ಬಳಲಿದ ಪಾದಗಳಿಗೆ ಬಂತು ಪಾದರಸದಂಥ ಶಕ್ತಿ

ಸೋಮವಾರ, ಜೂಲೈ 22, 2019
27 °C

ಬಳಲಿದ ಪಾದಗಳಿಗೆ ಬಂತು ಪಾದರಸದಂಥ ಶಕ್ತಿ

Published:
Updated:

ಬೆಂಗಳೂರು: ನಡೆಯಲು ಇನ್ನು ಸಾಧ್ಯವೇ ಇಲ್ಲ ಎಂಬಂತಾಗಿದ್ದ ವೃದ್ಧರೊಬ್ಬರು ಈಗ ಪಾದರಸದಂತೆ ಚಲಿಸುತ್ತಿದ್ದಾರೆ. `ವಾಕರ್~ ಹಿಡಿದು ಅತ್ತಿಂದಿತ್ತ ಓಡಾಡುತ್ತಾ `ಈಗ ಆಲ್‌ರೈಟ್~ ಎಂದು ಬೀಗುತ್ತಿದ್ದಾರೆ. ಅವರ ಆತ್ಮವಿಶ್ವಾಸದ ಹಿಂದಿನ ಶಕ್ತಿ ನಗರದ ಸಂಜಯಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸೆ ಆಸ್ಪತ್ರೆ.

ಚಿತ್ರದುರ್ಗದ ವೀರಣ್ಣ ಸಿಐಡಿಯ ನಿವೃತ್ತ ಸಬ್ ಇನ್ಸ್‌ಪೆಕ್ಟರ್. ವಯಸ್ಸು 88ರ ಆಸುಪಾಸು. ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ ಕಾಲದಲ್ಲಿ ಭದ್ರತಾ ಅಧಿಕಾರಿಯಾಗಿದ್ದರು. ವೃತ್ತಿ ಬದುಕಿನ ಬಹುತೇಕ ದಿನಗಳನ್ನು `ಕಾಲಿಗೆ ಚಕ್ರ ಕಟ್ಟಿಕೊಂಡೇ~ ಕಳೆದವರು. ಅವರು ಅಲೆಯದ ಊರುಗಳಿಲ್ಲ, ಕಾಣದ ಜಾಗಗಳು ಇಲ್ಲ. ಅಂತಹವರು ಒಂದು ದಿನ ಓಡಾಡಲು ಸಾಧ್ಯವಾಗದಂಥ ಸ್ಥಿತಿ ಎದುರಾಯಿತು.

ಸುಮಾರು ಒಂದು ವರ್ಷದ ಹಿಂದೆ ಮನೆಯಲ್ಲಿ ಇದ್ದಕ್ಕಿದ್ದಂತೆ ಜಾರಿ ಬಿದ್ದರು. ಸ್ವತಃ ವೈದ್ಯರಾಗಿರುವ ಅವರ ಅಳಿಯ, ಮೊಮ್ಮಕ್ಕಳು ಹಿರಿಯ ಜೀವವನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಿದರು. ಸೊಂಟದ ಬಳಿ ತೊಡೆಯ ಮೂಳೆ ಮುರಿದಿರುವುದು ಪತ್ತೆಯಾಯಿತು.

ಆಪರೇಷನ್ ಏನೋ ಮುಗಿಯಿತು. ಆದರೆ ನೋವು ಮಾತ್ರ ಶಮನವಾಗಲಿಲ್ಲ. ಬಲಗಾಲು ತಿರುಚಿಕೊಂಡು ನಡೆದಾಡುವುದು ದುಸ್ತರವಾಯಿತು. ಮೂಳೆ ಸರಿಯಾದ ಜಾಗದಲ್ಲಿ ಕೂರದೇ ಒಂದು ಕಾಲು ಚಿಕ್ಕದಾಗಿತ್ತು. ನಿತ್ಯ ಕರ್ಮಗಳು ಕೂಡ ದುಸ್ತರವಾದಾಗ `ಬದುಕಿನ ಸರ್ವೀಸ್~ಗೇ ವಿದಾಯ ಹೇಳಬೇಕು ಎನ್ನಿಸಿತ್ತು ಈ ನಿವೃತ್ತ ಅಧಿಕಾರಿಗೆ.

ಆಗ ಅವರಿಗೆ ಹೊಳೆದಿದ್ದು ಸಂಜಯಗಾಂಧಿ ಆಸ್ಪತ್ರೆಯ ಹಾದಿ. ಡಾ.ವೈ.ಎಸ್. ಶಿವಕುಮಾರ್ ಹಾಗೂ ವೈದ್ಯರ ತಂಡ ಮೊದಲನೇ ಶಸ್ತ್ರಚಿಕಿತ್ಸೆಯ ವೈಫಲ್ಯಗಳನ್ನು ಅಧ್ಯಯನ ಮಾಡಿತು. ಸಡಿಲಗೊಂಡ ಚಂಡಿನ ಮಾದರಿಯ ರಾಡನ್ನು ಬದಲಿಸಲು ನಿರ್ಧರಿಸಿತು.

ಸೊಂಟದ ಮೂಳೆಯೊಳಗೆ ದೃಢವಾಗಿ ಕೂರುವ ತೊಡೆಯ ಭಾಗ ಸರಾಗವಾಗಿ ಚಲಿಸಲು ಸಾಧ್ಯವಾಗುವಂಥ ಸಾಕೆಟ್ ಬಾಲ್ ಹೊಂದಿರುವ ರಾಡ್ ಅವಶ್ಯಕತೆ ಇತ್ತು. ಅಮೆರಿಕದಿಂದ ರಾಡ್ ಆಮದು ಮಾಡಿಕೊಳ್ಳಲಾಯಿತು. ವಿಶೇಷ ಎಂದರೆ `ಸಿಮೆಂಟ್~ ಬಳಸದೆಯೂ ಭದ್ರವಾಗಿ ನೆಲೆಯೂರುವಂಥ ಸುಧಾರಿತ ಮಾದರಿಯಾಗಿತ್ತು ಅದು.

ಒಟ್ಟು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸೂಕ್ಷ್ಮವಾಗಿ ತೊಡೆ ಮೂಳೆಯ ಭಾಗವನ್ನು ಕೊರೆದು ರಾಡ್ ಜೋಡಿಸಲಾಯಿತು. ಇದರಿಂದ ವೀರಣ್ಣನವರಿಗೆ ಆದ ಉಪಯೋಗಗಳೆಂದರೆ ಸರಿಯಾಗಿ ಜೋಡಣೆಯಾಗದೇ ಗಿಡ್ಡವಾಗಿದ್ದ ಕಾಲು ಮರಳಿ ಸ್ವಸ್ಥಾನಕ್ಕೆ ಸೇರಿತು. ತಿರುಚಿಕೊಂಡಿದ್ದ ಕಾಲು ನೇರವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನೋವು ಮಾಯವಾಗಿತ್ತು. 

ಆದರೆ ಆಪರೇಷನ್ ವೇಳೆ ಅರಿವಳಿಕೆ ನೀಡಿದಾಗ ವೃದ್ಧರಾದ ವೀರಣ್ಣನವರ ನಾಡಿ ಮಿಡಿತ ತೀವ್ರವಾಗಿ ಪ್ರಾಣಕ್ಕೆ ಅಪಾಯ ಎನ್ನುವ ಮಟ್ಟಕ್ಕೆ ಕುಸಿಯಿತು. ಆಗ ತಕ್ಷಣ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಸುದ್ದಿ ಮುಟ್ಟಿಸಲಾಯಿತು. ಎರಡೂ ಆಸ್ಪತ್ರೆಯ ತಜ್ಞ ವೈದ್ಯರ ನೆರವಿನಿಂದ ವೀರಣ್ಣ ಗುಣಮುಖರಾದರು.

ಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಡಾ.ಶಿವಕುಮಾರ್, `ವಯಸ್ಸಾದವರಿಗೆ ಇಂತಹ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಸಂಗತಿಯಾಗಿತ್ತು. ಎರಡನೇ ಬಾರಿ ಆಪರೇಷನ್ ನಡೆಸಬೇಕಿದ್ದರಿಂದ ವಿಶೇಷ ಎಚ್ಚರಿಕೆ ವಹಿಸಿದ್ದೆವು. ತೊಡೆಯ ಕೀಲಿನ ಸಂಪೂರ್ಣ ಬದಲಿ ಜೋಡಣೆ ಕಾರ್ಯ ನಡೆದಿದೆ~ ಎನ್ನುತ್ತಾರೆ.

ಶಸ್ತ್ರಚಿಕಿತ್ಸೆಗೆ ಒಟ್ಟು 1 ಲಕ್ಷ 35 ಸಾವಿರ ಖರ್ಚಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಆಪರೇಷನ್‌ಗೆ ತಗಲುವ ಮೊತ್ತ 2ರಿಂದ 3 ಲಕ್ಷ ರೂಪಾಯಿ.

`ಸರ್ವೀಸ್‌ನಲ್ಲಿದ್ದಾಗ ನನ್ನನ್ನು ಹಿರಿಯ ಅಧಿಕಾರಿಗಳು ಕಮಾಂಡರ್ ಅಂತ ಕರೆಯುತ್ತಿದ್ದರು. ಕಾಲು ಸರಿ ಹೋಗಿ ಆರಾಂ ಇದ್ದೇನೆ. ಈಗ ನಾನು ಮತ್ತೆ ಕಮಾಂಡರ್ ಅಲ್ವಾ?~ ಎಂದು ಮುಗುಳ್ನಗುತ್ತಾರೆ ವೀರಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry