ಬಳಕೆಯಾಗದ ಅನುದಾನ: ನೋಟಿಸ್

7

ಬಳಕೆಯಾಗದ ಅನುದಾನ: ನೋಟಿಸ್

Published:
Updated:

ಶಿರಸಿ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೂಕ್ತ ಸಮಯದಲ್ಲಿ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ಸಾದ ಅನುದಾನದ ಮೊತ್ತ 32 ಲಕ್ಷ ರೂಪಾಯಿಯೇ? ಅಥವಾ 16 ಲಕ್ಷ ರೂಪಾಯಿಯೇ?

ಈ ಕುರಿತು ಸ್ವತಃ ಜನಪ್ರತಿನಿಧಿಗಳಿಗೇ ಮಾಹಿತಿ ಇಲ್ಲ. ಇಲಾಖೆ ಅಧಿಕಾರಿಗಳ ಹೇಳಿಕೆ ಪ್ರಕಾರ ಎರಡೂ ಮೊತ್ತವೂ ಹೌದು!ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುರಿತು ಒಂದು ತಾಸು ಕಾಲ ಸುದೀರ್ಘ ಚರ್ಚೆ ನಡೆಯಿತು.ವಿಷಯ ಪ್ರಸ್ತಾಪಿಸಿದ ಸದಸ್ಯ ಸಂತೋಷ ಗೌಡ `ಇಲಾಖೆಯಿಂದ ಖರ್ಚಾಗದೇ ಮಾರ್ಚ್ ಕೊನೆಯಲ್ಲಿ ಸರ್ಕಾರಕ್ಕೆ ವಾಪಸ್ಸಾದ ಹಣದ ಮೊತ್ತ ರೂ 32 ಲಕ್ಷ ಎಂದು ಇಲಾಖೆ ಅಧಿಕಾರಿ ಹೇಳಿದ್ದರು. ಆದರೆ ಈ ಬಾರಿ ಅದನ್ನು ರೂ 16 ಲಕ್ಷ ಎಂದು ಹೇಳಲಾಗುತ್ತಿದೆ. ಇದೇನು ಜನಪ್ರತಿನಿಧಿಗಳನ್ನು ನಂಬಿಸುವ ಪರಿಯೇ~ ಎಂದು ಪ್ರಶ್ನಿಸಿದರು.`ತಾಲ್ಲೂಕಿನಲ್ಲಿ ಸಾಕಷ್ಟು ಅಂಗನವಾಡಿಗಳು ಕಟ್ಟಡ, ಚಾಪೆ, ಡಬ್ಬಗಳಿಲ್ಲದೆ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಹೀಗಿರುವಾಗ ಇಲಾಖೆಗೆ ದೊರೆತ ಅನುದಾನ ಸದ್ಬಳಕೆ ಆಗದೆ ವಾಪಸ್ ಆಗಿರುವದಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಇಲಾಖೆ ಅಧಿಕಾರಿ ಹೊಣೆಗಾರರಾಗಿದ್ದಾರೆ.

 

ಅನೇಕ ತಿಂಗಳುಗಳಿಂದ ಇಲಾಖೆಗೆ ಎಚ್ಚರಿಕೆ ನೀಡುತ್ತ ಬಂದಿದ್ದರೂ ಇಲಾಖೆ ಕಾರ್ಯಕ್ರಮದ ಕ್ರಿಯಾಯೋಜನೆ ಸಿದ್ಧಪಡಿಸದೆ ಹಣ ಸರ್ಕಾರಕ್ಕೆ ವಾಪಸ್ಸಾಗಿದೆ. ಮಾರ್ಚ್ 31ರ ಸಂಜೆ 4.30ಗಂಟೆಗೆ ಹಣ ಬಿಡುಗಡೆಯಾಗಿದೆ. ಪೂರ್ವಭಾವಿಯಾಗಿ ಯೋಜನೆ ಸಿದ್ಧಪಡಿಸಿದ್ದರೆ ಹಣ ಸದ್ಬಳಕೆ ಮಾಡಿಕೊಳ್ಳಬಹುದಿತ್ತು~ ಎಂಬ ಸಂತೋಷ ಗೌಡರ ಆರೋಪಕ್ಕೆ ಸದಸ್ಯರಾದ ಸುನೀಲ ನಾಯ್ಕ ಮತ್ತು ಸುರೇಶ ನಾಯ್ಕ ದನಿಗೂಡಿಸಿದರು.ಇಲಾಖೆ ಅಧಿಕಾರಿ ಕಮಲಾ ನಾಯ್ಕ ಉತ್ತರಿಸಿ ರೂ 22 ಲಕ್ಷ ಅನುದಾನದಲ್ಲಿ ರೂ 16 ಲಕ್ಷ ವಾಪಸ್ಸಾಗಿದೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಆಗಿದ್ದು, ಈ ಹಣ ಬಳಕೆ ಮಾಡಲಾಗಿದೆ ಎಂದರು.ಇಒಗೆ ನೋಟಿಸ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಣ ಮಾರ್ಚ್ ಕೊನೆಯಲ್ಲಿ ಸರ್ಕಾರಕ್ಕೆ ವಾಪಸ್ಸಾಗಿರುವ ಕುರಿತು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ದೀರ್ಘ ಚರ್ಚೆ ನಡೆದಿದೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಅದಕ್ಕೆ ಪ್ರತಿಯಾಗಿ ಮುಖ್ಯ ಕಾರ್ಯದರ್ಶಿ ಶಿರಸಿ ತಾ.ಪಂ. ಇಒಗೆ ನೋಟಿಸ್ ಕಳುಹಿಸಿದ್ದಾರೆ ಎಂದು ಜಿ.ಪಂ. ಸದಸ್ಯೆ ಉಷಾ ಹೆಗಡೆ ಹೇಳಿದರು.ತಾ.ಪಂ. ಇಒ ಎಂ.ಕೆ.ವಾಳ್ವೇಕರ ಮಾತ್ರ ತಮಗೆ ನೋಟಿಸ್ ಬಂದಿಲ್ಲವೆಂದು ಹೇಳಿದರು. ಇದಕ್ಕೆ ಪ್ರತಿಯಾಗಿ ತಾ.ಪಂ. ಅಧ್ಯಕ್ಷೆ ಸುಮಂಗಲಾ ಭಟ್ಟ ಕಾರ್ಯನಿರ್ವಹಣಾಧಿಕಾರಿಗೆ ಕಳುಹಿಸಿದ ನೋಟಿಸ್‌ನ್ನು ಮಾಹಿತಿಗಾಗಿ ತಮಗೂ ಒಂದು ಪ್ರತಿ ಕಳುಹಿಸಿದ್ದಾರೆ ಎಂದು ತೋರಿದಾಗ ಕಾರ್ಯನಿರ್ವಹಣಾಧಿಕಾರಿ ಸುಮ್ಮನಾದರು.ಸಾರಿಗೆ ಇಲಾಖೆ ಕಾರ್ಯವೈಖರಿ ಕುರಿತು ಸದಸ್ಯರಾದ ದತ್ತಾತ್ರೇಯ ವೈದ್ಯ ಹಾಗೂ ಗುರುಪಾದ ಹೆಗಡೆ, ನೇತ್ರಾವತಿ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ಅಧಿಕಾರಿಯಿಂದ ಸೂಕ್ತ ಉತ್ತರ ದೊರೆಯದ ಕಾರಣ ಡಿಪೋ ವ್ಯವಸ್ಥಾಪಕರನ್ನು ಸಭೆಗೆ ಕರೆಸಲಾಯಿತು. ಇಲಾಖೆಯಿಂದ ಸಮಸ್ಯೆಗಳನ್ನು ಅವರು ಬಗೆಹರಿಸುವ ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry