ಸೋಮವಾರ, ಜೂನ್ 14, 2021
26 °C

ಬಲ ಪ್ರದರ್ಶನಕ್ಕೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜಕೀಯ ಮರುಹುಟ್ಟು ಪಡೆಯಲು ಹೋರಾಟ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ಕಳುಹಿಸಲು ಸಂಘಟಿಸಿರುವ `ಬಲ ಪ್ರದರ್ಶನ~ಕ್ಕೆ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.`ಭಾನುವಾರ ನಡೆಯಲಿರುವ ಈ ಕಾರ್ಯಕ್ರಮ ಶಕ್ತಿಪ್ರದರ್ಶನಕ್ಕಲ್ಲ. ಕೇವಲ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ~ ಎಂದು ಕಾರ್ಯಕ್ರಮ ಸಂಘಟಕರು ಮತ್ತು ಅವರ ಬೆಂಬಲಿಗರು ಪದೇ ಪದೇ ಹೇಳಿಕೊಂಡಿದ್ದಾರೆ. ಆದರೆ ಕಾರ್ಯಕ್ರಮದ ಮೂಲ ಉದ್ದೇಶ ಮತ್ತೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಬಿಟ್ಟರೆ ಬೇರೆ ಏನೂ ಇಲ್ಲ. ರಾಜ್ಯದಲ್ಲಿ ಈಗಲೂ ತಾವೇ ಪಕ್ಷದ ಪ್ರಮುಖ ನಾಯಕ ಮತ್ತು ಪಕ್ಷದ ಮೇಲೂ ತಮ್ಮದೇ ನಿಯಂತ್ರಣವಿದೆ ಎಂಬುದನ್ನು ಸಾರುವ ಉದ್ದೇಶ ಇದರ ಹಿಂದೆ ಅಡಗಿದೆ ಎಂದು ಅವರ ವಿರೋಧಿ ವಲಯ ಹೇಳುತ್ತಿದೆ.`ಪ್ರತಿ ಬಾರಿ ಸಂಕಷ್ಟ ಎದುರಾದಾಗಲೆಲ್ಲಾ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಸಂಘಟಿಸುತ್ತೇನೆ~ ಎಂದು ಯಡಿಯೂರಪ್ಪ ಗುಡುಗುತ್ತಿದ್ದರು.

 

ಪ್ರಧಾನ್ ಭಾಗವಹಿಸುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ

ನವದೆಹಲಿ: ಹುಬ್ಬಳ್ಳಿಯಲ್ಲಿ ಭಾನುವಾರ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಹೈಕಮಾಂಡ್ ಪ್ರತಿನಿಧಿಯಾಗಿ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಧರ್ಮೇಂದ್ರ ಪ್ರಧಾನ್ ಭಾಗವಹಿಸುವ ನಿರೀಕ್ಷೆಯಿದೆ.ಪ್ರಧಾನ್ ಶನಿವಾರ ಬೆಂಗಳೂರಿಗೆ ತೆರಳಿದ್ದು, ರಾಜ್ಯದಲ್ಲಿನ ಬೆಳವಣಿಗೆ ಕುರಿತು ವಿವಿಧ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. ಆತುರದ ಹೆಜ್ಜೆಗಳನ್ನಿಟ್ಟು ಪಕ್ಷ- ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕೆಲಸ ಮಾಡಬಾರದೆಂಬ ವರಿಷ್ಠರ ಸಲಹೆಯನ್ನು ಪುನಃ ಮಾಜಿ ಮುಖ್ಯಮಂತ್ರಿಗೆ ತಲುಪಿಸಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಯಡಿಯೂರಪ್ಪ ವಿರುದ್ಧದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಪಡಿಸಿದ ಬಳಿಕ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಹೈಕಮಾಂಡ್ ಮೇಲೆ ಸತತ ಒತ್ತಡ ಹೇರಲಾಗುತ್ತಿದೆ. ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.ಆದರೆ, ಹೈಕಮಾಂಡ್ ಸದ್ಯಕ್ಕೆ ಯಡಿಯೂರಪ್ಪ ಒತ್ತಡಕ್ಕೆ ಮಣಿಯುವುದಿಲ್ಲ. ಮುಖ್ಯಮಂತ್ರಿ ಹುದ್ದೆ ಅಥವಾ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡುವುದಿಲ್ಲ. ಹೈಕೋರ್ಟ್ ತೀರ್ಪನ್ನು ವರಿಷ್ಠರು ಅಧ್ಯಯನ ಮಾಡುತ್ತಿದ್ದಾರೆ. ಯಡಿಯೂರಪ್ಪ ಮೇಲಿರುವ ಭೂಸ್ವಾಧೀನ ಅಧಿಸೂಚನೆ ರದ್ದಿಗೆ ಸಂಬಂಧಿಸಿದ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಮಾಜಿ ಮುಖ್ಯಮಂತ್ರಿ ಅವರನ್ನು ಸಮಾಧಾನಪಡಿಸುವ ಉದ್ದೇಶದಿಂದ ಪ್ರಮುಖ ಎರಡು ಸ್ಥಾನಗಳನ್ನು ಬಿಟ್ಟು ಮತ್ಯಾವ ಹೊಣೆಗಾರಿಕೆ ವಹಿಸಬಹುದು ಎಂಬ ಕುರಿತು ವರಿಷ್ಠರು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಪ್ರಭಾವದ ಲಾಭ ಪಡೆಯುವ ಉದ್ದೇಶದಿಂದ ಈ ಆಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈಗ ಸ್ವಯಂ ಅವರೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ತಮ್ಮ ಶಕ್ತಿ ಇನ್ನೂ ಕುಗ್ಗಿಲ್ಲ ಎಂಬುದನ್ನು ತೋರಿಸಲು ಈ ಸಮಾವೇಶವನ್ನು ಹುಬ್ಬಳ್ಳಿಯಲ್ಲಿಯೇ ಸಂಘಟಿಸಲಾಗಿದೆ. ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತ ವೀರಶೈವ ಸಮಾಜ ಈಗಲೂ ತಮ್ಮ ಬೆನ್ನಿಗಿದೆ ಎಂಬುದನ್ನು ಸಾಬೀತುಪಡಿಸುವ ಉದ್ದೇಶವೂ ಇದರ ಹಿಂದಿದೆ ಎನ್ನಲಾಗಿದೆ.ಕಾರ್ಯಕ್ರಮದಲ್ಲಿ ಭಾಗವಹಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಹಲವು ಮಂದಿ ರಾಷ್ಟ್ರೀಯ ನಾಯಕರಿಗೆ ಆಹ್ವಾನ ಹೋಗಿದೆಯಾದರೂ ಅವರಾರೂ ಭಾಗವಹಿಸುವ ಸಂಭವ ಇಲ್ಲ.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೂ ಆಹ್ವಾನ ಹೋಗಿದೆ. `ಸಾಧ್ಯವಾದರೆ ಭಾಗವಹಿಸುತ್ತೇನೆ~ ಎಂದು ಅವರೂ ಹೇಳಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತ್‌ಕುಮಾರ್ ಅವರು ಭಾಗವಹಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ಹೇಳಿವೆ. ಆದರೆ, ನಾನಾ ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಾಗಿದೆ.ಆದರೆ ಯಡಿಯೂರಪ್ಪ ಅವರೇ ಖುದ್ದಾಗಿ ಹಲವಾರು ಶಾಸಕರಿಗೆ ಕಾರ್ಯಕ್ರಮಕ್ಕೆ ಬರಬೇಕು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಬಿಜೆಪಿಯ ಉತ್ತರ ಕರ್ನಾಟಕ ಭಾಗದ ಸಂಸದರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು, ಸುಮಾರು ಎರಡು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿಂದ ನೆಹರೂ ಕ್ರೀಡಾಂಗಣದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದೆ. 40,000 ಕುರ್ಚಿಗಳನ್ನು ಹಾಕಲು ಉದ್ದೇಶಿಸಲಾಗಿದೆ. ಊಟದ ವ್ಯವಸ್ಥೆಯನ್ನು  ಜನರೇ ಮಾಡಿಕೊಳ್ಳಬೇಕಿದ್ದು, ಕುಡಿಯುವ ನೀರನ್ನು ಮಾತ್ರ ಒದಗಿಸುವುದಾಗಿ ಸಂಘಟಕರು ಹೇಳಿದ್ದಾರೆ. ವಿವಿಧ ಜಿಲ್ಲೆಗಳಿಂದ ಸಮಾವೇಶಕ್ಕೆ ಬರಲು ಜನರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ.ಅಕ್ರಮ ಗಣಿಗಾರಿಕೆ ಸಂಬಂಧ ಅವರ ವಿರುದ್ಧ ಹೈಕೋರ್ಟ್‌ನಲ್ಲಿದ್ದ ಮೊಕದ್ದಮೆ ವಜಾಗೊಂಡ ನಂತರ  ಯಡಿಯೂರಪ್ಪ ಭಾಗವಹಿಸುವ ಮೊದಲ ಕಾರ್ಯಕ್ರಮ ಇದಾಗಿರುವುದು ಕೂಡ ವಿಶೇಷ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು  ತಮಗಾಗದವರ ವಿರುದ್ಧ ಸಭೆಯಲ್ಲಿ ಚಾಟಿ ಬೀಸುವ ಸಾಧ್ಯತೆ ಇದೆ.ಯಡಿಯೂರಪ್ಪ ಅವರ ನಡೆ ಹೈಕಮಾಂಡ್‌ಗೆ ಹಿಡಿಸಿಲ್ಲ. ಅಲ್ಲದೇ ಭಾನುವಾರದ ಈ ಸಮಾವೇಶ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರ ವಿರುದ್ಧದ ಎಲ್ಲ ಮೊಕದ್ದಮೆಗಳು ಇತ್ಯರ್ಥವಾಗಿ ನಿರಪರಾಧಿ ಎಂಬದು ಸಾಬೀತಾಗುವವರೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇಲ್ಲ ಎಂದು ಅವರ ವಿರೋಧಿ ವಲಯ ಹೇಳುತ್ತದೆ.ಯಡಿಯೂರಪ್ಪ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, ತಮ್ಮ ಬೇಡಿಕೆಯನ್ನು ಅಷ್ಟು ಸುಲಭವಾಗಿ ಅವರು ಬಿಡುವುದಿಲ್ಲ. ಈಗ ಮುಖ್ಯಮಂತ್ರಿ ಗಾದಿಗೆ ಮತ್ತೆ ಏರಲು ಆಗದಿದ್ದರೆ ಮುಂದೆ ದೊರೆಯದಿರಬಹುದು ಎಂಬ ಆತಂಕವೂ ಅವರಲ್ಲಿದೆ. ಹಾಗಾಗಿ ಈ ಸಮಾವೇಶ ಯಡಿಯೂರಪ್ಪ ಅವರಿಗೆ ಬಹಳ ಮುಖ್ಯವಾದುದು. ಅವರ ನಿರೀಕ್ಷಿಸಿರುವಷ್ಟು ಸಂಖ್ಯೆಯ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅದು ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತದೆ. ಅಂತಹ ಸಂದರ್ಭದಲ್ಲಿ ಹೈಕಮಾಂಡ್ ಕೂಡ ಅವರ ಬೇಡಿಕೆಯನ್ನು ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎನ್ನಲಾಗಿದೆ.ತೀರಾ ಇತ್ತೀಚಿನವರೆಗೂ ಯಡಿಯೂರಪ್ಪ ಅವರ ವಿರೋಧಿ ಪಾಳೆಯದಲ್ಲಿಯೇ ಗುರುತಿಸಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರನ್ನೂ ಈಗ ಯಡಿಯೂರಪ್ಪ ತಮ್ಮ ಪಾಳೆಯಕ್ಕೇ ಎಳೆದುಕೊಂಡಿದ್ದು ಸಮಾವೇಶದ ಯಶಸ್ಸಿಗೆ ಅವರೂ ಟೊಂಕ ಕಟ್ಟಿ ನಿಂತಿದ್ದಾರೆ.ಜಗದೀಶ ಶೆಟ್ಟರ ಅವರೊಂದಿಗೆ, ಸಚಿವರಾದ ಬಸವರಾಜ ಬೊಮ್ಮಾಯಿ  ಹಾಗೂ ಸಿ.ಎಂ.ಉದಾಸಿ ಶನಿವಾರ ನೆಹರೂ ಮೈದಾನದಲ್ಲಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶೆಟ್ಟರ, ಯಡಿಯೂರಪ್ಪ ಅವರು ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಉತ್ತರ ಕರ್ನಾಟಕದ ಜನರಿಗೆ ತಿಳಿಸಿಕೊಡುವುದೇ ಸಭೆಯ ಉದ್ದೇಶ ಎಂದು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.