ಗುರುವಾರ , ನವೆಂಬರ್ 21, 2019
20 °C

ಬಳಸಿ-ಬಿಸಾಡು ಸಂಸ್ಕೃತಿ ಬೇಡ: ಹಿಶಿರಾ

Published:
Updated:

ಕೆ.ಆರ್.ನಗರ: `ಕೆಲವು ಕಂಪೆನಿಗಳು ತಮ್ಮ ವಸ್ತುಗಳ ಪ್ರಚಾರಕ್ಕಾಗಿ ಅಸಂಬದ್ಧ, ಹೋಲಿಕೆಯಾಗದ ಜಾಹೀರಾತುಗಳನ್ನು ನೀಡಿ, ದೇಶದ ಸಂಸ್ಕೃತಿಯನ್ನೇ ತಿರುಚುತ್ತಿವೆ'  ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕ ಮತ್ತು ಸ್ನಾತಕೊತ್ತರ ಕನ್ನಡ ವಿಭಾಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ `ಕನ್ನಡ ಸಾಹಿತ್ಯ-ಸಂಸ್ಕೃತಿ ಮುಂದಿರುವ ಸವಾಲುಗಳು' ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.`ಹತ್ತು ತಲೆಗಳುಳ್ಳ ರಾವಣನಿಗೆ ಅದ್ಭುತ ಶಕ್ತಿ ಇತ್ತು, ಅವನಿಗೆ ಎಂದೂ ತಲೆ ನೋವು ಬರಲು ಸಾಧ್ಯವಿಲ್ಲ ಎಂದು ನಾವೆಲ್ಲರೂ ತಿಳಿದಿದ್ದೆವು. ಆದರೆ, ಜಾಹೀರಾತಿನಲ್ಲಿ ಕೇವಲ 1 ಮಾತ್ರೆಗೆ ರಾವಣನ ಹತ್ತು ತಲೆಗಳ ನೋವು ಹೊಗುತ್ತದೆ ಎಂದು ತೋರಿಸಲಾಗುತ್ತದೆ. ಇದರಿಂದ ರಾವಣನಿಗೂ ತಲೆ ನೋವು ಇತ್ತೆ? ಎಂಬ ಪ್ರಶ್ನೆ ಎದುರಾಗುತ್ತದೆ. ಕಂಪೆನಿ ಪ್ರಚಾರಕ್ಕೆ ಇಂದು ಹೆಣ್ಣುಮಕ್ಕಳ ಮಾನ ಕೂಡ ಮುಖ್ಯವಾಗುತ್ತಿಲ್ಲ. ಈ ಹಿಂದೆ ವಸ್ತುಗಿಂತ ಮನುಷ್ಯನಿಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ, ಇಂದು ಮನುಷ್ಯನಗಿಂತ ವಸ್ತುವಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಜಾಗತೀಕರಣದ ಸರಕುಗಳಾಗಿ ಮಾರಾಟವಾಗುತ್ತಿರುವ ನಾವು, ದೇಶದ ಬಗ್ಗೆ ಯೋಚಿಸಲು ಸಾಧ್ಯವಾಗುತ್ತಿಲ್ಲ. ಬಡತನ ಇದ್ದರೆ ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ತಿಳಿವಳಿಕೆ ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಬಳಸಿ-ಬಿಸಾಡು ಸಂಸ್ಕೃತಿಗೆ ಒಗ್ಗಿರುವ ನಮ್ಮನ್ನು ರಾಜಕಾರಣಿಗಳು ಕೂಡ ಹಾಗೇ ಬಳಸಿಕೊಳ್ಳುತ್ತಿದ್ದಾರೆ' ಎಂದರು.ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಶೇಖರ್, ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಕೆ.ಕರುಣಾಕರ, ಡಾ.ಮಾದಯ್ಯ, ಪ್ರಾಂಶುಪಾಲ ಡಾ.ಎಂ.ಎಚ್.ಕೊಂಡರಸಯ್ಯ, ಸಹಾಯಕ ಪ್ರಾಧ್ಯಾಪಕರಾದ ಎಚ್.ಆರ್.ಚಂದ್ರಕಲಾ, ಮಲ್ಲಿಕಾರ್ಜುನಗೌಡ, ಹರೀಶ್‌ಗೌಡ, ಗೋವಿಂದೇಗೌಡ ಇದ್ದರು.

ಪ್ರತಿಕ್ರಿಯಿಸಿ (+)