ಭಾನುವಾರ, ಮೇ 16, 2021
28 °C

ಬಳಕೆ ಮಾಡದಿದ್ದರೆ ಅನುದಾನ ಕಡಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ವಿಶೇಷ ಘಟಕ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಅವಧಿಯ ಒಳಗೆ ಬಳಕೆ ಮಾಡದಿದ್ದರೆ ಮುಂದಿನ ಸಾಲಿನಲ್ಲಿ ಅನುದಾನ ಕಡಿತವಾಗಲಿದೆ ಎಂದು ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ್ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು.ವಿಶೇಷ ಘಟಕ ಯೋಜನೆ ಅಡಿ ಜಿಲ್ಲೆಯಲ್ಲಿ ಅನುಷ್ಠಾನ ತೃಪ್ತಿದಾಯಕವಾಗಿಲ್ಲ. ಹಲವು ಇಲಾಖೆಗಳು ಇನ್ನೂ ಈ ಕುರಿತು ಕಾರ್ಯಕ್ರಮ ರೂಪಿಸಿಲ್ಲ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ರಾಜ್ಯದ ಸರಾಸರಿಗಿಂತ ಹೆಚ್ಚಾಗಿದ್ದು, ಹೆಚ್ಚಿನ ಅನುದಾನ ಲಭ್ಯವಾಗಿದೆ.ಆದರೆ, ಇದರ ಸಮರ್ಪಕ ಬಳಕೆ ನಡೆಯಬೇಕಿದೆ. ಅನುದಾನ ಸಂಪೂರ್ಣ ಬಳಕೆಯಾಗದಿದ್ದರೆ ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು. ಅವರ ವಾರ್ಷಿಕ ವರದಿಯಲ್ಲಿ ಇದನ್ನು ನಮೂದಿಸಬೇಕು. ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮಗಳ ನಿರಂತರ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.ಎಲ್ಲ ಯೋಜನೆಗಳ ಮಾಹಿತಿಯನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. ಇದರ ಬಗ್ಗೆ ಎಲ್ಲ ಇಲಾಖೆಗಳಿಗೆ ತರಬೇತಿ ನೀಡಲಾಗುತ್ತಿದೆ. ಕಂಪ್ಯೂಟರೀಕರಣಗೊಳಿಸುವ  ಮೂಲಕ ಪ್ರಗತಿಯನ್ನು ಸಮರ್ಪಕವಾಗಿ  ಪರಿಶೀಲನೆ ನಡೆಸಲು ಸಾಧ್ಯವಿದೆ. ಮುಂದಿನ ಎರಡು ತಿಂಗಳಲ್ಲಿ ಕಂಪ್ಯೂಟರ್ ತರಬೇತಿ ಎಲ್ಲ ಇಲಾಖೆಗಳಿಗೆ ನೀಡಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಎಲ್ಲ ಅರ್ಹ ಮಕ್ಕಳಿಗೆ ಬೈಸಿಕಲ್, ಸಮವಸ್ತ್ರ ಮತ್ತು ಪಠ್ಯಪುಸ್ತಕವನ್ನು ವಿತರಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಜೀವ್ ಕುಮಾರ್ ಹೇಳಿದರು.ಜಿಲ್ಲೆಗೆ ನಾಲ್ಕು ಹೊಸ ರೈತ ಸಂಪರ್ಕ ಕೇಂದ್ರಗಳು ಮಂಜೂರಾಗಿವೆ. ಇದನ್ನು ತಕ್ಷಣ ನಿರ್ಮಿಸಲು ನಿವೇಶನ ಗುರುತಿಸಬೇಕು. ಹೊಸದಾಗಿ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕೇಂದ್ರಗಳ ಗುಣಮಟ್ಟವನ್ನು ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಬೇಕು.ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಜಿಲ್ಲೆಗೆ 3 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆಗೆ ಹೆಚ್ಚಿನ ಅವಕಾಶ ಇದ್ದು, ಇನ್ನಷ್ಟು ಅನುದಾನ ಒದಗಿಸಲು ಅವಕಾಶ ಇದೆ. ಲಭ್ಯ ಅನುದಾನ ಸಮರ್ಪಕವಾಗಿ ಖರ್ಚು ಮಾಡಿ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ  ವಿಶೇಷ ಅಭಿವೃದ್ಧಿ ಯೋಜನೆ ಅಡಿ ಒಟ್ಟು 815 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಫಲಾನುಭವಿಗಳ ಆಯ್ಕೆ ಕಾರ್ಯ ನಡೆಯುತ್ತಿದ್ದು ಆದಷ್ಟು ಬೇಗನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಉದ್ಯೋಗ ಮೇಳದಿಂದ ಎಷ್ಟು ಅಭ್ಯರ್ಥಿಗಳು ಲಾಭ ಪಡೆದಿದ್ದಾರೆ. ಎಷ್ಟು ಮಂದಿ ಉದ್ಯೋಗಗಳಲ್ಲಿ ಮುಂದುವರಿದಿದ್ದಾರೆ ಎಂಬ ಕುರಿತು ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಡಿ ಮಂಜೂರಾಗಿರುವ 143 ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಅದೇ ರೀತಿ ಶಾಸಕರ ಅಭಿವೃದ್ಧಿ ನಿಧಿ ಅಡಿ ಕಳೆದ ಐದು ವರ್ಷಗಳಲ್ಲಿ ಮಾಡಲಾಗಿರುವ ವೆಚ್ಚ, ಉಳಿದಿರುವ ಕಾಮಗಾರಿಗಳು ಹಾಗು ಅನುದಾನದ ವಿವರಗಳನ್ನು ಒದಗಿಸಲು ಸೂಚಿಸಿದರು. ಗುಲ್ಬರ್ಗ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯೆಲ್, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ನಾಯಕ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.