ಬುಧವಾರ, ನವೆಂಬರ್ 13, 2019
23 °C

ಬಲಿಪಶುವಾಗದಿರಲಿ ಮತದಾರ

Published:
Updated:

ಚುನಾವಣೆಯ ಸಮಯದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ತಕ್ಕಮಟ್ಟಿಗೆ ಪರಿಣಾಮ ಬೀರಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಚುನಾವಣಾ ಆಯೋಗದ ಕಣ್ಣಿಗೂ ಮಣ್ಣೆರೆರಚಿ ರಂಗೋಲಿ ಕೆಳಗೆ ನುಸುಳುತ್ತಿರುವ ಅಭ್ಯರ್ಥಿಗಳು ಕಣದಲ್ಲಿ ಹಣವನ್ನು ನೀರಿನಂತೆ ಚೆಲ್ಲುತ್ತಿರುವುದು ಕಂಡೂಕಾಣದಂತಹ ದೃಶ್ಯವಾಗಿದೆ.ಕೋಟ್ಯಂತರ ರೂಪಾಯಿ ನಗದು, ಸೀರೆ, ಚಿನ್ನ ಮೊದಲಾದವುಗಳನ್ನು ಪ್ರತಿನಿತ್ಯ ವಶಪಡಿಸಿಕೊಳ್ಳುತ್ತಿರುವುದೇ ಮತದಾರನಿಗೆ ರಾಜಾರೋಷವಾಗಿ ಆಮಿಷಗಳನ್ನು ಒಡ್ಡಲಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. `ಕಾಸಿಗಾಗಿ ಸುದ್ದಿ' ಪಿಡುಗಿನ ವಿರುದ್ಧ ಸಮರ ಸಾರಿದ ಚುನಾವಣಾ ಆಯೋಗ ಅದನ್ನು ಹತೋಟಿಗೆ ತೆಗೆದುಕೊಂಡಂತೆಯೇ ಈಗ `ವೋಟಿಗಾಗಿ ಕಾಸು' ತಂತ್ರದ ಮೇಲೂ  ತೀವ್ರ ಪ್ರಹಾರ ನಡೆಸಲು ಮುಂದಾಗಿರುವುದು ದಿಟ್ಟ ಕ್ರಮವಾಗಿಯೇ ಕಾಣುತ್ತದೆ.ಚುನಾವಣಾ ಸುಧಾರಣೆಗಳ ಪ್ರಸ್ತಾವನೆಯಲ್ಲಿ ಮತಕ್ಕಾಗಿ ಸಾರ್ವಜನಿಕರಿಗೆ ಹಣ ನೀಡುವುದು ಎಷ್ಟು ಅಪರಾಧವೋ, ಮತಹಾಕಲು  ಹಣ ಪಡೆಯುವುದೂ ಅಷ್ಟೇ ಅಪರಾಧ ಎಂಬ ಅಂಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ. `ಮತಮಾರಾಟ' ಇಲ್ಲವೇ `ಮತಖರೀದಿ' ವಿಷಯದಲ್ಲಿ ಕಠಿಣಕಾನೂನು ರೂಪಿಸುವ ಅಗತ್ಯವಿದೆ ಎನ್ನುವುದನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಮನವರಿಕೆ ಮಾಡಿಕೊಡಲು ಚುನಾವಣಾ ಆಯೋಗ ಮುಂದಾಗಿದೆ. ವೋಟಿಗಾಗಿ ಯಾರಾದರೂ ಹಣಕೊಡುವುದು ಆಯೋಗದ ಸಿಬ್ಬಂದಿಯ ಗಮನಕ್ಕೆ ಬಂದರೆ ಹಣ ಕೊಟ್ಟವರು ಮತ್ತು ಪಡೆದವರು ಇಬ್ಬರ ಮೇಲೂ ತಕ್ಷಣವೇ ಕ್ರಮಕೈಗೊಳ್ಳಲಾಗುವುದು.ಸಾರ್ವಜನಿಕರ ಜಾಮೀನು ರಹಿತ ಬಂಧನಕ್ಕೆ ಅವಕಾಶ ಕೊಡಬೇಕೆಂದು ಕೋರಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಹೇಳಿರುವುದು ದಿಟ್ಟ ಕ್ರಮವಾದರೂ ಇದರ ಪರಿಣಾಮಗಳನ್ನು ಇನ್ನಷ್ಟು ನಿಕಷಕ್ಕೆ ಒಳಪಡಿಸಬೇಕಿದೆ.ಆಯೋಗ ಸಲಹೆ ಮಾಡಿರುವ ಹೊಸ ನಿಯಮಕ್ಕೆ 18 ರಾಜ್ಯಗಳು ಸಮ್ಮತಿಸಿವೆ ಎನ್ನಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ `ವೋಟಿಗಾಗಿ ಕಾಸು' ತಡೆ ಉಪಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಬಗ್ಗೆ ಮನವಿ ಮಾಡಲಾಗಿದೆ. 2011ರಲ್ಲಿ ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಪ್ರಾದೇಶಿಕ ಪಕ್ಷಗಳು ಮತದಾರರಿಗೆ ವ್ಯಾಪಕವಾಗಿ ಹಣ ಹಾಗೂ ಉಡುಗೊರೆಗಳನ್ನು ನೀಡಿದರು. ಇಂತಹ ಆಮಿಷ ಒಡ್ಡುವುದನ್ನು ನಿಯಂತ್ರಿಸಿ, ಎಷ್ಟೋ ಕಟ್ಟುಪಾಡುಗಳನ್ನು ಹೇರಿದರೂ ಮತದಾರರಿಗೆ ಲಂಚ ನೀಡುವುದನ್ನು ತಪ್ಪಿಸಲಾಗದೆ ಅಸಹಾಯಕರಾಗಬೇಕಾಯಿತು.ಹೀಗಾಗಿ ಲಂಚ ಪಡೆದ ಮತದಾರರನ್ನೇ ಬಂಧಿಸುವ ಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಭಾಗವಾಗಿ ಮಾಡಲಾಗುತ್ತಿರುವ ಪ್ರಯೋಗ ಎಂದು ಭಾವಿಸಬಹುದು. ಪ್ರತೀ ಚುನಾವಣೆಯಲ್ಲಿ ಮತದಾರರಿಗೆ ದುಡ್ಡುಕೊಡುವುದು, ಮದ್ಯವಿತರಿಸುವುದು, ಬಾಡೂಟ ಏರ್ಪಡಿಸುವುದು, ಉಡುಗೊರೆಗಳನ್ನು ನೀಡುವುದು ಮೊದಲಾದ ಅಕ್ರಮಮಾರ್ಗಗಳನ್ನು `ಸಂಪ್ರದಾಯ' ಎನ್ನುವಂತೆ ಎಲ್ಲ ಪಕ್ಷಗಳೂ ನಡೆಸಿಕೊಂಡು ಬರುತ್ತಿವೆ. ಅನಕ್ಷರತೆ, ಬಡತನ, ನಿರುದ್ಯೋಗ, ಕೊಳೆಗೇರಿ ಇರುವ ಕಡೆ ಈ `ವಿದ್ಯೆ' ಫಲಕೊಡುತ್ತದೆ ಎನ್ನುವ ಮರ್ಮವನ್ನು ಅಭ್ಯರ್ಥಿಗಳೂ ಅರಿತಿದ್ದಾರೆ.ಹೀಗಾಗಿ ಮತದಾರರಿಗೆ ಹಣ ಹಂಚಲು ಮಧ್ಯವರ್ತಿಗಳನ್ನು ನೇಮಿಸಿಕೊಳ್ಳುತ್ತಾರೆ. ಇಂತಹ ಅನೈತಿಕ ದಂಧೆಗೆ ಪ್ರೋತ್ಸಾಹಿಸುವ ಅಭ್ಯರ್ಥಿಯನ್ನು. ಮಧ್ಯವರ್ತಿಗಳನ್ನು ಕಠಿಣಕಾನೂನಿನ ಕ್ರಮಕ್ಕೆ ಒಳಪಡಿಸಿ ಶಿಕ್ಷಿಸಿದರೆ, ಬಡ ಮತದಾರನನ್ನು ಬಲಿಪಶು ಮಾಡುವುದು ತಪ್ಪುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭ್ಯರ್ಥಿಗಳಲ್ಲೇ ಪ್ರಾಮಾಣಿಕತೆ ಮೂಡಿಸುವ ಕೆಲಸವಾದರೆ ಅಂತಹ ಚುನಾವಣೆಗೆ ಅಧಿಕ ಮೌಲ್ಯ ಬಂದೀತು.

ಪ್ರತಿಕ್ರಿಯಿಸಿ (+)