ಶನಿವಾರ, ಮೇ 15, 2021
28 °C

ಬಳೆಗಳ ಸದ್ದು ಬದುಕಿನ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು

ಒಳಗೆ ಬರಲಪ್ಪಣೆಯೆ ದೊರೆಯೆ?

ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು

ಬಳೆಯ ತೊಡಿಸುವುದಿಲ್ಲ ನಿಮಗೆ...

ಈ ಸಾಲುಗಳ ಗುನುಗಿಕೊಂಡಾಗಲೆಲ್ಲಾ ಚಿಕ್ಕವಳಿದ್ದಾಗ ಮನೆಗೆ ಬರುತ್ತಿದ್ದ ಬಳೆಗಾರಿಕೆ ಲಲಿತಕ್ಕನದೇ ನೆನಪು ಸುಳಿದಾಡುತ್ತಿರುತ್ತದೆ.ಈಗ ಎಲ್ಲಿಯ ಚನ್ನಯ್ಯ, ಎಲ್ಲಿಯ ಲಲಿತಕ್ಕ. ಅಂದು ಅವರೆಲ್ಲ ಬಳೆಗಾರಿಕೆಯ ಜೊತೆಗೆ ಮನೆ ಮಂದಿಯೊಡನೆ ಬಾಂಧವ್ಯ ಬೆಳೆಸಿಕೊಂಡಿದ್ದರು. ಬಹುಶಃ ಆ ನೆನಪಿಗಾಗೇ ಜನಪದರು ಈ ಸಾಲುಗಳನ್ನು ಕಟ್ಟಿ ಹಾಡಿರಬಹುದು.ಇಂದು ಮಹಾನಗರಿಯಂತಹ ಸ್ಥಳಗಳಲ್ಲಿ ಚನ್ನಯ್ಯ, ಲಲಿತಕ್ಕರನ್ನು ಕಾಣುವುದು ತೀರಾ ಅಪರೂಪ. ಆದರೂ ಹಲವೆಡೆ ಬಳೆಗಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ಜೀವಗಳಿವೆ. ಅವರ ಬದುಕು ಬಳೆಯ ಬಂಡಿಯ ಮೇಲೆಯೇ ಸಾಗುತ್ತಿದೆ.ವಯಸ್ಸು 65. ನನ್ನ 20ನೇ ವಯಸ್ಸಿನಿಂದ ಬಳೆಗಾರಿಕೆ ಮಾಡುತ್ತಿದ್ದೇನೆ. ಇದೇ ಬದುಕಿಗೆ ಆಧಾರ. ದಿನದ ದುಡಿಮೆ ಆ ದಿನದ ಊಟಕ್ಕೆ ಸಾಕಾಗುತ್ತದೆ. ಬಳೆಗಾರಿಕೆ ಒಮ್ಮಮ್ಮೆ ಹೋಳಿಗೆ ಊಟ ಉಣಿಸಿದರೆ, ಒಮ್ಮಮ್ಮೆ ಗಂಜಿಯೂಟ, ಉಪವಾಸ ಮಲಗಿದ ದಿನಗಳೂ ಹಲವು. ಆದರೂ ಈ ವೃತ್ತಿಯ ಬಿಡಲು ಮನಸಿಲ್ಲ. ವೃತ್ತಿ ಭಾವನಾತ್ಮಕವಾಗಿ ಬೆಸೆದುಕೊಂಡಿದೆ ಎಂದು ಬಾರದ ನಗುವನ್ನು ಬಲವಂತದಿಂದ ಹೊರಹಾಕುತ್ತಾರೆ ನೀಲಕ್ಕ.ಕಾಮಾಕ್ಷಿ ಪಾಳ್ಯದಲ್ಲಿ ಅದೇ ಫುಟ್‌ಪಾತ್‌ನ ಕಲ್ಲಿನ ಮೇಲೆ ಕುಳಿತು ಕಳೆದ 45 ವರ್ಷಗಳಿಂದ ಗಾಜಿನ ಬಳೆ ಮಾರುತ್ತಾ ಬದುಕು ಸವೆಸುತ್ತಿರುವ ನೀಲಕ್ಕನ ಬವಣೆಯಿದು.

ತಾಯಿಯೊಂದಿಗೆ ಮಗಳೂ 15 ವರ್ಷಗಳಿಂದ ಕೈ ಜೋಡಿಸಿದ್ದಾಳೆ. ಎರಡು ಮಕ್ಕಳ ತಾಯಿಯಾಗಿರುವ ಆಕೆ `ನಮ್ಮ ಮಕ್ಕಳು ಚೆನ್ನಾಗಿ ಓದಿ ದೊಡ್ಡ ಕೆಲಸಕ್ಕೆ ಸೇರಬೇಕು.ಅದೇ ನನ್ನ ಕನಸು. ನಮಗೆ ಬೇರೇ ವೃತ್ತಿ ಗೊತ್ತಿಲ್ಲ. ಇದರಲ್ಲೇ ಬದುಕು ಕಂಡುಕೊಳ್ಳಬೇಕು. ನಮ್ಮ ತಾಯಿ ಕಾಲದಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಮದುವೆ ಸೀಜನ್‌ನಲ್ಲಂತೂ ಅಮ್ಮನಿಗೆ ಬಿಡುವಿರುತ್ತಿರಲ್ಲಿಲ್ಲ. ಅನೇಕರ ಮನೆಗಳಿಂದ ಕರೆ ಬರುತ್ತಿದ್ದವು. ಮದುವೆ ಮನೆಮಂದಿಯೆಲ್ಲಾ ಹಸಿರು ಗಾಜಿನ ಬಳೆಗಳನ್ನು ತೊಟ್ಟು ಸಂಭ್ರಮಿಸುತ್ತಿದ್ದರು. ಇದರಿಂದ ಮದುವೆ ಮನೆ ಇನ್ನಷ್ಟು ಕಳೆಕಟ್ಟುತಿತ್ತು. ಈಗ ಅದೆಲ್ಲ ಮಾಯವಾಗಿದೆ. ಶಾಸ್ತ್ರಕ್ಕೆ ಕೆಲವೊಬ್ಬರು ಬಳೆ ಇಡಲು ಕರೆಸುತ್ತಾರೆ.

 

ಅದು ಮದುಮಗಳಿಗಷ್ಟೇ; ಮನೆಯವರೆಲ್ಲಾ ಡ್ರೆಸ್ ಮ್ಯಾಚಿಂಗ್ ಎಂದು ಬೇರೆ ಬೇರೆ ಬಳೆಗಳ ಮೊರೆಹೋಗುತ್ತಾರೆ. ಹೀಗಿರುವಾಗ ನಮ್ಮ ಬಾಳ ಬಂಡಿ ಉರುಳುವುದಾದರೂ ಹೇಗೆ...~ ಹತಾಶೆಯಿಂದ ಪ್ರಶ್ನಿಸುತ್ತಾರೆ ಉಷಾ.ಸಿಲಿಕಾನ್ ಸಿಟಿಯಲ್ಲಿ ಇಂಥ ಜೀವಗಳು ಹಲವಾರಿವೆ. ಅಗ್ರಹಾರ ದಾಸರಹಳ್ಳಿ, ಕಾಮಾಕ್ಷಿ ಪಾಳ್ಯ, ನಾಗರಬಾವಿ, ರಾಜಾಜಿನಗರ, ಮಲ್ಲೇಶ್ವರ ಮೊದಲಾದೆಡೆ ಸುಮ್ಮನೆ ಒಂದು ಸುತ್ತು ಹಾಕಿದರೆ ಅಲ್ಲಲ್ಲಿ ಬಳೆಗಾರರು ಕಾಣಸಿಗುತ್ತಾರೆ. ಮೂಲ ವೃತ್ತಿಯನ್ನೇ ನೆಚ್ಚಿಕೊಂಡು ಬೇರೆ ವೃತ್ತಿ ಅಪ್ಪಿಕೊಳ್ಳಲಾರದೆ ಬಳೆಯ ಬಂಡಿಯನ್ನು ಸಾಗಿಸುತ್ತಿದ್ದಾರೆ.`ಲಲನೆಯರು ನಮ್ಮ ಬಳಿ ಕೈತುಂಬಾ ಬಳೆ ಇಟ್ಟುಕೊಂಡು, ಒಮ್ಮೆ ದಿಟ್ಟಿಸಿ ನೋಡುತ್ತಾ ಬೀರುವ ನಗುವಲ್ಲೇ  ನಮ್ಮ ನಗುವನ್ನೂ ಕಾಣುತ್ತೇವೆ~ ಎನ್ನುತ್ತಾರೆ ಮಲ್ಲೇಶ್ವರದಲ್ಲಿ ಬಳೆ ಮಾರುವ ಲಿಂಗಯ್ಯ.ಇನ್ನು ಕೆಲವು ಬಳೆಗಾರರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿದ್ದಾರೆ. ಹಿಂದೆ ಬಳೆಗಳನ್ನು ಮಾರುವ ಕಾರಣಕ್ಕೇ ಹೆಸರಾಗಿದ್ದ ಬಳೆಪೇಟೆ ಈಗ ಬದಲಾಗಿರುವಂತೆ ಲಲನೆಯರ ಬದಲಾದ ಫ್ಯಾಷನ್ ಜರೂರಿಗೆ ಒಗ್ಗಿಕೊಳ್ಳುತ್ತಾ ಇರುವವರೂ ಇಲ್ಲುಂಟು. ಇಷ್ಟರ ನಡುವೆಯೂ ಗಾಜಿನ ಬಳೆಗಳ ಸದ್ದು ಆಗೀಗ ಕೇಳುವಾಗ ಮಾರುವವರಿಗೂ ಪುಳಕ!

                                                   =====

ಗಾಜಿನ ಬಳೆಯೇ ಯಾಕೆ?

ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಗಾಜಿನ ಬಳೆಗಳು ದೇಹದ ಉಷ್ಣತೆಯನ್ನು ಕಾಪಾಡಲು ಸಹಕರಿಸುತ್ತದೆ. ಚರ್ಮದೊಂದಿಗೆ ಪ್ರತಿದಿನ ಒಡನಾಡುವುದರಿಂದ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.ಮುಂಗೈನಿಂದ ಮೊಣಕೈ ಒಳಗಿನ ಭಾಗದಲ್ಲಿ ಬಳೆಗಳನ್ನು ಧರಿಸುವುದರಿಂದ ಆ ಭಾಗಕ್ಕೆ ಒಂದು ರೀತಿಯ ಶುಶ್ರೂಷೆ ದೊರೆತಂತಾಗುತ್ತದೆ. ದಾರಿದ್ರ್ಯ ನಿವಾರಿಸಲೂ ನಮ್ಮ ಹಿರಿಯರು ಇವನ್ನು ಬಳಸುತ್ತಿದ್ದರಂತೆ.

                                                       ======

ಬೇರೆ ಬಳೆಯ ಕಡೆ ಒಲವೇಕೆ?

ಲಲನೆಯರ ಅಲಂಕಾರದ ವಸ್ತುಗಳು ದಿನಕ್ಕೊಂದು ಹೊಸರೂಪ ಪಡೆದುಕೊಳ್ಳುತ್ತವೆ. ಎರಡು ಕೈತುಂಬಾ ಗಾಜಿನ ಬಳೆ ಇಟ್ಟು ಸಂಭ್ರಮಿಸುವ ಕಾಲ ಇದಲ್ಲ. ಉಡುಪಿಗೆ ಹೊಂದುವ ಒಂದೇ ಕೈಗೆ ಬಣ್ಣ ಬಣ್ಣದ ಬಳೆಗಳನ್ನು ಮ್ಯಾಚ್ ಮಾಡಿ ತೊಡುವ ಕಾಲವಿದು. ಮೊದಲಂತೆ ಬಳೆಗಳು ಒಡೆದು ಹೋಗುತ್ತವೆ. ಜಾಗ್ರತೆಯಿಂದ ಇಟ್ಟುಕೊಳ್ಳಬೇಕೆಂಬ ಹಂಗಿಲ್ಲ.ಸಿಟಿಯಲ್ಲಿ ಗಾಜಿನ ಬಳೆಗಳನ್ನು ತೊಟ್ಟರೆ `ಹಳ್ಳಿ ಗುಗ್ಗು~ ಎಂದು ಛೇಡಿಸುತ್ತಾರೆಂಬ ಕಾರಣಕ್ಕಾಗೇ ಹಳ್ಳಿಯಿಂದ ಉದ್ಯೋಗ ಅರಸಿ ಬಂದ ಎಷ್ಟೊ ಹುಡುಗಿಯರು ಬಳೆಗಳಿಂದ ಮಾರು ದೂರ ಸರಿಯುತ್ತಾರೆ. ಅಮ್ಮನ ಭಯಕ್ಕೆ ಮನೆಗೆ ಹೋಗುವಾಗ ಬಳೆಗಳನ್ನು ಧರಿಸಿದರೂ ಬೆಂಗಳೂರಿಗೆ ಬಂದ ನಂತರ ಅವೆಲ್ಲಾ ಮಾಯವಾಗಿಬಿಡುತ್ತವೆ.ಒಂದು ಬ್ಯಾಂಡ್ ತರದ್ದೋ ಅಥವಾ ದಾರವೋ ಸುತ್ತಿಕೊಳ್ಳುವ ಭಾಗ್ಯ ಆ ಕೈಗೆ. ಅಲ್ಲದೇ ಗಾಜಿನ ಬಳೆಗಳೆಂದರೆ ನಾಜೂಕಾಗಿ ಬಳಸಬೇಕು. ಒಡೆಯದಂತೆ ಒಂದೆಡೆ ಎತ್ತಿಡಬೇಕು. ಅಷ್ಟು ಸಮಯ ನಮ್ಮ ಹೆಣ್ಣುಮಕ್ಕಳಿಗಂತೂ ಇರುವುದಿಲ್ಲ. ಕೈ ಬಳೆ ಗಲ್ಲೆಂದರೆ ಅದು ಹೆಣ್ತನದ ಸಂಕೇತ. ಅನತಿ ದೂರದಲ್ಲಿದ್ದರೂ ನಾರಿಯ ಬರುವಿಕೆಯನ್ನು ಗುರುತಿಸಿ ಹುಡುಗರ ಕಣ್ಣು ಸ್ವಲ್ಪ ಹಿಗ್ಗುತ್ತಿದ್ದವು. ಈಗ ಅವುಗಳಿಗೆ ಅವಕಾಶವೇ ಇಲ್ಲ. ಪ್ಲಾಸ್ಟಿಕ್, ಮೆಟಲ್, ದಾರ, ಮರದ ಬಳೆಗಳು ಹೀಗೆ ನಾನಾ ಬಗೆಯಲ್ಲಿ ಸಿಗುವ ಬಳೆಗಳು ವನಿತೆಯರ ಮನ ಹಿಡಿದಿಡುವಲ್ಲಿ ಯಶಸ್ವಿಯಾಗಿವೆ. ಹೀಗಿರುವಾಗ ಗಾಜಿನ ಬಳೆ ತೊಡುವ ಕೈಗಳು ನಗಣ್ಯ. ಮದುಮಗಳಿಗೂ ಶಾಸ್ತ್ರಕ್ಕೆಂಬಂತೆ ಎರಡು ಗಾಜಿನ ಬಳೆ ತೊಡಿಸುತ್ತಾರೆ. ಈಗೆಲ್ಲ ಮ್ಯಾಚಿಂಗ್ ಕಾಲ.ಲೆಕ್ಕವಿಟ್ಟು ಎಣಿಸಿದರೆ ಗಲ್ಲಿಗೆ ನಾಲ್ಕರಂತೆ ಬಳೆ ಅಂಗಡಿಗಳು ತಲೆ ಎತ್ತಿವೆ. ಅಲ್ಲೂ ಗಾಜಿನ ಬಳೆಗಳ ಕಾರುಬಾರು ಇದ್ದೇ ಇರುತ್ತೆ. ಒಂದು ಅಂಗಡಿಗೆ ಹೋದರೆ ಬೇಕಾದ ಬಳೆಗಳನ್ನು ಕೈಗೆತ್ತಿಕೊಳ್ಳಬಹುದು. ಅಂಥದ್ದರಲ್ಲಿ ಫುಟ್‌ಪಾತ್‌ನಲ್ಲಿ ಮಾರುವ ನೀಲಕ್ಕನ ಬಳೆ ಹಂಗು ಬೇಡವಾಗಿದೆ ನಮ್ಮ ನಾರಿಗೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.