ಬಳಸಲೇ ಇಲ್ಲ... ಆದರೂ ಕೆಟ್ಟ ಯಂತ್ರ!

7

ಬಳಸಲೇ ಇಲ್ಲ... ಆದರೂ ಕೆಟ್ಟ ಯಂತ್ರ!

Published:
Updated:

ಬಳ್ಳಾರಿ: ಕಾಯಿಲೆಯ ಸ್ವರೂಪ ಪತ್ತೆ ಮಾಡಲೆಂದೇ ಖರೀದಿಸಲಾದ ರೂ 12 ಲಕ್ಷ ಮೌಲ್ಯದ ಅತ್ಯಾಧುನಿಕ ಮಾದರಿಯ ಕ್ಷ-ಕಿರಣ ಯಂತ್ರವೊಂದು ಬಳಸದೇ ಇದ್ದರೂ ಕೆಟ್ಟು ಹೋಗಿದೆ. ಒಂದು ವರ್ಷದಿಂದ ಅದನ್ನು ದುರಸ್ತಿ ಮಾಡುವಂತೆ ಜನಪ್ರತಿನಿಧಿಯೊಬ್ಬರು ಗೋಗರೆಯುತ್ತಿದ್ದರೂ ಇಲಾಖೆ ಅದಕ್ಕೆ  ಸ್ಪಂದಿಸುತ್ತಲೇ ಇಲ್ಲ.ಜಿಲ್ಲೆಯ ಉಜ್ಜಿನಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಮೂರು ವರ್ಷಗಳ ಹಿಂದೆ `ಸೀಮೆನ್ಸ್~ ಕಂಪೆನಿಯ ಕ್ಷ-ಕಿರಣ ಯಂತ್ರ ಖರೀದಿಸಲಾಗಿತ್ತು. ಆದರೆ, ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು, ಯಂತ್ರ ಇರಿಸಲು ಸುಸಜ್ಜಿತ ಕೊಠಡಿ ಇಲ್ಲ ಎಂಬ ಕಾರಣದಿಂದ ಅದನ್ನು ಪೆಟ್ಟಿಗೆಯಿಂದ ಹೊರಗೇ ತೆಗೆದಿರಲೇ ಇಲ್ಲ. ಈವರೆಗೆ ಅದನ್ನು ಒಮ್ಮೆಯೂ ಬಳಸದಿದ್ದರೂ, ಯಂತ್ರ ಕೆಟ್ಟುಹೋಗಿದ್ದು, ದುರಸ್ತಿಗಾಗಿ ಅಂದಾಜು ರೂ 3 ಲಕ್ಷ ಖರ್ಚು ಮಾಡಬೇಕಾಗಿದೆ.ಕೆಟ್ಟು ಹೋಗಿರುವ ಈ ಯಂತ್ರದ ವಾರಂಟಿ ಅವಧಿಯೂ ಮುಗಿದಿದ್ದು, ದುರಸ್ತಿಗೆ ಕಂಪೆನಿಯ ಪ್ರತಿನಿಧಿಗಳೇ ಬರಬೇಕು. ಆದರೆ, ಆರೋಗ್ಯ ಇಲಾಖೆ ಹಣ ಬಿಡುಗಡೆ ಮಾಡದ್ದರಿಂದ ದುರಸ್ತಿ ಆಗದೆ, ಜನರಿಗೆ ಆ ಯಂತ್ರದ ಸೇವೆ ದೊರೆಯದಂತಾಗಿದೆ.ಉಜ್ಜಿನಿ ಕ್ಷೇತ್ರದ ಜಿ.ಪಂ. ಸದಸ್ಯೆ ಶಾರದಾ ಪ್ರಸಾದ್ ಅವರು ಜಿ.ಪಂ.ನಲ್ಲಿ ನಡೆದ ನಾಲ್ಕು ಸಾಮಾನ್ಯ ಸಭೆಗಳಲ್ಲಿ ಈ ಯಂತ್ರ ಕೆಟ್ಟಿದ್ದು ಏಕೆ? ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಬೇಕು. ದುರಸ್ತಿಗೂ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಸಲ್ಲಿಸುತ್ತಲೇ ಇದ್ದು, ಜಿಲ್ಲಾ ಆರೋಗ್ಯ ಅಧಿಕಾರಿಯೂ ದುರಸ್ತಿಯ ಭರವಸೆ ನೀಡುತ್ತಿದ್ದರೂ ದುರಸ್ತಿ ಮಾತ್ರ ಆಗಿಲ್ಲ.ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡದಿಂದ ಉಜ್ಜಿನಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಏಳು ತಿಂಗಳ ಹಿಂದೆಯೇ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಕ್ಷ-ಕಿರಣ ಯಂತ್ರ ಬಳಸಲೆಂದು ಹೊರತೆಗೆದಾಗ ಧೂಳು ಕುಳಿತಿದ್ದರಿಂದ ಯಂತ್ರ ಕೆಟ್ಟು ಹೋಗಿದ್ದು ತಿಳಿದು ಬಂದಿದೆ. ಈ ಬಗ್ಗೆ ಇಲಾಖೆಗೂ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಶಾರದಾ ಪ್ರಸಾದ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಬಳಸದೆ ಇದ್ದರೂ ಯಂತ್ರ ಕೆಟ್ಟು ಹೋಗಿದ್ದಾದರೂ ಏಕೆ? ಎಂಬುದಕ್ಕೆ ಕಾರಣ ಕಂಡು ಹಿಡಿದು, ಈ ಕುರಿತು ಕಂಪೆನಿಯವರನ್ನೇ ಕೇಳಬೇಕು ಎಂದು ಸಲಹೆ ನೀಡಿದರೂ ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ. ಇದೀಗ ದುರಸ್ತಿಗೆ  ಲಕ್ಷಾಂತರ ಖರ್ಚಾಗಲಿದ್ದು, ಅನುದಾನವಿಲ್ಲ ಎಂಬ ಸಬೂಬು ನೀಡಲಾಗುತ್ತಿದೆ. ಸರ್ಕಾರದ ಹಣ ಖರ್ಚು ಮಾಡಿ ಯಂತ್ರ ಖರೀದಿಸಿ ಜನರಿಗೆ ಅದರಿಂದ ಪ್ರಯೋಜನ ಆಗದಿದ್ದರೆ ಹೇಗೆ? ಎಂದು ಅವರು ಕೇಳುತ್ತಾರೆ. ಜಿಲ್ಲಾಧಿಕಾರಿ, ಜಿ.ಪಂ. ಅಧ್ಯಕ್ಷೆ, ಉಪಾಧ್ಯಕ್ಷರು, ಸಿಇಓ ಮತ್ತಿತರರೆಲ್ಲ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.`ಯಂತ್ರ ಕೆಡಲು ಯಾರ ನಿರ್ಲಕ್ಷ್ಯ ಕಾರಣ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಿ~ ಎಂದು ಜಿಲ್ಲಾಧಿಕಾರಿಯವರೇ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಮತ್ತೆ ಈ ಕುರಿತು ಅಧಿಕಾರಿಗಳನ್ನು ಎಚ್ಚರಿಸಿದಂತೆ ಕಾಣಲಿಲ್ಲ. ಜನರಿಗೆ ಮಾತ್ರ ಯಂತ್ರದ ಸೌಲಭ್ಯ ದೊರೆಯುತ್ತಿಲ್ಲ ಎಂದು ಅವರು ಹೇಳುತ್ತಾರೆ.ಯಂತ್ರದ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.   ಕಂಪೆನಿಗೂ ದುರಸ್ತಿಗಾಗಿ ಸೂಚಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀಕಾಂತ್ ಬಾಸೂರ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry