ಬಲೆ ಬೀಸುವ ಬ್ಯಾಂಕ್ ಸ್ಥಿರ ಠೇವಣಿ

7

ಬಲೆ ಬೀಸುವ ಬ್ಯಾಂಕ್ ಸ್ಥಿರ ಠೇವಣಿ

Published:
Updated:

ಗಾತ್ರ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ಪ್ರಪಂಚದ ಬಹುದೊಡ್ಡ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಇಲ್ಲಿ ಶೇ 66ರಷ್ಟು ಕುಟುಂಬಗಳು ಕೃಷಿ ಹಾಗೂ ವ್ಯವಸಾಯದಿಂದಲೇ ಜೀವಿಸುತ್ತಾರೆ. ಯಾವುದೇ ಒಂದು ರಾಷ್ಟ್ರ ಸದೃಢವಾಗಿ ಮುಂದುವರಿಯಬೇಕಾದರೆ ಮುಖ್ಯವಾಗಿ ದೇಶದ ಆಂತರಿಕ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರಬೇಕು. ಜತೆಗೆ ವಾಣಿಜ್ಯ, ಕೃಷಿ, ಹಾಗೂ ವಿಜ್ಞಾನ ಇವುಗಳಲ್ಲಿ ಅಪ್ರತಿಮ ಸಾಧನೆಗಳನ್ನು ಕೂಡಾ ಮಾಡಬೇಕಾಗುತ್ತದೆ. ಬಹು ಹೆಮ್ಮೆಯ ವಿಚಾರವೆಂದರೆ, ಇಂದು ಪ್ರಪಂಚದ ಬಹುಪಾಲು ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ಬಳಲುತ್ತಿದ್ದರೂ, ಭಾರತ ತನ್ನದೇ ಆದ ಸ್ಥಾನಮಾನ ಹಾಗೂ ಅಸ್ತಿತ್ವ ಕಾಪಾಡಿಕೊಂಡು ಬಂದಿದೆ.ಸಾಮಾನ್ಯವಾಗಿ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿಯೂ ವ್ಯವಸ್ಥಿತ ಹಣಕಾಸು ಮಾರುಕಟ್ಟೆ (organied money market) ಹಾಗೂ ಅವ್ಯವಸ್ಥಿತ ಹಣಕಾಸು ಮಾರುಕಟ್ಟೆಗಳಿದ್ದು ಭಾರತ ಕೂಡಾ ಈ ವ್ಯವಸ್ಥೆಯಿಂದ ಹೊರತಾಗಿಲ್ಲ.ದೇಶದ ಪ್ರತಿಯೊಬ್ಬ ಪ್ರಜೆ ಸುಖ ಸಂತೋಷದಿಂದ ಬಾಳಲು ಅವರವರ ಜೀವನದಲ್ಲಿ ಆರ್ಥಿಕ ಶಿಸ್ತು ಹಾಸುಹೊಕ್ಕಾಗಿರಬೇಕು. ಆರ್ಥಿಕ ಶಿಸ್ತು ಪರಿಪಾಲಿಸಲು ವ್ಯಕ್ತಿಯು ಜೀವನದ ಪ್ರಾರಂಭದಿಂದಲೇ ಸರಿಯಾದ ಯೋಜನೆ ಮಾಡಿಕೊಳ್ಳಬೇಕು. ಜತೆಗೆ ಯೋಜಿತ ರೀತಿಯಲ್ಲಿ ನಡೆದುಕೊಳ್ಳಬೇಕು. ಸರ್ವೇಸಾಮಾನ್ಯವಾಗಿ ಆರ್ಥಿಕ ಶಿಸ್ತು ಪರಿಪಾಲಿಸುವಾಗ ಜನಸಾಮಾನ್ಯರು ‘ಉಳಿತಾಯ’ದ ಕಡೆ ಗುರಿ ಅಥವಾ ಗಮನಹರಿಸಬೇಕಾಗುತ್ತದೆ.ಉಳಿತಾಯ ಎಂದಾಕ್ಷಣ ಕಣ್ಣೆದುರು ತಟ್ಟನೆ ನೆನಪಾಗುವುದು   ಬ್ಯಾಂಕುಗಳು. ಇತ್ತೀಚಿನ ದಿನಗಳಲ್ಲಿ ‘ಬ್ಯಾಂಕ್ ಠೇವಣಿ ಬಡ್ಡಿ ದರ’ಗಳಲ್ಲಿ ಬಹಳಷ್ಟು ಏರುಪೇರು ಕಂಡುಬರುತ್ತಿದ್ದು, ಜನಸಾಮಾನ್ಯರಲ್ಲಿ ಗೊಂದಲ  ಉಂಟುಮಾಡಿದೆ. ಹೀಗೆ ಬಡ್ಡಿ ದರದಲ್ಲಿ ಬದಲಾವಣೆಯಾಗುವುದಕ್ಕೆ ಕಾರಣವೇನು? ಹಾಗೂ ಇವುಗಳ ಹಿನ್ನೆಲೆ ಏನು? ಮತ್ತು ಪರಿಹಾರವೇನು ಎನ್ನುವುದನ್ನು ತಿಳಿದುಕೊಂಡಲ್ಲಿ, ಸಮಯೋಚಿತ ಲಾಭವನ್ನೂ ಪಡೆಯಬಹುದಾಗಿದೆ.ದೇಶದ ಸಮಗ್ರ ಅಭಿವೃದ್ಧಿಗೆ (ಜಿ.ಡಿ.ಪಿ.). ಕೃಷಿ ಕೈಗಾರಿಕೆ ಹಾಗೂ ಇತರ ಸೇವೆಗಳು ಕಾರಣವಾಗಿರುತ್ತವೆ. ಈ ವಲಯದಲ್ಲಿ ಹೆಚ್ಚಿನ ಸಾಧನೆ ಕಾಣಲು ಬ್ಯಾಂಕುಗಳು ದೊಡ್ಡ ಮಟ್ಟದಲ್ಲಿ ಸಾಲ ಹಾಗೂ ಮುಂಗಡಗಳನ್ನು ನೀಡಬೇಕಾಗುತ್ತದೆ. ಹೀಗೆ ಆದ್ಯತಾ ರಂಗಗಳಿಗೆ ಸಾಲ ಹಾಗೂ ಮುಂಗಡಗಳನ್ನು ಕೊಡುವಾಗ, ವಿಧಿಸುವ ಬಡ್ಡಿ ದರಗಳಲ್ಲಿ ಬಹಳಷ್ಟು ಕಡಿಮೆ ಅಥವಾ ವಿನಾಯ್ತಿ ಕೊಡಬೇಕಾಗುತ್ತದೆ. ಈ ಕಾರಣದಿಂದ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿದರ ಕೂಡಾ ಕಡಿಮೆ ಮಾಡಬೇಕಾಗುತ್ತದೆ.ದೇಶದ ಆಂತರಿಕ ಆರ್ಥಿಕ ವ್ಯವಸ್ಥೆಗಳಿಗೆ ಅನುಗುಣವಾಗಿ ಕೇಂದ್ರ ಸರಕಾರದ ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್, ಆದ್ಯತಾರಂಗಗಳಿಗೆ ನೀಡುವ ಸಾಲಗಳ ಬಡ್ಡಿ ದರಗಳಲ್ಲಿ ಆಗಾಗ ಮಾರ್ಪಾಡು ಮಾಡುತ್ತಿರುತ್ತವೆ.

ಇದರಿಂದಾಗಿ ಕೆಲವೊಮ್ಮೆ ಕಡಿಮೆ ಬಡ್ಡಿ ಹಾಗೂ ಕೆಲವೊಮ್ಮೆ ಹೆಚ್ಚಿನ ಬಡ್ಡಿ ದರಗಳಿಗೆ ಸಾಲ ನೀಡುವುದರಿಂದ ಠೇವಣಿ ಮೇಲಿನ ಬಡ್ಡಿದರ ಕೂಡಾ ಏರಿಳಿತ  ಕಾಣುತ್ತಿರುತ್ತದೆ.ಹಣದ ಚಲಾವಣೆ  ಹಾಗೂ ಹಣದುಬ್ಬರಗಳೂ ಠೇವಣಿಗಳ ಮೇಲಿನ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುತ್ತವೆ. ಹಣದುಬ್ಬರ ತಡೆಯಲು ಹಣದ ಚಲಾವಣೆ  ನಿಯಂತ್ರಿಸಬೇಕಾಗುತ್ತದೆ.ಇಂತಹ ಸಂದರ್ಭಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳು ಕೊಡುವ ಸಾಲ ಹಾಗೂ ಮುಂಗಡಗಳನ್ನು ನಿಯಂತ್ರಿಸಲು, ಬ್ಯಾಂಕುಗಳು ಹೊಂದಿರುವ ಠೇವಣಿ ಮತ್ತು ನಗದುಗಳ   ಕೆಲವೊಂದು ಶೇಕಡಾವಾರು ಹಣ ತನ್ನಲ್ಲಿ ಇರಿಸಲು ಆಜ್ಞಾಪಿಸುತ್ತದೆ. ಜತೆಗೆ ಆರ್.ಬಿ.ಐ. ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿಯನ್ನೂ ಹೆಚ್ಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳು, ಠೇವಣಿಯ ಮೇಲಿನ ಬಡ್ಡಿ ದರಗಳನ್ನು ಏರಿಸುತ್ತವೆ.

ರಾಜ್ಯದಲ್ಲಿನ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಈಗ ಠೇವಣಿ ಮೇಲೆ ನೀಡುತ್ತಿರುವ

ಬಡ್ಡಿದರಗಳನ್ನು ಗಮನಿಸಿದರೆ, ಬಡ್ದಿದರಗಳ ಪೈಪೋಟಿಯ ಸ್ವರೂಪ ಸ್ವಲ್ಪ ತಿಳಿದಂತಾಗುತ್ತದೆ.
ನಿಶ್ಚಿತ ಅವಧಿ ಠೇವಣಿಗಳನ್ನು (Fixed Deposit) ಬ್ಯಾಂಕುಗಳಲ್ಲಿ 15 ದಿನಗಳಿಂದ 10 ವರ್ಷಗಳ ತನಕ ಸ್ವೀಕರಿಸುತ್ತಾರೆ. ಅವಧಿಗೆ ಅನುಗುಣವಾಗಿ ಬಡ್ಡಿದರ ಹೆಚ್ಚಾಗುತ್ತಾ ಹೋಗುತ್ತದೆ. ಕಡಿಮೆ ಸಮಯಕ್ಕೆ ಕಡಿಮೆ ಬಡ್ಡಿ ಹಾಗೂ ಹೆಚ್ಚಿನ ಅವಧಿಗೆ ಹೆಚ್ಚು ಬಡ್ಡಿ ದೊರೆಯುತ್ತಿರುತ್ತದೆ.ನಿಶ್ಚಿತ ಅವಧಿ ಠೇವಣಿ ಎಂದಾಕ್ಷಣ, ಹಣವನ್ನು ಒಂದು ಅವಧಿಗೆ ಇರಿಸಬೇಕು. ಅವಧಿಯಲ್ಲಿ, ಹಣ ಇರಿಸುವಾಗ ವಿಧಿಸಿರುವ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ಬ್ಯಾಂಕುಗಳು ಉಳಿದ ಅವಧಿಯಲ್ಲಿ ಘೋಷಣೆ ಮಾಡಿದರೆ, ಠೇವಣಿದಾರರಿಗೆ, ಹಾಗೆ ಘೋಷಿಸಿದ ಹೆಚ್ಚಿನ ಬಡ್ಡಿ ದೊರೆಯಲಾರದು. ಆದರೆ, ಇಂತಹ ಸಂದರ್ಭಗಳಲ್ಲಿ ಠೇವಣಿದಾರರು, ಬ್ಯಾಂಕುಗಳು ಪ್ರಕಟಿಸಿರುವ ಹೆಚ್ಚಿನ ಬಡ್ಡಿ ಉಳಿದ ಅವಧಿಗೆ ಪಡೆಯಲು ಒಂದು ಪರ್ಯಾಯ ಮಾರ್ಗವಿದೆ.ಉದಾಹರಣೆಗಾಗಿ ರಾಮರಾವ್ ಎನ್ನುವವರು ್ಙ 1,00,000  ಗಳನ್ನು ಯಾವುದೋ ಒಂದು ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ಶೇ 8ರ ಬಡ್ಡಿ ದರದಲ್ಲಿ ತಾ. 1.1.2010 ರಂದು ಠೇವಣಿ ಇರಿಸಿರುತ್ತಾರೆ. ಇವರು ಠೇವಣಿ ಇರಿಸಿರುವುದಕ್ಕೆ ಈಗ ಒಂದು ವರ್ಷ ಮುಗಿದಿದೆ.ಈಗ ಅಂದರೆ ತಾ. 1.1.2011 ರಲ್ಲಿ ಅವರು ಠೇವಣಿ ಇರಿಸಿದ ಬ್ಯಾಂಕ್, ಠೇವಣಿ ಮೇಲಿನ ಬಡ್ಡಿ ದರವನ್ನು 5 ವರ್ಷಗಳ ಅವಧಿಗೆ ಶೇ. 10ಕ್ಕೆ ಏರಿಸಿದೆ ಎಂದು ಭಾವಿಸೋಣ. ರಾಮರಾವ್ ಹೆಚ್ಚಿನ ಬಡ್ಡಿ ಪಡೆಯಲು ಮಾಡಬೇಕಾದ ವಿಧಾನ ಹೀಗಿದೆ. ಅವಧಿ ಠೇವಣಿ ಬಾಂಡ್ (Fixed Deposit Bond) ಠೇವಣಿ ಇರಿಸಿದ ಬ್ಯಾಂಕಿಗೆ ಹಿಂತಿರುಗಿಸಿ, ಹೆಚ್ಚಿನ ಬಡ್ಡಿ ಕೊಡುವಂತೆ ಬರಹದಲ್ಲಿ ವಿನಂತಿಸಬೇಕು.ಠೇವಣಿ ಇರಿಸಿ ಒಂದು ವರ್ಷ ಮುಗಿದಿರುವುದರಿಂದ, ಆ ಸಮಯದಲ್ಲಿ ಒಂದು ವರ್ಷಕ್ಕೆ ಸದರಿ ಬ್ಯಾಂಕಿನಲ್ಲಿ ನಮೂದಿಸಿರುವ ಠೇವಣಿ ಮೇಲಿನ ಬಡ್ಡಿ ಲೆಕ್ಕಹಾಕಿ ಅಸಲಿಗೆ ಸೇರಿಸಿ, ಹೊಸ ಠೇವಣಿ ಬಾಂಡನ್ನು ಇಂದಿನ ಹೊಸ ಬಡ್ಡಿದರ, ಶೇ 10 ನಮೂದಿಸಿ,  ರಾಮರಾವ್ ಪಡೆಯಬಹುದು.ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಾದಾಗಲೆಲ್ಲಾ, ಮೇಲೆ ತಿಳಿಸಿದ ನಮೂನೆಯಲ್ಲಿ ಠೇವಣಿದಾರರು ಹೆಚ್ಚಿನ ಬಡ್ಡಿ ಪಡೆಯುವ ಅವಕಾಶವಿದೆ, ಇದೇ ವೇಳೆ ಠೇವಣಿ ಇರಿಸಿದ ನಂತರ ಠೇವಣಿ ಮೇಲಿನ ಬಡ್ಡಿದರ, ಬ್ಯಾಂಕುಗಳು ಕಡಿಮೆ ಮಾಡಿದಲ್ಲಿ, ಯಾವುದೇ ಕಾರಣಕ್ಕೆ ಬಡ್ಡಿಯಲ್ಲಿ ಕಡಿತ  ಮಾಡುವಂತಿಲ್ಲ. ಬ್ಯಾಂಕ್ ಠೇವಣಿದಾರರು ಠೇವಣಿ ಮೇಲಿನ ಬಡ್ಡಿದರ ಏರಿಳಿತವಾದಾಗ ಜಾಗ್ರತೆಯಿಂದ ವರ್ತಿಸಿದಲ್ಲಿ ಹೆಚ್ಚಿನ ಆದಾಯ ಪಡೆಯಬಹುದು.ಬ್ಯಾಂಕ್‌ಗಳ ಪೈಪೋಟಿ

ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವಲ್ಲಿ ದೇಶಿ ಬ್ಯಾಂಕುಗಳಲ್ಲಿ ಇತ್ತೀಚೆಗೆ ಒಂದು ಹೊಸ ಸ್ಪರ್ಧೆಯೇ ಏರ್ಪಟ್ಟಿದೆ ಎನ್ನಬಹುದು. ಪ್ರತಿ ವಾರವೂ ಒಂದಲ್ಲ ಒಂದು ಬ್ಯಾಂಕು ಬಡ್ಡಿ ದರ ಹೆಚ್ಚಿಸುತ್ತಾ, ಸಾರ್ವಜನಿಕರಿಂದ ಹೆಚ್ಚು ಹೆಚ್ಚು ಠೇವಣಿ  ಸೆಳೆಯುವ ಪ್ರಯತ್ನ ಮಾಡುತ್ತಿವೆ. ಕಳೆದ  ಕೆಲವು ವಾರಗಳಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಲಭ್ಯತೆ ಕಡಿಮೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಜೊತೆಗೆ, ಸಾಲ ನೀಡುವ ಪ್ರಮಾಣವೂ ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಆದರೆ,  ಇದೇ ಏರಿಕೆ ಪ್ರಮಾಣದಲ್ಲಿ  ಠೇವಣಿಗಳು ಬ್ಯಾಂಕುಗಳಿಗೆ ದೊರೆಯುತ್ತಿಲ್ಲ.ಅದರಿಂದಾಗಿ ಸಾಲ ಮತ್ತು ಠೇವಣಿಗಳ ಅನುಪಾತ ವ್ಯತಿರಿಕ್ತವಾಗಿ ಬೆಳೆಯುತ್ತಿದ್ದು, ಬಹುತೇಕ ಎಲ್ಲಾ ಬ್ಯಾಂಕುಗಳಿಗೂ ಠೇವಣಿಗಳ ತೀವ್ರ ಅಗತ್ಯ ಉಂಟಾಗಿದೆ.ಅತ್ತ ಸಾಂಸ್ಥಿಕ ಠೇವಣಿಗಳೂ ಸಹಾ ಈಚಿನ ದಿನಗಳಲ್ಲಿ ಒಂದೋ ಲಭ್ಯವಾಗುತ್ತಿಲ್ಲ ಅಥವಾ ಹೆಚ್ಚಿನ ಬಡ್ಡಿಯ ಬೇಡಿಕೆ ಮುಂದಿಡುತ್ತಿವೆ. ಈ ರೀತಿಯ ಆರ್ಥಿಕ ವಾತಾವರಣವು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಇಚ್ಛಿಸುವಗ್ರಾಹಕರಿಗೆ ಸಂತಸ ತಂದಿರುವುದಂತೂ ನಿಜ. ಬಹುತೇಕ ಎಲ್ಲಾ   ಬ್ಯಾಂಕುಗಳೂ ಠೇವಣಿಯ ಮೇಲಿನ ಬಡ್ಡಿದರವನ್ನು ಕಳೆದ ಕೆಲವು ವಾರಗಳಲ್ಲಿ ಹೆಚ್ಚಿಸಿವೆ. ವಿವಿಧ ಅವಧಿಯ ಠೇವಣಿಗಳನ್ನು ಆಕರ್ಷಕವಾಗಿ ಘೋಷಿಸುವುದರಲೂ ್ಲಬ್ಯಾಂಕುಗಳಲ್ಲಿ ಪೈಪೋಟಿ ಕಂಡುಬರುತ್ತಿದೆ. 600 ದಿನಗಳ ಠೇವಣಿ, 555 ದಿನಗಳ ಠೇವಣಿ, 909 ದಿನಗಳ ಠೇವಣಿ, 1000 ದಿನಗಳ ಠೇವಣಿ - ಈ ರೀತಿಯ ಆಕರ್ಷಕ ಘೋಷಣೆಗಳ ಮೂಲಕ ವಿವಿಧ ಬ್ಯಾಂಕುಗಳು ಹೆಚ್ಚಿನ ಬಡ್ಡಿ ದರ ನೀಡುತ್ತಿರುವುದರಿಂದ, ಬ್ಯಾಂಕ್ ಖಾತೆದಾರರು ಬ್ಯಾಂಕಿನ ಠೇವಣಿಗಳತ್ತ ಆಕರ್ಷಿತರಾಗುತ್ತಿದ್ದಾರೆ. ಅತ್ತ ಷೇರು ಮಾರುಕಟ್ಟೆಯ ಏರಿಳಿತಗಳೂ ಬ್ಯಾಂಕ್ ಠೇವಣಿಯತ್ತ ಜನರ ಚಿತ್ತ ಹರಿಯುವಂತೆ ಮಾಡುತ್ತಿವೆ. ನಿವೃತ್ತ ನೌಕರರು, ಪಿಂಚಣಿದಾರರು ಮತ್ತು ಇತರ ಗ್ರಾಹಕರು ಬ್ಯಾಂಕ್ ಠೇವಣಿಗಳನ್ನು ಒಂದು ಲಾಭದಾಯಕ ಹೂಡಿಕೆಯೆಂದು ಪರಿಗಣಿಸುವ ಕಾಲ ಪುನಃ ಬಂದಿದೆ. ರಾಜ್ಯದಲ್ಲಿನ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಈಗ ಠೇವಣಿ ಮೇಲೆ ನೀಡುತ್ತಿರುವ ಬಡ್ಡಿದರಗಳನ್ನು ಗಮನಿಸಿದರೆ, ಬಡ್ದಿದರಗಳ ಪೈಪೋಟಿಯ ಸ್ವರೂಪ ಗಮನಕ್ಕೆ ಬರುತ್ತದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry