ಶುಕ್ರವಾರ, ಮೇ 27, 2022
21 °C

ಬಳಕೆಯಾಗದ ಸಿಎಂ 5 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ. ಕೋಟೆ: ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅನುದಾನದಡಿ ಬಂದಿರುವ 5 ಕೋಟಿ  ರೂಪಾಯಿಗಳು ಬಂದು ಎರಡು ವರ್ಷಗಳಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಳಕೆಯಾಗಿಲ್ಲ.ಪಟ್ಟಣದ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿವೆ. ಆದ್ದರಿಂದ ತುರ್ತಾಗಿ ರಸ್ತೆ ನಿರ್ಮಾಣ ಮಾಡಬೇಕಾಗಿದೆ.  ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತದೆ. ಕೆಲವು ಭಾಗದಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ನಿಂತು ಕೊಳತೆ ನಾರುತ್ತಿದ್ದು, ಕ್ರಿಮಿಕೀಟಗಳು ಉಗಮ ಸ್ಥಾನವಾಗಿ ಮಾರ್ಪಟ್ಟಿವೆ.ಪಟ್ಟಣದ ಅಭಿವೃದ್ಧಿಗಾಗಿ ಎರಡು ಬಾರಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಕ್ರಿಯಾ ಯೋಜನೆಯನ್ನು ಸರಿಯಾಗಿ ತಯಾರಿಸಿಲ್ಲ ಎನ್ನುವ ಕಾರಣಕ್ಕಾಗಿ ಹಿಂದಿನ ಜಿಲ್ಲಾಧಿಕಾರಿ  ಪಿ.ಮಣಿವಣ್ಣನ್ ವಾಪಸ್ ಕಳುಹಿಸಿ, ಸರಿಯಾದ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಸೂಚಿಸಿದ್ದರು.2.25 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಪಟ್ಟಣ  ಪಂಚಾಯಿತಿಯ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದು ತಿಂಗಳಾಗುತ್ತಾ ಬಂದರೂ ಬದಲಿ  ಅಧಿಕಾರಿಯನ್ನು ನೇಮಿಸಿಲ್ಲ ಹಾಗೂ ಎಂಜಿನಿಯರ್ ಆರೋಗ್ಯ ಸಮಸ್ಯೆಯಿಂದ ರಜೆಯಲ್ಲಿ ತೆರಳಿದ್ದಾರೆ. ಇದರಿಂದ  ಮುಖ್ಯಮಂತ್ರಿಗಳ ಅನುದಾನದಲ್ಲಿ ಆಗಿರುವ ಟೆಂಡರ್ ಕಾಮಗಾರಿ ಪ್ರಾರಂಭಿಸಲು ತಡವಾಗುತ್ತಿದೆ.ಹೌಸಿಂಗ್ ಬೋರ್ಡ್ ಕಾಲೋನಿ ವ್ಯಾಪ್ತಿಯು ಪಟ್ಟಣ ಪಂಚಾಯಿತಿಯ 2 ವಾರ್ಡ್‌ಗಳನ್ನೊಳಗೊಂಡಿದ್ದು 2008-09 ರಲ್ಲಿ ಸುಮಾರು 20 ಲಕ್ಷದಷ್ಟು ಹಣ ಬಳಕೆಯಾಗಿದ್ದು, 2009-10 ರಲ್ಲಿ 15 ಲಕ್ಷದಷ್ಟು  ಬಳಕೆಯಾಗಿದೆ. ಅನುದಾನಗಳು ಈ ಭಾಗಕ್ಕೆ ಅತೀ ಹೆಚ್ಚು ಬಳಕೆಯಾಗುತ್ತಿದ್ದರೂ ಅಭಿವೃದ್ಧಿ ಕಾಣದೇ ಇರುವುದು  ಇಲ್ಲಿನ ನಾಗರಿಕರಲ್ಲಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಬಡಾವಣೆಯ ಕೆಲವು ಭಾಗಗಳ ಖಾಲಿ ನಿವೇಶನಗಳಿದ್ದು, ನಿವೇಶನದ ಮಾಲೀಕರು ಸ್ವಚ್ಛತೆ ಮಾಡುವುದಿಲ್ಲ. ಈ  ಬಡಾವಣೆಯಲ್ಲಿ ಮೂರು ಪಾರ್ಕ್‌ಗಳಿದ್ದು ಅವುಗಳಲ್ಲಿ ಗಿಡಮರಗಳು ಬೆಳೆದು ಮರಗಳಾಗಿವೆ. ಹಾವು ಚೇಳುಗಳು  ಮನೆಗಳನ್ನು ಪ್ರವೇಶಿಸುತ್ತವೆ. ಅವುಗಳನ್ನು ಸ್ವಚ್ಛ ಮಾಡುವ ಗೋಜಿಗೆ ಯಾರೂ ಸಹ ಪ್ರಯತ್ನಿಸಿಲ್ಲ. ಇದರಿಂದ  ಅಲ್ಲಿನ ನಿವಾಸಿಗಳಿಗೆ ಪಾರ್ಕ್ ಇದ್ದೂ ಉಪಯೋಗಕ್ಕೆ ಬಾರದಿರುವುದು ಬೇಸರವನ್ನುಂಟುಮಾಡಿದೆ.ಈ ವಾರ್ಡ್‌ಗಳ ಸದಸ್ಯರನ್ನು ಪ್ರಶ್ನಿಸಿದರೆ ‘ನಮ್ಮ ವಾರ್ಡ್‌ನಲ್ಲಿ ರೂ.20 ಲಕ್ಷದಷ್ಟು ಚರಂಡಿ  ಕಾಮಗಾರಿಗಳನ್ನು ಮಾಡಿದ್ದೇವೆ’ ಎನ್ನುತ್ತಾರೆ.

 ಸತೀಶ್ ಬಿ.ಆರಾಧ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.