ಬಳಸಿದ ನೀರನು ಮತ್ತೆ ತಂದು

7

ಬಳಸಿದ ನೀರನು ಮತ್ತೆ ತಂದು

Published:
Updated:
ಬಳಸಿದ ನೀರನು ಮತ್ತೆ ತಂದು

ಬೇಸಿಗೆಗೆ ಇನ್ನೊಂದು ತಿಂಗಳು ಬಾಕಿ ಉಳಿದಿರುವಾಗಲೇ ನೀರಿನ ಸಮಸ್ಯೆ ಎದುರಾಗಿದೆ. ಐದು, ಆರು ನೂರು ಅಡಿ ಆಳಕ್ಕೆ ಭೂಮಿ ಕೊರೆದರೂ ಒಂದು ಹನಿ ನೀರಿಲ್ಲ. ಬೆಂಕಿಪೊಟ್ಟಣಗಳನ್ನು ಜೋಡಿಸಿಟ್ಟಂತೆ ಕಟ್ಟಿರುವ ನಗರದ ಅಪಾರ್ಟ್‌ಮೆಂಟ್ ನಿವಾಸಿಗಳ ಪಾಡು ಹೇಳತೀರದು. ಹತ್ತು ಹದಿನೈದನೇ ಮಹಡಿಗಳಿಗೆ ನೀರು ಬಾರದೆ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ.ಇದಕ್ಕೆ ಪರಿಹಾರವಾಗಿ ಸ್ನಾನ ಮಾಡಿದ, ಬಟ್ಟೆ ತೊಳೆದ ತ್ಯಾಜ್ಯ ನೀರನ್ನೇ ಶುದ್ಧೀಕರಿಸಿ ಪುನರ್ಬಳಕೆ ಮಾಡಿಕೊಳ್ಳಬೇಕಿದೆ. ಈ ಅವಲಂಬನೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 30ರಷ್ಟು ತ್ಯಾಜ್ಯ ನೀರು ಶುದ್ಧೀಕರಣ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ.ಅಗತ್ಯ ಪ್ರಮಾಣದ ಮಳೆ ಬಾರದೇ ಇರುವುದರಿಂದ ಕೆರೆ-ಕಟ್ಟೆಗಳು ಬತ್ತಿವೆ. ಅಪಾರ್ಟ್‌ಮೆಂಟ್‌ಗಳ ಜೊತೆಗೆ ಹಸಿರನ್ನು ಹೊದ್ದ ಎಕರೆಗಟ್ಟಲೆ  ಉದ್ಯಾನಗಳು ಬೇಸಿಗೆಯಲ್ಲೂ ಹಚ್ಚಹಸಿರಿನಿಂದ ಕಂಗೊಳಿಸಲು ನೀರು ಅತ್ಯವಶ್ಯಕ.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಕಾರ್ಯೋನ್ಮುಖವಾಗಿವೆ. ಉದ್ಯಾನಗಳಿಗೂ ಈ ವ್ಯವಸ್ಥೆ ವರದಾನವಾಗಿದೆ. ಇದೀಗ ಮತ್ತೀಕೆರೆಯ ಜೆ.ಪಿ.ಉದ್ಯಾನದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದೆ.

ನಗರದ ಉದ್ಯಾನಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ನಿತ್ಯ ಲಕ್ಷಾಂತರ ಲೀಟರ್ ನೀರಿನ ಅವಶ್ಯಕತೆಯಿದೆ.ಕುಡಿಯುವ ನೀರಿನ ಜೊತೆಗೆ ಇತರೆ ಬಳಕೆಗೂ ಟ್ಯಾಂಕ್ ನೀರನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರಿನ ಪುನರ್ಬಳಕೆಗೆ ಅನಿವಾರ್ಯವಾಗಿದೆ.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಪ್ರಕಾರ ಹೊರ ವರ್ತುಲ ರಸ್ತೆಯಲ್ಲಿರುವ ಶೋಭಾ ಡೆವಲಪರ್ಸ್, ರಹೇಜಾ ಗ್ರೂಪ್, ಮಂತ್ರಿ ಡೆವಲಪರ್ಸ್ ಸೇರಿದಂತೆ ಹಲವಾರು ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿವೆ.50ಕ್ಕಿಂತ ಹೆಚ್ಚಿನ ಯುನಿಟ್‌ಗಳ ಅಪಾರ್ಟ್‌ಮೆಂಟ್‌ಗಳು ಕಡ್ಡಾಯವಾಗಿ ಘಟಕವನ್ನು ಮಾಡಿಸಿಕೊಳ್ಳಬೇಕು. ಆ ಮೂಲಕ ನೀರಿನ ಮಿತವ್ಯಯ, ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಸಹಕಾರಿಯಾಗಬೇಕಿದೆ. ವಿಸ್ತಾರವಾದ ಸ್ಥಳವಿದ್ದರೆ ಘಟಕ ನಿರ್ಮಾಣಕ್ಕೆ ಕಡಿಮೆ ವೆಚ್ಚ ತಗುಲುತ್ತದೆ, ಸ್ಥಳದ ಅಭಾವವಾದರೆ ಟ್ಯಾಂಕ್ ಚಿಕ್ಕದಾಗುತ್ತದೆ ಹಾಗೂ ಕೊಳವೆ ಮೂಲಕ ಗಾಳಿ ತುಂಬಬೇಕಾಗುತ್ತದೆ.ಜೊತೆಗೆ ತಾಂತ್ರಿಕವಾಗಿಯೂ ಹೆಚ್ಚು ಕೆಲಸವಿರುತ್ತದೆ. ಹಾಗಾಗಿ ಎಕರೆಗಟ್ಟಲೇ ಜಾಗವಿದ್ದರೆ ವೆಚ್ಚ ಕಡಿಮೆಯಾಗುತ್ತದೆ. ಒಂದು ಎಂಎಲ್‌ಡಿ  (ಹತ್ತು ಲಕ್ಷ ಲೀಟರ್) ಘಟಕ ಸ್ಥಾಪನೆಗೆ 1 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹಾಗೆಯೇ ಶಕ್ತ್ಯಾನುಸಾರ ಬೇಕಾದ ಹಾಗೆ ಘಟಕ ಮಾಡಿಕೊಳ್ಳಬಹುದು.

ನೀರನ್ನು ಶುದ್ಧೀಕರಿಸುವ ಹಂತಗಳನ್ನು ಬಸವರಾಜ್ ವಿವರಿಸುವುದು ಹೀಗೆ...`ಎರಡು ಹಂತದಲ್ಲಿ ನೀರನ್ನು ಶುದ್ಧೀಕರಿಸಬಹುದು. ದ್ವಿತೀಯ ಹಂತದ ಶುದ್ಧೀಕೃತ ನೀರನ್ನು ಗಾರ್ಡನ್‌ಗಳಿಗೆ ಬಳಸಿಕೊಳ್ಳಬಹುದು. ತೃತೀಯ ಹಂತದ ಶುದ್ಧೀಕರಣ ನೀರು ಏಸಿ, ಶೌಚಾಲಯ ಸೇರಿದಂತೆ ದಿನಬಳಕೆಗೆ ಯೋಗ್ಯವಾಗಿರುತ್ತದೆ. ಆದರೆ ಅದರಲ್ಲಿ ಬ್ಯಾಕ್ಟೀರಿಯಾ ಇರುವುದರಿಂದ ಕುಡಿಯಲು ಯೋಗ್ಯವಲ್ಲ'.ಲಾಲ್‌ಬಾಗ್, ಕಬ್ಬನ್‌ಪಾರ್ಕ್, ಯಲಹಂಕ, ವೃಷಭಾವತಿ ಕಣಿವೆ, ಮೈಲಸಂದ್ರ, ನಾಗಸಂದ್ರ, ಹೆಬ್ಬಾಳ, ಕಾಡಬೀಸನಹಳ್ಳಿ, ಜಕ್ಕೂರು, ಕೆ.ಆರ್.ಪುರ, ಮಡಿವಾಳ (ಕೆರೆ ಅಭಿವೃದ್ಧಿ) ಸೇರಿದಂತೆ ಕೋರಮಂಗಲದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ನಗರದ ಎಲ್ಲ ಘಟಕಗಳಿಂದ ದಿನಕ್ಕೆ 721ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 30ರಷ್ಟು ತ್ಯಾಜ್ಯ ನೀರನ್ನು ಬಳಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆಯಂತೆ.ನಗರದಲ್ಲಿ ತಲೆ ಎತ್ತುವ ಅಪಾರ್ಟ್‌ಮೆಂಟ್‌ಗಳು ಕಡ್ಡಾಯವಾಗಿ ಘಟಕಗಳನ್ನು ಮಾಡಿಸಿಕೊಳ್ಳಬೇಕು, ಇಲ್ಲವಾದರೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ. ಈಗಾಗಲೇ ಘಟಕಗಳಿಲ್ಲದ ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದೂ ಅವರು ಮಾತು ಸೇರಿಸಿದರು.ಜೆ.ಪಿ. ಪಾರ್ಕ್‌ನ್ಲ್ಲಲಿ ಶುದ್ಧೀಕರಣ ಘಟಕ

ಜೆ.ಪಿ.ಉದ್ಯಾನ ನಿರ್ವಹಣೆಗೆ ಮೂರು ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸುವ ಯೋಜನೆ ಸಿದ್ಧವಾಗಿದೆ. 85 ಎಕರೆ ವಿಸ್ತೀರ್ಣದ ಉದ್ಯಾನದಲ್ಲಿ 5ರಿಂದ 6 ಸಾವಿರ ಮರಗಳಿವೆ. ದಿನಕ್ಕೆ ಏಳರಿಂದ ಎಂಟು ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಕೆರೆಯಿಂದ 4 ಲಕ್ಷ ಲೀಟರ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ.ಅದೂ ಏಪ್ರಿಲ್‌ವರೆಗೆ ಮಾತ್ರ. ಈಗಾಗಲೇ ಅರ್ಧ ನೀರು ಖಾಲಿಯಾಗಿದ್ದು, ಬೇಸಿಗೆ ಮುಗಿಯುವ ವೇಳೆಗೆ ಪೂರ್ತಿ ಒಣಗಿದರೂ ಆಶ್ಚರ್ಯವಿಲ್ಲ. ಆಗ ಅನಿವಾರ್ಯವಾಗಿ ಕೊಳವೆ ಬಾವಿಗಳೇ ಗತಿ. ಆದರೆ ಇರುವ 12 ಕೊಳವೆ ಬಾವಿಗಳಲ್ಲಿ ನಾಲ್ಕರಲ್ಲಿ ಮಾತ್ರ ನೀರಿದೆ. ಕೊಳವೆ ಬಾವಿಗಳಿಂದ 75 ಸಾವಿರ ಲೀಟರ್ ನೀರು ಸಿಗುತ್ತಿದೆ.ಈಗಿರುವಾಗ ಬೇಸಿಗೆಯಲ್ಲಿ ಅಗತ್ಯವಾದ ನೀರು ಸಿಗದೆ ಉದ್ಯಾನದ ಗಿಡಗಳು ಒಣಗುವ ಸಾಧ್ಯತೆಯಿದೆ. ಆದ್ದರಿಂದ ಮುಂಜಾಗ್ರತೆಯಾಗಿ ಕೊಳಚೆ ನೀರನ್ನು ಶುದ್ಧೀಕರಿಸುವ ಮೂಲಕ ದಿನಕ್ಕೆ ಹತ್ತು ಲಕ್ಷ ಲೀಟರ್ ಪಡೆಯುವ ಯೋಜನೆ ರೂಪಿಸಲಾಗಿದೆ.`ಜೈವಿಕ ತಂತ್ರಜ್ಞಾನದ ಮೂಲಕ ನೀರನ್ನು ಶುದ್ಧೀಕರಿಸಲಾಗುತ್ತದೆ. ಪಾಲಿಕೆಯಿಂದ ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಘಟಕದಿಂದ ಬರುವ ನೀರನ್ನು ಉದ್ಯಾನಕ್ಕೆ ಬಳಸಿಕೊಳ್ಳುತ್ತೇವೆ. ಹೆಚ್ಚುವರಿ ನೀರನ್ನು ಕೆರೆಗೆ ಬಿಡಲಾಗುತ್ತದೆ. ಇದೇ ತಿಂಗಳ 15ರಂದು ಟೆಂಡರ್ ಕರೆಯಲಾಗಿದ್ದು, ಒಂದೂವರೆ ತಿಂಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ' ಎಂದು ಮಾಹಿತಿ ನೀಡುತ್ತಾರೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ.`ಮುತ್ಯಾಲಮ್ಮನಗರ, ಬಂಡೆಪ್ಪ ನಗರ ಹಾಗೂ ಎಚ್‌ಎಂಟಿ ಬಡಾವಣೆಗಳಿಂದ ಬರುವ ಮೂರರಿಂದ ನಾಲ್ಕು ಎಂಎಲ್‌ಡಿ ನೀರಿನಲ್ಲಿ 1 ಎಂಎಲ್‌ಡಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಆ ನೀರನ್ನು ಗಿಡ ಮರಗಳು, ಹುಲ್ಲು ಹಾಸು ಬೆಳೆಸಲು ಬಳಸಲಾಗುತ್ತದೆ. ನೀರು ಸಂಸ್ಕರಣೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಸೆಲೆ ಹೆಚ್ಚಾಗಲಿದೆ.ಜೊತೆಗೆ ತ್ಯಾಜ್ಯ ನೀರಿನ ಮರುಬಳಕೆಯೂ ಆಗುತ್ತದೆ. ರೈಲ್ವೆ ಇಲಾಖೆ ಬೋಗಿಗಳನ್ನು ಸ್ವಚ್ಛಮಾಡಲು ಸಂಸ್ಕರಿತ ತ್ಯಾಜ್ಯ ನೀರಿನ್ನು ಪುನರ್ಬಳಕೆ ಮಾಡಿಕೊಂಡರೆ ಸದ್ಯ ಬಳಕೆಯಾಗುತ್ತಿರುವ ನೀರನ್ನು ಇತರೆ ಉಪಯೋಗಕ್ಕೆ ಬಳಸಿಕೊಳ್ಳಬಹುದು. ಈ ಬಗ್ಗೆ ಜಲಮಂಡಳಿ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಬೇಕು' ಎಂದು ಸಲಹೆ ನೀಡುತ್ತಾರೆ ನಂಜುಂಡಪ್ಪ.`ಉದ್ಯಾನದಲ್ಲಿ 300 ಅತ್ತಿ, 150 ನೇರಳೆ, 100 ಅರಳಿ ಸೇರಿದಂತೆ ಗುಲ್‌ಮೊಹರ್, ಹೊಂಗೆ, ಬಿದಿರು, ಪೆಲ್ಟೊಫೊರಂ, ಸಿಲ್ಕ್ ಕಾಟನ್ ಹಾಗೂ ಸಬೂಬುಲ್ ಮರಗಳಿವೆ. ಉದ್ಯಾನ ನಿರ್ವಹಣೆಗೆ ವರ್ಷಕ್ಕೆ 50 ಲಕ್ಷ ರೂಪಾಯಿ ವೆಚ್ಚವಾಗಲಿದೆ. 3 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸುತ್ತಲೂ ಪಾದಚಾರಿ ಮಾರ್ಗ, ರೈಲ್ವೆ ಇಲಾಖೆ ಪಕ್ಕದ ಕೆರೆಭಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಕೆರೆ ಹೂಳು ತೆಗೆಯುವ ಮೂಲಕ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಉದ್ದೇಶಿಸಲಾಗಿದೆ' ಎಂದು ಅವರು ಹೇಳುತ್ತಾರೆ.ಜನಾಕರ್ಷಣೆಯರಾಜ್ ಪುತ್ಥಳಿ

ಉದ್ಯಾನಕ್ಕೆ ಬರುವ ಜನರನ್ನು ಆಕರ್ಷಿಸಲು ಹೊಸದಾಗಿ ಹಲವು ಪ್ರತಿಮೆಗಳನ್ನು ಮಾಡಲಾಗಿದೆ. ಅವುಗಳಲ್ಲಿ ಎತ್ತಿನ ಗಾಡಿ ಓಡಿಸುತ್ತಿರುವ ಡಾ.ರಾಜ್ ಪುತ್ಥಳಿ ಗಮನ ಸೆಳೆಯಲಿದೆ. ಹೊಲ ಹೂಳುತ್ತಿರುವ ರೈತ, ಕುರಿಗಾಹಿಗಳ ಪ್ರತಿಮೆಗಳು ಹೊಸದಾಗಿ ಸೇರ್ಪಡೆಗೊಂಡು ಉದ್ಯಾನದ ಸೊಬಗು ಇಮ್ಮಡಿಗೊಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry