುವ ನೀರು ಇಡೀ ಒಂದು ಓಣಿಗೆ ಒಂದು ದಿನ ಪೂರ್ತಿಯಾಗಿ ಪೂರೈಕೆ ಮಾಡಬಹುದಾಗಿದೆ. ಆದರೂ ಸಹ ನಗರಸಭೆ ಈ ನೀರು ಪೋಲು ಆಗುತ್ತಿರುವುದನ್ನು ತಡೆಯಲು ಮುಂದಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.ಕಳಚುತ್ತಿರುವ ಕಾಂಕ್ರೀಟ್: ಈ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಟ್ಯಾಂಕಿಗೆ ಹಾಕಲಾದ ಕಾಂಕ್ರೀಟ್ ಆಗಾಗ ಕಳಚುತ್ತಲೇ ಇರುತ್ತದೆ. ಟ್ಯಾಂಕ್ ಹತ್ತಲು ಮಾಡಿರುವ ನಿಚ್ಛಣಿಕೆ ಭಾಗವು ಈಗಾಗಲೇ ಸಂಪೂರ್ಣ ಕಿತ್ತು ಹೋಗಿದೆ. ಟ್ಯಾಂಕಿನ ಹೊರ ಭಾಗ ಮುಟ್ಟಿದರೆ ಕಳಚಿ ಬೀಳುವಂತಾಗಿದೆ.ಟ್ಯಾಂಕಿನ ಪಕ್ಕದಲ್ಲಿ ಹತ್ತಾರು ಕುಟುಂಬಗಳು ದನಕರುಗಳನ್ನು ಕಟ್ಟಿಕೊಂಡು ಅಲ್ಲಿಯೇ ಜೀವನ ನಡೆಸುತ್ತವೆ. ಹೀಗೆ ಕಳಚುವ ಕಾಂಕ್ರೀಟ್ ದನಕರುಗಳ ಮೇಲೆ ಬಿದ್ದಿರುವ ಉದಾಹರಣೆಗಳು ಸಹ ಇಲ್ಲಿವೆ. ಪ್ರತಿ ನಿತ್ಯ ಟ್ಯಾಂಕಿನ ಬುಡದಲ್ಲಿಯೇ ಜೀವನ ನಡೆಸುವ ಇಲ್ಲಿನ ಕುಟುಂಬಗಳು ಕೈಯಲ್ಲಿ ಜೀವ ಹಿಡಿದುಕೊಂಡೇ ಬದುಕಬೇಕಾಗಿದೆ ಎಂದು ಹೇಳುತ್ತಾರೆ ಸಾರಿಗೆ ಸಂಸ್ಥೆ ನಿವೃತ್ತ ಚಾಲಕ ಡೊಳ್ಳಿನ.ಪುನರ್ ನಿರ್ಮಿಸಿ: ಈಗಾಗಲೇ ಶಿಥಿಲಗೊಂಡಿರುವ ನೀರಿನ ಟ್ಯಾಂಕ್‌ನ್ನು ಕೆಡವಿ ಹೊಸದಾಗಿ ಟ್ಯಾಂಕ್ ನಿರ್ಮಾಣ ಮಾಡಬೇಕು. ಇಲ್ಲವಾದರೆ, ಯಾವ ಸಮಯದಲ್ಲಿ ಅದು ಬಿದ್ದು ಜನರ ಜೀವನಕ್ಕೆ ಹಾನಿ ಮಾಡುತ್ತಿದೆಯೋ ಗೊತ್ತಿಲ್ಲ. ಅದು ಅಲ್ಲದೇ ಅಲ್ಲಿ ಪೋಲಾಗುತ್ತಿರುವ ನೀರನ್ನು ತಡೆದು ಜನರಿಗೆ ಪೂರೈಸಲು ಅನುಕೂಲವಾಗಲಿದೆ ಎನ್ನುತ್ತಾರೆ ಓಣಿಯ ಮುಖಂಡ ಎಂ.ಎಸ್. ತಿಪಶೆಟ್ಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry