ಬಲಿಷ್ಠ ಚಳವಳಿಯಿಂದ ಶಾಶ್ವತ ನೀರಾವರಿ

7

ಬಲಿಷ್ಠ ಚಳವಳಿಯಿಂದ ಶಾಶ್ವತ ನೀರಾವರಿ

Published:
Updated:

ಶಿಡ್ಲಘಟ್ಟ: ಮನವಿ ಪತ್ರಗಳು, ಹೇಳಿಕೆಗಳು ಮತ್ತು ವಿಚಾರ ಸಂಕಿರಣಗಳಿಂದ ಜಿಲ್ಲೆಗೆ ಶಾಶ್ವತ ನೀರು ಬರುವುದಿಲ್ಲ. ಜನರಿಂದ ಬಲಿಷ್ಠವಾದ ಚಳುವಳಿ ನಡೆದರೆ ಮಾತ್ರ ನೀರು ಬರುತ್ತದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.ಶೋಷಣೆ ಮತ್ತು ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸಿರುವ ಪರಂಪರೆಯನ್ನು ಜಿಲ್ಲೆಯ ಜನತೆ ಹೊಂದಿದ್ದಾರೆ. ಈಗ ಶಾಶ್ವತ ನೀರಾವರಿಗಾಗಿಯೂ ಅಂಥ ಹೋರಾಟದ ಅಗತ್ಯ ಮೂಡಿದೆ. ಸಮರಶೀಲ ಚಳವಳಿಯನ್ನು ನಡೆಸುವ ಮುನ್ನ ಜಿಲ್ಲೆಯ ಜನತೆಗೆ ವಾಸ್ತವದ ಸ್ಥಿತಿ ಅರಿವಾಗಬೇಕು.ಸರ್ಕಾರ ಎತ್ತಿನಹೊಳೆ ಯೋಜನೆ ಜಾರಿ ಮಾಡುವುದಾಗಿ ಸಬೂಬು ಹೇಳುವ ಮೂಲಕ ಚಳವಳಿಯ ದಿಕ್ಕು ತಪ್ಪಿಸುತ್ತಿದೆ. ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಗಳು ಶಾಶ್ವತ ನೀರಾವರಿ ಚಳುವಳಿಯನ್ನು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಿದವು.ಈ ಚಳವಳಿ ಪ್ರಾರಂಭವಾಗಿ 9 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಮೇ 22ರಿಂದ ಜೂನ್ 22ರವರೆಗೂ ಶಾಶ್ವತ ನೀರಾವರಿ ಯೋಜನೆಗಳ ಜಾರಿಗಾಗಿ ಒತ್ತಾಯಿಸಿ ಜನ ಜಾಗೃತಿ ಜಾಥಾವನ್ನು ಎಸ್‌ಎಫ್‌ಐ, ಡಿವೈಎಫ್‌ಐ, ಕೆಪಿಆರ್‌ಎಸ್, ಎಐಎಡಬ್ಲೂಯು, ಜೆಎಂಎಸ್ ಸಂಘಟನೆಗಳು ಹಮ್ಮಿಕೊಂಡಿವೆ. ತಾಲ್ಲೂಕಿನ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಿ ಕರಪತ್ರ, ಬೀದಿ ನಾಟಕ ಹಾಗೂ ಗೀತೆಗಳ ಮೂಲಕ ಜನರಿಗೆ ವಾಸ್ತವಾಂಶ ತಿಳಿಸಿಕೊಡುತ್ತೇವೆ ಎಂದು ಹೇಳಿದರು.ಡಾ.ಪರಮಶಿವಯ್ಯನವರ ವರದಿ ಜಾರಿಯಾಗಲು ನೀರಿನ ಚಳವಳಿ ಮನೆಮಾತಾಗಬೇಕು, ಪಕ್ಷಬೇಧ ಮರೆತು ನೀರಿಗಾಗಿ ಜನ ಸಂಘಟಿತರಾಗಬೇಕು. ಜಾಥಾ ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುವುದು.

 

ಈ ಭಾಗದ 10 ಜಿಲ್ಲೆಗಳ ಸುಮಾರು 2 ಕೋಟಿ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಜನರಿಗೆ ಹೋರಾಟವೊಂದೇ ಉಳಿದಿರುವ ದಾರಿ ಎಂದು ಅಭಿಪ್ರಾಯಪಟ್ಟರು.ಕೇಂದ್ರ ಸಚಿವ ವೀರಪ್ಪ ಮೊಯಿಲಿ ಜನಪ್ರತಿನಿಧಿಯಾಗಿ ಆಯ್ಕೆಗೊಂಡಾಗ ಆರು ತಿಂಗಳಿನಲ್ಲಿ ನೀರು ತರುತ್ತೇನೆಂದು ವಾಗ್ದಾನ ಮಾಡಿದ್ದರು. ಈಗ ಎತ್ತಿನಹೊಳೆ ಯೋಜನೆಯ ಬಗ್ಗೆ ಪದೆಪದೆ ಪ್ರಸ್ತಾಪಿಸಿ ಜನರ ದಾರಿತಪ್ಪಿಸುತ್ತಿದ್ದಾರೆ. ರಾಜಕೀಯ ನೇತಾರರು ನೀರಿನ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ರಾಜಕೀಯ ನಾಯಕರು ಒಂದೊಂದು ಊರಿನಲ್ಲಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಯುವಜನರನ್ನು ಕರೆತರಲಾಗುವುದು.

 

ಜವಾಬ್ದಾರಿಯುತ ಸರ್ಕಾರ ನೀರಿನ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜಕೀಯದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ವಿವಿಧ ಪಕ್ಷಗಳ ಮುಖಂಡರು ನೀರಿನ ಹೋರಾಟವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಅವರಲ್ಲಿ ಶಾಶ್ವತ ನೀರಿನ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಆರೋಪಿಸಿದರು.ಡಿವೈಎಫ್‌ಐ ಜಿಲ್ಲಾ ಮುಖಂಡ ಶ್ರೀನಿವಾಸರೆಡ್ಡಿ, ಎಸ್‌ಎಫ್‌ಐ ರಾಜ್ಯ ಸಹಕಾರ್ಯದರ್ಶಿ ವಿ.ಅಂಬರೀಷ್, ಮುನೀಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry